ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತು ಬಲ್ಲವಗೆ ಜಗಳವಿಲ್ಲ ಊಟ ಬಲ್ಲವಗೆ ರೋಗವಿಲ್ಲ

By Staff
|
Google Oneindia Kannada News

Health is wealth
'ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆ ಎಲ್ಲರೂ ಕೇಳಿಯೇ ಇರುತ್ತಾರೆ, ಆದರೆ ಆಚರಣೆಗೆ ತರುವವರು ತುಂಬಾ ಕಡಿಮೆ. ಬದಲಾಗುತ್ತಿರುವ ಜೀವನಶೈಲಿ ಕೂಡ ನಮ್ಮ ಆಹಾರವಿಧಾನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಂಸ್ಕೃತಿಯ ಬಗ್ಗೆ ನಿರ್ಲಕ್ಷ, ತಿಳಿವಳಿಕೆ ಇಲ್ಲದಿರುವುದು ನಮ್ಮ ದೇಹವನ್ನು ರೋಗರುಜಿನಗಳ ಗುಡಾಣವನ್ನಾಗಿ ಮಾಡಿದೆ. ಆರೋಗ್ಯವೇ ಭಾಗ್ಯವೆಂಬುದನ್ನು ನೆನಪಿನಲ್ಲಿಡಿ.

* ಶ್ರೀನಿಧಿ ಡಿಎಸ್

ನಿತ್ಯ ನಾವು ಸೇವಿಸುವ ಆಹಾರ, ಭಿನ್ನ ಭಿನ್ನ. ಪ್ರತಿ ಆಹಾರಕ್ಕೆ ಅದರದೇ ಆದ ರುಚಿ. ನಮ್ಮ ಆಹಾರದಲ್ಲಿ ಒಟ್ಟ ಆರು ಬಗೆಯ ರಸಗಳ ಬಳಕೆಯಾಗುತ್ತದೆ. ಸಿಹಿ, ಈ ಆರು ರಸಗಳಲ್ಲೊಂದು. ಸಿಹಿಯನ್ನು ಇಷ್ಟಪಡದವರು ಬಲು ಕಡಿಮೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಿಹಿಯೆಂದರೆ ಎಲ್ಲರೂ ಖುಷಿಯಿಂದ ತಿನ್ನುವವರೇ. ಸಿಹಿ, ನಮ್ಮ ಆಹಾರದಲ್ಲಿ ಬಳಸುವ ಮೊದಲ ಪ್ರಮುಖ ರಸ.

ನಮ್ಮ ಅಡುಗೆಗಳಿಗೆ ರುಚಿ ತಂದುಕೊಡುವಲ್ಲಿ ಮತ್ತೊಂದು ಮುಖ್ಯ ಪಾತ್ರ ಹುಳಿಯದು. ಹುಣಸೇ ಹಣ್ಣು, ನಿಂಬೆ ಹಣ್ಣುಗಳ ರೂಪದಲ್ಲಿ ಲಭ್ಯವಿರುವ ಹುಳಿಯನ್ನು ಭಾರತೀಯ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹುಳಿಯ ಅಂಶ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ದೇಹದ ಕೆಲಸ ಕಾರ್ಯಗಳಿಗೆ ಶಕ್ತಿ ನೀಡುವುದು, ಬಾಯಾರಿಕೆ ದೂರ ಮಾಡುವುದು, ದೇಹದಲ್ಲಿನ ಖನಿಜಾಂಶಗಳನ್ನು ಹಿಡಿದಿಟ್ಟುಕೊಳ್ಳುವುದು, ಜೀವಕೋಶಗಳನ್ನು ಬೆಳೆಸುವುದು - ಇವೆಲ್ಲ ಆಹಾರದಲ್ಲಿ ಹುಳಿಯ ಸೇವನೆಯ ಉಪಯೋಗಗಳಾಗಿವೆ.

