ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಮೊದಲ ರಾತ್ರಿಗಳ ಬಗ್ಗೆ ಒಂದಷ್ಟು ಮಾತುಗಳು

By ಶ್ರೀನಾಥ್ ಭಲ್ಲೆ
|
Google Oneindia Kannada News

ಯಪ್ಪಾ! ಇದೇನು ಇಂದಿನ ಬರಹ ಹಿಂಗೇ! ಎಲ್ಲಾ ಆರಾಮ ತಾನೇ? ಅಥವಾ ಬರಹದ ಟ್ರ್ಯಾಕ್ ಬದಲಿಸಿಬಿಟ್ರಾ? ಅಂತೆಲ್ಲಾ ಪ್ರಶ್ನೆಗಳು ಎದ್ದಿದ್ದರೆ ಬಹಳ ಖುಷಿಯಾಗುತ್ತೆ ನೋಡಿ. ಜೀವನದಲ್ಲಿ ಎಷ್ಟೋ ರೀತಿಯ ರಾತ್ರಿಗಳಲ್ಲಿ ಮೊದಲ ರಾತ್ರಿಯ ಅನುಭವಗಳು ಅತೀ ವಿಶಿಷ್ಟ ಎನ್ನುತ್ತೇನೆ. ನೀವೂ ನಿಮ್ಮ ಅನುಭವ ಹಂಚಿಕೊಳ್ಳಿ ಅಂತ ಸದ್ಯಕ್ಕೆ ಕೇಳುವುದಿಲ್ಲ, ಬರಹದ ಕೊನೆಯಲ್ಲಿ ನೋಡೋಣ ಬಿಡಿ.

ಶುದ್ಧ ಭಾನುವಾರ ಬೆಳಿಗ್ಗೆ ಸಮಾನ ವಯಸ್ಕರ ವಿಭಿನ್ನ ಮನಸ್ಕರ ಅಲ್ಲಲ್ಲಾ, ಸಾರೀ ಸಮಾನ ಮನಸ್ಕರ ವಿಭಿನ್ನ ವಯಸ್ಕರ ಗುಂಪಿನಲ್ಲಿ ಹರಟೆ ಹೊಡೆಯುವಾಗ ಈ ವಿಷಯ ಬಂತು. ವಿಭಿನ್ನ ವಯಸ್ಕರ ಗುಂಪಿನಲ್ಲಿ ಈ ವಿಷಯ ಬಂದಿದ್ದು ಮಡಿವಂತಿಕೆ ಅಲ್ಲ ಎಂದಿರಾ? ವಿಷಯ ಪೂರ್ತಿ ಕೇಳಿ, ಹೇಳ್ತೀನಿ. ಶುರು ಮಾಡಿದ್ದು ನಾನೇ, ಸಪ್ತಸಾಗರ ದಾಟಿದವರು ಮಡಿಗೆ ಯೋಗ್ಯವಲ್ಲ ಅಂತಾರೆ. ಹಾಗಾಗಿ ಮಡಿ ಪಂಗಡಕ್ಕೆ ನಾನು ಸೇರೋದಿಲ್ಲ. ಹೋಗ್ಲಿ ಬಿಡಪ್ಪಾ, ಕನಿಷ್ಠ ನಾಚಿಕೆಯಾದರೂ ಬೇಡವೇ ಎಂದಿರಾ? ಕ್ಷಮೆ ಇರಲಿ, ಅವೆಲ್ಲಾ ನಮ್ಮಲ್ಲಿಲ್ಲ. ಜೊತೆಗೆ ಅಲ್ಲಿರುವವರೆಲ್ಲಾ ದೊಡ್ಡವರು, ಅರ್ಥಾತ್ ಜ್ಞಾನ ವೃದ್ಧರು.

