• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಮನೋಭಾವವೇ ಎಲ್ಲಾ, ಮನೋಭಾವದಿಂದಲೇ ಎಲ್ಲಾ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಮನೋಭಾವ ಎಂದರೆ Attitude. ಹೇಗೆ ಡಿಜಿಟಲ್ ಎಂಟು ಎಂಬ ಸಂಖ್ಯೆಯಲ್ಲಿ ಎಲ್ಲ ಸಂಖ್ಯೆಗಳೂ ಅಡಕವಾಗಿದೆಯೋ ಹಾಗೆಯೇ ಎಂಟಕ್ಷರದ Attitudeನಲ್ಲಿ ಎಲ್ಲವೂ ಅಡಕವಾಗಿದೆ. ಒಬ್ಬ ವ್ಯಕ್ತಿಯನ್ನು ಉಚ್ಛ ಸ್ಥಾನಕ್ಕೆ ಕರೆದೊಯ್ದು ಕೂರಿಸಬಲ್ಲ ಶಕ್ತಿ ಈ ಮನೋಭಾವಕ್ಕಿದೆ. ಅದರಂತೆಯೇ ಇನ್ನೆಷ್ಟೇ ಮೇಲಿದ್ದರೂ ಅಧಃಪತನಕ್ಕೆ ನೂಕುವ ಶಕ್ತಿಯೂ ಈ ಮನೋಭಾವಕ್ಕೆ ಇದೆ ಎಂಬುದನ್ನು ಗಮನಿಸಬೇಕು.

Attitude ಎಂಬುದನ್ನು ಮನೋಭಾವ ಎಂದು ಅರ್ಥೈಸಿಕೊಳ್ಳುವಂತೆಯೇ ವರ್ತನೆ ಎಂದೂ ಅರ್ಥೈಸಿಕೊಳ್ಳಬಹುದು. ಗುರುಹಿರಿಯರ ಬಗ್ಗೆ ಅಥವಾ ತನಗಿಂತ ಕಡಿಮೆ ತಿಳಿದಿರುವವರ ಬಗ್ಗೆ ಅಥವಾ ಕಿರಿಯರ ಜೊತೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು Attitude ಪದ ಬಳಸಿ ಹೇಳಿದರೆ ಅದು ವರ್ತನೆ ಎಂದಾಗುತ್ತದೆ. ತಾನೆಷ್ಟು ಓದಿಕೊಂಡವನು, ತನಗಿಂತ ಕಡಿಮೆ ಅರಿತವರ ಜೊತೆ ನನ್ನದೇನು ಕೆಲಸ ಎಂಬ ಹುಂಬತನ ಒಂದು ವರ್ತನೆ. ಎನಗಿಂತ ಕಿರಿಯರಿಲ್ಲ ಎಂಬ ಮನೋಭಾವ ಹೊತ್ತವರು ಗುರುಹಿರಿಯರು ಮತ್ತು ಕಿರಿಯರೊಡನೆ ಯಾವುದೇ ಅಹಂ ತೋರದೆ ವರ್ತಿಸುತ್ತಾರೆ. ಯಾವುದೇ ಒಂದು ಮನೋಭಾವ ಒಬ್ಬರಲ್ಲಿ ಮೂಡಲು ಹಲವಾರು ಕಾರಣಗಳು.

