ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: SB ಅಂದ್ರೆ ಸ್ಕೂಲ್ ಬ್ಯಾಗ್ ಅಂತಾನೂ ಅನ್ನಬಹುದು

|
Google Oneindia Kannada News

SB ಅನ್ನುವುದು ನನ್ನ ಹೆಸರು ಆದರೆ ಜೊತೆಗೆ ನಿಮ್ಮೆಲ್ಲರ ಜೀವನದಲ್ಲಿದ್ದಂತೆ ಅಥವಾ ಇರುವಂತೆ ಸ್ಕೂಲ್ ಬ್ಯಾಗ್ ಕೂಡಾ ಆಗಬಹುದು.
ಸ್ಕೂಲ್ ಬ್ಯಾಗ್ ಎಂಬುದು ಒಂದು ನಿಧಿ ಇದ್ದ ಹಾಗೆ. ಅದು ಕೇವಲ ಪುಸ್ತಕಗಳನ್ನು ಹೊತ್ತು ಸಾಗುವ ಚೀಲವಲ್ಲದೇ ಅದರೊಂದಿಗಿನ ಬಾಂಧವ್ಯ ಹೇಳತೀರದಷ್ಟು. ಈ ನಿಧಿಯ ಬಗ್ಗೆ ಒಂದಷ್ಟು ಮಾತನಾಡುತ್ತಾ, ನನ್ನ ನೆನಪುಗಳನ್ನು ಹಂಚಿಕೊಳ್ಳುತ್ತಾ, ನಿಮ್ಮ ನೆನಪುಗಳನ್ನು ಕೆದಕುವ ಯತ್ನ ಮಾಡುತ್ತೇನೆ. ಎಂಥಾ ನೆನಪುಗಳು ಅಂತೀರಾ? ನರ್ಸರಿ ಓದುವಾಗ ನನಗೆ ಸ್ಕೂಲ್ ಬ್ಯಾಗ್ ಹಿಡಿಯನ್ನು ಕಚ್ಚುವ ಒಂದೊಳ್ಳೆಯ ಅಭ್ಯಾಸವಿತ್ತು. ಟೀಚರ್ ಅದನ್ನು ಬೈದು ಬಿಡಿಸಿದ್ದರು. ನಿಮಗೂ ಈ ಉತ್ತಮ ಹವ್ಯಾಸವಿತ್ತೇ?

ಶಾಲೆಯ ಆರಂಭದಲ್ಲಿ ಸ್ಕೂಲ್ ಬ್ಯಾಗ್ ಖರೀದಿಸುವುದು
ಅಂದಿಗೂ ಇಂದಿಗೂ, ಶಾಲೆಯ ಆರಂಭದಲ್ಲಿ ಸ್ಕೂಲ್ ಬ್ಯಾಗ್ ಖರೀದಿಸುವುದು ಸರ್ವೇ ಸಾಮಾನ್ಯ. ಕೆಲವರು ಅತೀ ಮುತುವರ್ಜಿಯಿಂದ ನೋಡಿಕೊಳ್ಳುತ್ತಾ ಎರಡು ವರ್ಷಕ್ಕೊಮ್ಮೆ ಕೊಳ್ಳಬಹುದು. ಕೆಲವರು ಚೆನ್ನಾಗಿ ನೋಡಿಕೊಂಡು ವರ್ಷಕ್ಕೊಮ್ಮೆ ಕೊಳ್ಳುತ್ತಾರೆ. ಕೆಲವರು ಬಹಳ ಚೆನ್ನಾಗಿ ಕಾಪಾಡಿಕೊಂಡಿರುತ್ತೇನೆ ಎಂದೇ ವಾಗ್ದಾನ ಮಾಡಿದ್ದರೂ, ವರ್ಷಕ್ಕೆರಡು ಬ್ಯಾಗ್ ಕೊಳ್ಳುವಂತೆ ಆಗಿರುತ್ತದೆ. ಇದಕ್ಕೆ ಹಲವಾರು ಕಾರಣಗಳು. ಆ ವಯಸ್ಸಿನಲ್ಲಿ ಮಕ್ಕಳು ಏನನ್ನು ಖರೀದಿಸಿಯಾರು? ಪೋಷಕರೇ ಕೊಡಿಸಬೇಕಲ್ಲವೇ? ಇಷ್ಟಕ್ಕೂ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಏಕೆ?

