• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಡಲಕಿನಾರೆಯ ಕಥಾ ಪ್ರಸಂಗಗಳು

By Staff
|
Google Oneindia Kannada News
ಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?

* ಶ್ರೀನಿಧಿ ಡಿ.ಎಸ್.

ಸೇಸುಗೆ ಎಂದಿನ ಹಾಗೆ 5 ಗಂಟೆಗೇ ಎಚ್ಚರವಾಯ್ತು. ಮೆಲ್ಲನೆದ್ದು ಕಯ್ ಗುಡುವ ಬಾಗಿಲನ್ನ ತೆರೆದು ಹೊರಬಂದಳು. ರಾತ್ರಿಯಿಡಿ ಸರಿಯಾಗಿ ನಿದ್ದೆಯಿಲ್ಲ ಅವಳಿಗೆ. ಏನೋ ಬೆಚ್ಚಿ ಬೀಳಿಸುವ ಕನಸುಗಳು ಕಂಡ ನೆನಪು. ಬೂದಿಗುಡ್ದೆಯಲ್ಲಿ ಮಲಗಿದ್ದ ರಾಜ ಇವಳನ್ನ ಒಮ್ಮೆ ನೋಡಿ, ಮತ್ತೆ ತನ್ನ ಮುಖ ತಿರುಗಿಸಿ ಮಲಗಿದ. ಸುಮಾರು 20 ವರ್ಷಗಳಿಂದ ಸೇಸು ಬೆಳಗ್ಗೆ ಅಷ್ಟೇ ಹೊತ್ತಿಗೆ ಏಳುತ್ತಿದ್ದಾಳೆ. ಕೆಲಬಾರಿ ಇನ್ನೂ ಬೇಗ. ದಿನಾ ಎದ್ದು, ಮನೆಯೆದುರಿನ ಮರಳ ಹಾಸಿನ ಮೇಲೆ ಸ್ವಲ್ಪ ದೂರ ನಡೆದು ಬಂದು ಎದುರಿನ ಅಗಾಧ ನೀರಿನ ರಾಶಿಗೆ ಕೈ ಮುಗಿಯುತ್ತಾಳೆ. ಮನೆ ಒಳಗಿನ ದೇವರಿಗಾದರೊ ಕೈ ಮುಗಿವುದುದು ಮರೆತೀತು ಸೇಸುಗೆ, ಆದರೆ ಸಮುದ್ರಕ್ಕೆ ನಮಸ್ಕರಿಸುವುದು ಎಂದೂ ಮರೆತಿಲ್ಲ.

ಅಂದು ಕೂಡಾ ದಿನದಂತೆ ನಡೆದು ಬಂದು ಕೈ ಮುಗಿದಳು. ಕೈ ಮುಗಿದವಳ ಮುಖದಲ್ಲಿ ಏಕೋ ದುಗುಡವೂ ಇತ್ತು. ಮಳೆಗಾಲದ ಆರಂಭದಲ್ಲಿ ಈ ಚಿಂತೆ ಕಾಣುವಂತಹುದೇ, ಕಳೆದ 5 ವರುಷಗಳಿಂದ. ಆದರೆ ಈ ಬಾರಿ ಅದರ ಪ್ರಮಾಣ ಸ್ವಲ್ಪ ಜಾಸ್ತಿಯೇ ಇದ್ದಂತಿತ್ತು. ಮನೆಯ ಕಡೆ ಮೆಲ್ಲನೆ ಕಾಲೆಳೆದುಕೊಂಡು ಹೊರಟಳು. ಅವಳ ಗಂಡ ಅಂಗರ ಎದ್ದು ಕೂತಾಗಿತ್ತು ಆಗಲೇ. ಈಯೊಡೊಂತೆ ಭಂಗ ಉಂಡಾ ಪಂಡ್‌ದ್ ಪೋಡಿಗೆ ಆವೊಂದುಂಡು (ಈ ಬಾರಿ ಸ್ವಲ್ಪ ಕಷ್ಟ ಆಗುತ್ತದೆಯೆನೋ ಅಂತ ಹೆದರಿಕೆ ಆಗುತ್ತಿದೆ) ಅಂದಳು ಸೇಸು. ಈ ಪುಲ್ಯ ಕಾಂಡೆ ಪೊಕ್ಕಡೆ ಮಂಡೆ ಬೆಚ್ಚ ಮಲ್ತೊನೊಚ್ಚಿ , ದಾಲಾ ಆಪುಜ್ಜಿ, ಪೋ ಚಾ ಮಲ್ಪು (ನೀನು ಬೆಳಗ್ಗೆ ಬೆಳಗ್ಗೆ ತಲೆ ಕೆಡಿಸಿಕೊಳ್ಳಬೇಡ, ಏನೂ ಅಗುವುದಿಲ್ಲ, ಈಗ ಹೋಗು, ಚಾ ಮಾಡು) ಅಂದ ಅಂಗರ ಅಲ್ಲಿಂದೆದ್ದು ತಾನೂ ಸಮುದ್ರದ ಕಡೆಗೆ ಹೊರಟ. ಅಂಗರ ಹೆಂಡತಿಯ ಬಾಯಿ ಮುಚ್ಚಿಸಲು ಹಾಗೆ ಹೇಳಿದ್ದರೂ, ಹೆದರಿಕೆ ಅವನಿಗೂ ಇದ್ದೇ ಇತ್ತು. ಆದರೆ ತಾನೂ ನಿನ್ನ ಹಾಗೆ ಹೆದರಿದ್ದೇನೆ ಎಂದು ಹೇಳಿ ಸೇಸುವನ್ನ ಮತ್ತಷ್ಟು ಚಿಂತೆಗೀಡುಮಾಡುವುದು ಬೇಡ ಎಂದು ಸುಮ್ಮನಿದ್ದ. ಸಮುದ್ರ ಹೋದ ಮಳೆಗಾಲಕ್ಕೇ ಹೆಚ್ಚು ಕಡಿಮೆ ಮನೆ ಬಾಗಿಲವರೆಗೆ ಬಂದಿತ್ತು. ಈ ಬಾರಿ ಏನಾಗುವುದೋ ಎಂಬುದೇ ಅವರ ಚಿಂತೆ. ಅನ್ನದ ಏಕೈಕ ಮೂಲವಾದ ಕಡಲೇ, ಜೂನ್ ಜುಲೈ ತಿಂಗಳು ಬಂದ ಕೂಡಲೇ ಪ್ರಾಣಕ್ಕೆ ತಂದಿಡುತ್ತಿತ್ತು.

