• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಶಿರಾಶಿ ವಿಶ್ ಗಳ ನಡುವೆ ಮೌಲ್ಯ ಕಳೆದುಕೊಂಡ ಶುಭಾಶಯ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ದಿನ ಬೆಳಗಾದ್ರೆ ನಿಮ್ಮ ವಾಟ್ಸಾಪ್'ನಲ್ಲಿ ಶುಭೋದಯ, ನಲ್ಮೆಯ ಬೆಳಗು, ನಲ್ಬೆಳಗು, ಗುಡ್ ಮಾರ್ನಿಂಗ್, ಗುಡ್ ನೈಟ್ ಇತ್ಯಾದಿ ಇತ್ಯಾದಿ ಮೆಸೇಜುಗಳು ಯಾವುದೋ ಹೂವು, ತೋಟ, ಮಗು, ಮಕ್ಕಳ ಚಿತ್ರದ ಜೊತೆ ನಿಮ್ಮ ಡಬ್ಬಕ್ಕೆ ಬೀಳುತ್ತೆ. ಕೆಲವೊಮ್ಮೆ ಅದೂ ಅಲ್ಲದೇ, ಸುಮ್ಮನೆ ಪದಗಳು. ಕೆಲವರು ಅದರಲ್ಲೂ ಕಂಜೂಸು ತಾಣ ಮಾಡಿ GM / GN 'ನಲ್ಲೇ ಮುಗಿಸುತ್ತಾರೆ. ಇನ್ನೂ M ಅಥವಾ N ವರೆಗೂ ಬಂದಿಲ್ಲ ಅನ್ನೋದೇ ಸಮಾಧಾನಕರ ವಿಷಯ. ಹೇಗಿದ್ರೂ ಗುಡ್ ಅಂತ ಗೊತ್ತು, ಅದನ್ನೇನು ಬರೆಯೋದು ಅನ್ನದೇ ಒಂದಕ್ಷರಕ್ಕೆ ಇಳಿಯದಿರಲಿ.

ಮರೆಯಬೇಕು ಅನ್ನೋದನ್ನ ನೆನಪಿಟ್ಟುಕೊಳ್ಳುವುದನ್ನು ಮರೆಯದಿರಿ!

ಮೊದಲಿಗೆ ಈ wishes ಅಂದ್ರೆ ಏನು ಅಂತ ತಿಳಿದುಕೊಳ್ಳೋಣ. ನನಗೆ ಅಥವಾ ನಮ್ಮ ಮನೆಯ ಜನರಿಗೆ ಇಂದು ಹುಟ್ಟಿದಹಬ್ಬ ಅಂತ ತಿಳಿಸೋ ಉದ್ದೇಶವೆಂದರೆ ನಮಗೆ ಹಾರೈಸಿ ಎಂಬ ಅಪೇಕ್ಷೆ ಅಷ್ಟೇ. ಹಾರೈಸೋದು ಬಿಡೋದು ನಿಮಗೆ ಬಿಟ್ಟಿದ್ದು. ಅದರಂತೆಯೇ ನೀವು HBD ಅಂದರೂ happy birthday ಅಂದರೂ ಹುಟ್ಟುಹಬ್ಬದ ಶುಭಾಶಯಗಳು ಅಂದರೂ ಅಥವಾ ಇನ್ನೆಷ್ಟೇ ಚಿಕ್ಕದಾಗಿ ಅಥವಾ ಲಾಂಗೂಲವಾಗಿ ಬರೆದರೂ 'ಶುಭವಾಗಲಿ' ಎಂಬುದಷ್ಟೇ ಆಶಯ.