ಹೆಚ್ಚಿನ ಸಮಯದಲ್ಲಿ ಬಟ್ಟೆಯ ಬ್ಯಾಗ್ ಆಗಿರುತ್ತಿತ್ತು
ಶಾಲೆಯಲ್ಲಿ ಪ್ರತೀ ವಿಷಯಕ್ಕೂ ಒಂದು rough ಪುಸ್ತಕ ಮತ್ತೊಂದು neat ಪುಸ್ತಕ ಅಂತ ಇರುತ್ತಿತ್ತು. ಕೆಲವು ಟೀಚರುಗಳು, ತಮ್ಮ ಸಬ್ಜೆಕ್ಟ್'ಗೆ ಒಂದು ರಫ್ ಮತ್ತು ಒಂದು ನೀಟ್ ತರಲೇಬೇಕು ಎನ್ನುತ್ತಾರೆ. ಕೆಲವರು ರಫ್ ಪುಸ್ತಕ ತನ್ನಿ ಸಾಕು ಎನ್ನಬಹುದು. ಕೆಲವರು ಒಂದು ಪುಸ್ತಕ ಇಟ್ಟುಕೊಳ್ಳಿ ಸಾಕು ಎನ್ನಲೂಬಹುದು. ಕೆಲವರಂತೂ ಒಂದು ರಫ್, ಒಂದು ನೀಟ್ ಮತ್ತು ಪಠ್ಯಪುಸ್ತಕ ಇರಲೇಬೇಕು ಎನ್ನಬಹುದು. ಒಂದೊಂದೂ ಸಬ್ಜೆಕ್ಟ್'ಗೆ ಇಷ್ಟೆಲ್ಲಾ ಇರುವಾಗ ಆ ಬ್ಯಾಗ್ ಎಲ್ಲವನ್ನೂ ಹೊರಲೇಬೇಕು ಅಲ್ಲವೇ?
ಅಂದಿನ ದಿನಗಳಲ್ಲಿ ನಮ್ಮದು ಹೆಚ್ಚಿನ ಸಮಯದಲ್ಲಿ ಬಟ್ಟೆಯ ಬ್ಯಾಗ್ ಆಗಿರುತ್ತಿತ್ತು. ಇಷ್ಟೆಲ್ಲಾ ಪುಸ್ತಕವನ್ನು ಬಟ್ಟೆಯ ಬ್ಯಾಗಿನಲ್ಲಿ ತುಂಬಿಸಿದರೆ, ಅದು ಪಾಪ ಎಷ್ಟು ದಿನ ಅಂತ ತಡೆದೀತು. ಆ ವಿದ್ಯಾಗಣಪತಿಯ ಹೊಟ್ಟೆಯೊಡೆದು ಕಡುಬು ಹೊರಚೆಲ್ಲಿದಂತೆ, ಬಟ್ಟೆಬ್ಯಾಗಿನ ಬುಡ ಹರಿದು ಪುಸ್ತಕ ಹೊರಚೆಲ್ಲಿರಬಹುದು. "ಕತ್ತೆಯ ಮೂಗು ಸೀಳಿದಂತೆ' ಸೀಳಿದ್ದೆಯಲ್ಲೋ ಬ್ಯಾಗನ್ನು ಅಂತ ಬೈಸಿಕೊಂಡ ಮೇಲೆ ಹೊಸಬ್ಯಾಗ್ ದೊರೆಯುತ್ತಿತ್ತು.

