• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮಗೆ ದಾಂಧಲೆ ಎಬ್ಬಿಸುವವರು ಗೊತ್ತೇ? ಇದರಿಂದ ಪ್ರಯೋಜನವೂ ಇದೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಮೊದಲಿಗೆ ದಾಂಧಲೆ ಅಂದರೇನು ಅಂತ ತಿಳಿದುಕೊಳ್ಳೋಣ... ಚಿಕ್ಕದಾಗಿ ಹೇಳಬಹುದು ಎಂದರೆ ತಿಳಿನೀರಿನ ಸರೋವರಕ್ಕೆ ಕಲ್ಲೆಸೆದರೆ ಏನಾಗುತ್ತೋ ಅದು ದಾಂಧಲೆ. ಕ್ಷಣಾರ್ಧದಲ್ಲಿ ಅಲ್ಲಿನ ಪರಿಸ್ಥಿತಿ ಅಯೋಮಯ! ಸಿಟಿ ಮಾರುಕಟ್ಟೆಯಲ್ಲಿ ಜನ ತಮ್ಮ ಪಾಡಿಗೆ ತಾವು ಏನೋ ಕೆಲಸಕ್ಕೆ ಅಂತ ಓಡಾಡ್ತಾ ಇರ್ತಾರೆ. ಇದ್ದಕ್ಕಿದ್ದ ಹಾಗೆ 'ಢಮಾರ್' ಅನ್ನೋ ಸದ್ದು ಕೇಳುತ್ತದೆ. ಅಲ್ಲಿನ ಸೀನ್ ಬದಲಾಗಿ ಹೋಗುತ್ತದೆ. ಸದ್ಯಕ್ಕೆ ಇದನ್ನು ದಾಂಧಲೆ ಅಂತ ಅರ್ಥೈಸಿಕೊಳ್ಳಿ.

ಇದೂ ಒಂದು ವಿಷಯವೇ? ಇಂಥಾ ದಾಂಧಲೆ ನಾವು ದಿನನಿತ್ಯ ನೋಡುತ್ತೇವೆ. ಯಾವುದೋ ಒಂದು ಪಕ್ಷದ ಅಥವಾ ಧರ್ಮದ procession ಹೋಗುತ್ತಾ ಇರುತ್ತದೆ. ಅವರ ವೈರಿಗಳೋ ಅಥವಾ ಮತ್ತಿನ್ಯಾವುದೋ ಧರ್ಮದವರು ಅವರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಅಲ್ಲಿಗೆ ಶುರು ದಾಂಧಲೆ. ಎಲ್ಲೆಲ್ಲೂ ಕಲ್ಲೆಸೆತ, ಅಂಗಡಿ-ಮುಂಗಟ್ಟು ಸ್ಥಗಿತ. ಬಸ್ಸಿಗೆ ಬೆಂಕಿ. ಬೀದಿ ದೀಪಕ್ಕೆ ಕಲ್ಲು ಹೀಗೆ ಸಾಗುತ್ತದೆ ಸಾರ್ವಜನಿಕ ಆಸ್ತಿಯ ಹಾನಿ.

ಮಾತನಾಡೋದು ಒಂದು ಕಲೆ, ಆದರೆ ಕೆಲವರಿಗೆ ಅದೇ ಕಪ್ಪುಕಲೆ!

ಅಂದರೆ ದಾಂಧಲೆಯಿಂದ ಒಳಿತೇನೋ ಇಲ್ಲ ಅಂತೀರಾ? ನೋಡೋಣ ಬನ್ನಿ.