ಮಂಗಳೂರಿಂದ ಇಪ್ಪತ್ತು ಕಿಲೋಮೀಟರು ದೂರದಲ್ಲಿದೆ ಉಳ್ಳಾಲ. ಪಂಪ್ವೆಲ್ ಸರ್ಕಲ್ಲಿಗೆ ಹೋಗಿ, ಅಲ್ಲಿಂದ ಬಲಕ್ಕೆ ತಿರುಗಿ ಸೀದಾ ಹೋದರೆ ಮೊದಲು ತೊಕ್ಕೊಟ್ಟು , ಅಲ್ಲಿಂದ ಹಾಗೆ ಮುಂದೆ ಒಂದೇ ದಾರಿ ಉಳ್ಳಾಲಕ್ಕೆ. ಉಳ್ಳಾಲ ಸ್ವಲ್ಪ ದೊಡ್ಡ ಊರೇ. ಕಡಲ ತಡಿಯಲ್ಲಿರುವ ಸೋಮೇಶ್ವರ ದೇವಸ್ಥಾನ ಪ್ರಸಿದ್ಧ. ಹಾಗೆಯೇ ಇಲ್ಲಿನ ಮಸೀದಿಯೂ. ಮಂಗಳೂರು ಹತ್ತಿರವಿರುವುದರಿಂದ ವಾಣಿಜ್ಯ ವಹಿವಾಟೂ ಜಾಸ್ತಿ. ಮೀನುಗಾರಿಕೆಯನ್ನ ನಂಬ್ಕೊಂಡು ಬದುಕುವವರ ಸಂಖ್ಯೆಯೂ ಬಹಳವಿದೆ. ಅಂಗರನಂತಹ ಹಲ ಕುಟುಂಬಗಳಿವೆ ಇಲ್ಲಿ.

