• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವರಸಾಯನ ಅಂಕಣ: ರಿಯಾಲಿಟಿ ಷೋ ಪಿಡುಗೋ, ಪರಿಹಾರವೋ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಈ 'ರಿಯಾಲಿಟಿ ಷೋ'ಗಳಿಂದ ಏನ್ರೀ ಪ್ರಯೋಜನ ಅಂತ ನನ್ನನ್ನು ಒಬ್ಬರು ಕೇಳಿದರು. ನನ್ನ ಪ್ರಕಾರ ಇಂಥಾ 'ಷೋ'ಗಳಿಂದಾಗಿ ಹೊಸ ಅಲೆ ಆರಂಭವಾಗಿದೆ. ಎಲ್ಲೋ ಹುದುಗಿರುವ ಪ್ರತಿಭೆಗಳು ಧೂಳು ಕೊಡವಿಕೊಂಡು ಹೊರಬರುತ್ತಿವೆ. ನಮ್ಮಷ್ಟಕ್ಕೆ ನಾವಿರುತ್ತೇವೆ ಎಂದರೆ ಇನ್ನೂ ಅಂಬಾಸಡರ್, 'ಫಿಯೆಟ್'ಗಳ ಕಾಲದಲ್ಲೇ ಇರುತ್ತಿದ್ದೆವು ಅಂತ ಹೇಳಿದೆ.

ನಗಬಾರದಪ್ಪಾ ನಗಬಾರದು, ನಗಬಾರದಮ್ಮಾ ನಗಬಾರದು!

ಹೋಗಲಿ ಬಿಡಿ, ಅವರು ಕೇಳಿದ ಪ್ರಶ್ನೆಯಿಂದ ಇನ್ನೊಂದಿಷ್ಟು ಬೇರೆ ಆಲೋಚನೆಗಳೇ ಬಂತು. ಈ ಬರಹದ ಮೂಲಕ ಒಟ್ಟಾರೆ ನನಗೆ ಕಂಡಿದ್ದನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದೇನೆ.

ಇಂಥದ್ದೇ ರಿಯಾಲಿಟಿ ಷೋ ಆಗಲಿ ಇಂಥಾ 'ಚಾನಲ್'ನವರದ್ದು ಎಂಬ ತಾರತಮ್ಯ ತೋರದೆ ಎಲ್ಲವೂ ಒಂದಂಶದಲ್ಲಿ ಸಮಾನತೆ ತೋರುವ ವಿಷಯ ಎಂದರೆ "ಕೃತ್ರಿಮತೆ'. Reality show is unrealistic ಎಂಬುದು ಎಲ್ಲರಿಗೂ ಗೊತ್ತಿದ್ದರೂ ಮತ್ತೆ ಮತ್ತೆ ಅದೇ ಷೋ ನೋಡೋದು, ಅದರಲ್ಲೇ ತಲ್ಲೀನರಾಗೋದು ಮತ್ತು ಅಲ್ಲಿನ ಆಗುಹೋಗುಗಳಿಗೆ ಸ್ಪಂದಿಸಿ ನಮ್ಮ ಮನಸ್ಸುಗಳನ್ನು ಹಿಂಸೆ ಮಾಡಿಕೊಳ್ಳುವುದು ಇತ್ಯಾದಿಗಳು 'ರಿಯಾಲಿಟಿ ಷೋ' ಆರಂಭವಾದ ದಿನಗಳಿಂದಲೂ ನಡೆದು ಬಂದ ಪದ್ಧತಿ.

ಸಾಮಾನ್ಯವಾಗಿ ಪ್ರತಿ 'ಷೋ'ನಲ್ಲಿ ಇಬ್ಬರು ಗಂಡು 'ಜಡ್ಜ್'ಗಳು ಮತ್ತೊಬ್ಬರು ಹೆಣ್ಣು ಜಡ್ಜ್ ಇರುತ್ತಾರೆ. ಇದೊಂದು ಟಿವಿ ಷೋ ಆಗಿದ್ದು, ಸಂಸಾರ ಸಮೇತ ಕೂತು ನೋಡುತ್ತಾರೆ ಎಂಬ ಅರಿವಿದ್ದೂ ಯಾವುದೇ ಜವಾಬ್ದಾರಿಯನ್ನೂ ತೋರದೆ ಆ ಹೆಣ್ಣು ಜಡ್ಜ್ ಕೆಟ್ಟದಾಗಿ ಬಟ್ಟೆ ಧರಿಸಿರುತ್ತಾರೆ. ಗಂಡು 'ಜಡ್ಜ್'ಗಳು ತಾವೇನೂ ಕಡಿಮೆ ಇಲ್ಲ ಎಂಬಂತೆ ಹರಕಲು ಜೀನ್ಸ್ ತೊಡುತ್ತಾರೆ.

