ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ನಿಮಗೆ ಮತ್ತೆ ಸುಸ್ತಾಗಿದೆಯೇ? ಅಥವಾ ಮರುಸುಸ್ತಾದವರ ಬಗ್ಗೆ ಗೊತ್ತಿದೆಯೇ?

By ಶ್ರೀನಾಥ್ ಭಲ್ಲೆ
|
Google Oneindia Kannada News

Charge ಆಗಿರುವುದು ಖಾಲಿ ಆದಾಗ ಮತ್ತೆ ಚಾರ್ಜ್ ಮಾಡಿದರೆ ಅದು Recharge. ಜೀವನದಲ್ಲಿ ಶಕ್ತಿ ಇರುವಾಗ ಕೆಲಸ ಮಾಡುವುದನ್ನು ಚಾರ್ಜ್ ಅಂತ ಕರೆದರೆ, ನಿವೃತ್ತರಾದಾಗ ಚಾರ್ಜ್ ಖಾಲಿ ಆಯ್ತು ಅಂತರ್ಥ. ನಿವೃತ್ತಿ ಆಗಬೇಕು ಅಂತ ಕಡ್ಡಾಯ ಮಾಡೋದ್ಯಾಕೆ? ಸುಸ್ತಾಗಿರುತ್ತೀರಿ, ಸುಧಾರಿಸಿಕೊಳ್ಳಿ ಅಂತ. ಈ ಸಂದರ್ಭದಲ್ಲಿ ಜೀವನ recharge ಆಗಬೇಕು ಆಗಲೇ ಚೆನ್ನ. ಆದರೆ ಈ ರೀಚಾರ್ಜ್ ಎಂಬುದು ಜೀವನಕ್ಕೆ ಉತ್ಸಾಹ ತುಂಬಬೇಕೇ ವಿನಃ ಆಯಾಸ ಹೆಚ್ಚಿಸಬಾರದು. ಕೆಲಸ ಮಾಡಿದಾಗಲೇ ಸುಸ್ತು ಅಂತಲ್ಲ ಬದಲಿಗೆ ಸುಮ್ಮನೆ ಕೂತಿದ್ದರೂ ಸುಸ್ತಾಗುತ್ತದೆ ಎಂಬುದು ನೆನಪಿರಲಿ. ಸುಸ್ತಾಗಿರುವವರು ಅರ್ಥಾತ್ tired ಆಗಿರುವವರು ಮತ್ತೆ ಸುಸ್ತಾಗುವುದನ್ನು Re-tired ಅಂತ ನಾನು ಕರೆದಿದ್ದೇನೆ.

ನಮ್ಮ ಅಪ್ಪನ ವಿಷಯವನ್ನೇ ತೆಗೆದುಕೊಂಡರೆ, ಹಗಲು ಏಳೂವರೆಗೆ ಫ್ಯಾಕ್ಟರಿ ಬಸ್ ಏರಿ ಕೆಲಸಕ್ಕೆ ಹೋದರೆ ವಾಪಸ್ ಬರುತ್ತಿದ್ದುದು ಆರೂವರೆ ಸಂಜೆಗೆ. ಇದು ಮನೆಯನ್ನು ಕಟ್ಟಿಕೊಂಡು ಕ್ವಾರ್ಟರ್ಸ್‌ನಿಂದ ದೂರ ಬಂದ ಮೇಲೆ. ಅಪ್ಪ ಹೆಚ್ಚುವರಿ ಸಮಯದಲ್ಲಿ ಕೆಲಸದ ಆಚೆ ಧಾರ್ಮಿಕ ಕೆಲಸಗಳಲ್ಲಿ ಬ್ಯುಸಿ ಇರುತ್ತಿದ್ದರು.

