ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲೆಮನೆಯತ್ತ ಹೋಗೋಣ ಬನ್ನಿ

By Staff
|
Google Oneindia Kannada News

Alemane in Malenadu
ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಕರ್ನಾಟಕದ ಹಳ್ಳಿಗಳಲ್ಲಿ, ಅದರಲ್ಲಿಯೂ ಮಲೆನಾಡ ಹಳ್ಳಿಗಳಲ್ಲಿ ಆಲೆಮನೆಗಳು ಜೀವ ಪಡೆಯಲು ಶುರುಮಾಡುತ್ತವೆ. ಮುಸ್ಸಂಜೆ ಹೊತ್ತಲ್ಲಿ ಮಂಡಕ್ಕಿ, ಮಿರ್ಚಿ ಮೆಲ್ಲುತ್ತ ಗಿಂಡಿಗಟ್ಟಲೆ ತಾಜಾತಾಜಾ ಕಬ್ಬಿನಹಾಲನ್ನು ಗಂಟಲಿಗಿಳಿಸುತ್ತಿದ್ದರೆ... ಅದರ ಆನಂತ, ರಸಾಸ್ವಾದವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಸಾಧ್ಯವಾದರೆ ಹಳ್ಳಿಗಳಲ್ಲಿ ಸಿಗುವ ಆಲೆಮನೆಗೆ ಭೇಟಿ ನೀಡಿ ಕಬ್ಬಿನರಸ ಹೀರಿರಿ.

* ಶ್ರೀನಿಧಿ ಡಿಎಸ್

ಮತ್ತೆ ಮಲೆನಾಡಿನ ಸುದ್ದಿ ಬರೀತಿದೀನಿ ಅಂತ ಓದುಗ ಮಹಾಶಯರುಗಳು ಬೇಜಾರು ಮಾಡಿಕೊಳ್ಳಬಾರದು. ಏನು ಮಾಡಲಿ ಹೇಳಿ? ನನ್ನ ಭಾವ ಮತ್ತು ಬಾಂಧವ್ಯಗಳ ಲಿಂಕು ಅತ್ತ ಕಡೆಗೇ ಇರುವುದರಿಂದ, ಅಲ್ಲಿನ ಸಂಸ್ಕೃತಿ ವಿಶೇಷಣಗಳು ಹೆಚ್ಚು ಹೆಚ್ಚು ಸೆಳೆಯುತ್ತವೆ. ನೀವೋ, ಏನಯ್ಯ ಮಾಡೋಕೆ ಕೆಲಸವಿಲ್ಲದವನ ಹಾಗೆ ಬರೀ ಮಲೆನಾಡು ಆಚಾರ ವಿಚಾರ ಎಂತೆಲ್ಲ ಬರೆಯುತ್ತ ಕೂರುತ್ತೀಯಾ ಅಂತ ಝಾಡಿಸಿ ಬಿಡುತ್ತೀರಿ. ಇರ್ಲಿ, ಬರೆಯದೇ ವಿಧಿ ಇಲ್ಲ.

ಇತ್ತೀಚಿಗಷ್ಟೇ ಶಿರಸಿ ಕಡೆ ಹೋಗಿ ಬಂದಿದ್ದರಿಂದ, ಮತ್ತು ಅಲ್ಲೆಲ್ಲ ಆಲೆಮನೆ ಸೀಸನ್ ಆಗಿದ್ದರಿಂದ, ಅದರ ಬಗ್ಗೆ ಒಂದಿಷ್ಟು ಸುದ್ದಿ ನಿಮ್ಮ ಜತೆಗೂ ಹಂಚಿಕೊಳ್ಳುವ ಅಂತನಿಸಿತು. ಆಲೆಮನೆ ಅಂತಂದ್ರೆ, ಕಬ್ಬರೆದು ಬೆಲ್ಲ ಮಾಡುವ ಜಾಗ. ವರ್ಷ ಪೂರ್ತಿ ಬಿಸಿಲಲ್ಲಿ ಒದ್ದಾಡಿ, ಮೈಕಪ್ಪಾಗಿಸಿ ದುಡಿದ ನಂತರ ಬಾಯಿಸಿಹಿ ಮಾಡಿಕೊಳ್ಳುವ ತಾಣ.

