ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Reactive ಆಗಿರುವುದಕ್ಕಿಂತ Proactive ಆಗಿರಿ, ಬಾಯಾರಿಕೆ ಆದಾಗ ಬಾವಿ ತೋಡೋ ಕೆಲಸ ಮಾಡದಿರಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಒಂದು ಬಟ್ಟೆಯ ಪಕ್ಕದಲ್ಲಿ ಉರಿಯುವ ದೀಪ ಇದ್ದಲ್ಲಿ, ಅದರಿಂದ ಆಗಬಹುದಾದ ಅನಾಹುತವನ್ನು ಮುಂಚೆಯೇ ಆಲೋಚಿಸಿ ಮುಂಚೆಯೇ ಕ್ರಮ ತೆಗೆದುಕೊಳ್ಳಿ. ಬೆಳಗಿನ ಅಡುಗೆಗೆ ಹಿಂದಿನ ದಿನವೇ ತರಕಾರಿ ಹೆಚ್ಚಿಡಿ. ಬಾಯಾರಿಕೆ ಆದಾಗ ಬಾವಿ ತೋಡೋ ಕೆಲಸ ಮಾಡದಿರಿ.

ಬಟ್ಟೆಗೆ ಬೆಂಕಿ ಹೊತ್ತಿದ ಮೇಲೂ ದೊಡ್ಡವರು ಬಂದು ನೀರು ಹಾಕಲು ಹೇಳಿದ ಮೇಲೆ ತಕ್ಷಣ ನೀರು ಹೊಯ್ಯೋದು ಬುದ್ಧಿವಂತರ ಕೆಲಸ ಅಲ್ಲ. ಒಬ್ಬರು ಹೇಳಿದ ಕೆಲಸವನ್ನು ಮಾಡೋದು reactive. ಆದರೆ ಮುಂಚಿತವಾಗಿ ಆಲೋಚಿಸಿ ಕೆಲಸವನ್ನು ಮಾಡಿಟ್ಟುಕೊಳ್ಳೋದು ಅಥವಾ ಬರುವ ಆಪತ್ತನ್ನು ತಡೆಯೋದಕ್ಕೆ being proactive ಅಂತಾರೆ.

 ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ... ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...

ಸಾಮಾನ್ಯವಾಗಿ ಕೆಲಸಕ್ಕೆಂದು ಬೇಕಾದ ಅರ್ಹತೆಗಳನ್ನು ಪಟ್ಟಿ ಮಾಡುವಾಗ, job description ನಲ್ಲಿ ಅಭ್ಯರ್ಥಿಯು "proactive" ಆಗಿ ಇರಬೇಕು ಎಂಬುದನ್ನು ಕೇಳಿರುತ್ತಾರೆ. ಅಭ್ಯರ್ಥಿಯು proactive ಆಗಿರಬೇಕು ಎಂದು ಬಯಸುತ್ತಾರೆ. ಇದರರ್ಥ ಇಷ್ಟೇ, ಪ್ರತೀ ಕೆಲಸಕ್ಕೂ ನಿಮ್ಮ supervisorನಿಂದ ಆದೇಶ ಬರಲಿ ಅಂತ ಕಾಯಬೇಡಿ, ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನವಿದ್ದು, ಕೆಲಸಗಳನ್ನು ಮುಂಚಿತವಾಗಿಯೇ ಆಲೋಚಿಸಿ ಮಾಡತಕ್ಕದ್ದು ಅಂತ.

