ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

94 ಸಾವಿರ ಟನ್ನುಗಳ, ಸಾವಿರ ಅಡಿ ಉದ್ದದ ಹಡಗು; ನಾ ಕಂಡ ಅಲಾಸ್ಕಾ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಅಮೆರಿಕದಲ್ಲಿರುವ 50 ರಾಜ್ಯಗಳಲ್ಲಿ ಅಲಾಸ್ಕಾ 49ನೆಯದ್ದು. 49 ಎಂದರೆ ಸೇರ್ಪಡೆಯ ಸ್ಥಾನ ಮಾತ್ರ. ಅಮೆರಿಕಾದ ರಾಜ್ಯಗಳ ಗಾತ್ರದಲ್ಲಿ ಮೊದಲನೆಯ ಸ್ಥಾನ ಹೊಂದಿದ್ದರೂ ಜನಸಂಖ್ಯೆಯಲ್ಲಿ 50ನೇ (ಕಟ್ಟಕಡೆಯ) ಸ್ಥಾನ. ಅಚ್ಚರಿಯ ವಿಷಯ ಅಲ್ಲವೇ?

ಅಲಾಸ್ಕವನ್ನು 1867ರಲ್ಲೇ ರಷ್ಯಾ ರಾಷ್ಟ್ರದಿಂದ ಕೊಂಡುಕೊಂಡಿದ್ದರೂ ಅದಕ್ಕೆ ಅಮೆರಿಕಾದ ರಾಜ್ಯಗಳಲ್ಲೊಂದು ಅಂತ ಪಟ್ಟ ಬಂದಿದ್ದು 1959ರಲ್ಲಿ. ಅಂದು ಅಮೆರಿಕವು ಕೊಳ್ಳಲು ನೀಡಿದ ಬೆಲೆ 7.2 ಮಿಲಿಯನ್ ಡಾಲರ್ಸ್. ಅರ್ಥಾತ್ ಒಂದು ಎಕರೆಗೆ ಕೇವಲ 2 ಸೆಂಟ್ಸ್. ಸದ್ಯಕ್ಕೆ ಇಷ್ಟು ಇತಿಹಾಸ ತಿಳಿದುಕೊಂಡು ಈಗ ನಮ್ಮ ಪ್ರವಾಸದ ಬಗ್ಗೆ ತಿಳಿದುಕೊಳ್ಳುವಿರಂತೆ ಬನ್ನಿ.

ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...

2019ರ ಆಗಸ್ಟ್ 4ಕ್ಕೆ ಅಮೆರಿಕಾದ ಪೂರ್ವ ಭಾಗದ ವಾಷಿಂಗ್ಟನ್ ಡಿಸಿಯಲ್ಲಿ ವಿಮಾನ ಏರಿ, ಇಳಿದಿದ್ದು ಪಶ್ಚಿಮದ ಭಾಗದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಲ್ಲಿ. ಗೊತ್ತಿಲ್ಲದೇ ಇದ್ದಲ್ಲಿ, ಇದ್ಯಾವ ಊರು ಅಂತ ಆಲೋಚನೆಯೇ ಬೇಡ. ಘನ ಕಂಪೆನಿಗಳಾದ ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ಗಳ ತವರೂರು ಸಿಯಾಟಲ್.

Alaska Travelogue Part 1 In Kannada By Srinath Bhalle

ಅಲ್ಲಿಳಿದು ಊರನ್ನೇನೂ ನೋಡಲಿಲ್ಲ. ಬದಲಿಗೆ ಮುಂದಿನ ಪಯಣಕ್ಕೆ ಸಿದ್ಧರಾದೆವು ಅಷ್ಟೇ. ಅಲ್ಲಿಂದ ಮುಂದೆ ವಿಮಾನ ಏರಿ, ಇಳಿದಿದ್ದು ಅಲಾಸ್ಕಾದ ಅತ್ಯಂತ ದೊಡ್ಡ ಪಟ್ಟಣವಾದ Anchorageನಲ್ಲಿ. ಪ್ರಾಕೃತಿಕ ಸೌಂದರ್ಯ, ಹಿಮ ಹೊತ್ತ ಪರ್ವತಗಳು ಇತ್ಯಾದಿಗಳ ನಾಡು ಈ Anchorage. ಏರ್ ಪೋರ್ಟ್ ನಲ್ಲಿ ಇಳಿದ ನಾವು ಈ ಮುಂಚೆಯೇ ಬುಕ್ ಮಾಡಿದ್ದ ಬಸ್ ಏರಿ ಹೊರಡಲು ಸಾಕಷ್ಟು ಸಮಯವಿತ್ತು.