ಉದ್ಯೋಗಕ್ಕೆ ಎಂದೂ ನಿರ್ಲಕ್ಷ್ಯ ತೋರಿರಲಿಲ್ಲ
ಪುರಾಣ, ಪ್ರವಚನ, ದೇವರನಾಮಗಳ ಹಾಡುವಿಕೆ ಇತ್ಯಾದಿ ಅಂತ ಸಾಕಷ್ಟು ತೊಡಗಿಸಿಕೊಂಡಿದ್ದರು. ಹೊಟ್ಟೆಪಾಡಿನ ಕೆಲಸ ಎಂಬುದು ಉದ್ಯೋಗ. ಮನೋಲ್ಲಾಸದ ಕೆಲಸದ ಕಡೆಗೆ ಗಮನ ಕೊಡುವಾಗ, ಉದ್ಯೋಗಕ್ಕೆ ಎಂದೂ ನಿರ್ಲಕ್ಷ್ಯ ತೋರಿರಲಿಲ್ಲ. ನಿವೃತ್ತಿಯ ಸಮಯ ಬಂದಾಗ, ದೇಹದಲ್ಲಿ ಶಕ್ತಿಯೂ ಇತ್ತು ಮತ್ತು ಇಂಜಿನಿಯರ್ ವೃತ್ತಿಯು ಈಗ ಧಾರ್ಮಿಕ ಚಟುವಟಿಕೆಗೆ ಅಡ್ಡಿಯಾಗಿರಲಿಲ್ಲ. ಸಂಪೂರ್ಣವಾಗಿ ತಮ್ಮ ಮನೋಲ್ಲಾಸದ ಕೆಲಸದಲ್ಲಿ ತೊಡಗಿಸಿಕೊಂಡು, ಮನವನ್ನು ಆಲಸ್ಯದ ಕಡೆ ವಾಲಿಸಲೇ ಇಲ್ಲ. ಹರಿಪಾದ ಸೇರುವ ನಾಲ್ಕು ದಿನ ಮುನ್ನವೂ ಸ್ನೇಹಿತರ ಮನೆಯ ದೇವರ ಪೂಜೆ ಮುಗಿಸಿ ಬಂದಿದ್ದರು.

Recommended Video

'ಯುದ್ಧ ಬೇಡ' ರಷ್ಯಾ ನಡೆ ವಿರೋಧಿಸಿ ಲೈವ್ ನಲ್ಲೇ ರಾಜೀನಾಮೆ ಕೊಟ್ಟ ರಷ್ಯಾ ಚಾನಲ್ | Oneindia Kannada
Srinath Bhalle Column: Are you Tired Again? Or Do you Know of Tired Man?


ಆಂಗ್ಲದಲ್ಲಿ ಒಂದು ಮಾತಿದೆ 'To the boiling pot the flies come not' ಅಂತ. ಇಲ್ಲಿ flies ಎಂದರೆ ಚಿಂತೆಯ ಹುಳು ಎಂದುಕೊಂಡರೆ ಮನವು busy ಇದ್ದರೆ, ಬೇರೆಡೆ ಗಮನವೇ ಹೋಗದು. ಇನ್ನೊಂದರ್ಥದಲ್ಲಿ ಹೇಳಿದರೆ, ಚಿಂತೆಯು ಈ ದೇಹವೆಂಬ ಪಾತ್ರೆ ಬಿಸಿಬಿಸಿಯಾಗಿದೆ ಹತ್ತಿರ ಹೋಗುವುದು ಬೇಡ ಅಂತ ದೂರ ಸಾಗುತ್ತದೆ.

ಓಡಾಡುವಾಗ ಕುಂಟೆಬಿಲ್ಲೆ ಆಡಲೇಬೇಕು
ಭಯಂಕರ ಗಂಭೀರದಿಂದ ಕೊಂಚ ತಿಳಿಹಾಸ್ಯಗಳಿಗೆ ಸಾಗೋಣ. ಸಾಮಾನ್ಯವಾಗಿ ನಿವೃತ್ತರಾದವರದ್ದು, ಬೆಳಗಿನ ವೇಳೆ ವಾಕಿಂಗ್, ಆ ನಂತರ ಸ್ನಾನ-ತಿಂಡಿ-ಊಟ ಇತ್ಯಾದಿಗಳು. ಬೀದಿಯಲ್ಲಿ ನಡೆಯುವಾಗ ತಮ್ಮ ಕೆಲಸ ನಿರ್ವಹಿಸುವ ಕಸ ಬಳಿಯುವವರು ಒಂದೆಡೆ. ಆ ಧೂಳನ್ನು ಕುಡಿಯುತ್ತಾ ಸಾಗುವುದೇ ಅಲ್ಲದೇ, ಹಾದಿಯುದ್ದಕ್ಕೂ ಕುಂಟೆಬಿಲ್ಲೆ ಆಡುತ್ತಾ ಸಾಗಬೇಕು. ಹೀಗೆಂದರೆ ಏನು? ತುಂಬಾ ಸರಳ. ಶ್ವಾನಗಳನ್ನು ಸಾಕಿರುವವರು, ಹಗಲಿನ ವೇಳೆ, ಅದರ ನಿತ್ಯಕರ್ಮಗಳಿಗೆಂದು ಕರೆದುಕೊಂಡು ಸಾಗುವಾಗ ಅವರ ಒಂದು ಕೈಲಿ leash ಮತ್ತೊಂದೇ ಕೈಯಲ್ಲಿ ಮೊಬೈಲ್. ಮುಖಕ್ಕೆ ಮೊಬೈಲ್ ಎಷ್ಟು ಹತ್ತಿರವಿರುತ್ತದೋ, ಆ ಇನ್ನೊಂದು ಕೈಲಿಂದ ಆ ಶ್ವಾನ ಅಷ್ಟೂ ದೂರ ಇರುತ್ತದೆ. ಅರ್ಥಾತ್ ಆ ನಾಯಿ ಏನು ಮಾಡುತ್ತಿದೆ ಎಂಬ ಗಮನವೂ ಇವರಿಗೆ ಇರುವುದಿಲ್ಲ. ಹೀಗಾಗಿ ವಾಕ್ ಮಾಡುವವರು ನಾಯಿಯಿಂದ ತಪ್ಪಿಸಿಕೊಂಡು ಓಡಾಡುವಾಗ ಕುಂಟೆಬಿಲ್ಲೆ ಆಡಲೇಬೇಕು. ಇದು ಒಂದು ಕಾರಣ.