Be Proactive Rather Than Reactive

proactive ಆಗಿರುವ ಮಂದಿ ಮುಂದಾಲೋಚನೆಯಿಂದ ಕೆಲಸಗಳನ್ನು ಮಾಡುತ್ತಾರೆ, ಮತ್ತೊಬ್ಬರು ತಮಗೆ ಹೇಳಲಿ ಎಂದು ಕಾಯುವುದಿಲ್ಲ. ಸಂದರ್ಭ ಬಂದೊದಗಿದ ಮೇಲೆ ಅದಕ್ಕೆ ಪ್ರತಿಕ್ರಿಯಿಸುವವರು reactive ಮಂದಿ. proactive ಬಗ್ಗೆ ಒಂದು ಉದಾಹರಣೆಯ ಮೂಲಕ ಹೇಳುವುದಾದರೆ, ಮುಸ್ಸಂಜೆ ವೇಳೆ ಗುಡುಗು ಮಿಂಚು ಆರಂಭವಾಗಿ, ಕರಿ ಮೋಡಗಳು ಕೂಡಿಕೊಳ್ಳುತ್ತಾ ಸಾಗಿದಂತೆ ಬೆಂಕಿಪೊಟ್ಟಣ, ಕ್ಯಾಂಡಲ್, ಟಾರ್ಚ್ ಇಂಥ ಮತ್ಯಾವುದೋ ದೀಪ ಬೆಳಗಿಸಬಲ್ಲ ಸಾಧನಗಳನ್ನು ಸಿದ್ಧಪಡಿಸಿಕೊಳ್ಳೋದು. ಕರೆಂಟ್ ಗ್ಯಾರಂಟಿ ಹೋಗುತ್ತೆ ಅಂತಲ್ಲ, ಆದರೆ ಸಿದ್ಧವಾಗಿರಬೇಕು. ಕರೆಂಟ್ ತೆಗೆದ ಮೇಲೆ ಕತ್ತಲಲ್ಲಿ ಎಡವುತ್ತಾ, ಮುಗ್ಗರಿಸುತ್ತಾ ಹುಡುಕಲು ಹೋಗುವುದು reactive ನಡವಳಿಕೆ.

ಇದೇ ಉದಾಹರಣೆಯಲ್ಲಿ ಕಂಡಂತೆ proactive ಮಂದಿ ಕೊನೆಯ ನಿಮಿಷದಲ್ಲಿ ಧಡಭಡ ಮಾಡದೆ ಇರುವ ಸಮಯವನ್ನು ಸರಿಯಾಗಿ ಬಳಸಿಕೊಂಡು ಮುಂದಿನ ಹೆಜ್ಜೆಗೆ ಸಿದ್ಧವಾಗಿರುತ್ತಾರೆ. crisis ಅಥವಾ ತುರ್ತು ಎದುರಾಗುವ ಮುನ್ನವೇ ಅದನ್ನು ಎದುರಿಸಲು ಸನ್ನದ್ಧರಾಗಿರುತ್ತಾರೆ. ಒಂದರ್ಥದಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆದು ಸಿದ್ಧರಾಗಿರುತ್ತಾರೆ.

ಏನೋ ಮಿಸ್ ಆಗ್ತಾ ಇದೆ, ನಾನಿಲ್ಲಿಗೆ ಬರಬಾರದಿತ್ತು, ನಾನಿಲ್ಲಿಗೆ ಸೇರಿದವನಲ್ಲ! ಏನೋ ಮಿಸ್ ಆಗ್ತಾ ಇದೆ, ನಾನಿಲ್ಲಿಗೆ ಬರಬಾರದಿತ್ತು, ನಾನಿಲ್ಲಿಗೆ ಸೇರಿದವನಲ್ಲ!

ಶಾಸ್ತ್ರ ಸಂಪ್ರದಾಯವನ್ನು ಪಾಲಿಸುವವರು ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆಯುವುದಿಲ್ಲ. ಇದಕ್ಕೆ ಕಾರಣಗಳು ಹಲವು. ಕೂಸಿಗೆ ತೊಂದರೆಯಾದೀತು, ಕೂಸು ದಕ್ಕದೇ ಹೋಗಬಹುದು, ಗಂಡೋ ಹೆಣ್ಣೋ ಯಾರಿಗ್ ಗೊತ್ತು ಹಾಗಾಗಿ ಈಗಲೇ ರೆಡಿ ಮಾಡೋದು ಯಾಕೆ? ಹೀಗೆಲ್ಲಾ ಕಾರಣಗಳು ಇವೆಯಂತೆ. ಆದರೆ ಇದಕ್ಕೆ ವೈಜ್ಞಾನಿಕ ಕಾರಣ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಇದೇ ನಂಬಿಕೆ ನಮ್ಮಲ್ಲಿ ಬೇರೂರಿತ್ತು.

