ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮೇಲ್ ಭಯೋತ್ಪಾದನೆ!

By Staff
|
Google Oneindia Kannada News

E-mail spam | Hoax emails | Junk email
ಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!

* ಶ್ರೀನಿಧಿ ಡಿಎಸ್

ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ ಈ ಮೇಲ್ ಚೆಕ್ ಮಾಡಲು ಆಗುತ್ತಿಲ್ಲ. ಎಲ್ಲಾದರೂ ಎರಡು ದಿನ ಬಿಟ್ಟು ಇನ್ಬಾಕ್ಸು ನೋಡಿದರೆ ಅದು ಪಕ್ಕಾ ನಮ್ಮ ಊರಿನ ಮಣ್ಣಿನ ರಸ್ತೆ ಮಳೆ ಬಂದು ಹಾಳಾಗಿ ಕೊಚ್ಚೆಗುಂಡಿ ಆಗಿರುತ್ತದಲ್ಲ - ಹಾಗಿರುತ್ತದೆ. ಯಾಕಾದರೂ ಇಷ್ಟೊಂದು ಸೋಶಿಯಲ್ ನೆಟ್ವರ್ಕು ತಾಣಗಳಿವೆಯೇನೋ ಏನೋ. ಒಬ್ಬರಲ್ಲ ಒಬ್ಬರು - ಯಾರೀ, ಲಿಂಕ್ಡಿನ್ನು, ಕೋಲ್ಡ್ರಿಂಕು, ಮತ್ತಿನ್ನೇನೋ ಸುಡುಗಾಡು ತಾಣಗಳಿಂದ ರಿಕ್ವೆಸ್ಟುಗಳನ್ನ ಕಳುಹಿಸುತ್ತಲೇ ಇರುತ್ತಾರೆ. ಅವುಗಳನೆಲ್ಲ ಡಿಲೀಟು ಮಾಡಿ ಇನ್ ಬಾಕ್ಸು ಕ್ಲೀನು ಮಾಡುವ ಹೊತ್ತಿಗೆ ಸರಿಯಾಗಿ ಮತ್ತೆರಡು ಹಾಗಿನದೇ ಮೇಲ್ ಗಳು ಬಂದು, ನೀನೇನು ಮಾಡಿದರೂ ಅಷ್ಟೇ, ನಾವು ಸತ್ತು ಹುಟ್ಟೋ ರಕ್ತಬೀಜಾಸುರರು ಅಂತ ಗಹಗಹಿಸಿ ನಗುತ್ತವೆ.

ಬರೀ ರಿಕ್ವೆಸ್ಟ್ ಮೇಲ್ ಗಳು ಮಾತ್ರವಲ್ಲ, ನೀವು ಮತ್ತೆ ಮತ್ತೆ ಆ ಮೇಲ್ ಗಳನ್ನು ಕಡೆಗಣಿಸುತ್ತಲೇ ಇದ್ದರೂ, ನೋಡಿ ಸ್ವಾಮಿ ಶ್ರೀಯುತರು ಕಳುಹಿಸಿದ ಪತ್ರಕ್ಕೆ ನಿಮ್ಮ ಉತ್ತರ ತಲುಪಿಲ್ಲ, ನೀವು ಉತ್ತರಿಸದಿದ್ದರೆ ಅವರಿಗೆ ಬೇಜಾರಾಗುತ್ತದೆ, ದಯವಿಟ್ಟು ಉತ್ತರಿಸಿ ಎಂಬ ನೆನಪು ಮಾಡಿಕೊಡೋ ಅಂಚೆಗಳು ಬೇರೆ.

ಇವತ್ತು ಸ್ನೇಹಕೊಂಡಿ ಬೆಸವ ನೂರಾರು ತಾಣಗಳು ಅಂತರ್ಜಾಲ ಪ್ರಪಂಚದಲ್ಲಿವೆ ಮತ್ತು ನನಗೆ ಬರುವ ಮೈಲ್ಗಳಲ್ಲಿ ಹೆಚ್ಚಿನವು ಕೇವಲ ಅದದೇ ವ್ಯಕ್ತಿಗಳಿಂದಲೇ ಮತ್ತೆ ಮತ್ತೆ ಬರುತ್ತದೆ. ಅಲ್ಲಾ, ಅಷ್ಟೊಂದು ವೆಬ್ಸೈಟುಗಳಿಗೆಲ್ಲ ಮೆಂಬರುಗಳಾಗಿ ಜನ ಅದೇನು ಮಾಡುತ್ತಾರೋ ಭಗವಂತನೇ ಬಲ್ಲ. ಅವರಾದರೆ ಆಗಿಕೊಳ್ಳಲಿ, ನಮಗೇಕೆ ತೊಂದರೆ ಕೊಡುತ್ತಾರೆ ಅನ್ನುವುದು ಮತ್ತೂ ಸೋಜಿಗವೇ.