ಆಲೆಮನೆಯ ಕೆಲಸ ಹೇಗಾಗುತ್ತದೆ ಅನ್ನೋದನ್ನ ಸರಳವಾಗಿ ಹೇಳಿಬಿಡ್ತೀನಿ.

ಸಾಮಾನ್ಯವಾಗಿ ಡಿಸೆಂಬರ್ ಕೊನೆಯಿಂದ ಫೆಬ್ರವರಿ ಕೊನೆಯೊಳಗೆ ಮಲೆನಾಡಿನಲ್ಲಿ ಕಬ್ಬರೆದು ಬೆಲ್ಲ ತಯಾರು ಮಾಡುವ ಕೆಲಸ ನಡೆಯುತ್ತದೆ. ಹತ್ತಾರು ಊರುಗಳಲ್ಲಿ ಯಾರಾದರೊಬ್ಬರ ಮನೆಯಲ್ಲಿ ಕಬ್ಬು ಅರೆವ ಯಂತ್ರ ಇರುತ್ತದೆ. ಅದು ಊರಿಂದೂರಿಗೆ ಅವಶ್ಯಕತೆ ಇರುವವರ ಮನೆಗೆ ಪ್ರಯಾಣ ಬೆಳೆಸುತ್ತ ಸಾಗುತ್ತದೆ, ಅಶ್ವಮೇಧದ ಕುದುರೆಯ ಹಾಗೆ. ಸಲ್ಲಬೇಕಾದ ಕಾಣಿಕೆ ಮತ್ತೆ ಸಲ್ಲಿಸಿದರಾಯಿತು.

ಕಬ್ಬರೆವ ಯಂತ್ರ(ಕಣೆ) ಮನೆಯಂಗಳಕ್ಕೆ ಬಂದು ನಿಂತಮೇಲೆ ಸಂಭ್ರಮ ಶುರು. ಅದನ್ನ ನಿಲ್ಲಿಸಿ ಫಿಕ್ಸ್ ಮಾಡುವುದು ಒಂದಿಷ್ಟು ಜನರ ಕೆಲಸವಾದರೆ, ಮತ್ತಷ್ಟು ಜನ ಗದ್ದೆಯಲ್ಲಿ ಕಬ್ಬು ಕಡಿದು, ಆಲೆಮನೆಯಂಗಣಕ್ಕೆ ತಂದು ಹಾಕುತ್ತಾರೆ. ಕಬ್ಬಿನ ಕಣೆ ಸ್ವಲ್ಪ ಎತ್ತರ ಜಾಗದಲ್ಲಿದ್ದು, ಹಾಲು ದೊಡ್ಡ ಪಾತ್ರೆ(ಬಾನಿ)ಗೆ ಸರಗ ಹರಿದುಹೋಗಲು ಅನುಕೂಲವಾಗುವಂತೆ ಇರುತ್ತದೆ. ಮೊದಲು ಅರೆದ ಹಾಲನ್ನ ದೇವರಿಗೆ ಸಮರ್ಪಿಸಿ, ನಂತರ ಕೊಪ್ಪರಿಗೆ ತುಂಬುವಷ್ಟು ಹಾಲನ್ನ ರೆಡಿ ಮಾಡಿಕೊಂಡು, ತುಂಬಿ, ಅದನ್ನು ಆರು-ಎಂಟು ತಾಸುಗಳಷ್ಟು ಹೊತ್ತು ಕುದಿ ಕುದಿಸಿದ ನಂತರ ಹಾಲಿಂದ ರೆಡಿ.