ಹಾಗಂತ ಅವರನ್ನು ಕೇಳಬೇಡಿ, 'ಮೈ ಚಾಯ್ಸ್' ಅಂತಾರೆ! ಚಿಕ್ಕ ಮಕ್ಕಳು ಸ್ಟೇಜಿನ ಮೇಲೆ ಬಂದು ಯಾವುದೋ ಸನ್ನಿವೇಶವನ್ನು ಅಭಿನಯಿಸುತ್ತಾರೆ. ಹಾಗೆ ಅಭಿನಯ ತೋರುವಾಗ ಆ ಹೆಣ್ಣು ಜಡ್ಜ್ ಕಡೆ ಕೈ ತೋರುತ್ತಲೋ ಅಥವಾ ಸನ್ನೆ ಮಾಡುತ್ತಲೋ ಹೇಳೋ ಮಾತು "ನಾನು ಹತ್ತು ವರ್ಷ ಮುಂಚೆ ಹುಟ್ಟಿದ್ದರೆ ನಿನಗೆ ಲೈನ್ ಹೊಡೀತಿದ್ದೆ" ಅಥವಾ "ನಿನ್ನ ಲಾಸ್ಟ್ ನೇಮ್ ನನ್ನ ಲಾಸ್ಟ್ ನೇಮ್ ಆಗಿರುತ್ತಿತ್ತು" ಎಂದೋ ಅಥವಾ ಇನ್ನೇನೋ!

ಗುರು-ಶಿಷ್ಯರು : ಒಂದಷ್ಟು ಆಟ, ಹಲವಷ್ಟು ಪಾಠ!

ಆ ಹೆಣ್ಣು 'ಜಡ್ಜ್'ಗೆ ಬಹುಶಃ ಆ ಚಿಕ್ಕ ಹುಡುಗನ ಅಜ್ಜಿಯಾ ವಯಸ್ಸು. ಆಕೆಗೆ ಈ ಹುಡುಗ ಈ ರೀತಿ ಮಾತನಾಡುವುದನ್ನು ಕೇಳಿ/ನೋಡಿ ಆಕೆ ಬ್ಲಶ್ ಆಗುತ್ತಾರೆ. ಅಪ್ಪ-ಅಮ್ಮಂದಿರು ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿಯ ಮುಖ ಮಾಡಿಕೊಂಡು ಮುಖದಲ್ಲೇ ಹರ್ಷೋದ್ಗಾರ ತೋರುತ್ತಾರೆ.

ಕಾರ್ಯಕ್ರಮವನ್ನು ಹತ್ತಾರು ಜನ ನೋಡಲಿ, ತಮ್ಮ (ಕಾರ್ಯಕ್ರಮದ) ಟಿ ಆರ್ ಪಿ ಏರಲಿ ಎಂಬ (ಸತ್)ಉದ್ದೇಶದಿಂದ ಆ ಹೆಣ್ಣು ಕೆಟ್ಟದಾಗಿ ಬಟ್ಟೆ ಧರಿಸಿ, ಭೋಗದ ವಸ್ತುವಂತೆ ಕಾಣಲೇಬೇಕೆ? ನಿಮ್ಮ ಒನಪು ವಯ್ಯಾರ ತೋರಲು ಮಕ್ಕಳ ಕಾರ್ಯಕ್ರಮವೇ ಬೇಕೇ? ಕಾರ್ಯಕ್ರಮದ ಏನೇ ನಿಯಮಕ್ಕೂ ತಲೆ ಬಾಗೋ ಪರಿ ಈ ಅಪ್ಪ-ಅಮ್ಮಂದಿರಿಗೆ ಬೇಕೇ? ಈ ಯಾವ ಪ್ರಶ್ನೆಗೂ ಎಂದಿಗೂ ಉತ್ತರ ಸಿಗೊಲ್ಲ.