ಸೀತಾದೇವಿಯನ್ನು ಹುಡುಕಿಕೊಂಡು ಬಂದ ಹನುಮಂತ, ಆಕೆಯನ್ನು ಅಶೋಕವನದಲ್ಲಿ ಕಾಣುತ್ತಾನೆ. ಅಲ್ಲಿ ಮಾತೆಯೊಂದಿಗೆ ಮಾತುಕತೆಯಾದ ಮೇಲೆ ತನಗೆ ಹಸಿವಾಗುತ್ತಿದೆ ಎಂದು ಅರಿವಾಗುತ್ತದೆ. ತಾಯಿಯ ಅನುಮತಿ ಕೋರಿದ ನಂತರ ಅಶೋಕವನದಲ್ಲಿ ಆಗಿದ್ದೇ ದಾಂಧಲೆ. ಆಂಜನೇಯನನ್ನು ನಿಯಂತ್ರಿಸಲು ಬಂದ ರಾವಣನ ಮಗ ಅಂತ್ಯ ಕಾಣುತ್ತಾನೆ. ನಂತರ ಬಂದ ಇಂದ್ರಜಿತ್ ಬಳಸಿದ ಬ್ರಹ್ಮಾಸ್ತ್ರದಿಂದಾಗಿ ಆಂಜನೇಯ ಬಂಧಿತನಾಗುತ್ತಾನೆ. ಈ ದಾಂಧಲೆಯಿಂದ ಆಗಿದ್ದೇನು? ಮೊದಲಿಗೆ ರಾವಣನಿಗೆ ಪುತ್ರವಿಯೋಗದ ಬಹುಮಾನ. ಅರ್ಥಾತ್ ಎಚ್ಚರಿಕೆ ಗಂಟೆ. ವೀರ ಹನುಮಾನ್ ಅತೀ ಶಕ್ತಿವಂತನಾದರೂ ಬ್ರಹ್ಮಾಸ್ತ್ರದ ಬ್ರಹ್ಮನಿಗೆ ಶಿರಾಬಾಗುವಂಥಾ ವಿನಯವಂತ. ಇದರ ಜೊತೆ ಆದ ಮತ್ತೊಂದು ವಿಷಯ ಎಂದರೆ ಇಂದ್ರಜಿತ್'ನ ಪರಾಕ್ರಮದ ಪರಿಚಯ. ದಾಂಧಲೆಯಿಂದ ಹಲವಾರು ಉಪಯೋಗಗಳು ಇವೆ.

ಜೀವನವೇ ಒಂದು ಬೀಳುಏಳಿನ ಸಂತೆ, ನಿಮಗಿದೆಯೇ ಅದರ ಚಿಂತೆ?

ಶರಪಂಜರ ಸಿನಿಮಾದಲ್ಲಿ ಒಂದು ಸನ್ನಿವೇಶವಿದೆ. ಕಾವೇರಿಯ ತಂದೆ ಪಾತ್ರಧಾರಿ ಅಶ್ವಥ್ ಹೊರಗಿನಿಂದ ಬಂದವರೇ ಕಾವೇರಿಯನ್ನು ಕೂಗಿ ಕರೆದು ಸ್ನೇಹಿತಳ ಮದುವೆಗೆ ಹೋಗಿದ್ದಾಗ ಏನಾಯ್ತು ಎಂದು ಅಬ್ಬರಿಸುತ್ತಾರೆ. ಅಪ್ಪನ ಅಬ್ಬರಕ್ಕೆ ಬೆದರಿ ಕಾವೇರಿ ಅಲ್ಲೊಬ್ಬ ಹುಡುಗನನ್ನು ನೋಡಿದೆ ಎನ್ನುತ್ತಾಳೆ. ಹೀಗೆ ಮುಂದುವರೆದು ಕಡೆಗೆ, ಅಶ್ವಥ್ ತಮ್ಮ ಹೆಂಡತಿಯೊಡನೆ ಆರಾಮವಾಗಿ ಹೇಳುತ್ತಾರೆ "ಆ ಹುಡುಗ ನಮ್ಮ ಕಾವೇರಿಯನ್ನು ಮೆಚ್ಚಿದ್ದಾನಂತೆ. ಮದುವೆಯಾಗುತ್ತಾನಂತೆ" ಅಂತ. ಹೆಂಡತಿಗೆ ಅಚ್ಚರಿಯಾಗಿ 'ಮತ್ತೆ ಈ ಪರಿ ದಾಂಧಲೆ ಮಾಡೋದೇನಿತ್ತು? ಅಂತ. ಒಂದು ಮದುವೆ ಎಂದರೆ ದಾಂಧಲೆ ಇದ್ದರೇನೆ ಕಳೆ ಎಂಬರ್ಥದಲ್ಲಿ ಸಂತಸ ವ್ಯಕ್ತಪಡಿಸುತ್ತಾರೆ ಅಶ್ವಥ್. ಸುಮ್ಮನೆ ದಾಂಧಲೆ ಎಬ್ಬಿಸಿ ಕೊನೆಗೆ ಮದುವೆ ಎಂಬ ಮಂಗಳಕಾರ್ಯದಲ್ಲಿ ಕೊನೆಯಾಗುತ್ತದೆ.