ಈ ವಿಷಯಕ್ಕೆ ಹೊರತಾಗಿ ಉಳಿಯೋದು ಮತ್ತು ನನಗೆ ಖಂಡಿತವಾಗಿಯೂ ಇಷ್ಟವಾಗದೇ ಇರೋದು ಎಂದರೆ RIP. ನೀವು HBD ಎಂದು ಹೇಳಿದಾಗ ಆ ವ್ಯಕ್ತಿ ನಿಮಗೆ ಮರುಕ್ಷಣದಲ್ಲೋ ಅಥವಾ ಮಾತಿನ್ಯಾವಾಗಲೋ ಸಿಗಬಹುದು. ಮುಖತಃ ಮತ್ತೊಮ್ಮೆ ವಿಶ್ ಮಾಡಬಹುದು. ರಿಪ್'ನಿಂದ ಸಿಗೋದೇನು? ಹ್ರಸ್ವರೂಪ ಬೇರೆ ಯಾವುದಕ್ಕೆ ಇರಲಿ ಆದರೆ ಈ ವಿಷಯದಲ್ಲಿ ಕೊಂಚ ಧಾರಾಳವಾಗಿ. ಒಂದಂತೂ ನಿಜ ನೀವು ರಿಪ್ ಅನ್ನಿ ಅಥವಾ ಒಂದು ಪುಟವೇ ಬರೆಯಿರಿ, ಹೋದವರು ಓದೋದಿಲ್ಲ. ನಿಮ್ಮ ಸಂತಾಪ ಅವರ ಮನೆಯ ಜನಕ್ಕೆ ಅಷ್ಟೇ. ಹಾಗಾಗಿ ಧಾರಾಳವಾಗಿ ಅಂತ ಕೇಳಿಕೊಳ್ಳೋದು. ನಮಗೆ ಸಮಯವಿಲ್ಲ ಅನ್ನೋದಾದ್ರೆ ಸಮಯ ಮಾಡ್ಕೊಂಡು ಹಾಕಿ.

ಅಂದ ಹಾಗೆ ರಿಪ್ ಅಂದ್ರೂ ಆಶಯವೇ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. Rest in peace ಎಂಬುದು ಅದರರ್ಥ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಹೇಗೆ ಹೇಳುತ್ತೇವೆಯೋ ಹಾಗೆ ಆಂಗ್ಲರ ನುಡಿಗಳು. ಮುಂದೆ ಸಾಗೋಣ ಬನ್ನಿ.

ಮೌನ ಬಂಗಾರವೂ ಆಗಬಹುದು, ಬಣ್ಣವನ್ನೂ ಕಳೆದುಕೊಳ್ಳಬಹುದು!

ಈ wishes ಅಥವಾ ಆಶಯ ಎಂಬೋದು ಬದುಕಿರುವವರ ಬಗ್ಗೆಯೇ ಆದರೂ, ಆ ಬದುಕಿರುವವರು ತಮ್ಮ ನಂತರ ಏನಾಗಬೇಕು ಎಂದು ಬಯಸುತ್ತಾರೋ ಅದೂ ಒಂದು ಆಶಯವೇ ಅಲ್ಲವೇ? ಅದನ್ನೇ ಮಂದಿ ವಿಲ್ ರೂಪದಲ್ಲಿ ದಾಖಲಾತಿ ಮಾಡಿ ಇಡುತ್ತಾರೆ.

ಈ ಶುಭಾಶಯ ಅಂಬೋದು ಒಬ್ಬರು ಮತ್ತೊಬ್ಬರಿಗೆ ಹೇಳುವಂತೆಯೇ ನಮ್ಮದೇ ಸ್ವಂತ ಆಶಯಗಳೂ ಇರಬಹುದು ಅಲ್ಲವೇ? ಅಂದರೆ "ನಾನು ಒಂದು ಪತ್ತೇದಾರಿ ಕಾದಂಬರಿ ಬರೆದಾಗ . . . " ಎಂಬುದು ನನ್ನ ಆಶಯ. ಇದೂ ಶುಭಾಶಯವೇ ಸರಿ. ಆದರೆ ನಾನು ಆ ದಿಕ್ಕಿನಲ್ಲಿ ಕೆಲಸ ಮಾಡಿದರೆ ಆ ಆಶಯ ಪೂರ್ಣಗೊಳ್ಳುತ್ತದೆ. ಇಲ್ಲದೆ ಇದ್ದರೆ ಆ ಆಶಯವನ್ನು ಕನಸು ಅಂತ ಪರಿಗಣಿಸಿ, ನಕಾರಾತ್ಮಕ ಬೇಡ ಎಂದುಕೊಂಡಾಗ ಬರೀ ಕಸ'ವಾಗುತ್ತದೆ. ಕನಸುಗಳು ನನಸಾಗಲಿ ಎಂಬುದೂ ಆಶಯವೇ. ನನಸು ಎಂಬುದರಲ್ಲಿ ನಕಾರಗಳನ್ನು ತೆಗೆದರೆ ಕೊನೆಗೆ 'ಸು' ಆದರೂ ಉಳಿದುಕೊಳ್ಳುತ್ತದೆ. 'ಸು' ಎಂಬುದು ಸದಾ ಸಕಾರಾತ್ಮಕ. ದುರ್ಯೋಧನನನ್ನು 'ಸುಯೋಧನ' ಎಂತಲೂ ಕರೆಯುತ್ತಾರೆ.