ಇನ್ನೊಂದು ಮುಖ್ಯ ರುಚಿ, ಉಪ್ಪು. ಜಗತ್ತಿನ ಬೇರಾವುದೇ ಅಡುಗೆ ಪದಾರ್ಥವನ್ನು ಉಪ್ಪಿನ ಜೊತೆ ಹೋಲಿಸಲಾಗದು. ಉಪ್ಪು ಮತ್ತು ಉಪ್ಪಿನಿಂದ ತಯಾರಿಸಲ್ಪಟ್ಟ ಉಪ ಉತ್ಪನ್ನಗಳು ನಮ್ಮ ದೇಹದ ಜೀವಕೋಶಗಳಲ್ಲಿನ ನೀರಿನ ಅಂಶದ ಸಮತೋಲನಕ್ಕೆ ಸಹಕರಿಸುತ್ತವೆ. ಅಲ್ಲದೇ ದೇಹದಲ್ಲಿರುವ ಖನಿಜಾಂಶಗಳ ಸಮರ್ಪಕ ನಿರ್ವಹಣೆಯಲ್ಲಿ ಉಪ್ಪಿನ ಪಾತ್ರ ಮಹತ್ವದ್ದು. ಚರ್ಮದ ಮತ್ತು ದೇಹದ ಮೂಳೆಗಳ ಆರೋಗ್ಯವಂತ ಬೆಳವಣಿಗೆಯಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ.

ಆಹಾರಕ್ಕೊಂದು ಅನನ್ಯ ಸ್ವಾದ ಬರುವಂತೆ ಸಹಕರಿಸುವುದು ಖಾರವೆಂಬ ರಸ. ಖಾರದ ಪದಾರ್ಥಗಳು ದೇಹದ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಇವುಗಳು ಜೀರ್ಣಕಾರಿ ಅಲ್ಲದೇ ದೇಹದ ಮಾಂಸಖಂಡಗಳ ಚೈತನ್ಯ ನೀಡುವ ಕೆಲಸವನ್ನೂ ಮಾಡುತ್ತದೆ.

ಅಧರಕ್ಕೆ ಕಹಿಯಾಗಿದ್ದು ಉದರಕ್ಕೆ ಸಿಹಿ ಅನ್ನೋ ಮಾತಿದೆ. ಆರು ರಸಗಳಲ್ಲಿ ಒಂದಾದ ಕಹಿ ಎನ್ನುವುದು ಒಂದು ಪ್ರಮುಖ ರಸಗಳಲ್ಲೊಂದು. ಯಾವುದೇ ಔಷಧ ಅಥವಾ ಮಾತ್ರೆಯಾದರೂ ಸಾಧಾರಣವಾಗಿ ಕಹಿರುಚಿ ಹೊಂದಿರುತ್ತದೆ. ನಮ್ಮ ದೇಹಕ್ಕೆ ಹೊರಗಿನಿಂದ ಪೂರೈಕೆಯಾಗುವ ಕಹಿಯ ಅಂಶ, ಸೊಪ್ಪು ತರಕಾರಿಗಳ ಮೂಲಕ ಸಿಗುತ್ತದೆ.

ನಾವು ಸೇವಿಸುವ ಆಹಾರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವುದು ಒಗರಿನ ಅಥವಾ ಕಟು ಎಂಬ ರಸ. ಕಾಲಿ ಫ್ಲವರ್ ನಂತಹ ತರಕಾರಿಗಳಲ್ಲಿ, ಅರಸಿನ ಮೊದಲಾದ ಗಿಡಮೂಲಿಕೆಗಳಲ್ಲಿ ಒಗರಿನ ಅಂಶ ಕಂಡುಬರುತ್ತದೆ. ಒಗರು ದೇಹದಲ್ಲಿನ ನೀರಿನ ಮಟ್ಟ ಕಾಪಾಡುತ್ತದೆ ಅಲ್ಲದೇ ಹೆಚ್ಚಾದ ಕೊಬ್ಬನ್ನು ಒಣಗಿಸುವ ಕೆಲಸವನ್ನೂ ಮಾಡುತ್ತದೆ.