ಮತ್ತೊಂದು ಕಾರಣ ಎಂದರೆ, ನಾಯಿ ಎಲ್ಲೆಂದರಲ್ಲಿ ಬಹಿರ್ದೆಸೆ ಮಾಡುತ್ತದೆ. ಬೀದಿ ಇರುವುದೇ ನಮ್ಮ ನಾಯಿಗೆ ಎಂಬಂತೆ ವರ್ತಿಸುವ ಮಂದಿಗೆ ಅದು ಬೀದಿಯಾದರೂ ಓಕೆ, ಒಬ್ಬರ ಮನೆಯ ಮುಂದೆ ರಂಗೋಲಿಯಾದರೂ ಓಕೆ. ಒಟ್ಟಾರೆ ತಮ್ಮ ನಾಯಿಯನ್ನು ಹೊರಗೆ ಕರೆದು ತರುವುದೇ ಬಯಲು ಬಹಿರ್ದೆಸೆಗೆ. ಹೀಗಾಗಿ ಅದನ್ನು ತುಳಿಯಬಾರದು ಅಂದರೆ ಕುಂಟೆಬಿಲ್ಲೆಯಾಡಲೇಬೇಕು.

Ball Please ಅಂತ ಕೇಳಿದ ಬೃಹದಾಕಾರದ ಮಹಿಳಾ ಕೋಚ್
ನಮ್ಮ ಪರಿಚಯದವರು ಹೊಸತಾಗಿ ನಿವೃತ್ತರಾದರು. ಅವರ ಕಥೆ ಹೀಗಿದೆ. ಒಮ್ಮೆ ಹೀಗೆ ಪಾರ್ಕ್‌ನಲ್ಲಿ ವಾಕ್ ಮುಗಿಸಿ ಅಲ್ಲೇ ಕಲ್ಲು ಬೆಂಚಿನ ಮೇಲೆ ಕೂತಿದ್ದರು. ಸುಸ್ತಾದವರಿಗೆ ಆಕಳಿಕೆ ಬಂತು ಬಾಯಿ ತೆರೆದವರು ಥಟ್ಟನೆ ಬಾಯಿಮುಚ್ಚಿದರಂತೆ. ಕಾರಣ ಇಷ್ಟೇ, ಅದೆಲ್ಲಿಂದಲೋ ಬಂದ ಫುಟ್ಬಾಲ್ ಒಂದು ಅವರ ಮುಖ ಮೇಲೆ ಬರುತ್ತಿತ್ತಂತೆ. ಥಟ್ಟನೆ ತಲೆಬಗ್ಗಿಸಿ ತಪ್ಪಿಸಿಕೊಂಡರು ಅನ್ನಿ. ಬಾಯಿ ತೆರೆದೇ ಇದ್ದರೆ ಆ ಚೆಂಡು ಬಾಯಿಯ ಒಳಗೆ ಹೋಗುತ್ತಿತ್ತು ಅಂತಲ್ಲ, ಬದಲಿಗೆ ನೆಮ್ಮದಿಯಾಗಿ ತುಟಿ ಎಂಬ ಬೌಂಡರಿ ದಾಟಿ ಹೊರಬಂದಿರುವ ಹಲ್ಲುಗಳು ಮುರಿದೀತು ಅಂತ. ಆ ಚೆಂಡನ್ನು ಕೈಗೆ ತೆಗೆದುಕೊಂಡು, ಒದ್ದವರಿಗೆ ದಬಾಯಿಸುವ ಅಂತ ಚೆಂಡು ಬಂದ ದಿಕ್ಕಿಗೆ ಹೊರಟರು. 'ಸಾರಿ ಅಂಕಲ್' ಅಂತ ಹೇಳುವ ಮಕ್ಕಳು ಸಿಗಬಹುದು ಅಂತ ಹೋದವರಿಗೆ ಎದುರಾಗಿದ್ದು 'Ball Please' ಅಂತ ಕೇಳಿದ ಬೃಹದಾಕಾರದ ಮಹಿಳಾ ಕೋಚ್. ಆ Coachನ ಕಂಡು, ಇವರು Choke ಆಗಿ, ಸುಮ್ಮನೆ ಚೆಂಡನ್ನು ಕೊಟ್ಟು ಹೊರಟರು. ಮನೆಗೆ ಹೋದವರೇ ದೊಡ್ಡ ನಿರ್ಧಾರ ತೆಗೆದುಕೊಂಡರು. ಪಾರ್ಕ್ ಬದಲಿಸಿದರು.