ವಿಶ್ ಎಂದರೆ ಆಶಯ ಅಂತ ಗೊತ್ತಾಯ್ತು. ಈ ಹಳೆ ಜೋಕು ನಿಮಗೆ ಗೊತ್ತಿರಬಹುದು. ಒಬ್ಬ ಬಾಸ್ ಮತ್ತು ಇಬ್ಬರು ಸಹ ಉದ್ಯೋಗಿಗಳಿಗೆ ಒಂದೊಂದು ವರ sanction ಆಗಿರುತ್ತಂತೆ. ಒಬ್ಬ ತಾನು ಸುಂದರಿಯರೊಡನೆ ದುಬೈ ರೆಸಾರ್ಟ್'ನಲ್ಲಿ ಇರುವಂತಾಗಲಿ ಅಂತ ಕೇಳಿಕೊಂಡನಂತೆ. ಮತ್ತೊಬ್ಬ ತನ್ನ ಪ್ರೇಯಸಿಯೊಡನೆ ತಾನು ಸ್ವಿಟ್ಜರ್ಲ್ಯಾಂಡ್'ನಲ್ಲಿ ಇರಬೇಕು ಎಂದು ಕೇಳಿಕೊಂಡನಂತೆ. ಕೇಳಿಕೊಳ್ಳುತ್ತಿದ್ದಂತೆಯೇ ಇಬ್ಬರೂ ಮಾಯ. ಬಾಸ್ ಕೇಳಿಕೊಂಡನಂತೆ "ಮಾಯವಾದ ಇಬ್ಬರೂ ಲಂಚ್ ಟೈಮ್ ಮುಗಿಯುತ್ತಿದ್ದಂತೆಯೇ ಅವರ ಡೆಸ್ಕ್'ನಲ್ಲಿ ಇರಬೇಕು"! ಎಲ್ಲವೂ ಆಶಯವೇ ಅಲ್ಲವೇ?

ಈ ಲೇಖನ ಓದಿದ ಮೇಲೆ ಕುಡೀಬೇಕಾ, ಕುಡಿಯೋದ್ ಬೇಡ್ವಾ? ನಿರ್ಧಾರ ಮಾಡಿ

wish ಎಂದರೆ ಆಶಯ. hope ಎಂದರೆ ನಂಬಿಕೆ. ಯಾರಿಗೂ ಶುಭ ಹಾರೈಸುವಾಗ may your wish come true ಅಂತಲೋ hope you feel better ಅಂತಲೋ ಹಾರೈಸುತ್ತೇವೆ. 'Wish' ಎಂದರೆ ಆದರೂ ಆಗಬಹುದೇನೋ ಎಂಬ ಅನುಮಾನ. ಯಾವ ಆಶಯವನ್ನು ಮತ್ತೊಬ್ಬರು ಹೊತ್ತಿದ್ದಾರೋ ಅದು ನಿಮಗೆ ಅರಿವಿರದೆ ಹೋಗಬಹುದು. ಅವರೇನೋ ಅತೀವವಾದ ಅಥವಾ ಅಸಾಧ್ಯವಾದ ಆಶಯ ಹೊತ್ತಿರಬಹುದು. ಸತ್ಯ ಆಗುತ್ತದೆ ಎಂಬ ಭರವಸೆ ಇರುವುದಿಲ್ಲ. Hope ಅಂಬೋದು ಒಂದು ಸೂಕ್ತ expectation ಜೊತೆಗೆ ಇರುತ್ತದೆ. Hope ಎಂದರೆ ಆಗುತ್ತದೆ ಎಂಬ ನಂಬಿಕೆ.