ಮಲೆನಾಡಿನ ಕಡೆಗಳಲ್ಲಿನ ಆಲೆಮನೆ ಇತರೆಡೆಗಳಷ್ಟು ದೊಡ್ಡ ಮಟ್ಟದ್ದಲ್ಲ. ಹೆಚ್ಚಾಗಿ ತಮ್ಮ ಮನೆ ಖರ್ಚಿನ ಲೆಕ್ಕಕ್ಕೆ ಜೋನಿಬೆಲ್ಲ ಮಾಡಿಕೊಳ್ಳುವವರೇ ಎಲ್ಲ. ಎಲ್ಲೋ ಅಲ್ಪ ಸ್ವಲ್ಪ ಬೆಲ್ಲ ಹೊರಗೆ ಮಾರಿಯಾರು, ಅಷ್ಟೆ, ಅದೇ ನೀವು ಮೈಸೂರು, ಮಂಡ್ಯದ ಕಡೆ ಹೋದರೆ, ಟನ್ನುಗಟ್ಟಲೆ ಕಬ್ಬುಗಳು ರಾಶಿ ಬಿದ್ದ ನೂರಾರು ಆಲೆಮನೆಗಳು ದಾರಿಯುದ್ದಕ್ಕೂ ಸಿಗುತ್ತವೆ. ಅಲ್ಲಿ ನಾವು ನೀವು ಅಂಗಡಿಯಲ್ಲಿ ಕೊಳ್ಳುವ ಹಳದಿ ಬೆಲ್ಲದುಂಡೆಗಳು ತಯಾರಾಗುತ್ತವೆ.

ನಗರಗಳಲ್ಲಿನ ಕಬ್ಬಿನ ಹಾಲನ್ನ ಕುಡಿದು ಅದರ ರುಚಿಗೇ ಬಾಯಿ ಚಪ್ಪರಿಸಿಕೊಳ್ಳುವವರು ಆಲೆಮನೆಯ ತಂಪಲ್ಲಿ ಕೂತು, ಆಗ ತಾನೆ ಬಾನಿಗೆ ಬೀಳುತ್ತಿರುವ ಹಾಲನ್ನ ಚೊಂಬೊಂದರಲ್ಲಿ ಹಿಡಿದು ಕುಡಿಯಬೇಕು. ಆಲೆಮನೆಯಲ್ಲಿ ಮತ್ತೊಂದು ವಿಶೇಷತೆ ಅಂದರೆ ಅಲ್ಲಿನ ತಿಂಡಿಗಳು-ಕುರುಕುಗಳು. ಅವಲಕ್ಕಿ-ಚುಡ್ವಾ, ಮಂಡಕ್ಕಿ ಮಸಾಲೆ, ಮಿರ್ಚಿಭಜಿ, ಇವುಗಳ ಜೊತೆಗೆ ಕಬ್ಬಿನಾಲು.. ರಾತ್ರಿಯ ಚಳಿಯಲ್ಲಿ ಆಲೆಮನೆಯ ಒಲೆಯೆದುರು ಕುಳಿತು, ಕಥೆ ಹೊಡೆಯುತ್ತ , ಇವುಗಳನ್ನು ಮೆಲ್ಲುತ್ತ ಕಬ್ಬಿನ ಹಾಲು ಕುಡಿಯುತ್ತ ಕೂತರೆ, ಅದೆಷ್ಟು ಗಿಂಡಿ ಹಾಲು ಹೊಟ್ಟೆ ಸೇರುವುದೋ ಭಗವಂತ ಬಲ್ಲ! ಇನ್ನು ಭಂಗಿ ಸುದ್ದಿ ಇದ್ದರಂತೂ, ಬಿಡಿ,ಅದರ ಕಥೆ ಬೇರೆಯದೇ!

ಈ ಆಲೆಮನೆಗಳು, ಒಂಥರಾ ಊರಿನ ಸಂಭ್ರಮವಿದ್ದ ಹಾಗೆ. ಯಾರು ಬೇಕಾದರೂ ಎಷ್ಟು ಹೊತ್ತಿಗೆ ಬೇಕಾದರೂ ಆಲೆಮನೆಗೆ ಬರಬಹುದು, ಹಾಲು ಕುಡಿಯಬಹುದು, ಕಬ್ಬು ತಿನ್ನಬಹುದು. ಮನೆಗೂ ಒಯ್ಯಬಹುದು! ಯಾರಿಗಾದರೂ ಮಲೆನಾಡ ಕಡೆಯದೋ ಮಂಡ್ಯ ಕಡೆಯದೋ ಸ್ನೇಹಿತರ ಬಳಗವಿದ್ದರೆ ಒಮ್ಮೆ ಆಲೆಮನೆಗೆ ಹೋಗಿ ಬನ್ನಿ!

ಪೂರಕ ಓದಿಗೆ

ಸೋನೆಬೆಲ್ಲದಂಥ ಮಿತ್ರರಿಗೆ ಮಾತ್ರ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X