ಅಮೆರಿಕಕ್ಕೆ ಬಂದಾಗ ಇದಕ್ಕೆ ವಿರುದ್ಧವಾದ ವಿಧಾನಗಳನ್ನು ಕಂಡೆ. ಕೂಸು ಹುಟ್ಟುವ ಮುನ್ನವೇ ಅದಕ್ಕೊಂದು ಜೊತೆ ಬಟ್ಟೆಬರೆ, car seat, ಇತ್ಯಾದಿಗಳು ಸಿದ್ಧ ಇರಬೇಕು. ಇಲ್ಲದಿದ್ದರೆ ಮಗುವನ್ನು ಮನೆಗೆ ಕರೆದೊಯ್ಯುವಂತೆಯೇ ಇಲ್ಲ. ಅಷ್ಟೇ ಅಲ್ಲದೇ ಮಗುವಿಗೊಂದು ಹೆಸರೂ ಇಡಬೇಕು. ಇಲ್ಲಿನ ಸ್ನೇಹಿತರ ವಲಯದಲ್ಲಿ ಮಕ್ಕಳಾದಾಗ ಇವೆಲ್ಲಾ ಗಮನಿಸಿದ್ದು. ಅಮೆರಿಕದ್ದು proactive ಭಾರತೀಯ ಸಂಪ್ರದಾಯವು reactive ಅನ್ನಬಹುದು.

 ಬೆಲ್ಟ್ ಬಿಗಿದು ನಿಲ್ಲೋದು ಅಂದ್ರೆ ಟೊಂಕ ಕಟ್ಟಿ ನಿಲ್ಲೋದು ಅಂತ ಅರ್ಥ! ಬೆಲ್ಟ್ ಬಿಗಿದು ನಿಲ್ಲೋದು ಅಂದ್ರೆ ಟೊಂಕ ಕಟ್ಟಿ ನಿಲ್ಲೋದು ಅಂತ ಅರ್ಥ!

proactive ಅಂಬೋದು ಇನ್ನೆಲ್ಲೆಲ್ಲಿ ಸಾಧ್ಯ? ಉದಾಹರಣೆಗೆ ಎಲ್ಲೋ ಒಂದು long drive ಹೋಗಬೇಕು ಅಂದುಕೊಳ್ಳಿ. ಆಗ ಹಿಂದಿನ ದಿನವೇ ಗಾಡಿಯ ಹೊಟ್ಟೆ ತುಂಬಿಸೋದು, ಚಕ್ರಗಳ ಟ್ಯೂಬಿನಲ್ಲಿ ಗಾಳಿ ಸರಿಯಾಗಿದೆಯೇ, ಗಾಡಿಯಲ್ಲಿ ಒಂದು ಸಣ್ಣ toolbox, ಟಾರ್ಚ್ ಹೀಗೆ ಲಾಂಗ್ ಡ್ರೈವ್'ಗೆ ಬೇಕಿರುವ ಸಾಮಾನು ಸರಂಜಾಮುಗಳು ಇವೆಯೇ ಎಂದು ನೋಡಿಕೊಂಡರೆ ನಸುಕಿನಲ್ಲೇ ಎದ್ದು ಹೋಗುವಾಗ tension ಇರೋಲ್ಲ, ಪರಸ್ಪರ ದೂಷಣೆಗೆ ಆಸ್ಪದವೂ ಇರೋದಿಲ್ಲ.

ಶಾಲೆಯ ದಿನಗಳಲ್ಲಿ ಮಕ್ಕಳ ಅಪ್ಪ ಅಮ್ಮಂದಿರ ಪಾಡು ಹೀಗಿರಬಹುದು. ಮಕ್ಕಳನ್ನು ಬೇಗ ಎಬ್ಬಿಸಿ, ಬೇಗ ಬೇಗ ತರಕಾರಿ ಹೆಚ್ಚಿಕೊಂಡು ಉಪ್ಪಿಟ್ಟಿಗೆ ಅಣಿ ಮಾಡಿ, ಇತ್ಲಾಗೆ ಮಕ್ಕಳ ಯುನಿಫಾರ್ಮ್ ಐರನ್ ಮಾಡಿ, ಮೆಣಸಿನಕಾಯಿ ಹೆಚ್ಚಿಟ್ಟುಕೊಂಡು, ಶೂ ಪಾಲಿಶ್ ಮಾಡಿ, ಉಪ್ಪಿಟ್ಟು ಕೆದಕಿ, ಸಾಕ್ಸ್ ಎತ್ತಿಟ್ಟು, ಉಪ್ಪು ಹಾಕಿ ... ಯಪ್ಪಾ ! ಏನೆಲ್ಲಾ ಕೆಲಸಗಳ ಮಿಕ್ಸ್ ಅಲ್ವಾ? ಈ ಗಡಿಬಿಡಿಯಲ್ಲಿ ಶೂ'ಗೆ ಉಪ್ಪು ಹಾಕಿ, ಉಪ್ಪಿಟ್ಟಿಗೆ ಸಾಕ್ಸ್ ಹಾಕಿದರೆ... ಹೋಗ್ಲಿ ಬಿಡಿ