ಶ್ರೀನಾಥ್ ಭಲ್ಲೆ ಅಂಕಣ; ಪೋಪು ಹೋಗೋಣ ಬಾರೋ ರಂಗ

ಒಬ್ಬರ ಮನೋಭಾವ ಮೂಡಲು ಅಥವಾ ಬದಲಾಗಲು ಮೂರು Eಗಳು ಪೋಷಕ ಪಾತ್ರವಹಿಸುತ್ತದೆ. ಇದಕ್ಕೆ 3Es ಎನ್ನುತ್ತಾರೆ. Envirornment, Education, Experienceಗಳೇ ಈ ಮೂರು E ಗಳು. ಒಬ್ಬ ವ್ಯಕ್ತಿ ಬೆಳೆದ ಪರಿಸರ ಒಂದೇ ಅಲ್ಲದೇ ಶಾಲಾ ಕಾಲೇಜು, ಕಚೇರಿ, ಸ್ನೇಹಿತರು, ಬಂಧುಬಳಗದ ವಲಯ ಹೀಗೆ ಅವನ ಅಥವಾ ಅವಳ ದಿನನಿತ್ಯದ ವ್ಯಾವಹಾರಿಕ ಜಗತ್ತಿನ ನಂಟುಗಳು ಒಬ್ಬ ವ್ಯಕ್ತಿಯ ಮನೋಭಾವ ಅಥವಾ ವರ್ತನೆಯನ್ನು ರೂಪಿಸುತ್ತದೆ ಅಥವಾ ಬದಲಿಸುತ್ತದೆ. ಒಬ್ಬ ವಿದ್ಯಾರ್ಥಿ ಬುದ್ಧಿವಂತನೇ ಆಗಿದ್ದರೂ, ತನ್ನ ತರಗತಿಯಲ್ಲಿನ ಪ್ರತೀ ವಿದ್ಯಾರ್ಥಿಯು ಅತೀ ಬುದ್ಧಿವಂತರಾಗಿದ್ದಾಗ ಆ ವಿದ್ಯಾರ್ಥಿಗೆ ಋಣಾತ್ಮಕ ಮನೋಭಾವವು ಬಲು ಬೇಗ ಮೂಡುತ್ತದೆ. ಹೀಗಾಗಿ ಮಕ್ಕಳನ್ನು ಒಂದು ಶಾಲೆಗೆ ಸೇರಿಸುವ ಮುನ್ನ ಪ್ರತಿಷ್ಠೆಯನ್ನು ಬದಿಗೊತ್ತಿ ವಿದ್ಯಾರ್ಥಿಗೆ ಅನುಕೂಲವಾಗುವಂತಹ ಶಾಲೆಗೇ ಸೇರಿಸುವುದು ಉತ್ತಮ.

ಇನ್ನು ಅನುಭವ. ಯಾವ ಪಠ್ಯವೂ, ಯಾವ ಯೂನಿವರ್ಸಿಟಿಗಳೂ ಕಲಿಸದ ಪಾಠಗಳನ್ನು ಅನುಭವ ಕಲಿಸಿಕೊಡುತ್ತದೆ. ದೈನಂದಿನ ಜೀವನಾನುಭವಗಳು ಒಬ್ಬ ವ್ಯಕ್ತಿಯನ್ನು ರೂಪಿಸಲು ಬಹಳ ಶಕ್ಯವಾಗಿರುತ್ತದೆ. ಇದರಲ್ಲಿ ಮುಖ್ಯವಾದುದೇ ಸೋಲು. ಒಂದು ಸೋಲು ಮನುಷ್ಯನನ್ನು ಕೆಳಕ್ಕೆ ತಳ್ಳುವಲ್ಲಿ ಯಶಸ್ವಿಯಾಗುತ್ತದೆ. ಹಲವಾರು ಮಂದಿ ಆ ದೂಳಲ್ಲೇ ಲೀನವಾಗುತ್ತಾರೆ. ಕೆಲವರು ಮಾತ್ರ ಆ ದೂಳನ್ನು ಕೊಡವಿಕೊಂಡು, ಪಾಠ ಕಲಿತು, ವಿಶ್ವಾಸ ಮೂಡಿಸಿಕೊಂಡು ನಿರ೦ತರ ಯತ್ನ ಮಾಡುತ್ತಲೇ ಜಯಿಸುತ್ತಾರೆ. ಇವರ ಮನೋಭಾವ ಗೆಲುವು ಅಂತಲ್ಲ ಬದಲಿಗೆ ನಿರಂತರ ಯತ್ನವೇ ಆಗಿರುತ್ತದೆ. ಛಲ ಬಿಡದ ತ್ರಿವಿಕ್ರಮನಂತೆ ಇವರ ಮನೋಭಾವ. ಯಶಸ್ಸು ಎಂಬುದು ಒಂದು ಯಾನ ಎಂದು ನಂಬಿರುತ್ತಾರೆಯೇ ವಿನಃ, ಅದನ್ನೇ ಕೊನೆಯ ಹಂತ ಅಂತ ನಂಬಿದವರಲ್ಲ.