Srinath Bhalle Column: SB Means Called School Bag

ಹಳೆಯ ಬ್ಯಾಗ್ ಅನ್ನು ಬಿಸಾಕಲು ಮನಸ್ಸು ಬರುತ್ತಿರಲಿಲ್ಲ
ಪ್ರತೀ ವರ್ಷಾರಂಭಕ್ಕೆ ಹೊಸ ಬ್ಯಾಗ್ ಬಂದ ಮೇಲೆ, ಹಳೆಯ ಬ್ಯಾಗ್ ಅನ್ನು ಬಿಸಾಕಲು ಮನಸ್ಸು ಬರುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಅದರ ಜೊತೆ ಅದೇನೋ ಬಾಂಧವ್ಯ ಬೆಳೆದಿರುತ್ತಲ್ಲಾ? ಹಾಗಾಗಿ, ಇರಲಿ ಬೇಕಾಗುತ್ತೆ ಅಂತ ಇಟ್ಟುಕೊಳ್ಳುತ್ತಿದ್ದುದೇ ಹೆಚ್ಚು. ಒಂದು ಬ್ಯಾಗ್ ಹರಿದು ಮತ್ತೊಂದನ್ನು ಕೊಳ್ಳುವತನಕ, ಹಿಂದಿನ ವರ್ಷದ ಹಳೆಯ ಬ್ಯಾಗ್ ಸಹಾಯಕ್ಕೆ ಬರುತ್ತಿತ್ತು. ಕೆಲವೊಮ್ಮೆ ಮಿಕ್ಕ ದಿನಗಳಿಗೆ ಇದೇ ಖಾಯಂ ಕೂಡಾ ಆಗುತ್ತಿತ್ತು. ಹೊಸ ಬ್ಯಾಗ್ ಬಂದ ಕೂಡಲೇ ಹಳೆಯ ಬ್ಯಾಗಿನಿಂದ ಪುಸ್ತಕಗಳನ್ನು transfer ಮಾಡುವುದೇ ಒಂದು ಸಂಭ್ರಮ. ಹೊಸ ಬ್ಯಾಗ್ ಅನ್ನು ಚೆನ್ನಾಗಿ ಇಟ್ಟುಕೊಳ್ಳುತ್ತೇನೆ, ಇನ್ನೆರಡು ವರ್ಷ ಬೇರೆ ಬ್ಯಾಗ್ ಕೇಳೋದಿಲ್ಲ ಎಂಬ ಹಳೆಯ ವಾಗ್ದಾನವನ್ನೇ ರಿಪೀಟ್ ಮಾಡಿದಾಗ, ಅಪ್ಪ-ಅಮ್ಮ ಏನನ್ನೂ ಹೇಳದೆ ಹೋದರು ಮನಸ್ಸಿನಲ್ಲೇ ನಕ್ಕಿರಬಹುದಾ?
ಮಿಡ್ಲ್ ಸ್ಕೂಲಿನ ಆರಂಭದಲ್ಲಿದ್ದಾಗ, ನನ್ನ ಸಹಪಾಠಿಯೊಬ್ಬ, ಅಲ್ಯೂಮಿನಿಯಂ ಡಬ್ಬದಂತಹ ಸ್ಕೂಲ್ ಬ್ಯಾಗ್ ತರುತ್ತಿದ್ದ. ಅಲ್ಯೂಮಿನಿಯಂ ಡಬ್ಬ ಎಂದ ಮೇಲೆ ಅದು ಚೀಲ ಹೇಗಾದೀತು? ಹಾಗಾಗಿ ಅದನ್ನು ಸ್ಕೂಲ್ ಬಾಕ್ಸ್ ಎನ್ನುವುದೇ ಒಳ್ಳೆಯದು. ಥಳ ಥಳ ಹೊಳೆವ ಆ ಡಬ್ಬ ನೋಡಲೇ ಚೆನ್ನ. ಅದಕ್ಕೊಂದು ಚಿಲುಕ ಇತ್ತು ಎನ್ನುವುದಕ್ಕಿಂತ ಇರಲೇಬೇಕು ಬಿಡಿ, ಇಲ್ದಿದ್ರೆ ಪುಸ್ತಕವೆಲ್ಲ ಹೊರಕ್ಕೆ ಚೆಲ್ಲುವುದಿಲ್ಲವೇ? ಮಧ್ಯಮವರ್ಗದವರಿಗೆ ಕೈಗೆಟುಕದ ಡಬ್ಬವದು. ಮನೆಯಲ್ಲಿ ಇದರ ಪ್ರಸ್ತಾಪವೂ ಮಾಡಿರಲಿಲ್ಲ ಬಿಡಿ. ಅಷ್ಟರ ಮಟ್ಟಿಗೆ ಜವಾಬ್ದಾರಿ ಅಂತೂ ಇತ್ತು.