ನಾನು ಗ್ಯಾರಂಟಿ first night ಬರ್ತೀನಿ ಕಣೋ

ಬಹಳ ಹಿಂದೆ ನಡೆದ ಒಂದು ವಿಷಯದಿಂದ ಆರಂಭಿಸುವಾ. ನನ್ನ ಸ್ನೇಹಿತನೊಬ್ಬನ ಮದುವೆಯು ಡಿಸೆಂಬರ್ ಎರಡನೆಯ ತಾರೀಖು ಇತ್ತು. ಮದುವೆಗೆಂದು ಬಂದೇ ಬರ್ತೀನಿ ಅಂತ ದೂರದ ಊರಿನಲ್ಲಿದ್ದ ಸ್ನೇಹಿತ ವಾಗ್ದಾನ ಮಾಡಿದ್ದ. ಅವನಿಗೆ ಮತ್ತೊಮ್ಮೆ ಕರೆ ಮಾಡಿ ನೆನಪಿಸಲು ಹೋದಾಗ ಇವನು "ನಾನು ಗ್ಯಾರಂಟಿ first night ಬರ್ತೀನಿ ಕಣೋ. I promise' ಅಂದ. ಅದಕ್ಕಿವನು "ನೋಡು ಗುರೂ, ನೀನು ಡಿಸೆಂಬರ್ ಒಂದನೆಯ ತಾರೀಖು ಬರೋದಿದ್ದರೆ ಬಾ, ಆದರೆ first nightಗೆ ನನ್ನ ಜೊತೆ ಇರಬೇಡಾ' ಅಂದಿದ್ದ. ಇಬ್ಬರದ್ದೂ ಹಾಸ್ಯಪ್ರವೃತ್ತಿಯ ಮನಸ್ಸು, ಹಾಗಾಗಿ ಇಂದಿಗೂ ಈ ಹಾಸ್ಯ ನಮ್ಮಲ್ಲಿ ಓಡಾಡುತ್ತಿದೆ.

Srinath Bhalle Column: A Talk About The First Nights

ಒಬ್ಬರ ಜೀವನದಲ್ಲಿ ಎಷ್ಟು ಮೊದಲ ರಾತ್ರಿಗಳು

ಒಬ್ಬರ ಜೀವನದಲ್ಲಿ ಎಷ್ಟು ಮೊದಲ ರಾತ್ರಿಗಳು ಬರಬಹುದು ಎಂಬುದನ್ನು ಸೂಕ್ಷ್ಮವಾಗಿ ಆಲೋಚಿಸಿದಾಗ ಈ ಬರಹಕ್ಕೆ ಬಹುಶಃ ಟ್ವಿಸ್ಟ್ ಸಿಗಬಹುದು. ಕೂಸು ಹುಟ್ಟುವ ತನಕ ಆ ತಾಯಿಗರ್ಭದಲ್ಲಿ ಬೆಚ್ಚಗೆ ಬೆಳೆಯುತ್ತಾ ಸಾಗಿರುತ್ತದೆ. ಒಂದು ಶುಭದಿನ ಈ ಜಗತ್ತಿಗೆ ಕಾಲಿಟ್ಟ ಮೇಲೆ ಕೂಸು ಮಲಗಿದ ಮೊದಲ ರಾತ್ರಿಯೇ ಆ ಕೂಸಿನ ಮೊದಲ ರಾತ್ರಿ ಅಲ್ಲವೇ? ಅದೇ ರಾತ್ರಿಯೂ, ಮೊದಲ ಕೂಸನ್ನು ಹೆತ್ತ ಒಬ್ಬ ಹೆಣ್ಣು ತಾನು ತಾಯಿಯಾಗಿ ಮಲಗುವ ಮೊದಲ ರಾತ್ರಿ ಅಲ್ಲವೇ? ಇದೇ ಸೌಭಾಗ್ಯವೂ ಒಬ್ಬ ತಂದೆಯದ್ದೂ ಆಗಿರುತ್ತದೆ. ತಾ ತಂದೆಯಾಗಿ ಮಲಗುವ ಆ ರಾತ್ರಿ ಆತನ ಮೊದಲ ರಾತ್ರಿಯೂ ಹೌದು. ಒಂದು ಹುಟ್ಟಿನಿಂದಲೇ ಆ ಮೊದಲ ರಾತ್ರಿಯೂ ಅಡಿಯಿಟ್ಟಿರುತ್ತದೆ.