ಇಷ್ಟೆಲ್ಲಾ ಕೆಲಸಗಳಲ್ಲಿ ಹಿಂದಿನ ದಿನವೇ ಸಿದ್ಧ ಮಾಡಿಡಬಹುದಾಗ ಕೆಲಸಗಳು ಯಾವುವು ಎಂದು ನೋಡಿಕೊಂಡು ಮಾಡಿಟ್ಟುಕೊಂಡರೆ ಬೆಳಗಿನ ಹಲವು ಕೆಲಸ ಕಡಿಮೆಯಾಗುತ್ತದೆ ಅಲ್ಲವೇ? ಜೊತೆಗೆ ಬೆಳಿಗ್ಗೆ ಏಳುವ ಸಮಯವನ್ನೇ ಹತ್ತು ನಿಮಿಷ ಮುಂಚೆಯೇ ಎದ್ದು ಆ ಹತ್ತು ನಿಮಿಷಗಳನ್ನು ನಿಮಗೆಂದೇ ಇಟ್ಟುಕೊಳ್ಳಿ. ಆಗ ಹಗಲಿನ ಗಡಿಬಿಡಿ ಕಡಿಮೆಯಾಗುತ್ತದೆ. ಮನಸ್ಸೂ ಕೊಂಚ ಶಾಂತವಾಗಿರುತ್ತೆ. ಏನಂತೀರಾ?

kerchief, ಪರ್ಸ್, ಪ್ಯಾಂಟು, ಷರಟು, ಬೆಲ್ಟು, ಕೆಲಸದ badge, ಇತ್ಯಾದಿಗಳನ್ನು ಒಂದೆಡೆ (ನಿಮ್ಮದೇ ಆದ ಸ್ಥಳ) ಇಟ್ಟುಕೊಳ್ಳೋದ್ರಿಂದ ಬೆಳಿಗ್ಗೆಯ ಅವಲಂಬನೆ ಕಡಿಮೆಯಾಗುತ್ತದೆ. ಕೆಲಸಗಳನ್ನು ಸ್ವಲ್ಪ ಮುಂಚಿತವಾಗಿಯೇ ಮುಗಿಸಿಟ್ಟುಕೊಂಡಾಗ ಅಥವಾ ಸಿದ್ಧಪಡಿಸಿಟ್ಟುಕೊಳ್ಳುವುದರಿಂದ proactive ಮಂದಿಯ ಮನಸ್ಸು ಕೊಂಚ ಹೆಚ್ಚಾಗಿಯೇ ಶಾಂತವಾಗಿರುತ್ತದೆ. ಮೊದಲಿಗೆ ಅವರಿಗೆ ಕೆಲಸ ಮುಗಿಸಿರುವುದರಿಂದ ಸಮಯ ಇರುತ್ತದೆ. ಎರಡನೆಯದಾಗಿ, ಆ ಮರು ದಿನದ ಕೆಲಸಗಳಲ್ಲಿ ಏನಾದರೂ ಏರುಪೇರಾಗಿ ಸವಾಲು ಎದುರಾದಾಗ ಆಲೋಚಿಸಲೂ ಸಮಯವಿರುತ್ತದೆ.