ಪತ್ರಕರ್ತ ಅಥವಾ ಸಾಹಿತಿಗಳಂತೆ ದೇಹದ ಬದಿಗೆ ಉದ್ದನೆಯ ಚೀಲ
ಆದರೆ ಇನ್ನೊಂದು ಪುಟ್ಟ ಆಸೆಯಂತೂ ಇತ್ತು. ನನಗೆ ಮೊದಲಿಂದಲೂ ಮಿಲಿಟರಿ ಬ್ಯಾಗ್ ಅಂದ್ರೆ ಬಹಳಾ ಇಷ್ಟ. ಅಂದ ಹಾಗೆ ಮಿಲಿಟರಿ ಬ್ಯಾಗ್ ಅಂದ್ರೆ ಗೊತ್ತಲ್ವಾ? ಖಾಕಿ ಕಲರಿನ ಆಯತಾಕಾರದ ಚೀಲ ಬೆನ್ನಿಗೆ ಹಾಕಿಕೊಳ್ಳುವ ಚೀಲಕ್ಕೆ ಎರಡೂ ಬದಿಯಲ್ಲಿ adjustable ಪಟ್ಟಿ ಇದ್ದು ಎರಡೂ ಭುಜಕ್ಕೆ ಹಾಕಿಕೊಂಡು ಜಮ್ ಅಂತ ನಡೆದುಕೊಂಡು ಹೋಗೋದಕ್ಕೆ ಸಕತ್ ಮಜಾ ಇರುತ್ತಿತ್ತು. ಆದರೇನು ಮಾಡೋದು ಬ್ಯಾಗಿಗೆ ದುಡ್ ಜಾಸ್ತಿ. ಏಳನೆಯ ತರಗತಿಯಲ್ಲಿ ಹಂಗೂ ಹಿಂಗೂ ಇಂಥದ್ದೇ ಬ್ಯಾಗ್ ತೆಗೆಸಿಕೊಂಡಿದ್ದೆ ಅನ್ನಿ. ಕೊಂಡು ತಂದ ಮೇಲೆಯೇ ನೋಡಿದ್ದು ಅದಕ್ಕೆ ಪಟ್ಟಿ ಇರಲಿಲ್ಲ ಬದಲಿಗೆ ಉದ್ದನೆಯ ಹಿಡಿ ಮಾತ್ರ ಅಂತ.
ಮುಂದೆ ಕಾಲೇಜಿನಲ್ಲಿ ಮತ್ತೊಂದು ಆಸೆ ಹುಟ್ಟಿಕೊಂಡಿತು. ಪತ್ರಕರ್ತ ಅಥವಾ ಸಾಹಿತಿಗಳಂತೆ ದೇಹದ ಬದಿಗೆ ಉದ್ದನೆಯ ಚೀಲ ಹಾಕಿಕೊಂಡು, ಅದರೊಳಗೆ ಪುಸ್ತಕಗಳನ್ನು ಹಾಕಿಕೊಂಡು ಕಾಲೇಜಿಗೆ ಹೋಗಬೇಕು ಅಂತ. ಒಂದೊಳ್ಳೆಯ ಖಾದಿ ಚೀಲವನ್ನು ಕೊಂಡುಕೊಂಡೆ. ಅಗಲಪಟ್ಟಿಯ ಉದ್ದನೆಯ ಚೀಲ ಹಾಕಿದಾಗ ಅಮ್ಮ ಹೇಳಿದ್ದು ನಿನ್ನನ್ನೂ ಆ ಬ್ಯಾಗಿನೊಳಗೆ ಹಾಕಬಹುದು ಅಷ್ಟು ದೊಡ್ಡದಿದೆ ಅಂತ. ಚೀಲವೂ workout ಆಗಲಿಲ್ಲ, ಸಾಹಿತಿಯಂತೂ ಆಗಲೇ ಇಲ್ಲ. ಚೀಲ ಏರಿಸಿದವರೆಲ್ಲಾ ಸಾಹಿತಿಗಳಾಗೋದಿಲ್ಲ ಅಂತ ಬುದ್ಧಿಯಂತೂ ಬಂತು.