ಒಂದು ಸಾವಿನಲ್ಲೂ ಮೊದಲ ರಾತ್ರಿ ಇದೆ

ಇದು ಹುಟ್ಟು ಸರಿ, ಅದರಂತೆಯೇ ಒಂದು ಸಾವಿನಲ್ಲೂ ಮೊದಲ ರಾತ್ರಿ ಇದೆ ಎಂದರೆ ಅಚ್ಚರಿಯೇನಿಲ್ಲ. ಹಲವಾರು ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿರುವ ಸನ್ನಿವೇಶ ತೆಗೆದುಕೊಳ್ಳಿ. ಈ ಸನ್ನಿವೇಶ ನಮ್ಮ ಮನೆಗಳಲ್ಲೂ ನೋಡಿದ್ದೇನೆ. ಗಂಡ ಅಥವಾ ಹೆಂಡತಿ ಇಹಲೋಕ ತ್ಯಜಿಸಿದ ಮೇಲೆ, ಉಳಿದಿರುವ ಆ ವ್ಯಕ್ತಿ ಮಲಗುವ ಮೊದಲ ರಾತ್ರಿಯಷ್ಟು ರೌರವ ಇನ್ನೊಂದಿರಲಿಕ್ಕಿಲ್ಲ. ಈವರೆಗೆ ತನ್ನೊಂದಿಗೆ ಬಾಳಿ ಬದುಕಿದ ಆ ಮತ್ತೊಬ್ಬ ವ್ಯಕ್ತಿ ಇನ್ನಿಲ್ಲ ಎಂಬ ಅನಿಸಿಕೆಯೇ ಒಂದು ಭೀತಿ ಮೂಡಿಸುತ್ತದೆ. ಈ ಭೀತಿ ಎಂಬುದು ಹಲವಾರು ಕಾರಣಗಳಿಂದಾಗಿ ಆಗಬಹುದು.

ಮೊದಲ ರಾತ್ರಿಯ ಸನ್ನಿವೇಶ ಮಾತ್ರ ಹಾಸ್ಯಮಯ

ಒಂದು ದಿನಕ್ಕೂ ಒಂದು ಲೋಟ ಕಾಫಿ ಮಾಡಿಕೊಂಡಿಲ್ಲ, ಈಗ ನನ್ನ ಗತಿ ಮುಂದೇನು ಎಂಬ ಚಿಂತೆಯೂ ಆಗಬಹುದು. ಹೊರಗಿನ ವ್ಯಾವಹಾರಿಕ ಜಗತ್ತಿನ ಅರಿವೇ ಇಲ್ಲದ ನನಗೆ ಮುಂದಿನ ಜೀವನ ಹೇಗೆ ಎಂದೂ ಆಗಬಹುದು. ಇದರ ಮುಂದಿನ ಸನ್ನಿವೇಶ ತೆಗೆದುಕೊಂಡರೆ ಮಕ್ಕಳು. ಯಾರ ಆರೋಗ್ಯ ಹೇಗೋ ಏನೋ, ಯಾರ ಜವಾಬ್ದಾರಿ ಹೇಗೋ ಏನೋ, ಹಣಕಾಸಿನ ಪರಿಸ್ಥಿತಿ ಹೇಗೋ ಏನೋ, ಇತ್ಯಾದಿಗಳ ಭೀತಿಯಿಂದಾಗಿ ಆ ಮೊದಲ ರಾತ್ರಿ ರೌರವ ಎಂದಿದ್ದು. ದಿನಗಳೆದಂತೆ ಅದಕ್ಕೆ ಅಭ್ಯಾಸವಾಗಬಹುದು ಆದರೆ ಅದು ಬೇರೆ ವಿಷಯ ಏಕೆಂದರೆ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದುದು ಅನಿವಾರ್ಯತೆ.