ಛತ್ರದಲ್ಲಿ ಮಲಗುವಂತೆ ಎಲ್ಲಿ ಜಾಗ ಸಿಕ್ಕಿತೋ ಅಲ್ಲೇ ಮಲಗಿದರೂ ನನಗಂತೂ ನಿದ್ದೆ ಬರಲಿಲ್ಲ. ಬೆಳಗಿನ ಹೊತ್ತಲ್ಲಿ ಎಲ್ಲರೂ ಎದ್ದ ಮೇಲೆ ಕಾಫಿ- ತಿಂಡಿ ಮುಗಿಸಿದರೂ ಬಸ್ ಬರಲು ಇನ್ನೂ ಒಂದೆರಡು ಗಂಟೆಗಳು ಇದ್ದವು. ಅಲ್ಲೇ ಒಂದು ಮೂಲೆಯಲ್ಲಿ ನಮ್ಮ ದೇಹಕ್ಕೆ ವ್ಯಾಯಾಮದ ಉಪಚಾರವೂ ಆಯಿತು. ಆ ನಂತರ ಬಸ್ ಏರಿ ಹೊರಟೆವು.

Reactive ಆಗಿರುವುದಕ್ಕಿಂತ Proactive ಆಗಿರಿ, ಬಾಯಾರಿಕೆ ಆದಾಗ ಬಾವಿ ತೋಡೋ ಕೆಲಸ ಮಾಡದಿರಿ Reactive ಆಗಿರುವುದಕ್ಕಿಂತ Proactive ಆಗಿರಿ, ಬಾಯಾರಿಕೆ ಆದಾಗ ಬಾವಿ ತೋಡೋ ಕೆಲಸ ಮಾಡದಿರಿ

ಹಾದಿಯುದ್ದಕ್ಕೂ ಗೈಡ್ ಕಾರ್ಯವನ್ನೂ ನಿರ್ವಹಿಸುವ ಬಸ್ ಡ್ರೈವರ್ ನ ನಿರರ್ಗಳವಾದ ವಿವರಣೆಯನ್ನು, ಪ್ರಕೃತಿಯನ್ನೂ ಸವಿಯುತ್ತಾ ಸಾಗುವಾಗ ಸಮಯ ಹೋದದ್ದೇ ಗೊತ್ತಾಗಲಿಲ್ಲ. ವನ್ಯಮೃಗಗಳ ನೋಟ ಸವಿಯುವುದೂ ಒಂದು ಚಟುವಟಿಕೆಯಾಗಿತ್ತು. ಮೊದಲಿಗೆ ಅಲ್ಲಿ ಊಟದ ವ್ಯವಸ್ಥೆ ಆಗಿತ್ತು. ಅತೀ ಹತ್ತಿರದಲ್ಲಿ ಬೇಲಿಯ ಒಳಗೆ ಇದ್ದ ಕರಡಿಯನ್ನು ಬೆಳಕಲ್ಲೇ ಕಂಡೆವು.

ಏನನ್ನೂ ತಿನ್ನಲು ಕೊಡಕೂಡದು ಎಂದು ಹೇಳಿದ್ದರಿಂದ 'ಜಾಮೂನು' ಕೊಡಲಿಲ್ಲ. ಅಸಂಖ್ಯಾತ 'ಜಿಂಕೆ' ಜಾತಿ ಪ್ರಾಣಿಗಳು, ಕಾಡುಕೋಣಗಳು ಇತ್ಯಾದಿ ಪ್ರಾಣಿಗಳನ್ನು ಕಂಡು ಮುಂದೆ ಸಾಗಿದೆವು.

ಏನೋ ಮಿಸ್ ಆಗ್ತಾ ಇದೆ, ನಾನಿಲ್ಲಿಗೆ ಬರಬಾರದಿತ್ತು, ನಾನಿಲ್ಲಿಗೆ ಸೇರಿದವನಲ್ಲ!ಏನೋ ಮಿಸ್ ಆಗ್ತಾ ಇದೆ, ನಾನಿಲ್ಲಿಗೆ ಬರಬಾರದಿತ್ತು, ನಾನಿಲ್ಲಿಗೆ ಸೇರಿದವನಲ್ಲ!