ಈ ದಾಂಧಲೆ ಎಬ್ಬಿಸುವವರನ್ನು ಆಂಗ್ಲದಲ್ಲಿ crashers ಎನ್ನುತ್ತಾರೆ. ಈ crashers ಎಂದರೆ ಯಾರು, ಇವರು ಮಾಡೋ ದಾಂಧಲೆಯಾದರೂ ಏನು ಅಂತ ನೋಡೋಣ.

ಗೇಟ್ crashers ಎಂದರೆ ಗೇಟು ಬಡಿದು ನುಗ್ಗುವವರು. ಒಬ್ಬರಿಗೆ ಒಂದೆಡೆಗೆ ಹೋಗುವಾಗ ಆಮಂತ್ರಣ ಅಥವಾ ಅನುಮತಿ ಇರಬೇಕಾಗುತ್ತದೆ. ಹಾಗೆ ಇಲ್ಲದೇ ಅನುಮತಿ ಮೀರಿ ಹೋಗುವವರನ್ನು ಗೇಟ್ crashers ಎನ್ನುತ್ತಾರೆ. ನವೆಂಬರ್ 2009'ರಲ್ಲಿ ಒಬಾಮ ಮತ್ತು ಮನಮೋಹನ್ ಸಿಂಗ್ ಅವರ ಒಂದು ಸ್ಟೇಟ್ dinner ಪಾರ್ಟಿಯಲ್ಲಿ ಗೇಟ್ crashers ಆಗಿ ನುಗ್ಗಿದವರು ಸಲಾಹೀ ದಂಪತಿಗಳು. ಇಂಥಾ ದೊಡ್ಡ ಪಾರ್ಟಿಯಲ್ಲಿ ಅನುಮತಿಯಿಲ್ಲದೆ ಇವರುಗಳು ಒಳಗೆ ಬಂದಿದ್ದಾದರೂ ಹೇಗೆ, ಬಿಟ್ಟವರಾರು ಎಂಬೆಲ್ಲಾ ವಿಪರೀತ ಚರ್ಚೆಗಳಾದವು.