ಶ್ರೀನಾಥ್ ಭಲ್ಲೆ ಅಂಕಣ; ಹೀಗೊಂದು ಡಬ್ಬ ಬರಹ...

ಕೊನೆಯದಾಗಿ ವಿದ್ಯಾರ್ಹತೆ. ಈ ವಿದ್ಯಾರ್ಹತೆ ಅನ್ನೋದು ಯಾವ ಕಡೆಯೂ ತೂಗಬಹುದು. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿನಂತೆ ವಿನಯಪೂರ್ವಕ ವರ್ತನೆಯನ್ನು ರೂಢಿಸಿಕೊಂಡು ಬದುಕುವವರು ಇರುತ್ತಾರೆ. ಅವರು ಕಲಿತ ವಿದ್ಯೆಯಿಂದ ಅವರುಗಳು ಒಂದು ಕಡೆದ ಶಿಲ್ಪವಾಗಿರುತ್ತಾರೆ. ಅದೇ ವಿದ್ಯೆಯು ಒಬ್ಬ ವ್ಯಕ್ತಿಯಲ್ಲಿ ಅಹಂಕಾರವನ್ನು ತಳೆಯುವಂತೆಯೂ ಮಾಡಬಹುದು. ತನಗಿಂತ ಹಿರಿಯರಿಲ್ಲ ಎಂಬ ಮನೋಭಾವ ಬೆಳೆಸಿಕೊಂಡವರು ತಮ್ಮ ಸುತ್ತಲೂ ಒಂದು ಬೇಲಿಯನ್ನೇ ಹಾಕಿಕೊಂಡು ತಮ್ಮದೇ ಒಂದು ಅಹಂನ ಕೋಟೆಯಲ್ಲಿ ಬಂಧಿತರಾಗಿ ಜೀವಿಸುತ್ತಾರೆ.

ಧನಾತ್ಮಕ ಮನೋಭಾವ ಬೆಳೆಸಿಕೊಳ್ಳೋದು ಕಷ್ಟ. ಅದನ್ನು ದಿನನಿತ್ಯದ ತಪಸ್ಸಿನಂತೆ ಆಚರಿಸಬೇಕು. ನಾ ಸಾಧಿಸಿಬಿಟ್ಟೆ ಎಂದು ಹೇಳಿಕೊಳ್ಳಲು ಆಗದಂತಹ ವಿಚಾರವಿದು. ಏನೇ ಬಂದರೂ ಛಲದಿಂದ ಮುನ್ನುಗ್ಗುತ್ತೇನೆ, ಧೈರ್ಯದಿಂದ ಎದುರಿಸುತ್ತೇನೆ, ಯಾರೇ ಕೆಡವಲಿ ತಾನು ಕಟ್ಟುವುದನ್ನು ಬಿಡದ ಜೇಡನಂತೆ ಇರಬೇಕು ಎಂದೆಲ್ಲಾ ಮನಸ್ಸಿನಲ್ಲಿ ರೂಪಿಸಿಕೊಂಡಿದ್ದರೂ, ಒಂದು ಸಣ್ಣ ಸೋಲನ್ನು ಉಂಡ ಕೂಡಲೇ ಮನಸ್ಸು ಧೃತಿಗೆಟ್ಟು ಕಾಲನ್ನು ಹಿಂದೆಗೆಯುವಂತೆ ಮಾಡುತ್ತದೆ. ಬಲುಬೇಗ ಧನಾತ್ಮಕದಿಂದ ಮನಸ್ಸು ಜಾರಿ ಋಣಾತ್ಮಕ ಆಲೋಚನೆಗಳು ಮನಸ್ಸನ್ನು ಮುತ್ತುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; ತಪಸ್ಸು ಮಾಡೋಣ ಬರ್ತೀರಾ?