ಮೊದಲೆಲ್ಲ, ಹೆಚ್ಚಿನವರು ಹೊಸದಾಗಿ ಇಂಟರ್ನೆಟ್ ಬಳಸುವಾಗ ಈ ತೆರನಾದ ವೆಬ್ ತಾಣಗಳಿಗೆ ದಾಳಿ ಇಡುತ್ತಿದ್ದರು. ಯಾವುದೋ ಚಂದದ ಹುಡುಗಿಯ ಫೋಟೋ, ಅವಳದೇ ಎಂದು ನಂಬಿಸಲಾದ ಮೇಲ್ ಐಡಿ, ಇತ್ಯಾದಿಗಳನ್ನು ಕಂಡು ಪುಳಕಿತರಾಗಿ ಅಂತಹ ತಾಣಗಳ ಮೆಂಬರುಗಳಾಗುತ್ತಿದ್ದರು. ಇವತ್ತೋ, ಹೆಚ್ಚಿನವರಿಗೆ ಅವುಗಳ ಸತ್ಯಾಸತ್ಯತೆಯ ಅರಿವಾಗಿದೆ, ಬುದ್ದಿ ಬಂದಿದೆ ಎಂದುಕೊಂಡಿದ್ದರೆ, ಊಹೂಂ, ಹುಚ್ಚು ಹೆಚ್ಚಾಗಿದೆ!

ಒಂದೊಂದು ತಾಣಕ್ಕೂ ಒಂದೊಂದು ವಿಶೇಷತೆ. ವ್ಯವಹಾರಕ್ಕೊಂದಾದರೆ, ಸ್ನೇಹಕ್ಕೊಂದು- ಆಟಕ್ಕೊಂದು- ಪಾಠಕ್ಕೊಂದು, ಬೇಟಕ್ಕೊಂದು. ಹೀಗಾಗಿ ಕಂಡಕಂಡ ಸೈಟುಗಳಿಗೆಲ್ಲ ಮೆಂಬರುಗಳಾಗಿ, ಚೈನ್ ಸ್ಕೀಮಿನ ಏಜೆಂಟರಂತೆ ನೀವೂ ಸದಸ್ಯರಾಗಿ ದಮ್ಮಯ್ಯ ಅಂತ ಗೋಳು ಹೊಯ್ಕೊಳುತ್ತಾರೆ ಬೇರೆ. ಇವರಿಗೆಲ್ಲ ಗೊತ್ತಿಲ್ಲದ ಅಥವ ಗೊತ್ತಿದ್ದರೂ ಗಮನಹರಿಸದ ವಿಷ್ಯ ಒಂದಿದೆ. ಈ ತಾಣಗಳಿಗೆ ಅಗತ್ಯವಿರುವ ಮಾಹಿತಿ ತುಂಬುವ ಪೇಜುಗಳಲ್ಲಿ ಒಂದೆಡೆ, ನಿಮ್ಮ ಸಂಬಂಧಪಟ್ಟ ಇನ್ಬಾಕ್ಸಿಗೆ ಆ ತಾಣ ಅಕ್ಸೆಸ್ ಕೇಳುತ್ತದೆ, ಅದನ್ನ ಸುಮ್ಮನೆ ಕ್ಲಿಕ್ ಮಾಡಿ ಓಕೆ ಅಂದುಬಿಟ್ಟರೆ ನಿಮ್ಮ ಬಳಿ ಇರುವ ಎಲ್ಲರಿಗೂ, ಆ ತಾಣದ ಜಾಹೀರಾತು ನಿಮ್ಮ ಮೇಲ್ ಐಡಿಯಿಂದಲೇ ಹೋಗಿರುತ್ತದೆ. ಮತ್ತು ಅಷ್ಟು ಸಾಲದೇ, ತನಗೆ ಬೇಕಾದಾಗೆಲ್ಲ ರಿಮೈಂಡರು ಮೇಲ್ಗಳನ್ನು ಕಳುಹಿಸುತ್ತಲೇ ಇರುತ್ತದೆ.