ಸ್ಕೂಲ್ ಬ್ಯಾಗ್'ಗಿಂತ ಈ backpack ಕೊಂಚ ಭಿನ್ನ
ಏನೇ ಆದರೂ ನನಗೆ ಬ್ಯಾಗ್ ಇಲ್ಲದೇ, ಕಾಲೇಜಿಗೆ ಹೋಗಲಾಗಲೇ ಇಲ್ಲ. ಕೈಲಿ ಪುಸ್ತಕ ಹಿಡಿದುಕೊಂಡು ವಿದ್ಯಾಸಂಸ್ಥೆಗೆ ಹೋಗೋದು ಹೇಗೆ ಅನ್ನೋದು ನನ್ನ ಅನಿಸಿಕೆ ಅಷ್ಟೇ. ಮುಂದಿನ ಜೀವನದಲ್ಲಿ ಯಾವುದೇ ತರಗತಿಗಳಿಗೆ ಹೋದರೂ ಅಲ್ಲಿ ನನ್ನ ಜೊತೆ ಒಂದು backpack ಇರುತ್ತಿತ್ತು. ಅಂದ ಹಾಗೆ ಶಾಲೆಗೆ ಕೊಂಡೊಯ್ಯುವ ಸ್ಕೂಲ್ ಬ್ಯಾಗ್'ಗಿಂತ ಈ backpack ಕೊಂಚ ಭಿನ್ನ. ಹಲವಾರು ಕಂಪಾರ್ಟ್ಮೆಂಟ್ ಇರುವ ಈ ಚೀಲದಲ್ಲಿ ಪುಸ್ತಕ, ಪೆನ್ನು, ಮೊಬೈಲು, ನೀರು, ಊಟ ತಿಂಡಿಗೆ ಎಲ್ಲಕ್ಕೂ ಜಾಗವಿರುತ್ತದೆ ಅನ್ನಿ.
ಸ್ಕೂಲಿನ ಬ್ಯಾಗು ಜ್ಞಾನ ಭಂಡಾರವನ್ನೇ ಹೊತ್ತಿದ್ದರೂ ತಾ ಜ್ಞಾನಿಯಾಗಿ ಮೆರೆಯದೆ ತನ್ನ ಕೆಲಸ ಮುಂದುವರಿಸುತ್ತಲೇ ಬಹಳ ನೋವು ಅನುಭವಿಸಿದೆ. ನನ್ನ ಇಂಕ್ ಪೆನ್ನಿನಿಂದ ಹೊರ ಚೆಲ್ಲಿದ ಇಂಕನ್ನು ಕುಡಿದ ಬ್ಯಾಗು ಎಂದೂ ಬೇಸರ ಮಾಡಿಕೊಳ್ಳದೇ ತಾ ಮಸಿ ಬಳಿದುಕೊಂಡಿದೆ. ತಿಳಿಯಾದ ಸಾರು ಅನ್ನ ಹೊತ್ತ ಸ್ಟೀಲ್ ಡಬ್ಬಿಯ ಮುಚ್ಚಳ ತೆರೆದುಕೊಂಡು, ಸಾರು-ಅನ್ನ ಹೊರಚೆಲ್ಲಿದಾಗಲೂ ರಸವನ್ನು ತಾ ಹೀರಿ ಪುಸ್ತಕಗಳನ್ನು ಕಾಪಾಡಿದೆ ಈ ಸ್ಕೂಲ್ ಬ್ಯಾಗ್. ಈ ಪ್ರೀತಿಯಿಂದಲೇ ನಾನು ಎಷ್ಟೇ ತರಗತಿಗಳಿಗೆ ಹೋದಾಗಲೂ ಸ್ಕೂಲ್ ಬ್ಯಾಗ್ ಬಿಡಲಿಲ್ಲ.