ಧನಾತ್ಮಕ ಮನೋಭಾವ ಉಳ್ಳವರು ತಮ್ಮ ಸುತ್ತಲಿನವರ ಮೇಲೂ ಆ ಪ್ರಭಾವ ಬೀರುತ್ತಾರೆ. ದಿನನಿತ್ಯವೂ ಇಂಥವರು ತಾವಿರುವುದು ಒಂದು ಹೊಸ ಜಗತ್ತು ಎಂಬಂತೆ ಜೀವನವನ್ನು ಆಸ್ವಾದಿಸುತ್ತಾರೆ. ಕಲಿಯುತ್ತಾ, ಕಲಿಸುತ್ತಾ ಸಾಗುತ್ತಾರೆ. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂಬ ಮನೋಭಾವ ಇವರದ್ದೇ ವಿನಃ ಜೀವನದಲ್ಲಿ ಇವರಿಗೆ ಯಾವುದಕ್ಕೂ ಕೊರತೆಯೇ ಇಲ್ಲದವರು ಅಂತೇನಲ್ಲ. ಅರ್ಥಾತ್ ಧನಾತ್ಮಕ ಮನೋಭಾವ ಉಳ್ಳವರು ಧನ ಉಳ್ಳವರು ಅಂತಲ್ಲ.

ಹಲವು ಬಾರಿ ಈ ಧನ ಉಳ್ಳವರೇ ಹೆಚ್ಚು ಋಣಾತ್ಮಕ ಮನೋಭಾವದವರಾಗಿರುತ್ತಾರೆ. ಸದಾ ಯಾವುದೋ ಚಿಂತೆಯಲ್ಲಿ ಮುಳುಗಿ, ಸದಾ ಖಿನ್ನರಾಗಿ, ಜೀವನವೇ ಮುಳುಗಿಹೋಯ್ತು ಎಂಬಂತೆ ಆಡುತ್ತಾ ತಾವೂ ಕೊರಗುವುದಲ್ಲದೆ ತಮ್ಮ ಸುತ್ತಲಿನವರನ್ನೂ ಆ ಪ್ರಪಾತಕ್ಕೆ ನೂಕುತ್ತಾರೆ. ಇಂಥವರು ಒಂದು ಸಣ್ಣ ಸೋಲನ್ನೂ ತಾಳಲಾಗದೆ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುವತ್ತಲೂ ಆಲೋಚಿಸುತ್ತಾರೆ.

ಕೆಲವರದ್ದು ಗೆಲುವಿನ ಮನೋಭಾವವಾದರೆ ಹಲವರದ್ದು ಸೋಲಿನ ಮನೋಭಾವ. ಈ ಸಲ ಕಪ್ ನಮ್ಮದೇ ಎಂಬ ಮನೋಭಾವವೇ ಈ ಗೆಲುವಿನ ಮನೋಭಾವ. ಏನಾದರಾಗಲಿ ವಿಶ್ವಾಸ ಮಾತ್ರ ಅಚಲವಾಗಿರುತ್ತದೆ. ಪ್ರತೀಬಾರಿ ಹುಟ್ಟಿದ ಚಿಗುರು ಕಮರಿದರೂ ಮುಂದಿನ ಬಾರಿ ಚಿಗುರಿದಾಗ ಅದು ಫಲ ನೀಡುತ್ತದೆ ಎಂಬ ಮನೋಭಾವವೇ ಜೀವನ.