ಸ್ವಲ್ಪ ಬರಹ ಸೀರಿಯಸ್ ಆಯ್ತು ಅನ್ನಿಸುತ್ತೆ, ಹಾಗಾಗಿ ಟಾಪಿಕ್ ಬದಲಿಸೋಣ. ರಾಮಾಚಾರಿ ಸಿನಿಮಾ ಇರಬೇಕು ಅನ್ನಿಸುತ್ತೆ. ಮೈಸೂರು ಲೋಕೇಶ್ ಅವರದ್ದು ಇರುಳುಗಣ್ಣಿನಿಂದ ಬಳಲುವ ಪಾತ್ರ. ಇಲ್ಲಿ ಖಾಯಿಲೆಯ ವಿಷಯ ಹೇಳೋದು ಬೇಡ. ಆದರೆ ಅವರ ಮೇಲೆ ಚಿತ್ರಿತವಾಗಿರುವ ಮೊದಲ ರಾತ್ರಿಯ ಸನ್ನಿವೇಶ ಮಾತ್ರ ಹಾಸ್ಯಮಯ. "ಆ ಒಂದು, ಆ ಎರಡು, ಆ ಮೂರು' ಎಂದು ಹೇಳುವ ಅವರ ಡೈಲಾಗ್ ಕೇಳೋದೇ ಮಜಾ.

"ಲವ್ ಮಾಡಿ ನೋಡು' ಚಿತ್ರ ನೆನಪಿದೆಯೇ?

ಕಾಶೀನಾಥರು "ಮಂಗಳೂರು ಮಂಜುನಾಥ' ಪಾತ್ರಧಾರಿಯಾಗಿ ಅಭಿನಯಿಸಿರುವ "ಲವ್ ಮಾಡಿ ನೋಡು' ಚಿತ್ರ ನೆನಪಿದೆಯೇ? ಅದರಲ್ಲಿ ನಾಯಕಿ ಶ್ರೀಲತಾ, ನಾಯಕ ಶ್ರೀಧರ ಅವರನ್ನು ಮದುವೆಯಾಗುತ್ತಾರೆ. ಆದರೆ ಮದುವೆಯಾದ ಮೊದಲ ರಾತ್ರಿಯಂದೇ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಆಮೇಲೇನಾಯ್ತು ಅನ್ನೋದನ್ನು ನೀವೇ ಸಿನಿಮಾ ನೋಡಿ. ಇನ್ನು ಮಿಲನ ಚಿತ್ರದಲ್ಲಿ ಇನ್ನೊಂದು ರೀತಿ. ಮದುವೆಯಾದ ಮೊದಲ ರಾತ್ರಿ ನಾಯಕಿ ಪಾರ್ವತಿ ನಾಯಕರಾದ ಪುನೀತರಿಗೆ ಎಸೆಯುವ ಪ್ರಶ್ನೆ "ನಿಮಗೆ manners ಇದೆಯಾ?' ಅಂತಲೋ ಏನೋ. ಅರ್ಥಾತ್ ಮದುವೆಗೆ ಮುಂಚೆ ಹೆಣ್ಣನ್ನು ಒಂದು ಮಾತು ಕೇಳಬಾರದಿತ್ತಾ ಎಂಬ ಉದ್ದೇಶ. ಈ ಎರಡೂ ಸಿನಿಮಾಗಳ ಮೊದಲ ರಾತ್ರಿಯು ಮಧುರವಾಗಿ ನಡೆಯದೇ, ಅವರ ಪ್ರಿಯಕರನನ್ನು ಹುಡುಕಿ ಅವನೊಂದಿಗೆ ಮದುವೆ ಮಾಡಿಸುವುದಾಗಿ ಮಾತನ್ನು ನೀಡುವುದರಲ್ಲಿ ಇಬ್ಬರೂ ನಾಯಕರು ಎತ್ತಿದಕೈ.