ಇನ್ನು ಕಾರ್ಯಕ್ರಮ ನಡೆಸಿಕೊಡುವ ನಿರೂಪಕ / ನಿರೂಪಕಿಯ ಕುರಿತು.

ನಿರೂಪಕನಾದವನು ಹೆಣ್ಣು ಜಡ್ಜ್ ಜೊತೆ ಮತ್ತು ನಿರೂಪಕಿಯು ಒಬ್ಬ ಗಂಡು ಜಡ್ಜ್ ಜೊತೆ ಹಾಸ್ಯದ ಹೆಸರಿನಲ್ಲಿ ಲಲ್ಲೆ ಹೊಡೆಯುವುದು ರಿಯಾಲಿಟಿ ಷೋಗಳ ಹೈಲೈಟ್! ಪಬ್ಲಿಕ್ ಆಗಿ ಮೋಜು ಮಾಡುವುದನ್ನು ಮಕ್ಕಳು ಮತ್ತು ಹಿರಿಯರು ಚಪ್ಪಾಳೆ ತಟ್ಟೀ ತಟ್ಟೀ ಪ್ರೋತ್ಸಾಹ ಕೊಡುತ್ತಾರೆ.

ಕೆಲವೊಮ್ಮೆ ಶಬ್ದಗಳಲ್ಲಿ, ದನಿಯ ಏರಿಳಿತದಲ್ಲಿ, ವಯ್ಯಾರದಲ್ಲಿ, ಸನ್ನೆಯಲ್ಲಿ ತೋರುವ ಈ ಲಲ್ಲೆಯನ್ನು ನೋಡುವಾಗ ನನಗೆ ಅನ್ನಿಸೋದು ಇಷ್ಟೇ, 'ಧೂಮಪಾನ, ಮದ್ಯಪಾನ'ಕ್ಕಿಂತಲೂ ಹಾನಿಕಾರವಾದದ್ದು ಬಹಳಷ್ಟಿದೆ. ಅವಕ್ಕೂ ಏನಾದರೂ ಮೆಸೇಜ್ ಹಾಕಿಬಿಡಿ ಅಂತ!

ಇದು ನಿರೂಪಕರು ಮತ್ತು 'ಜಡ್ಜ್'ಗಳ ನಡುವೆ ಆಯ್ತು.

ಇನ್ನು ನಿರೂಪಕರು ಮತ್ತು ಸ್ಪರ್ಧಾಳುಗಳ ನಡುವೆ ನಡೆವ ಅತಿರೇಕ. ಒಬ್ಬ ಪುಟ್ಟ ಬಾಲಕ (ಸ್ಪರ್ಧಾಳುವಿನ ತಮ್ಮ ಇರಬೇಕು) ಸ್ಟೇಜಿನ ಮೇಲೆ ಬಂದು ಹಾಡುತ್ತಾನೆ. ಇರಲಿ, ವಯಸ್ಸಿಗೆ ಮೀರಿದ ಧೈರ್ಯ ಇತ್ಯಾದಿ ಅಂಶ ಪಕ್ಕ ಇಡೋಣ. ಆತ ಹಾಡಿ ಮುಗಿಸಿದ ಮೇಲೆ ನಿರೂಪಕ ಸ್ಟೇಜಿನ ಮೇಲೆ ಬಂದು ಮಂಡಿಯೂರಿ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ. ಅಸಹಜತೆಯ ಪರಾಕಾಷ್ಠೆ!

ಗಂಡು ಸ್ಪರ್ಧಾಳು ಒಬ್ಬ ನಾಚಿಕೆಯ ಸ್ವಭಾವದವನಾಗಿರುತ್ತಾನೆ. ಪ್ರತಿ ಬಾರಿ ಆತ ಹಾಡಿ ಮುಗಿಸಿದ ಮೇಲೆ ನಿರೂಪಕನು ಹೆಣ್ಣು 'ಜಡ್ಜ್'ಅನ್ನೋ ಮತ್ತಿನ್ಯಾರನ್ನೋ ಲಲ್ಲೆಗೆರೆಯುವಂತೆ ಪ್ರೇರೇಪಿಸುವುದು. ಅದನ್ನು ಕಂಡು ಮಿಕ್ಕೆಲ್ಲರೂ ಎದ್ದೂಬಿದ್ದೂ ನಗುವುದು. 'ಐ ಲವ್ ಯೂ' ಎಂದು ಹೇಳಿಸುವುದೋ, ಕಿಸ್ ಕೊಡಿಸುವುದೋ ಮಾಡಿಸಿದ ಮೇಲೆ ತಮ್ಮ ಜನ್ಮ ಧನ್ಯವಾಯಿತು ಎಂಬಂತೆ ಚಪ್ಪಾಳೆ ಗಿಟ್ಟಿಸಿವುದು.