ಮುಂದಿನ ನಿಲ್ದಾಣ ಎಂದರೆ ಹೈಕಿಂಗ್. ಸುಮಾರು ಎರಡು ಮೈಲಿ ಬೆಟ್ಟ ಏರಿ, ನಾವು ನೋಡಲು ಹೋಗಿದ್ದು exit glacier ಎಂಬ ತಾಣ. ಭರೋ ಎಂದು ಬೀಸುವ ಗಾಳಿಯು ಕೊಂಚ ಹೆಚ್ಚೇ ತಂಪಾಗಿತ್ತು. ಕೆಳಗೆ ಸುಣ್ಣವನ್ನು ಕದಡಿದ ನೀರಿನಂತೆ ಕಾಣುವ ಗ್ಲೇಸಿಯರ್ ನೀರು ಹರಿದು ಸಾಗಿತ್ತು. ತಣ್ಣನೆ ಕೊರೆವ ನೀರಿನಲ್ಲಿ ಬಿದ್ದರೆ ಮೈ ಮರಗಟ್ಟಿ ಹೋಗಲು ಹೆಚ್ಚು ಸಮಯ ಬೇಕಿಲ್ಲ ಎನಿಸಿತು.

ಅಲ್ಲಿಂದ ಬಂದು ಬಸ್ ಏರಿ, ನಂತರ ಹತ್ತು ನಿಮಿಷಗಳು ಸಾಗಿ ಇಳಿದಿದ್ದೇ ಬಂದರಿನಲ್ಲಿ. ವಿಶಾಲವಾದ cruise ಹಡಗು ನಮಗಾಗಿ ಕಾದು ನಿಂತಿತ್ತು !!!

ಮುಂದಿನ ಏಳು ದಿನಗಳ ಕಾಲ ನಮ್ಮ ತವರು ಮನೆಯಾದ ಆ ಹಡಗಿನಲ್ಲಿ ಏರಲು ಅತ್ಯಂತ ಉತ್ಸುಕರಾದ ನಮ್ಮನ್ನು ಅಲ್ಲಿನ ಭದ್ರತಾ ದಳದವರು ಮತ್ತು ಹಡಗಿನ ಸಿಬ್ಬಂದಿ ಅತ್ಯಂತ ಆದರಣೀಯವಾಗಿಯೇ ಸ್ವಾಗತಿಸಿದರು. ಟಿಕೆಟ್, ಪಾಸ್ ಪೋರ್ಟ್ ಇತ್ಯಾದಿ ಕಡ್ಡಾಯ formalitiesಗಳಾದ ಮೇಲೆ ಹಡಗಿನಲ್ಲಿ ಪಾದ ಇರಿಸಿದೆವು.

ಎಲ್ಲರನ್ನೂ ಈ ಮುಂಚೆಯೇ ನಿರ್ಧಾರಿತವಾದ ಕೋಣೆಗಳಲ್ಲಿ ಕಳಿಸಿದರು. ಅಲ್ಲೊಂದು ಹದಿನೈದು ನಿಮಿಷಗಳ ಕಾಲ ಹಡಗಿನ ನಿಯಮಾವಳಿಗಳ ಬಗ್ಗೆ, emergency (ತುರ್ತು) ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬೆಲ್ಲಾ ನೀತಿಪಾಠಗಳನ್ನು ಹೇಳಿ ಕಳಿಸಿದರು. ಅತೀ ಮುಖ್ಯವಾದ ಎಚ್ಚರಿಕೆ ಪಾಠವೆಂದರೆ "ಸಮುದ್ರಕ್ಕೆ ಏನನ್ನೂ (ಊಟ ತಿಂಡಿ ಪ್ಲಾಸ್ಟಿಕ್ ಇತ್ಯಾದಿ) ಎಸೆಯಬೇಡಿ. ಹಾಗೆ ಮಾಡಿದ್ದೇ ಆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂಬುದು.