ಅಮ್ಮನ ಬಲವಂತಕ್ಕೆ ಮದುವೆಯಾದೆ

ಆದರೆ, ಎಲ್ಲ ಸಿನಿಮಾಗಳಲ್ಲೂ ಹೀಗಿಲ್ಲ ಬಿಡಿ. ಯಾವುದೋ ಒಂದು ಸಿನಿಮಾದಲ್ಲಿ ಮೊದಲ ರಾತ್ರಿಯಲ್ಲಿ ನಾಯಕಿ ಗರ್ಭಿಣಿ ಅಂತ ಗೊತ್ತಾಗುತ್ತದೆ. ಇನ್ನೊಂದು ಸಿನಿಮಾದಲ್ಲಿ ಮೊದಲ ರಾತ್ರಿಗೆಂದು ಎಲ್ಲಿಗೋ ಕರೆದೊಯ್ದು ಮಟಾಷ್ ಮಾಡಿಬಿಡೋದೆ? ಈ ಸಿನಿಮಾಗಳ ಬಗ್ಗೆ ಮಾತು ಬೇಡಾ ಬಿಡಿ. ಹಾಗಾಗಿ ಸೀದಾ ಟಿವಿ ಧಾರಾವಾಹಿ ಜಗತ್ತಿಗೆ ಬರೋಣ. ಮದುವೆಯಾದ ಮೊದಲ ರಾತ್ರಿ ಆ ಗಂಡು ಹಾಸಿಗೆಯ ಮೇಲೆ ಸಿಂಗರಿಸಿಕೊಂಡು ಕುಳಿತ ಹೆಂಡತಿಗೆ ಹೇಳುತ್ತಾನೆ "ಅಮ್ಮನ ಬಲವಂತಕ್ಕೆ ಮದುವೆಯಾದೆ. ಆದರೆ ನನ್ನ ಜೀವನದಲ್ಲಿ ಬೇರೆ ಯಾರೋ ಇದ್ದಾರೆ. ನೀನು ಇಲ್ಲಿರಬಹುದು ಅಥವಾ ಎಲ್ಲಿಗೆ ಬೇಕಾದರೂ ಹೋಗಬಹುದು' ಎಂಬ ಧೀಮಂತ ನುಡಿಗಳನ್ನು ಆಡುತ್ತಾನೆ.

ಮದುವೆಯಾದ ಮೇಲಿನ ಮೊದಲ ರಾತ್ರಿಯ ವಿಷಯ

ಮದುವೆಯಾದ ಮೇಲಿನ ಮೊದಲ ರಾತ್ರಿಯ ವಿಷಯವನ್ನು ಕೊಂಚ ಬದಿಗಿರಿಸಿ, ಮದುವೆಯಾಗಿ ಅತ್ತೆಯ ಮನೆಗೆ ಕಾಲಿಟ್ಟ ಹೆಣ್ಣಿನ ಆ ಮೊದಲ ರಾತ್ರಿಯ ಮನಸ್ಥಿತಿ ಹೇಗಿರಬಹುದು? ಹುಟ್ಟಿದಂದಿನಿಂದ ಮನೆಯ ಜನರೊಡನೆ ಇದ್ದು ಇನ್ನೆಲ್ಲಿಗೋ ಬಂದು ನೆಲೆಸುವ ಮನಸ್ಥಿತಿ ಹೇಗಿರುತ್ತದೆ ಎಂದು ಅರ್ಥೈಸಿಕೊಳ್ಳಬಹುದು. ಕೆಲವರಿಗೆ ರಾತ್ರಿ ಮಲಗಬೇಕು ಎಂದರೆ ಅವರದ್ದೇ ಹಾಸಿಗೆ, ದಿಂಬು, ಹೊದಿಕೆ ಎಂದೆಲ್ಲಾ ಇದ್ದರೆ ಮಾತ್ರ ನಿದ್ರೆ ಬರೋದು, ಇಲ್ದಿದ್ರೆ ನಿದ್ರೆಯೇ ಸುಳಿಯೋದಿಲ್ಲ. ಇಂಥಾ ಸೂಕ್ಷ್ಮಗಳು ಹೇಳಲುಬಾರದು ಆದರೆ ಅನುಭವಿಸೋದು ಕಷ್ಟ ನೋಡಿ.