ಈ ಎಲ್ಲ ರಸಗಳನ್ನು ಸೇರಿಸಿಕೊಂಡಿರುವ ಊಟತಿಂಡಿಗಳು ಮನುಷ್ಯನ ನಿತ್ಯ ಸಹಚರಿಗಳು. ಇವುಗಳ ಮೂಲಕ ಮನುಷ್ಯ ಬೆಳೆಯುತ್ತಾನೆ, ಇವುಗಳ ಮೂಲಕವೇ ಆತನ ಸ್ವಭಾವವನ್ನೂ ಕಂಡುಹಿಡಿಯಬಹುದು ಕೂಡ. ಆದರೆ ಇಂದು ಬದುಕಿಗೆ ವೇಗ ಬಂದುಬಿಟ್ಟಿದೆ. ಎಲ್ಲರೂ ಅಕ್ಷರಸ್ಥರಾಗುತ್ತಿದ್ದಾರೆ, ಹೆಚ್ಚು ಹೆಚ್ಚು ವಿಷಯಗಳನ್ನು ಅರಿತುಕೊಂಡು ಪ್ರಜ್ಞಾವಂತರಾಗುತ್ತಿದ್ದಾರೆ. ಆದರೆ, ಈ ಪ್ರಜ್ಞಾವಂತಿಕೆ ಎನ್ನುವುದು ಕೆಲವೇ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗುತ್ತಿದೆ. ನಮ್ಮ ಜೀವನದ ಹಲವು ಮುಖ್ಯ ವಿಚಾರಗಳ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಬಿಟ್ಟಿದ್ದೇವೆ. ಆಹಾರವೂ ಅವುಗಳಲ್ಲಿ ಸೇರಿದೆ.

ಆಹಾರದ ದುರ್ಬಳಕೆಯಂತೂ ಇಂದಿನ ದಿನಗಳಲ್ಲಿ ಅತ್ಯಂತ ಹೆಚ್ಚಾಗಿದೆ. ಹಣವಿರುವ ಪ್ರತಿಯೊಬ್ಬನಿಗೂ ಆಹಾರ ಒಂದು ಸಮಸ್ಯೆಯೇ ಅಲ್ಲ. ಹಾಗಾಗಿಯೇ ಅದರ ಕಡೆಗೊಂದು ಪ್ರೀತಿ ಯಾರಿಗೂ ಇಲ್ಲ. ಜಗತ್ತಿನ ಎಷ್ಟೋ ರಾಷ್ಟ್ರಗಳಲ್ಲಿ ದುಡ್ಡು ಕೊಟ್ಟರೂ ಸರಿಯಾದ ಆಹಾರ ಸಿಗದಷ್ಟು ಕ್ಷಾಮದ ಪರಿಸ್ಥಿತಿ ಇದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ತಿಳಿದಿದ್ದರೂ ತಮ್ಮ ಪಾಲಿಗೆ ಆ ಪರಿಸ್ಥಿತಿ ಬರಲಾರದು ಅನ್ನುವ ಅತಿಯಾದ ಆತ್ಮವಿಶ್ವಾಸ ಇದ್ದರೂ ಇರಬಹುದು.

ದೊಡ್ಡ ದೊಡ್ಡ ನಗರಗಳಲ್ಲಿ ದಿನನಿತ್ಯ ಬಳಸಲ್ಪಡುವ ಆಹಾರ ಮತ್ತು ಚೆಲ್ಲಲ್ಪಡುವ ಆಹಾರದ ಪ್ರಮಾಣ ಹೆಚ್ಚೂ ಕಡಿಮೆ ಒಂದೇ ಅಂದರೆ ತಪ್ಪಾಗಲಾರದು. ಹೋಟೇಲುಗಳು, ಮದುವೆಯ ಛತ್ರಗಳಲ್ಲಿ ದಿನನಿತ್ಯ ಲೆಕ್ಕ ಹಾಕಲಾರದಷ್ಟು ಆಹಾರ ಚೆಲ್ಲಲ್ಪಡುತ್ತಿದೆ. ಅದ್ದೂರಿತನ ಮತ್ತು ಪ್ರತಿಷ್ಠೆಯ ಹೆಸರಿನಲ್ಲಿ ಅನವಶ್ಯಕವಾಗಿ ಉಣ್ಣುವ ಅನ್ನವನ್ನು ಎಸೆಯುತ್ತಿದ್ದಾರೆ.