ಬೇರೊಂದು ಪಾರ್ಕ್‌ಗೆ ಹೋಗಲು ನಿರ್ಧಾರ
ಮರುದಿನ ಮಗದೊಂದು ಪಾರ್ಕ್‌ಗೆ ಹೋದವರು, ವಾಕ್ ಮುಗಿಸಿ ಅಲ್ಲಿನ ಒಂದು ಕಲ್ಲುಬೆಂಚಿನ ಮೇಲೆ ಕೂತರು. ಹಸಿವಾಯಿತೋ ಅಥವಾ ಸುಸ್ತಾಯಿತೋ ಗೊತ್ತಿಲ್ಲ ಆದರೆ ಆಕಳಿಕೆಯಂತೂ ಬಂತು. ಕಣ್ಣುಮುಚ್ಚಿ, ದೊಡ್ಡದಾಗಿ ಆಕಳಿಸಿ, ಮತ್ತೆ ಬಾಯಿ ಮುಚ್ಚಿ, ಕಣ್ಣು ತೆರೆದಾಗ ಅಲ್ಲೊಬ್ಬರು ಇವರನ್ನೇ ನೋಡುತ್ತಾ ನಿಂತಿದ್ದರಂತೆ. ತಾವೊಬ್ಬ ಜೈಲರ್ ಎಂದು ಪರಿಚಯಿಸಿಕೊಂಡ ಅವರು, ಇವರ ಬಗ್ಗೆ ವಿಚಾರಿಸಿದ್ದಾರೆ. ಆಮೇಲೆ ಒಂದಿಷ್ಟು ಬೋಧನೆ. "Retirement ಆಯ್ತು ಅಂತ ಸುಮ್ನೆ ಕೂರಬೇಡಿ, ಕೈಕಾಲು ಹಿಡ್ಕೊಂಡು ಒದ್ದಾಡ್ತೀರಾ. ಈಗ ನನ್ನನ್ನೇ ನೋಡಿ, ರಿಟೈರ್ಮೆಂಟ್ ಆದ ಮೇಲೆ ಒಂದು ಜ್ಯುವೆಲರಿ ಅಂಗಡಿ ಇಟ್ಟಿದ್ದೀನಿ'' ಅಂತ ಹೇಳಿದ್ದಾರೆ. ಜ್ಯುವೆಲರಿ ಅಂಗಡಿ ಅಂದ ಮೇಲೆ ಅಲ್ಲಿ ಕೂತಿರ್ತೀರ ಅಲ್ವಾ ಅಂತ ಕೇಳಲಿಲ್ಲ ಬಿಡಿ. ನಿವೃತ್ತ ಜೈಲರ್ ಆದರೂ ಪರಿಚಯದವರು ಇದ್ದೇ ಇರುತ್ತಾರೆ. ಎದುರು ಮಾತನಾಡಿದೆ ಅಂತ ಒಳಗೆ ಹಾಕಿಬಿಟ್ಟಾರು ಅಂತ, ಹೂಗುಟ್ಟಿ ಮನೆಗೆ ಹೋದರಂತೆ. ಮತ್ತೊಮ್ಮೆ ಗಹನವಾದ ಆಲೋಚನೆಯ ನಂತರ, ಬೇರೊಂದು ಪಾರ್ಕ್‌ಗೆ ಹೋಗಲು ನಿರ್ಧಾರ ಮಾಡಿದ್ದಾರಂತೆ.