ಗೊತ್ತಿಲ್ಲದೇ ಒಂದು ಪ್ರಶ್ನೆ ಕೇಳುತ್ತೇನೆ "ಕಾಲೇಜಿನಲ್ಲಿ ನಡೆಯೋ Raggingಗೂ ಇಲ್ಲಿ ನಡೆಯುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ?"

ಒಮ್ಮೆ ಯೋಚಿಸಿ/ಊಹಿಸಿ ಸಾಕು. ಸಹಜ ನಾಚಿಕೆಯ ಸ್ವಭಾವದ ಹೆಣ್ಣು ಸ್ಟೇಜಿನ ಮೇಲೆ ಇರುತ್ತಾಳೆ. ಆಕೆಯನ್ನು ಈ ರೀತಿ ಯಾರಿಗೋ 'ಐ ಲವ್ ಯೂ' ಎನ್ನುವಂತೆ ಅಥವಾ ಗಂಡು 'ಜಡ್ಜ್'ಗೆ ಉಪ್ಪ ಕೊಡುವಂತೆ ಪ್ರೇರೇಪಿಸಿದರೆ ಹೇಗಿರುತ್ತದೆ ಅಂತ? ನನ್ನನ್ನೇ ಹಿಡ್ಕೊಂಡು ಹೊಡೆಯುವಷ್ಟು ಸಿಟ್ಟು ಬರುತ್ತದೆ ಅಲ್ಲವೇ? ಈ ಕಾಲ ದೂರವಿಲ್ಲ ಗೆಳೆಯರೇ!

ಸ್ಪರ್ಧಾಳು ಅದ್ಭುತವಾಗಿ ಹಾಡುವುದೋ ಅಥವಾ ಅಭಿನಯಿಸುವುದೋ ಮಾಡುತ್ತಾರೆ. 'ಜಡ್ಜ್'ಗಳು ಎದ್ದು ನಿಂತು ಎರಡೂ ಕೈಗಳನ್ನು ನೀಳವಾಗಿ ಚಾಚಿ ಅವರ ಮುಂದೆ ಬಾಗಿ 'ನಾನು ನಿಮ್ಮ ಗುಲಾಮ' ಎನ್ನುವಂತೆ ಅಭಿನಯಿಸುತ್ತಾರೆ. ನನ್ನ ಅಭಿಪ್ರಾಯದಲ್ಲಿ ಹೀಗೆ ಮಾಡುವುದರಿಂದ ಸ್ಪರ್ಧಾಳುವಿನಲ್ಲಿ ಅತಿಯಾದ ಆತ್ಮವಿಶ್ವಾಸ ಬೆಳೆಯುತ್ತದೆ. ತಾನೇ ಸ್ಪರ್ಧೆಯನ್ನು ಗೆಲ್ಲುವುದು ಎಂಬ ಭಾವನೆಯೂ ಮೂಡುತ್ತದೆ. ಹೀಗೆ ಬೆಳೆಸುತ್ತಾ ಕುರಿಯನ್ನು ಬಲಿಗೆ ಸಿದ್ಧ ಮಾಡುತ್ತಿರುತ್ತಾರೆ ಎಂದೆನಿಸುತ್ತದೆ.