ಇಂದು "ಗೆಟ್ ಟುಗೆದರ್" ಹೆಸರಲ್ಲಿ ಸೇರುವ ಸ್ನೇಹಿತರು, ಬಂಧು ಬಳಗ ಎಲ್ಲ ತಮ್ಮ ದೇಹಕ್ಕೆ ಒಗ್ಗುತ್ತದೆಯೋ ಇಲ್ಲವೋ ಎಂಬ ವಿಚಾರ ಮಾಡದೇ, ಪಾಶ್ಚಾತ್ಯ ಸಂಸ್ಕೃತಿಯ ಅಥವಾ ತಮ್ಮ ದೇಹಕ್ಕೆ ಸೇರದ ಆಹಾರಗಳನ್ನು ಸೇವಿಸುವ ಅಪಾಯಕಾರೀ ಹವ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪ್ರತಿಷ್ಠೆಯ ಸೋಗು.

ಹೇಗು ಹೇಗೋ ಆಹಾರವನ್ನು ಸೇವನೆ ಮಾಡುತ್ತಿರುವುದರಿಂದ ಇಂದಿನ ಜನಾಂಗ ಹೊಸದೊಂದು ಭೀತಿಯಿಂದ ನರಳುತ್ತಿದೆ. ತಮಗೆ ಆಹಾರ ಸಂಬಂಧೀ ಕಾಯಿಲೆಗಳು ಬರಬಹುದು, ಬೊಜ್ಜಿನ ತೊಂದರೆ ಉಂಟಾಗಬಹುದು ಎಂಬೆಲ್ಲ ಹೆದರಿಕೆಯಿಂದ ಬಳಲುತ್ತಿದೆ. ಜನ ತಮಗೆ ತಾವೇ ಕಡಿವಾಣ ಹಾಕಿಕೊಳ್ಳಲೂ ಹೊರಡುತ್ತಿದ್ದಾರೆ. ಸ್ವಯಂ ವೈದ್ಯ ಮಾಡಿಕೊಳ್ಳುವ ನೂತನ ಪ್ರವೃತ್ತಿ ಆರಂಭವಾಗಿದೆ. ಒಮ್ಮಿದೊಂಮ್ಮೆಗೇ ತಮ್ಮ ಆಹಾರ ಕ್ರಮವನ್ನು ಬದಲು ಮಾಡುವುದು, ಸಮೃದ್ಧ ಆಹಾರ ಸೇವಿಸುವುದರ ಬದಲು ಮಿತ ಆಹಾರವನ್ನು ತೆಗೆದುಕೊಳ್ಳಲು ಶುರು ಮಾಡುವುದೇ ಮೊದಲಾದ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ಇದು ಬಹಳ ತಪ್ಪು ಎನ್ನುತ್ತಾರೆ ವೈದ್ಯರು.

ಯಾರು ಏನೇ ಅಂದರೂ ನಿಮ್ಮ ಆಹಾರ ಸೇವನೆಯ ಕ್ರಮವನ್ನು, ಬದಲಿಸಲು ಹೋಗದಿರಿ. ಪ್ರತಿ ವ್ಯಕ್ತಿಯ, ಕುಟುಂಬದ ಆಹಾರ ಮತ್ತೊಬ್ಬರದ್ದಕ್ಕಿಂತ ಭಿನ್ನವಾಗಿಯೇ ಇರುತ್ತದೆ. ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಒಂದೊಂದು ಜನಾಂಗದ, ಪ್ರದೇಶದ ಆಹಾರ ಭಿನ್ನವಾಗಿದ್ದರೂ, ಅವುಗಳು ಬಹುಕಾಲ ಉರುಳಿದರೂ ಹಾಗೆಯೇ ಇದ್ದು ಸಮಯದ ಜೊತೆಗಿನ ಹೋರಾಟದಲ್ಲಿ ಗೆದ್ದು ಬಂದವು. ಅದರೆ ಯಾರಿಗಿದು ನೆನಪಿದೆ ಹೇಳಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X