ಇಂಥಾ ವಿಷಯಗಳಲ್ಲಿ ಅತೀ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕೇಳಿಬಲ್ಲೆವು. ನಮ್ಮೂರಿನ ಒಟ್ಟು ಐದು ಕನ್ನಡ ಕುಟುಂಬಗಳು ಒಟ್ಟಾಗಿ ಪ್ಲಾನ್ ಮಾಡಿ ಹೊರಟಿದ್ದೆವು. ಐದು ಜೋಡಿಗಳ ಜೊತೆ ಎಂಟು ಮಂದಿ ಗಂಡು ಪಿಳ್ಳೆಗಳು ಜೊತೆ ಸೇರಿದರೆ ಹದಿನೆಂಟು ಮಂದಿಯನ್ನು ಹೊತ್ತು ಸಾಗಿತ್ತು ಈ 'ಸ್ನೇಹದ ಕಡಲು, ನೆನಪಿನ ಹಡಗು'.

ಬೇರೆ ಪಯಣಿಗರೂ ಇದ್ದರು ಅನ್ನಿ. ಹಡಗಿನಲ್ಲಿ ಪಯಣಿಸುವಾಗ ಕೆಲವರಿಗೆ motion sickness ಆಗುತ್ತದೆ ಎಂದು ಕೇಳಿದ್ದು, ಅದಕ್ಕೆ ಬೇಕಿದ್ದ ಔಷಧಿ ಮಾತ್ರೆಗಳನ್ನು ತೆಗೆದಿಟ್ಟುಕೊಂಡಿದ್ದೆವು. ಆದರೆ ಯಾರಿಗೂ ಅದರ ಅವಶ್ಯಕತೆ ಬೀಳಲಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಏಳು ದಿನಗಳಲ್ಲಿ ನಾವು ವಿವಿಧ ತಾಣಗಳನ್ನು ನೋಡಲು ಪಯಣಿಸಲು ಬಳಸಿದ್ದು ಎಂದರೆ Norwegian ಹಡಗು, ದೋಣಿ, ವಿಮಾನ, ಟ್ರೈನ್, ಕಾರು, ಬಸ್ಸು, ಹೆಲಿಕ್ಯಾಪ್ಟರ್, ಮತ್ತು ನಟರಾಜ ಸರ್ವಿಸ್.

ಆಗಲೇ ಹೇಳಿದಂತೆ ಸಿಯಾಟಲ್ ನಿಂದ ಹಿಡಿದು ನಾವು ಪಯಣಿಸಿದ್ದು anchorage, ಸೇವರ್ಡ್, ICY Strait point, Juneau (ಅಲಾಸ್ಕಾ ರಾಜಧಾನಿ ನಗರ), Skagway, Ketchikan. ಮಧ್ಯೆ ಕೆನಡಾದ YUKON ಮತ್ತು ಕಡೆಯಲ್ಲಿ Vancouver ಕೆನಡಾದಲ್ಲಿ ವಿಮಾನ ಏರಿ Los Angelesಗೆ ಬಂದೆವು. ಅಲ್ಲಿಂದ ವಾಷಿಂಗ್ಟನ್ ಡಿಸಿ, ಕಾರಿನಲ್ಲಿ ನಮ್ಮ ಮನೆಗೆ ತಲುಪುವಾಗ ಆಗಸ್ಟ್ ಹರಿಮೂರನೆಯ ತಾರೀಖು ಮಧ್ಯಾಹ್ನವಾಗಿತ್ತು.

ಮೊದಲಿಗೆ ಹಡಗಿನ ಬಗ್ಗೆ ಒಂದೆರಡು ಮಾತುಗಳು. norwegian jewel ಹೆಸರಿನ ನಮ್ಮ ಹಡಗಿನ ತೂಕ ಕೇವಲ 94 ಸಾವಿರ ಟನ್ನುಗಳು. ಸರಿಸುಮಾರು ಸಾವಿರ ಅಡಿ ಉದ್ದ. ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಮತ್ತು ನಮ್ಮಂಥಾ ಸುಮಾರು ಎರಡೂವರೆ ಸಾವಿರ ಅತಿಥಿಗಳು.