ಮತ್ತೆ ಕೆಲವು 'ಷೋ'ಗಳಲ್ಲಿ ಒಬ್ಬ ಮಧ್ಯವರ್ತಿ ಇರುತ್ತಾನೆ. ಅರ್ಥಾತ್, ಸ್ಟೇಜಿನ ಮೇಲೆ ನಿರೂಪಕ ಇನ್ನೊಂದಿಷ್ಟು ಜನರೊಂದಿಗೆ ಹಾಸ್ಯ(?) ಮಾಡುತ್ತಾನೆ. ರಾಜಸಿಂಹಾಸನದ ಮೇಲೆ ಕುಳಿತ ವ್ಯಕ್ತಿ ಎದ್ದೂ ಬಿದ್ದೂ ನಗುತ್ತಾನೆ. ಅದರಂತೆಯೇ ಸಭೆಯಲ್ಲಿನ ಜನತೆಯೂ ಸಿಕ್ಕಾಪಟ್ಟೆ ನಗುತ್ತಾರೆ. ಎಷ್ಟೋ ಸಾರಿ ನನಗನ್ನಿಸುತ್ತದೆ, ಇಂಥಾ ಜೋಕುಗಳಿಗೆ ನಗಲಾರದ ನನ್ನಲ್ಲೇ ದೋಷ ಇರಬೇಕು ಅಂತ.

ಸರಿ, ಇದು ಸ್ಟೇಜಿನ ಮೇಲಿನ ಅವಾಂತರ ಆಯ್ತು. ಇತ್ತೀಚಿನ ಒಂದು ಚಾನಲ್ನವರ ಅವಾಂತರ ಇನ್ನೊಂದು ರೀತಿಯದ್ದು. ಒಂದು ಸಮುದಾಯದ ಬಗ್ಗೆ ಎತ್ತಾಡುವಂಥಾ ಒಂದು ಸನ್ನಿವೇಶ ಸೃಷ್ಟಿಸಿ, ಎಲ್ಲೆಡೆ ಗುಲ್ಲೆಬ್ಬಿಸಿ, ಜನರು ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿ ಕೊನೆಗೆ "ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ" ಎನ್ನುವಂತೆ ಕೇಸ್ ಕ್ಲೋಸ್ ಮಾಡಿದ್ದು ವಿಚಿತ್ರ ಎನಿಸುತ್ತದೆ.

ಕೆಲವೊಂದೆಡೆ ಇದನ್ನು "ಅರಿತೋ / ಅರಿಯದೆಯೋ" ಆಗಿರುವ ತಪ್ಪು ಎಂಬಂತೆ ಬಿಂಬಿಸಿದ್ದರೆ ಟಿವಿ ಶೋಗಳಿಗೆ ಸೆನ್ಸಾರ್ ಇಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಇಲ್ಲಿ ಇನ್ನೊಂದು ಪ್ರಶ್ನೆ ಏನೆಂದರೆ "ತಪ್ಪಾಗಿದ್ದರೆ" ಎನ್ನುವ ಮಾತು. ಹೆಸರಾಂತ ಬರಹಗಾರರಿಂದ ಹಿಡಿದು ಎಲ್ಲರೂ ಮಾಡುವ ತಪ್ಪು ಇದೇನೇ. 'ತಪ್ಪಾಗಿದ್ದರೆ' ಎಂದರೆ ಇದು ನಮಗೆ ಸರಿ ಎನಿಸುತ್ತದೆ ಆದರೆ ನಿಮಗೆ ಅದು ತಪ್ಪಿರಬಹುದು, ಅದಕ್ಕೆ ನಾನು ಹೊಣೆ ಅಲ್ಲ ಎಂದು ನುಣುಚಿಕೊಳ್ಳುವುದೇ?

ತಾಂತ್ರಿಕ ದೋಷದಿಂದ ರೈಲು ಅಪಘಾತವಾಗಿ ಹಲವಾರು ಜನ ಸತ್ತಿದ್ದಕ್ಕೆ ತಾವೇ ಹೊಣೆ ಎಂದು ರಾಜೀನಾಮೆ ಇತ್ತ ಶಾಸ್ಟೀಜಿಯವರು ನೆನಪಾಗುತ್ತಿದ್ದಾರೆ!

ಈ ಪ್ರಕರಣದಲ್ಲಿ ಆಗಿದ್ದಿಷ್ಟೇ, ಆ ಸಮುದಾಯದವರು ಸಣ್ಣ ಸಣ್ಣ ವಿಷಯಕ್ಕೂ ಎಗರಾಡುತ್ತಾರೆ ಎಂಬ ಅಪವಾದ ಮತ್ತು ಚಾನಲ್ / ಕಾರ್ಯಕ್ರಮಕ್ಕೆ (negative) ಪಬ್ಲಿಸಿಟಿ. ಈ ಎಪಿಸೋಡ್ ನಲ್ಲಿ ಇನ್ಯಾರ ಕಾಲು ಎಳೀತಾರೋ ನೋಡೋಣ ಎಂಬ ಕೆಟ್ಟ ಕುತೂಹಲದ ವೀಕ್ಷಕನಿಂದಾಗಿ ಕಾರ್ಯಕ್ರಮ ಇನ್ನೂ ಹೆಚ್ಚು ಟಿಆರ್ ಪಿ ಗಳಿಸಲಿದೆ.