ಒಂದು ಬಲೂನಿನಲ್ಲಿ ಗಾಳಿ ತುಂಬಿಸಿ ಬಿಟ್ಟಾಗ ಅದು ಹಾರುತ್ತದೆ. ಹಾರುವ ಬಲೂನಿಗೆ ತಾನು ಯಾವ ಬಣ್ಣ ಅಂತಲೇ ಗೊತ್ತಿರುವುದಿಲ್ಲ. ತನ್ನಲ್ಲಿರುವ ಗಾಳಿ ಎಂಬ ಚೈತನ್ಯದ ಬಲವೊಂದೇ ಅದಕ್ಕಿರುವ ಅರಿವು. ಎಲ್ಲರೂ ಸಾಮರ್ಥ್ಯ ಎಂಬ ಗಾಳಿಯನ್ನು ತುಂಬಿಕೊಂಡೇ ಈ ಭುವಿಗೆ ಬಂದಿರುತ್ತೇವೆ. ಆದರೆ ಆ ಸಾಮರ್ಥ್ಯ ನಮ್ಮಲ್ಲಿದೆ ಎಂದು ಗುರುತಿಸಿಕೊಳ್ಳಲೇ ಮೊದಲು ಸೋಲುತ್ತೇವೆ. ಮೊದಲು ನಮ್ಮನ್ನು ನಾವು ಗುರುತಿಸಿಕೊಂಡು ನಮ್ಮ ಸಾಮರ್ಥ್ಯವನ್ನು ಪೋಷಿಸಿದರೆ ಹಾರುವುದಕ್ಕೆ ಏನಿದೆ ಕಷ್ಟ? ಹನುಮನಿಗೆ ಸಿಕ್ಕ ಜಾಂಬವಂತನಂತೆ ನಮಗೂ ಒಬ್ಬ ದೊರೆತರೆ ಚೆನ್ನ, ಇಲ್ಲವಾದಲ್ಲಿ ನಮಗೆ ನಾವೇ ಜಾಂಬವಂತರಾಗಬೇಕು.

ಮಕ್ಕಳಿಗೆ ಸೋಲನ್ನುಂಡು ಬೆಳೆದವರ ವಿಚಾರವನ್ನು ತಿಳಿ ಹೇಳಿ ಬೆಳೆಸಿದಾಗ ಅವರಿಗೆ ಸೋಲು ಎಂಬುದೂ ಒಂದಿದೆ ಎಂಬ ಅರಿವು ಇರುತ್ತದೆ. ಆಗ ಅವರ ಮನೋಭಾವವು ಸೋಲನ್ನು ಎದುರಿಸಲು ಸಿದ್ಧಗೊಳ್ಳುತ್ತದೆ. ಗೋಲಿನತ್ತ ಮುನ್ನುಗ್ಗುವ ಚೆಂಡನ್ನು ತಡೆಯಲು ಒಬ್ಬ ಶಕ್ತನಿರುತ್ತಾನೆ ಎಂಬುದು ನೆನಪಿರಬೇಕು. ನೆಟ್ ಬಳಿ ಸಾಗಿದ್ದೆಲ್ಲಾ ಗೋಲ್ ಆಗುವುದಿಲ್ಲಾ ಎಂಬ ಅರಿವು ಮೂಡಬೇಕು. ಅದರಂತೆಯೇ ತೊಟ್ಟಬಾಣದ ಹೆದೆಯನ್ನು ಮೊದಲು ಹಿಂದಕ್ಕೆಳೆದು ನಂತರ ಬಿಟ್ಟಾಗಲೇ ಅದು ಮುಂದಕ್ಕೆ ಹಾರೋದು ಎಂಬ ಸತ್ಯದ ಅರಿವು ಮೂಡಿಸಬೇಕು.

ನಮ್ಮಲ್ಲಿ ಧನಾತ್ಮಕ ಆಲೋಚನೆ ಮೂಡಿಸಿಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮತ್ತೊಬ್ಬರಲ್ಲಿ ಅದನ್ನು ಮೂಡಿಸುವುದು ಕೂಡ. ಏನಂತೀರಾ?

English summary
Everything is included in the Attitude. This attitude has power to take a person to the top and it can also make person to fall,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X