Wedding crashers ಬಗ್ಗೆ ಕೇಳಿಯೇ ಇರುತ್ತೀರಾ. ಸಾಮಾನ್ಯವಾಗಿ ಮದುವೆ ಛತ್ರ ಎಂಬೋದೇ ಒಂದು ಧರ್ಮ ಛತ್ರ ಇದ್ದಂತೆ. ಗಂಡಿನ ಕಡೆಯವರು ಎಂದು ಹೇಳಿಕೊಂಡು ಛತ್ರಕ್ಕೆ ನುಗ್ಗಿ ಉಂಡು ಹೋದ ಎಷ್ಟೋ ಕೇಸ್'ಗಳನ್ನೂ ನೀವೂ ನಾವೂ ಕೇಳಿಯೇ ಇರುತ್ತೇವೆ. ಕೆಲವೊಮ್ಮೆ ಈ ವಿಷಯದಲ್ಲಿ ಗಲಾಟೆಯಾಗಿದ್ದೂ ಇದೆ. "ಊರಿನವರಿಗೆಲ್ಲಾ ಊಟ ಹಾಕ್ತಾರೆ, ಹೊಟ್ಟೆ ತುಂಬಿರೋವ್ರಿಗೆ ಊಟ ಹಾಕ್ತಾರೆ ಪಾಪ ಯಾರೋ ಗತಿಯಿಲ್ಲದೆ ಬಂದವರಿಗೆ ಊಟ ಹಾಕೋದಕ್ಕೆ ಒದ್ದಾಡ್ತಾರೆ" ಅಂತ ಹೆಣ್ಣಿನ ಕಡೆಯವರನ್ನು ತುಚ್ಛವಾಗಿ ಕಾಣುವ ಮಂದಿಯೂ ಇದ್ದಾರೆ. ದಾಂಧಲೆ ಆದಾಗ ಮಾತ್ರ ಈ ವಿಷಯ ಎದ್ದು ಕಾಣುತ್ತೆ ಇಲ್ಲ ಎಂದರೆ ಇಲ್ಲ.

ಇಷ್ಟಕ್ಕೂ ಈ wedding crashers ಯಾರು?

ಮದುವೆಗೆ ಆಮಂತ್ರಣ ಇಲ್ಲದವರು, ಬಿಟ್ಟೀ ಊಟ ಸಿಗಬಹುದು ಎಂದೋ, ವಧೂವರರ ಉಡುಗೊರೆ ಕದಿಯಲು ಬಂದವರು, ಯಾರೋ ಸೆಲೆಬ್ರಿಟಿ ಬಂದಿದ್ದಾರೆ ಅಂತ ಅವರನ್ನು ಕಾಣಲು ಬಂದವರು ಹೀಗೆ ಈ wedding crashers ಯಾರು ಬೇಕಾದರೂ ಆಗಬಹುದು.

ಮದುವೆಯ ಹೆಣ್ಣಿನ ಮಾಜಿ ಪ್ರಿಯಕರ, ಮದುವೆಯ ಗಂಡಿನ ಮೋಸವನ್ನು ಬಯಲು ಮಾಡಲು ಬಂದವರು, ಯಾವುದೋ ಹಳೆಯ ಸೇಡನ್ನು ತೀರಿಸಿಕೊಳ್ಳಲು ಮದುವೆಯನ್ನು ನಿಲ್ಲಿಸಲು ಬಂದವರು ಎಂಬೆಲ್ಲಾ ರೀತಿಯ crashers ಒಂದೆಡೆಯಾದರೆ ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ನಿಲ್ಲಿಸುವ ಗಂಡಿನ ಕಡೆಯವರು, ತಮ್ಮನ್ನು ಸರಿಯಾಗಿ ಉಪಚಾರ ಮಾಡಲಿಲ್ಲ ಎಂದು ಕಿರಿಕ್ ಮಾಡುವ ಗಂಡಿನ ಕಡೆಯವರುಗಳು ಮತ್ತೊಂದು ವರ್ಗ.