ಇದಕ್ಕೆಲ್ಲಾ ನಾವು ಜಾಸ್ತಿ ತಲೆಕೆಡಿಸಿಕೊಳ್ಳೋದಿಲ್ಲ ಎಂದರೆ ಮತ್ತೊಂದು ವಿಷಯದಲ್ಲಿ proactive ಆಗಿರಲೇಬೇಕಾದ ವಿಚಾರ ಹೇಳುತ್ತೇನೆ. ನೀವೊಂದು ಅಪಾರ್ಟ್ ಮೆಂಟಲ್ಲಿ ಇದ್ದೀರಿ ಅಂದುಕೊಳ್ಳಿ. ಯಾವುದೋ ಡೆಲಿವೆರಿ ಬರುವುದು ಇದ್ದಾಗ, ಆ ವ್ಯಕ್ತಿ ಬಾಗಿಲ ಬಳಿ ಬಂದು ನಿಂತ ಮೇಲೆ, ಅವನನ್ನು ಅಲ್ಲಿ ನಿಲ್ಲಿಸಿ ಅವನ ಮುಂದೆ ಬೀರುವಿನಿಂದ ದುಡ್ಡು ತೆಗೆಯುವುದೋ ಅಥವಾ ಪರ್ಸ್ ನಿಂದ ದುಡ್ಡು ತೆಗೆಯುವುದೋ ಮಾಡದಿರಿ. proactive ಆಗಿ ಮುಂಚೆಯೇ ದುಡ್ಡು ತೆಗೆದಿಟ್ಟುಕೊಂಡಿರಿ. ಆ ಸಮಯದಲ್ಲಿ ಯಾರದ್ದಾದರೂ ಫೋನ್ ಬಂದರೆ ಮತ್ತೆ ಕರೆ ಮಾಡುತ್ತೇನೆ ಎಂದೇ ತಿಳಿಸಿ. ಬಾಗಿಲ ಬಳಿಯೇ ಒಂದು ಬಾಟಲಿ, ಲೋಟದಲ್ಲಿ, ಜಗ್ಗಿನಲ್ಲಿ ನೀರು ಇಟ್ಟುಕೊಂಡಿರಿ. ಇದಕ್ಕಿಂತ ಒಳಿತು ಎಂದರೆ ಡೆಲಿವೆರಿ ಇದ್ದಾಗ ಅದನ್ನು security ಯವನ ಬಳಿಯೇ ಬಿಟ್ಟಿರಲು ಹೇಳಿ ನೀವು ಆಮೇಲೆ collect ಮಾಡಿ. ಇವೆಲ್ಲವೂ ನಿಮ್ಮದೇ ಸುರಕ್ಷತೆಗಾಗಿ ಮಾಡಿಟ್ಟುಕೊಳ್ಳಬಹುದಾದ proactive ಕೆಲಸಗಳು.

ನಮ್ಮದೇ ದಿನನಿತ್ಯದ ಕಚೇರಿಯ ಕೆಲಸಗಳಲ್ಲಿ ಒಂದು ಮಾತಿದೆ. proactive ಆಗಿ ಕೆಲಸ ಮಾಡಿದರೆ ತೊಂದರೆಗಳು ಉಂಟಾಗೋದು ತಪ್ಪುತ್ತೆ ನಿಜ, ಆದರೆ ಟೀಮಿನ ಜನಕ್ಕೆ ಅಥವಾ ದೊಡ್ಡವರಿಗೆ ನಮ್ಮ ಬೆಲೆ ತಿಳಿಯಬೇಕು ಎಂದರೆ ಸಮಸ್ಯೆ ಹೊರಬಿದ್ದ ಮೇಲೆ ಅಥವಾ ಭುಗಿಲೆದ್ದ ಮೇಲೆ ಅದನ್ನು ನಂದಿಸಬೇಕು ಅಂತ. ಹಲವೊಮ್ಮೆ ನಿಜ ಅನ್ನಿಸುತ್ತೆ.

ಎಂದೋ ಈ ಲೋಕದಿಂದ ಹೋಗೋದಕ್ಕೆ proactive ಆಗಿ ಈ ದಿನವೇ ಸೌದೆ ತಂದಿಟ್ಟುಕೊಳ್ಳಲಾದೀತೇ? ಅಥವಾ ವ್ಯಾನ್ ಹತ್ತಿ ಮಲಗಿಕೊಳ್ಳಲಾದೀತೇ? ಎನ್ನುವಿರಾ ಅಥವಾ proactive ಆಗಿ ಇರುವುದರಿಂದ ಲಾಭ ಇದೆ ಎನ್ನುವಿರಾ? ನಿಮ್ಮ ಜೀವನದಲ್ಲಿ ನೀವು ಸಾಧಿಸಿರಬಹುದಾದ proactive ಕೆಲಸಗಳಿಂದ ನಿಮಗಾಗಿರುವ ಅನುಕೂಲ/ಅನನುಕೂಲಗಳನ್ನು ಹಂಚಿಕೊಳ್ಳುವಿರಲ್ಲಾ?

English summary
Reactive is, to do what someone said. But proactive is, doing the job in advance and preventing the danger. ಒಬ್ಬರು ಹೇಳಿದ ಕೆಲಸವನ್ನು ಮಾಡೋದು reactive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X