ಕೆಲವು ಷೋಗಳಲ್ಲಿ ಹೆಣ್ಣುಗಳಿಗೆ ಬರವೋ ಅಥವಾ ಬಡ್ಜೆಟ್ ಕೊರೆತೆಯೋ ಗೊತ್ತಿಲ್ಲ, ಗಂಡುಗಳಿಗೆ ಹೆಣ್ಣು ವೇಷ ಹಾಕಿ ಏನೇನೋ ಹಾಸ್ಯ(ಸ್ಪದ) ಸನ್ನಿವೇಶ ಸೃಷ್ಟಿ ಮಾಡುತ್ತಾರೆ. ನನಗೆ ಇದರ ಔಚಿತ್ಯ ಇನ್ನೂ ಅರ್ಥವಾಗಿಲ್ಲ ಅಥವಾ ಔಚಿತ್ಯ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ನನಗೆ ಬೆಳೆದಿಲ್ಲ!

ವೀಕ್ಷಕ ಮಹಾಶಯನ ಪಾತ್ರ ಎಷ್ಟು ಎಂಬುದರ ತಾಜಾ ಉದಾಹರಣೆ ಇತ್ತೀಚಿನ ಹಾಡಿನ ಕಾರ್ಯಕ್ರಮ. ಕೊನೆಯ ಹಂತದಲ್ಲಿ ತಾವೆಣಿಸಿದಂತೆ ತೀರ್ಪು ಆಗಲಿಲ್ಲ, ತಮ್ಮ ಅಭ್ಯರ್ಥಿ ಗೆಲ್ಲಲಿಲ್ಲ ಎಂಬುದೇ ಗುಲ್ಲು. ವಿಶ್ವಾದ್ಯಂತ ಚರ್ಚೆಗೆ ಒಳಗಾಗಿ 'ವೋಟಿಂಗ್' ಇರಬಾರದಿತ್ತು, ತೀರ್ಪುಗಾರರೇ ನಿಶ್ಚಯ ಮಾಡಬೇಕಿತ್ತು ಎಂಬೆಲ್ಲಾ ಚರ್ಚೆ. ಹೀಗೆ ಚರ್ಚೆ ಮಾಡಿದವರಲ್ಲಿ 'voting rights' ಇಲ್ಲದ ನನ್ನಂಥವರೂ ಇದ್ದಾರೆ. 'rights' ಇಲ್ಲದವರು ಚರ್ಚೆ ಮಾಡುವುದು 'ರಾಂಗ್' ಅಲ್ಲವೇ?

"ಇದು ಸರಿ ಇಲ್ಲ, ನೀವು ವೋಟ್ ಹಾಕಬೇಕಿತ್ತು" ಅಂತ ಬಂಧುಗಳಿಗೆ ಕರೆ ಮಾಡಿ ಬೈದವರೂ ಇದ್ದಾರೆ! ಆ ಬಂಧುಗಳೋ 'ಮೋಸ ಆಯ್ತು ಕಣ್ರೀ, ನಾವು ಊರಲ್ಲಿ ಇರಲಿಲ್ಲ, ವೆಕೇಷನ್'ಗೆ ಸಿಂಗಪೂರ್'ಗೆ ಹೋಗಿದ್ವಿ' ಅಂತ ಅಂದರು. ಇದು ಹೇಗಪ್ಪಾ ಎಂದರೆ, ಚುನಾವಣಾ ದಿನ ರಜೆ ಇದೆ ಅಂತ ವೆಕೇಷನ್'ಗೆ ಹೋಗಿ ಮಜಾ ಮಾಡಿ ಆಮೇಲೆ ವಾಪಸ್ ಬಂದು ಇಂಥವರನ್ನು ಗೆಲ್ಲಿಸಿದಿರಾ, ನಿಮಗೆ ಬುದ್ಧಿ ಇಲ್ವಾ ಅಂತ ಇನ್ನೊಬ್ಬರನ್ನು ಸಾಮಾಜಿಕ ತಾಣದಲ್ಲಿ ಬೈದಾಡುವುದು!