Wish ಎಂದರೆ ಕಷ್ಟವೇಪಡದೆ ಏನನ್ನಾದರೂ ಪಡೆದುಕೊಳ್ಳುವುದು ಅಂತ. ಹಾದಿಯ ಬದಿಯಲ್ಲಿ ನಿಮಗೆ ಅಲಾವುದ್ದೀನ್ ದೀಪ ಸಿಕ್ಕಿತು ಎಂದುಕೊಳ್ಳಿ. ಆ ಕ್ಷಣದಿಂದ ನೀವು ಮಾಡಬೇಕಿರೋ ಕೆಲಸಗಳನ್ನೆಲ್ಲಾ ಅದರಿಂದಲೇ ಮಾಡಿಸುತ್ತೀರಿ ಅಲ್ಲವೇ? ಅಂದ್ಕೊಂಡ ಕೆಲಸಗಳೆಲ್ಲಾ ನೀವು ಕೇಳಿದ ಕೂಡಲೇ ನಡೆದು ಹೋಗುವಂತಾಗಿ ಕೊನೆಗೊಂದು ದಿನ ಆ wish ನಿಮ್ಮನ್ನೇ ಆಹುತಿ ತೆಗೆದುಕೊಳ್ಳುತ್ತದೆ.

ಈ ಮಾತನ್ನು ನಂಬೋದಕ್ಕೆ ಆಗ್ತಿಲ್ಲ ಅಂತ ಅನಿಸಿದರೆ wish ಎಂದರೆ ವರ ಅಂತಲೂ ಅರ್ಥಮಾಡಿಕೊಳ್ಳಿ. I have granted you 3 wishes. you may ask for anything you want. ಅನ್ನೋ ಮಾತಲ್ಲಿ want ಅನ್ನುತ್ತಾರೆಯೇ ಹೊರತು need ಅಂದಿಲ್ಲ. ವರ ಅಂತ ಅರ್ಥೈಸಿಕೊಂಡ ತಕ್ಷಣ ಅದರ ಹಿಂದಿನ ಕಷ್ಟಗಳ ಕಥೆಗಳೂ ನಿಮ್ಮ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಕೈಕೇಯಿಗೆ ದಶರಥ ಕೊಟ್ಟ ವಚನ 'wish' ತಾನೇ? ರಾಮಾಯಣವೇ ನಡೆದು ಹೋಯ್ತು. ದೂರ್ವಾಸ ಮಹಾಮುನಿ ಕುಂತಿಗೆ ಐದು wishes ಕೊಟ್ಟರು. ಆಗ ಹುಟ್ಟಿದ ಕರ್ಣನಿಗೂ, ಈಕೆಗೂ ಜೀವನಪರ್ಯಂತ ಬರೀ ಸಂಕಷ್ಟಗಳೇ. ಅಂತೆಯೇ 'wishes' ಅನ್ನು ವಾಗ್ದಾನ ಮಾಡಿದ ಯಮಧರ್ಮರಾಯ ಸತ್ಯವಾನನ ಜೀವವನ್ನೇ ಹಿಂದಿರುಗಿಸಬೇಕಾಯ್ತು. ಇಂಥಾ ವರಗಳನ್ನು ರಕ್ಕಸರಿಗೆ ದಯಪಾಲಿಸಿ ಸಂಕಷ್ಟಕ್ಕೆ ಒಳಗಾದ ಸನ್ನಿವೇಶಗಳಿಗೆ ಲೆಕ್ಕವೇ ಇಲ್ಲ.