ಸಿಕ್ಕಸಿಕ್ಕ ತಾಣಗಳಿಗೆಲ್ಲ ಸದಸ್ಯರಾಗುವವರು ಒಂದು ವಿಷಯ ನೆನಪಲ್ಲಿಟ್ಟುಕೊಳ್ಳಬೇಕು. ನಿಮ್ಮ ಮೇಲ್ ಐಡಿಗೆ ನುಗ್ಗಲು ಕೇಳುವ ಅನುಮತಿ ನಿರಾಕರಿಸಿ ಬಿಟ್ಟರೆ, ಅದೆಷ್ಟೋ ಜನಕ್ಕೆ ಆಗುವ ತೊಂದರೆ ತಪ್ಪುತ್ತದೆ. ಪದೇ ಪದೇ ನಿಮ್ಮನ್ನು ಬೈದುಕೊಳ್ಳುವುದು ಕೂಡ.

ಇನ್ನು ಮೇಲ್ಬಾಕ್ಸು ತುಂಬಿಕೊಳ್ಳುವ ಸ್ಪಾಮು, ಫೇಕ್ ಮೇಲುಗಳ ಬಗ್ಗೆ ಹೇಳಿ ಪ್ರಯೋಜ್ನವೇ ಇಲ್ಲದ ಹಾಗಾಗಿದೆ. ಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!

ಹೆಣ್ಣಿನಾಕಾರದ ಕಾಯಿ ಬಿಡುವ ಸುಡುಗಾಡು ಮರ! ಮನುಷ್ಯನ ದೇಹ- ಮೀನಿನ ತಲೆ, 18 ಆಡಿಯ ರಾಕ್ಷಸಾಕಾರದ ದೇಹ ಅಲ್ಲೆಲ್ಲೋ ಸಿಕ್ಕಿದೆ, ಇವುಗಳನೆಲ್ಲ ಯಾವುದೇ ಮುಲಾಜೂ ಇಲ್ಲದೆ ಕಳುಹಿಸುತ್ತಲೇ ಇರುತ್ತಾರೆ. ಇವುಗಳೆಲ್ಲ ಸತ್ಯವೇ, ಅಲ್ಲವೇ ಎಂಬ ಕಿಂಚಿತ್ ಯೋಚನೇ ಮಾಡೋ ಕ್ರಮವೂ ಇಲ್ಲ. ಬೇಕಾದರೆ ನೋಡುವವರು ತಲೆ ಕೆಡಿಸಿಕೊಳ್ಳಲಿ ಅನ್ನುವುದು ಇವರ ಅಂದಾಜಿರಬೇಕು. 1098 ನಂಬರಿಗೆ ಕಾಲ್ ಮಾಡಿದರೆ ಬಂದು ನಿಮ್ಮನೇಲಿ ಉಳಿದ ಆಹಾರ ತಗಂಡು ಹೋಗ್ತಾರೆ ಅನ್ನೋ ಮೇಲ್ ಕಾಲದಲ್ಲಿ ಪಾಪ, ಚೈಲ್ಡ್ ಲೈನ್ ಸಂಸ್ಥೆಯ ಪರಿಸ್ಥಿತಿ ಬ್ಯಾಡ. ಸಿಕ್ಕಸಿಕ್ಕವರೆಲ್ಲ ಫೋನಾಯಿಸಿ, ನಮ್ಮನೇಲಿ ಅನ್ನ ಇದೆ, ಇಡ್ಲಿ ಇದೆ ಅನ್ನುವವರೇ. ಅದೊಂದು ಮಕ್ಕಳ ರಕ್ಷಣೆಗಿರುವ ಸಂಸ್ಥೆ. ಬೇಕಷ್ಟು ಸಹಾಯಧನ ದೇಶವಿದೇಶಗಳಿಂದ ಬರುತ್ತದೆ ಅವರಿಗೆ!

ನಿಮಗೆ ಬಂದಿರುವ ಅದ್ಭುತ ಎನ್ನಿಸಿಕೊಳ್ಳುವ ಈ ಮೇಲ್, ಸತ್ಯವೇ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬೇಕಾದಷ್ಟು ತಾಣಗಳಿವೆ. ಫಾರ್ವರ್ಡು ಮಾಡುವ ಮುನ್ನ ಒಮ್ಮೆ, www.hoax-slayer.com, www.snopes.comಗಳಂತಹ ಅದೆಷ್ಟೋ ವೆಬ್ ಸೈಟುಗಳಲ್ಲಿ ಅವುಗಳ ಸತ್ಯಾಸತ್ಯತೆ ಪರೀಕ್ಷಿಸಿಕೊಳ್ಳಿ. ನೀವೂ ಸತ್ಯ ತಿಳಿದುಕೊಂಡಂತಾಗುತ್ತದೆ, ಮತ್ತು ಇತರರಿಗೂ ಕಿರಿಕಿಕಿ ತಪ್ಪಿಸಿದಂತಾಗುತ್ತದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X