ಕಬ್ಬಿಣದಿಂದ ಬಿಸಿಯು ನೀರಿಗೆ ಹೋಗಬೇಕು
ನಿವೃತ್ತರಾದವರು ಹೊಸ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯಬೇಕು. ಅವರು ಮನೆಯ ಜನರಿಗೆ ಹೊಂದಿಕೊಳ್ಳುವ ಹಾಗೆ, ಮನೆಯವರಿಗೂ ಅವರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯಬೇಕು. ಕಾಯಿಸಿರುವ ಕಬ್ಬಿಣವನ್ನು ನೀರಿನಲ್ಲಿ ಅದ್ದಿದರೆ ಥಟ್ಟನೆ ಆ ಕಬ್ಬಿಣ ತಣ್ಣಗಾಗುವುದಿಲ್ಲ. ಕಬ್ಬಿಣದಿಂದ ಬಿಸಿಯು ನೀರಿಗೆ ಹೋಗಬೇಕು, ಆ ತಣ್ಣೀರಿನಿಂದ ತಂಪು ಕಬ್ಬಿಣಕ್ಕೆ ಸಾಗಬೇಕು. ಯಾವಾಗ ಎರಡೂ ಶಾಖಗಳು ಸಮನಾಗುತ್ತದೋ ಆಗ ತೊಂದರೆಯಿಲ್ಲ. ಇದೇ ತರ್ಕವನ್ನು ವೃತ್ತಿ-ನಿವೃತ್ತಿಗೂ ಸೋಕಿಸಿದರೆ, ಹಿಂದಿನ ದಿನದವರೆಗೆ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಮಾನವ ಏಕ್ದಂ ಏನೂ ಕೆಲಸವಿಲ್ಲದೇ ಸುಮ್ಮನೆ ಕೂರಬೇಕು ಎಂದರೆ ಕಷ್ಟವೇ ಸರಿ. ಅವರ ಮನಸ್ಥಿತಿ ಒಂದು ಹಂತಕ್ಕೆ ಬರಲು ಅವರಿಗೆ ಅವಕಾಶ ನೀಡಬೇಕು.

ನಿವೃತ್ತರಾದವರು ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ, ಮನೆಯ ಜನರದ್ದು ಅಂತ ಒಂದು timetable ಇರುತ್ತದೆ. ಇವರು ನಿವೃತ್ತರಾದ ಮೇಲೆ ಆ ಒಂದು ವೇಳಾಪಟ್ಟಿಯನ್ನು ಬದಲಿಸಲು ಅಥವಾ ಅದರಲ್ಲಿ ಮೂಗು ತೂರಿಸಲು ಯತ್ನಿಸಿದರೂ ಅಲ್ಲೊಂದು ಅಹಿತಕರವಾದ ವಾತಾವರಣ ಮೂಡುತ್ತದೆ. ಅತೀ ಚಿಕ್ಕ ಉದಾಹರಣೆಯೊಂದಿಗೆ ಆರಂಭಿಸುವ.