ಕ್ರಿಸ್ಮಸ್ ಹಬ್ಬದ ಬೆಳಕಲ್ಲಿ ದೀಪಾವಳಿಯ ಕಾಣ್ವರು ನಾವು

ಹಲವಾರು ಬಾರಿ ನಮಗೆ ಜೀವನದಲ್ಲಿ ಒಂದಷ್ಟು ಸಂದರ್ಭಗಳು ಎದುರಾಗುತ್ತವೆ. ಇಂಥಾ ಸಂದರ್ಭದಲ್ಲಿ ಹೇಗೆ wish ಮಾಡಬೇಕು ಎಂಬ ಅನುಮಾನ. ಉದಾಹರಣೆಗೆ 'congratulations' ಎಂಬ ಆಶಯ. ಯಾರೋ ಒಬ್ಬರು ಮಾಡಿದ ಸಾಧನೆಗೆ ಶ್ಲಾಘನೀಯ ರೂಪವೇ ಈ 'congratulations'. ''congrats grad' ಎಂದರೆ ನಿನ್ನ graduation ಡಿಗ್ರಿ ಪಡೆದಿದ್ದಕ್ಕೆ ನಿನಗೆ ಅಭಿನಂದನೆಗಳು ಅನ್ನೋದು. 'congratulations on your promotion' ಅನ್ನೋದು ಒಬ್ಬರು ಕಷ್ಟಪಟ್ಟು ಕೆಲಸ ಮಾಡಿ ಗಿಟ್ಟಿಸಿಕೊಂಡ ಉನ್ನತಿ.

ನಿಶ್ಚಿತಾರ್ಥ / engagement ಅಥವಾ ಮದುವೆಯಾದ ವಧೂವರರಿಗೆ ಯಾವ ರೀತಿ ಶುಭಕೋರಬೇಕು? ನಿನ್ನ ಬಾಳನ್ನು ಹಸನಾಗಿಸಿಕೊಳ್ಳಲು ಈ ಹೆಣ್ಣನ್ನು ಹುಡುಕಿಕೊಂಡಿದ್ದೀಯ, ಅದು ನಿನ್ನ ಸಾಧನೆ ಕಣಪ್ಪಾ ಅಂತ ಹುಡುಗನಿಗೆ "'congratulations' ಹೇಳಬೇಕಂತೆ. ಒಬ್ಬನ ಬಾಳನ್ನು ಹಸನಾಗಿಸಲು ಹೊರಟಿದ್ದೀಯಾ ನಿನಗೆ 'ಶುಭವಾಗಲಿ' (best wishes) ಅಂತ ಹೆಣ್ಣಿಗೆ ಶುಭಕೋರಬೇಕಂತೆ. ಈಗ ಎಲ್ಲವೂ ಸರ್ವೇಸಾಧಾರಣವಾಗಿ ಹೋಗಿದೆ. ಸಿಂಪಲ್ಲಾಗಿ 'congratulations' ಉಲಿದು, ಉಡುಗೊರೆಗೆಂದು ಮೀಸಲಿಟ್ಟಿರುವ ಜಾಗದಲ್ಲಿ giftbox ಇಟ್ಟು, ಉಂಡು ಮನೆಗೆ ಹೋಗೋದಷ್ಟೇ ಇಂದಿನ ರೀತಿ ನೀತಿ.

ಶುಭಾಶಯಗಳ ಸುತ್ತ ವಿಷಯಗಳನ್ನು, ಸಂತಾಪ ಸೂಚಿಸುವ ಬಗ್ಗೆ ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ ಮೇಲೆ ಗ್ರೀಟಿಂಗ್ ಕಾರ್ಡ್ಸ್ ಬಗ್ಗೆ ಹೇಳದೆ ಹೋದರೆ ತಪ್ಪಲ್ಲವೇ? ಇಂದು ಸಾಮಾಜಿಕ ತಾಣ ಬಂದ ಮೇಲೆ ಗ್ರೀಟಿಂಗ್ ಕಾರ್ಡ್'ಗಳ ಭರಾಟೆ ಕಡಿಮೆಯಾಗಿದ್ದರೂ ನಿಂತೇ ಹೋಗಿಲ್ಲ. ಒಬ್ಬರು ಮತ್ತೊಬ್ಬರಿಗೆ ಯಾವುದೇ ಕಾರಣಕ್ಕೆ ಶುಭಾಶಯ ತಿಳಿಸಬೇಕಾದರೆ ಅಥವಾ ಸಂತಾಪ ಸೂಚಿಸುವ ಸಲುವಾಗಿಯೋ ಅಥವಾ ಅನಾರೋಗ್ಯದಿಂದ ಬೇಗ ಹೊರಬನ್ನಿ ಎಂದು ಸೂಚಿಸುವುದಕ್ಕೋ ಕಾರ್ಡ್ ಕೊಡುವುದು ಅಥವಾ ಪೋಸ್ಟ್ ಮುಖಾಂತರ ಕಳಿಸುವುದು ಒಂದು ಅದ್ಬುತ ಕ್ರಿಯೆಯಾಗಿತ್ತು. ಇಂದಿಗೂ ನಿಮ್ಮ ಕಪಾಟಿನಲ್ಲಿ ಹಳೆಯ ಗ್ರೀಟಿಂಗ್ಸ್ ಕಾರ್ಡ್ಸ್ ಇದ್ದೇ ಇರುತ್ತವೆ ಅಲ್ಲವೇ?