ತಲೆಯ ಮೇಲೇ ಹೊತ್ತಿರುವುದೂ ಇದೆ
ಜೀವನದಲ್ಲಿ ಹಲವಾರು ವರ್ಷಗಳ ಕಾಲ ಸ್ಕೂಲಿಂದ ಬಹಳ ದೂರದಲ್ಲೇ ಇತ್ತು ನಮ್ಮ ಮನೆ. ಬಿಟಿಎಸ್ ಬಸ್ ಮತ್ತು ಎಚ್ಎಎಲ್ ಫ್ಯಾಕ್ಟರಿ ಬಸ್'ಗಳಲ್ಲಿ ಸಾಕಷ್ಟು ಪಯಣಿಸಿದ್ದೇನೆ. ಹೀಗೆಲ್ಲಾ ಓಡಾಡುವಾಗ, ಎಷ್ಟೋ ಸಾರಿ ಅವಶ್ಯಕತೆ ಇಲ್ಲದಿದ್ದರೂ, ಎಲ್ಲ ಸಬ್ಜೆಕ್ಟ್'ಗಳ ರಫ್ ಪುಸ್ತಕ, ನೀಟ್ ಪುಸ್ತಕ, ಮತ್ತು ಪಠ್ಯಗಳನ್ನು ತೆಗೆದುಕೊಂಡು ಹೋಗು ಅಂತ ಯಾರಪ್ಪ ಹೇಳಿದ್ದು? ತಪ್ಪು ನಂದೇ ತಾನೇ? ಹಲವೊಮ್ಮೆ ಚೀಲದ ಹಿಡಿಯನ್ನು ಭುಜಕ್ಕಲ್ಲದೆ, ತಲೆಯ ಮೇಲೇ ಹೊತ್ತಿರುವುದೂ ಇದೆ. ಅಷ್ಟು ಭಾರದ ಚೀಲವನ್ನು ಹೆಚ್ಚುಕಮ್ಮಿ ತಲೆಯ ಮೇಲೆ ಹೊತ್ತಂತೆಯೇ ಆಗಿದ್ದು, ಭಾರದ ಬ್ಯಾಗನ್ನು ಹೊತ್ತೂ ಹೊತ್ತೂ, ಪ್ರತೀ ಬಾರಿ ನನ್ನ ದೇಹದ ಜೀವಾಣುಗಳು ಎತ್ತರ ಬೆಳೆಯಬೇಕು ಅಂದಾಗಲೆಲ್ಲಾ, ಭಾರದ ಚೀಲ ಅದನ್ನು ಒತ್ತಿ ಹಿಡಿದು ಕೆಳಕ್ಕೆ ತಳ್ಳಿ, ಎತ್ತರ ಬೆಳೆಯಲಾಗಲೇ ಇಲ್ಲ ನೋಡಿ.
ಭಾರದ ಚೀಲಗಳು ಕಡಿಮೆಯಾಗಿ ಬ್ಯಾಗಿನಲ್ಲಿ ಪುಸ್ತಕಗಳು ಇರುವ ಬದಲು ಲ್ಯಾಪ್ಟಾಪ್ ಇರುವ ದಿನಗಳು ಬಂದಾಯ್ತು. ಬಹುಶಃ ಬರೀ ಮೊಬೈಲ್ ಮಾತ್ರ ಕ್ಲಾಸಿಗೆ ತರುವ ಕಾಲ ಇನ್ನೂ ಬಂದಿಲ್ಲ ಎಂದುಕೊಳ್ಳೋಣ. ಅಮೆರಿಕದಲ್ಲಿನ ಶಾಲೆಗಳಲ್ಲಿ ಈಗಾಗಲೇ ಲ್ಯಾಪ್ಟಾಪ್ ಸ್ಕೂಲ್ ಬ್ಯಾಗಿನೊಳಗೆ ಖಾಯಂ ಸ್ಥಾನ ಪಡೆದಿದೆ. ಅದು ಬಿಡಿ, ನಿಮ್ಮ ಅಂದಿನ ಅನುಭವ ಹಂಚಿಕೊಳ್ಳುತ್ತೀರಲ್ಲಾ?

English summary
SB is my name Srinath Bhalle but Called also school bag, the School Bag is like a treasure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X