ಆರಾಮವಾಗಿ ತಿಂಡಿ-ಕಾಫಿ ಮಾಡಿಕೊಳ್ಳಬಾರದೇ?
ಹತ್ತು ಗಂಟೆಗೆ ಮನೆಯಿಂದ ಹೊರಡುವ ಒಬ್ಬರು ಒಂಬತ್ತಕ್ಕೆ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡಿರಬಹುದು. ಸ್ನಾನಾದಿಗಳ ನಂತರ, ಧಡಧಡ ಅಂತ ತಿಂಡಿ-ಕಾಫಿ ಮಾಡಿಕೊಂಡು ಹೊರಡಬಹುದು ಅಂದುಕೊಳ್ಳಿ. ತಮ್ಮದೊಂದು ಸಲಹೆ ಇರಲಿ ಅಂತ, "ಕನಿಷ್ಠ ಏಳು ಗಂಟೆಗೆ ಏಳೋದಕ್ಕೆ ಏನು ಕಷ್ಟ? ಬೇಗ ಬೆಳಗಿನ ಕೆಲಸಗಳನ್ನು ಮುಗಿಸಿಕೊಂಡು ಆರಾಮವಾಗಿ ತಿಂಡಿ-ಕಾಫಿ ಮಾಡಿಕೊಳ್ಳಬಾರದೇ?' ಎಂಬೆಲ್ಲಾ ಸಲಹೆಗಳು ಒಳ್ಳೆಯದೇ ಆದರೂ ಅದಕ್ಕೂ ಒಂದು ಸಮಯ ಸಂದರ್ಭ ಅಂತ ಇರುತ್ತದೆ ಅಂತ ಅರಿಯಬೇಕು. ಜೊತೆಗೆ ಯಾರಿಗೆ ಸಲಹೆ ನೀಡುತ್ತೀರೋ ಅವರ ವಯಸ್ಸನ್ನು ಪರಿಗಣಿಸಿ ಉಪದೇಶ ಮಾಡಿದರೆ ಮತ್ತೂ ಒಳ್ಳೆಯದು. ಸಲಹೆ ನೀಡುವಾಗ ನಾಲ್ಕು ಜನರ ಮುಂದೆ ಬುದ್ದಿ ಹೇಳಲು ಹೊರಡುವುದು ತಪ್ಪಾಗುತ್ತದೆ. ನಿವೃತ್ತಿಯೇ ಮನೆಯಲ್ಲಿ ಅಶಾಂತಿ ಮೂಡಲು ನಾಂದಿಯಾಗದಿರಲಿ.

ನಿವೃತ್ತ ಎಂಬುದಕ್ಕೆ ಗೌರವ ಅಂತಲೂ ಅರ್ಥವಿದೆ
ಜೀವನದಲ್ಲಿ ಸುಸ್ತಾದರೂ ಶಿಸ್ತು ಇರಲಿ, ಆದರೆ ನಿವೃತ್ತರಾದ ಮೇಲೆ ಆ ಶಿಸ್ತನ್ನು ಮನೆಯ ಜನರ ಮೇಲೆ ಹೇರದಿರಿ. ನಿವೃತ್ತ ಎಂಬುದಕ್ಕೆ ಗೌರವ ಅಂತಲೂ ಅರ್ಥವಿದೆ. ಈ ಮುಂಚೆ ಹೇಗಿದ್ದೇನೋ ಕೊನೆಯವರೆಗೂ ಹಂಗೇ ಇರ್ತೀನಿ ಎಂಬುದು ಪೂರ್ಣಸತ್ಯವಲ್ಲ. ನಿಮ್ಮಂತೆಯೇ ನಿಮ್ಮ ಸಂಗಾತಿಯೂ ನಿವೃತ್ತಿ ಬಯಸಿರಬಹುದು. ನಿಮ್ಮ ನಿವೃತ್ತ ಜೀವನದಿಂದ ಅವರ ವೃತ್ತಿ ಹೆಚ್ಚಿ, ಗೌರವ ಹೋಗಿ ಬದುಕು ರೌರವ ಆಗದಿರಲಿ. ನಿವೃತ್ತರಾದವರು ಬರೀ ನೌಕರಿಯಿಂದ ನಿವೃತ್ತಿಯಾಗಿರೋದು ಅಷ್ಟೇ. ಬೇರಾವ ಕೆಲಸಕ್ಕೂ ಅವರಿಗೆ ಕೈಲಾಗುವುದಿಲ್ಲ ಎಂಬಂತೆ ವರ್ತಿಸದಿರಿ. ಅವರಿಗೂ ಒಂದು ಸ್ಥಾನವಿದೆ ಆದರೆ ಅದು ಮನೆಯ ಮೂಲೆ ಆಗದಿರಲಿ. ವೃತ್ತಿ ಜೀವನವೋ, ನಿವೃತ್ತ ಜೀವನವೋ ಒಟ್ಟಾರೆ ಸಂಸಾರವೆಂದರೆ ಸಾಮರಸ್ಯವಿರಲಿ. ನೀವೇನಂತೀರಾ?

English summary
Srinath Bhalle Column: Are you Tired Again? Or do you Know of Retired Man?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X