ದಿನಬೆಳಗಾದರೆ ಇಂಥಾ ಗ್ರೀಟಿಂಗ್ ಕಾರ್ಡ್'ಗಳು ವಾಟ್ಸಪ್ ಮುಖೇನ ರಾಶಿ ರಾಶಿ ಬಂದು ಬೀಳಲಾರಂಭಿಸಿ ಅದರ ಮೌಲ್ಯವೇ ಕಳೆದುಹೋದಂತಾಗಿದೆ. ಕೆಲವೊಂದು ಗ್ರೂಪ್'ಗಳಲ್ಲಿ 'ನೀವು ಬರೀ ಶುಭ ಕೋರುವ ಸಲುವಾಗಿಯೇ ಇಲ್ಲಿಗೆ ಬರುವವರಾದರೆ ನಿಮಗೆ ಅನುಮತಿ ಇಲ್ಲ' ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಕಾರ್ಡ್'ಗೆ ಬೆಲೆ ತೆತ್ತಿದ್ದರಿಂದ ಅದಕ್ಕೆ ಬೆಲೆಯಿತ್ತು. ಬಿಟ್ಟಿ ಅಂದಾಗ ಅದರ ಬೆಲೆ ಸಹಜವಾಗಿ ಮೌಲ್ಯ ಕಳೆದೇ ಹೋಗುತ್ತದೆ.

ಒಬ್ಬರಿಗೆ ಶುಭ ಕೋರುವುದು ಎಂದರೆ ಅದೊಂದು ಸಜ್ಜನ ಕ್ರಿಯೆ. ಒಬ್ಬರಿಗೆ ಯಾವ ರೀತಿ ಆಶಯ ಕೋರಬೇಕು ಎಂದರೆ ಆ ಆಶಯ ನಿಮ್ಮದೇ ಆಗಿರುವಷ್ಟು ಎಂಬಂತೆ. ಎಷ್ಟರಮಟ್ಟಿಗೆ ಎಂದರೆ ಅವರ ಆಶಯವನ್ನು ನೀವೇ ಪೂರ್ಣಗೊಳಿಸುವಷ್ಟು ಶಕ್ತಿ ನಿಮ್ಮಲ್ಲಿದೆ ಎನ್ನುವಷ್ಟು ಎಂದಿದೆ ಧರ್ಮಗ್ರಂಥಗಳು.

ಶುಭ ಕೋರುವ ತೋರಣಗಳಿಂದ ನಳನಳಿಸುವ ಮನೆಗಳು, ಮುಂದೆ ಶುಭ ಕೋರಲೂ ಅನುಮತಿ ಬೇಡುವ ಗುಂಪುಗಳಾಗಿ ಬದಲಾಗಿದೆ ಎಂಬುದು ಶೋಚನೀಯ ಅಲ್ಲವೇ? ಮೌಲ್ಯಗಳನ್ನು ಕಳೆದುಕೊಳ್ಳುವುದು ಸಲೀಸು ಆದರೆ ಗಳಿಸಿಸೋದು ದುಸ್ತರ.

ಎಲ್ಲ ಓದುಗರಿಗೂ ಶುಭವಾಗಲಿ ಎಂದು ಹಾರೈಸುವ ಇಚ್ಛೆ ನನ್ನದು. ನಿಮ್ಮದು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
I don't turn to greeting cards for wisdom and advice, but they are a fine reflection of the general drift of the culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more