ಸಾಮಾನ್ಯ ದರ್ಜೆಯ ಸಿಬ್ಬಂದಿವರ್ಗದವರು ನೇರ ಹತ್ತು ತಿಂಗಳ ಕಾಲ ಹಡಗಿನಲ್ಲೇ ಇದ್ದು ಕೆಲಸ ಮಾಡಿಕೊಂಡಿದ್ದು, ಎರಡು ತಿಂಗಳು ಕಾಲ ರಜೆಯ ಮೇಲೆ ಹೋಗುತ್ತಾರೆ. ಉನ್ನತ ದರ್ಜೆಯವರು ಆರು ತಿಂಗಳ ಕೆಲಸ, ಆರು ತಿಂಗಳ ರಜೆ ಹೀಗೆ. ಯಾವುದೇ ವರ್ಗದವರಾಗಲಿ ಕೆಲಸ ಮಾತ್ರ ನಿರಂತರ.

ಈ ನಮ್ಮ ಹಡಗಿನಲ್ಲಿ ಒಟ್ಟು ೧೬ ರೆಸ್ಟೋರೆಂಟ್ ಗಳು ಇದ್ದವು. ಹಲವೆಡೆ ಊಟಕ್ಕೆ ದುಡ್ಡು ತೆರೆಬೇಕಿಲ್ಲ. ಕೆಲವಡೆ ದುಡ್ಡು ತೆತ್ತೇ ಉಣ್ಣಬೇಕು. ಇದಲ್ಲದೆ ೧೫ ಬಾರುಗಳು ಇರುತ್ತವೆ. ಮದ್ಯಪಾನಕ್ಕೆ ದುಡ್ಡು ಕೊಟ್ಟೇ ಕೊಳ್ಳಬೇಕು. ಒಂದು ಸ್ಪಾ, ಒಂದು ವ್ಯಾಯಾಮ ಕೋಣೆ, ಎರಡು ಸ್ವಿಮ್ಮಿಂಗ್ ಪೂಲುಗಳು, ನಾಲ್ಕು ಹಾಟ್ ಬಾತ್ ಟಬ್ ಗಳು, ಕ್ರೀಡಾ ಚಟುವಟಿಕೆಗಳ ತಾಣ (ಟೇಬಲ್ ಟೆನಿಸ್, ಟೆನಿಸ್, ಗಾಲ್ಫ್, ಬಾಸ್ಕೆಟ್ ಬಾಲ್), ಟೀನ್ ಕ್ಲಬ್.

ಇಷ್ಟಲ್ಲದೆ ಹಲವಾರು ಊಟದ ಕೇಂದ್ರಗಳಲ್ಲಿ ನಿರಂತರ live ಮ್ಯೂಸಿಕ್. ಎರಡು ಅದ್ಭುತವಾದ live ಶೋ ಥಿಯೇಟರ್. ಒಂದು ಕೂತು ನೋಡುವಂಥದ್ದು ಮತ್ತೊಂದು ನಾವು ಪಾಲ್ಗೊಳ್ಳುವಂಥದ್ದು. ಹಡಗಿನ ಅತ್ಯಂತ ಮೇಲಿನ ಡೆಕ್ ಸುತ್ತಲೂ ನಡೆಯಲು ಅಥವಾ ಜಾಗ್ ಮಾಡಲು ಅವಕಾಶವಿರುತ್ತದೆ. ಇಷ್ಟೆಲ್ಲಾ ಇದ್ದರೂ ನನಗೆ ಅತ್ಯಂತ ಪ್ರಿಯವಾದದ್ದು ಎಂದರೆ ಬೆಳಗ್ಗೆ ಬೇಗ ಎದ್ದು, ಒಂದು ಲೋಟ ಕಾಫಿ ತೆಗೆದುಕೊಂಡು, ಹಡಗಿನ ಒಂದು ತುದಿಯಲ್ಲಿ chair ಹಾಕಿಕೊಂಡು ಕೂತು ಪ್ರಕೃತಿ ನೋಡೋದು.

ಆ ತಣ್ಣನೆ ನೀರು ಮಿಶ್ರಿತ ಗಾಳಿ, ಚಲಿಸುವ ಹಡಗು, ಸಾಗುತ್ತಿರುವಾಗ ಅದು ಸಮುದ್ರದ ನೀರಿನಲ್ಲಿ ಬಿಡಿಸುವ ಚಿತ್ರ, ಸುತ್ತಲಿನ ಕಲ್ಲು ಬಂಡೆಗಳ ಗುಡ್ಡಗಳು, ಮರಗಳ ಸಮೂಹವನ್ನೇ ಹೊತ್ತ ಪರ್ವತಗಳು, ಹಿಮವನ್ನು ಮುಡಿದ ಬೆಟ್ಟಗಳು, ಮಂಜುಗಡ್ಡೆಗಳನ್ನೇ ಹೊತ್ತ ಬೃಹತ್ ಪರ್ವತಗಳು, islands, ಅತೀ ಸಮೀಪದಲ್ಲೇ ಚಲಿಸುವ ಮೋಡಗಳು, ನೋಡಿದಷ್ಟೂ ದೂರಕ್ಕೆ ಕಾಣುವ ಮಹಾಸಾಗರದ ನೀರು.