ಸ್ಪರ್ಧಾಳು ಇಲ್ಲಿ ಹರಕೆಯ ಕುರಿ ಅಲ್ಲ! ಬದಲಿಗೆ ವೀಕ್ಷಕ! ಇದ್ದ ಕೆಲಸ ಬಿಟ್ಟು ಟಿವಿಗೆ ಅಂಟಿಕೊಳ್ಳುವ ವೀಕ್ಷಕನೇ ಇಲ್ಲಿ ಕುರಿ! ಅಲ್ಲಿ ನಡೆವ ಆಟಕ್ಕೆ ತಲೆದೂಗಿ ಸ್ಪಂದಿಸೋ ಕುರಿ! ಪ್ರತಿ ಚಾನಲ್ ನ ಕಾರ್ಯಕ್ರಮವೂ, ಪ್ರತಿಯೊಂದು ಚಲನಚಿತ್ರವೂ ಒಂದೊಂದು ಹೋಟೆಲ್ ಇದ್ದಂತೆ. Every program has a customer. ಅವರ ಭಾವನೆಗಳೊಂದಿಗೆ ಆಡಿ ತಮ್ಮ ಆಟ ಗೆಲ್ಲುವುದಕ್ಕೆ ಟಿಆರ್ ಪಿ ಎನ್ನುತ್ತಾರೆ.

ಕೆಲವೊಂದು ಕಾರ್ಯಕ್ರಮಗಳಲ್ಲಿ ಇನ್ನೆಷ್ಟರ ಮಟ್ಟಿಗೆ ಸ್ಪರ್ಧಾಳು ಆ ಒತ್ತಡಕ್ಕೆ ಒಳಗಾಗುತ್ತಾರೆ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು. ಮನರಂಜನೆಯ ಹೆಸರಲ್ಲಿ ಏನೇನೋ ನಡೆಯುವುದು ದಿನೇ ದಿನೇ ಹೆಚ್ಚುತ್ತಿದೆ. ತಮ್ಮ ಪ್ರಾಣಿಗಳನ್ನು ಅಖಾಡದಲ್ಲಿ ಬಿಟ್ಟು ಎಲ್ಲರಿಗೂ ಮನರಂಜನೆ ಒದಗಿಸಿವೆ ಮಾತಾ-ಪಿತೃಗಳು ಅರಿವಿಲ್ಲದೆ ತಮ್ಮ ಮಕ್ಕಳನ್ನು ಅಖಾಡದ ಪ್ರಾಣಿಗಳನ್ನಾಗಿಸುತ್ತಿದ್ದಾರೆ. ಚಪ್ಪಾಳೆ ತಟ್ಟಿ ಹುರುದುಂಬಿಸೋ ಜನರೇ ನಾಳೆ ಚಪ್ಪಾಳೆ ತಟ್ಟಿ ನಗುವಂತೆ ಮಾಡಿಕೊಳ್ಳದಿರಿ.

ಇನ್ನೆಷ್ಟೇ ಹೇಳಿದರೂ ಒಂದು ಅರ್ಥ ಮಾಡಿಕೊಳ್ಳಬೇಕಾದ ವಿಷಯ ಎಂದರೆ ಈ ಸ್ಪರ್ಧಾಳು, ವೀಕ್ಷಕ, 'ಜಡ್ಜ್'ಗಳು, ನಿರೂಪಕರು ಎಲ್ಲರೂ ಕಾಯಿಗಳು. 'ಬೊಂಬೆ ಆಡ್ಸೋನು, ಮೇಲೆ ಕುಂತೋನು, ನಮ್ಗೆ ನಿಮಗೆ ಯಾಕೆ ಟೆನ್ಷನ್ನು? ಎಲ್ಲಾರೂ ಮುಖ ಮುಚ್ಕೊಂಡ್ ಡ್ರಾಮಾ ಮಾಡಣಾ . . . ಮಣ್ಣಲ್ಲಿ ಹೋಗೋಗಂಟ ಡ್ರಾಮಾ ಮಾಡಣಾ . . .'

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Are Reality shows social evil or solution? This is the topic discussed by Oneindia Kannada columnist Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X