ಹೀಗೊಬ್ಬರ ಕಥೆ. ಮೊದಲ ಹೆಂಡತಿ ತೀರಿಕೊಂಡ ಮೇಲೆ ಎರಡನೆಯ ಮದುವೆಯನ್ನು ಮಾಡಿಕೊಂಡಿದ್ದರು. ಮದುವೆಯಾಗಿ ಬಂದ ಮೇಲೆ ಆ ಎರಡನೆಯವರು ಮೊದಲ ಹೆಂಡತಿಯ ಇಬ್ಬರು ಮಕ್ಕಳನ್ನು ನೋಡಿಕೊಂಡಿದ್ದು ಅಷ್ಟಕ್ಕಷ್ಟೇ. ಮನೆಯ ಯಜಮಾನ ಪಾಪ ತೀರಿಕೊಂಡಾಗ ಎರಡನೆಯ ಹೆಂಡತಿಯು ಕೊನೆಯ ದಿನದ ಕಲಾಪಕ್ಕೆ ಜನರನ್ನು ಕರೆದಿದ್ದರು. ಉಂಡ ಮೇಲೆ ತಮ್ಮ ಮನೆಗೆ ಹೊರಟವರ್ಯಾರೋ 'ಇನ್ನು ಮುಂದಾದರೂ ಈ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ಪುಸ್ ಎಂದಾಗ ದಾಂಧಲೆ ಶುರುವಾಯ್ತು. ಇವರು ತಿಥಿ crashers. ಒಂದು ಸಂಸಾರದಲ್ಲಿ ಇಂಥಾ ದಾಂಧಲೆಗಳು ಬೀದಿಗಳಲ್ಲಿ ನಡೆವ ದಾಂಧಲೆಗಳಿಗಿಂತಾ ದೊಡ್ಡದು.

ದಾಂಧಲೆ ಎಂದ ಮಾತ್ರಕ್ಕೆ ಕಲ್ಲು ತೂರೋದು ಅಂತಲೇ ಅಲ್ಲ. soft ದಾಂಧಲೆಗಳು, ಶೀತಲಯುದ್ಧಗಳು ಇತ್ಯಾದಿಯೂ ಆಗಬಹುದು. ದಿನನಿತ್ಯದ ದಾಂಧಲೆ ನಿಮಗೆಲ್ಲಾ ಅರಿವಿದ್ದೇ ಇದೆ.

ಕಸದ ಲಾರಿ ನಿಮ್ಮ ಮನೆಯ ಕಸ ಬಿಟ್ಟು ಮಿಕ್ಕೆಲ್ಲ ಹೂತ್ತೊಯ್ದಿರುತ್ತಾನೆ ಎಂದಾಗ ಮಾನಸಿಕವಾಗಿ ಹಿಂಸೆಯಾಗುತ್ತದೆ. ಅಲ್ಲಿಯ ತನಕ ನೆಮ್ಮದಿಯಾಗಿದ್ದ ಮನಕ್ಕೆ ಅಶಾಂತಿ ಆವರಿಸುತ್ತದೆ. ಏನೋ ಅನಾರೋಗ್ಯ ಎಂದು ವೈದ್ಯರ ಬಳಿ ಹೋದಾಗ ಯಾವುದೋ ದೊಡ್ಡ ಖಾಯಿಲೆ ಇದೆ ಎಂದಾಗ ಮನಸ್ಸು ಹೃದಯ ರಾಡಿಯಾಗುತ್ತದೆ. ಇದೇನೂ ಕಡಿಮೆ ದಾಂಧಲೆಯಲ್ಲ.

ಅಂತರಂಗದಲ್ಲಾಗುವ ಎಷ್ಟೋ ದಾಂಧಲೆಗಳಿಗೆ ನಮಗೆ ಉತ್ತರವಿಲ್ಲ. ಅನುಭವಿಸುವುದಷ್ಟೇ ಕೊನೆಗೆ ಉಳಿಯುವ ದಾರಿ ಎಂದಾದ ಮೇಲೆ, ಬೇರೆಲ್ಲೋ ನಡೆವ, ನಮಗೆ ಸಂಬಂಧವೇ ಇಲ್ಲದ ದಾಂಧಲೆಗಳಿಗೆ ತಲೆಕೊಟ್ಟು ನಮ್ಮ ನೆಮ್ಮದಿ ನಾವೇ ಹಾಳುಮಾಡಿಕೊಳ್ಳೋದ್ಯಾಕೆ? ಒಮ್ಮೆ ಯೋಚಿಸಿ!

English summary
We can see variety of crashers in our life. Wedding crashers, party crashers, gate crashers. Though they create tension when they crash, there are several advantages also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more