ಆಗಸದಿಂದ ನೋಡಿದಾಗ ಈ ಮಹಾಸಮುದ್ರದಲ್ಲಿ ಈ ಬೃಹತ್ ಹಡಗು ಒಂದು ಬಿಂದು ಮಾತ್ರ. ಇಷ್ಟೆಲ್ಲಾ ಮಧ್ಯೆ ನಾನೊಂದು ತೃಣವೂ ಅಲ್ಲ, ಶೂನ್ಯ ಎನಿಸಿದ್ದು ಸುಳ್ಳಲ್ಲ.

ಕಣ್ಣು ಹಾಯಿಸಿದಷ್ಟೂ ಕಾಣುವ ನೀರಿನ ಅಡಿಯಲ್ಲಿ ಒಂದು ಜಗತ್ತೇ ಇದೆ. ಸಣ್ಣ ಮೀನಿನಿಂದ ಹಿಡಿದು whale, ಶಾರ್ಕ್ ಗಳಂಥ ಅತೀ ದೊಡ್ಡ ಜಲಚರಗಳನ್ನು ಹೊಂದಿರುವ ಈ ಸಾಗರಕ್ಕೆ ನಮಿಸಲೇಬೇಕು. ತನ್ನೊಳಗಿರುವ ಪ್ರತೀ ಜಲಚರಕ್ಕೂ ಒಂದಲ್ಲಾ ಒಂದು ರೀತಿ ಹೊಟ್ಟೆ ಹೊರೆದುಕೊಳ್ಳಲು ಒಂದು ಸೂತ್ರ ರಚಿಸಿರುವ ದೈವ, ಸಾಗರದ ಹೊರಗಿನ ಚಾಲಾಕಿ ಪ್ರಾಣಿಯಾದ ಮನುಜನ ಹೊಟ್ಟೆಯನ್ನೂ ತುಂಬಿಸುತ್ತಾನೆ.

ಜಲಚರಗಳನ್ನು ತಿಂದು ತೇಗುವ ಮಾನವ ಸಂತತಿ ಹೆಚ್ಚಿ ಈಗೀಗ ಸಾಗರದಡಿಯ ಆಹಾರದಲ್ಲಿ ಕೊರತೆ ಉಂಟಾಗಿರುವುದು ಅರಗಿಸಿಕೊಳ್ಳಲಾಗದ ಸತ್ಯ. ಇಂಥ ಒಂದು ದಿನದಲ್ಲೇ, ಹಗಲಿನ ಚುಮುಚುಮು ಚಳಿಯಲ್ಲೇ ಹಡಗಿನ ಪರಿವಾರದೊಡನೆ ಗ್ಲೇಸಿಯರ್ ಅನ್ನು ನೋಡಲು ಸಿದ್ದರಾದೆವು.

ಈ ಗ್ಲೇಸಿಯರ್ ಅಂದರೆ ಏನು? ಗ್ಲೇಸಿಯರ್ ಮೇಲಿನ ನಡಿಗೆ ಹೇಗಿತ್ತು? ಗ್ಲೇಸಿಯರ್ ನೀರಿನ ಮಹತ್ವ ಏನು ಅನ್ನೋದನ್ನ ಮುಂದಿನ ವಾರ ತಿಳಿಯೋಣ. ಮುಂದಿನ ವಾರದ ಕಂತಿನಲ್ಲಿ ನಾ ಕಂಡ ಅಲಾಸ್ಕಾ ಜೊತೆಗೆ ನಾ ಕಾಣದ (ಅನುಭವಿಸದ) ಅಲಾಸ್ಕಾ ಬಗ್ಗೆ ಕೂಡ ತಿಳಿದುಕೊಳ್ಳೋಣ. ಸದ್ಯಕ್ಕೆ ಬರಲೇ ?

English summary
US favorite tourist place Alaska travelogue by Oneindia Kannada columnist Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X