ಈಗ ಇಂಥದ್ದೇ ಸನ್ನಿವೇಶದ ಮುಂದಿನ ಭಾಗ ತೆಗೆದುಕೊಳ್ಳಿ. ತನ್ನದೇ ರೂಮಿನಲ್ಲಿ ರಾಜಕುಮಾರಿಯಂತೆ ಮಲಗಿರುತ್ತಿದ್ದ ಆ ಹೆಣ್ಣು ಮದುವೆಯಾದ ಮೊದಲ ರಾತ್ರಿಯಲ್ಲೇ ತನ್ನ ಗಂಡ ಗೊರಕೆ ಪಾರ್ಟಿ ಅಂತ ಗೊತ್ತಾದಾಗ ಹೇಗಿರಬಹುದು ಸನ್ನಿವೇಶ? ಈ ಸನ್ನಿವೇಶವನ್ನು ಸಿನಿಮೀಯವಾಗಿ ಊಹಿಸಿಕೊಳ್ಳಬೇಕಾದರೆ ಕವಿರತ್ನ ಕಾಳಿದಾಸ ಸಿನಿಮಾದ ಜಯಪ್ರದಾ ಮತ್ತು ರಾಜ್ ಅವರ ಮೊದಲ ರಾತ್ರಿಯ ಸನ್ನಿವೇಶ ನೆನಪಿಸಿಕೊಳ್ಳಿ.

ಮೊದಲ ರಾತ್ರಿಯ ನಂತರದ ಹಗಲು ಸಖತ್ ರೇಗಿಸುವುದು

ಸ್ನೇಹಿತರ ವಲಯದಲ್ಲಿ ಮದುವೆಗಳಾದಾಗ ಮೊದಲ ರಾತ್ರಿಯ ನಂತರದ ಹಗಲು ಸಖತ್ ರೇಗಿಸುವುದು ಸರ್ವೇಸಾಮಾನ್ಯ. ಹೀಗೆಯೇ ಸ್ನೇಹಿತನ ಮೊದಲ ರಾತ್ರಿಯ ಅನುಭವ ಕೇಳಲು ನಾವು ಕಾದು ಕುಳಿತಿದ್ದರೆ, ಸಪ್ಪೆ ಮೊರೆ ಸುಂದರ ಬಂದೋನೇ ಹೇಳಿದ "ನಾನು ರೂಮಿನೊಳಗೆ ಹೋಗೋಷ್ಟರಲ್ಲಿ ಅವಳು ಮಲಗೇ ಬಿಟ್ಟಿದ್ಲು ಕಣ್ರೋ. ಪಾಪ ಎಬ್ಬಿಸೋದು ಯಾಕೆ ಅಂತ ನಾನೂ ಸುಮ್ಮನೆ ಮಲಗಿದೆ' ಅನ್ನೋದಾ! ಹೋಗ್ಲಿ ಬಿಡಿ, ಆ ಒಂದು ಅರ್ಥೈಸಿಕೊಳ್ಳುವ ಗುಣವೇ ಇಬ್ಬರ ಪ್ರೀತಿಯೂ ಇಂದಿಗೂ ಅಷ್ಟೇ ಗಾಢವಾಗಿದೆ.

ಈಗ ಇಷ್ಟೆಲ್ಲಾ ಮೊದಲ ರಾತ್ರಿಗಳ ವಿಷಯ ನಾನು ಹೇಳಿದ ಮೇಲೆ ಮತ್ತು ನೀವು ಕೇಳಿದ ಮೇಲೆ, ಧೈರ್ಯವಾಗಿ ಕೇಳುತ್ತೇನೆ, ನಿಮ್ಮ ಮೊದಲ ರಾತ್ರಿಗಳ ಅನುಭವ ಹೇಳುವಿರಾ? ಅಂತ. ಹೇಳ್ತೀರಲ್ಲಾ?

English summary
Srinath Bhalle Column: First nights come many times in everyone's life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X