ಅಂಗರನಿಗೆ ಈಗ ವರುಷ 45. ಮೊದಲು ತಾನೇ ಒಂದು ಪುಟ್ಟ ದೋಣಿ ಇಟ್ಟುಕೊಂಡು, ದೂರ ಕಡಲಿಗೆ ಸಾಗಿ, ಮೀನು ಹಿಡಿದು ತಂದು ಮಾರುವ ಕೆಲಸ ಮಾಡುತ್ತಿದ್ದ. ಆದರೆ ವರ್ಷ ಕಳೆದಂತೆ ಅದು ಆಗು ಹೋಗುವ ಕೆಲಸವಲ್ಲ ಅಂತ ಅನಿಸಿತು ಅವನಿಗೆ. ಕೆಲ ದಿನ ಸಿಕ್ಕಾಪಟ್ಟೆ ಮೀನು ಸಿಕ್ಕಿ , ದುಡ್ಡೋ ದುಡ್ಡು, ಇನ್ನು ಕೆಲವು ದಿನ ನಾಸ್ತಿ. ಈ ಡೋಲಾಯಮಾನ ಬದುಕಿನಿಂದ ಬೇಸತ್ತು ದೋಣಿಯನ್ನು ಹತ್ತು ವರ್ಷದ ಕೆಳಗೇ ಯಾರಿಗೋ ಅರ್ಧ ದುಡ್ಡಿಗೆ ಮಾರಿ, ಅಬ್ದುಲ್ಲ ಬ್ಯಾರಿಯ ಬೋಟಿನಲ್ಲಿ ಸೇರಿಕೊಂಡಿದ್ದ. ಅಬ್ದುಲ್ಲನಿಗೆ 2 ಯಾಂತ್ರಿಕ ಬೋಟುಗಳಿವೆ. ಸಮುದ್ರದಲ್ಲಿ ಬಹಳ ದೂರವರೆಗೆ ಸಾಗಿ ಮೀನುಗಾರಿಕೆ ನಡೆಸುತ್ತದೆ ಅವನ ಬೋಟು. ಅಂಗರ ವಾರೊಪ್ಪತ್ತಿನಲ್ಲಿ ಬಲೆ ಬೀಸಿ ಹಿಡಿಯುಷ್ಟು ಮೀನನ್ನ ಈ ಬೋಟಿನ ಬಲೆ, ದಿನದೊಳಗೆ ಹಿಡಿದು ಬಿಡುತ್ತಿತ್ತು!

ದಿನದ ಊಟ ತಿಂಡಿ - ಸಂಬಳದ ಚಿಂತೆ ಇರಲಿಲ್ಲ ಈ ದುಡಿತದಲ್ಲಿ. ಆದರೆ ವಾರಗಟ್ಟಲೇ ಮನೆಯಿಂದ ಹೊರಗಿರಬೇಕಾಗುತ್ತಿತ್ತು ಹೆಚ್ಚಿನ ಬಾರಿ. ಅದೊಂದೇ ಬೇಜಾರು. ಸೇಸುವನ್ನ, ಮಕ್ಕಳನ್ನ ಬಿಟ್ಟು ಸಮುದ್ರದ ನಡುವೆ ವಾರಗಟ್ಟಲೆ ತೇಲುತ್ತಿರುವುದು ಭಯಂಕರ ಬೇಜಾರು ತರುತ್ತಿತ್ತು ಅಂಗರನಿಗೆ. ಆದರೆ ದಿನಕಳೆದಂತೆ ಅದಕ್ಕೆ ಹೊಂದಿಕೊಂಡು ಬಿಟ್ಟ . ಈಗ ಅಂಗರ ಮದರ್ ಇಂಡಿಯಾಬೋಟಿನ ಹಿರಿಯ ತಲೆ. ಹೊಸ ಹುಡುಗರು ಇವನಿಗೆ ಗೌರವ ಕೊಡುತ್ತಿದ್ದರು, ಸ್ವತಃ ಅಬ್ದುಲ್ಲ ಇವನನ್ನ ಹೊಗಳುತ್ತಿದ್ದ. ಅತ್ಯಂತ ಆರಾಮ, ಈ ವಿಚಾರದಲ್ಲಿ.

ಅಂಗರನ ಮನೆ ಇದ್ದಿದ್ದು, ಸಮುದ್ರದಿಂದ ಸುಮಾರು 200-250 ಅಡಿ ದೂರದಲ್ಲಿ. ಆ ಮಂಗಳೂರು ಹಂಚಿನ ಸಣ್ಣ ಮನೆಯನ್ನ ಅಂಗರ ತಾನು ಬೋಟು ಕೆಲಸಕ್ಕೆ ಸೇರಿ 5 ವರ್ಷಕ್ಕೆ ಕಟ್ಟಿಸಿದ್ದ. ಮೊದಲು ಗುಡಿಸಲಿತ್ತು ಅಲ್ಲಿ. ಮನೆ ಕಟ್ಟಿಯಾಗಿ ವರುಷವಾಗುವುದರೊಳಗೇ ತಲೆಬಿಸಿಯೂ ಶುರುವಾಯಿತು. ಅಷ್ಟು ದಿನ, ಅಂಗರನ ಬದುಕಿನ 40 ವರ್ಷ ಸುಮ್ಮನಿದ್ದ ಕಡಲರಾಜ, ಆ ವರುಷದಿಂದ ಮಾತಾಡಲು ಆರಂಭಿಸಿದ್ದ. ಕಡಲು ಕೊರೆತ ಎಂಬ ಹೊಸ ಸಮಸ್ಯೆ ಹುಟ್ಟಿಕೊಂಡಿತ್ತು ಅಲ್ಲಿ. ಸಮುದ್ರ ಮಳೆಗಾಲ ಜೋರಾಗುತ್ತಿದ್ದ ಹಾಗೆ ತಾನೂ ಜೋರಾಗುತ್ತಿತ್ತು. ಮಳೆಯ ಆರ್ಭಟ ಹೆಚ್ಚುತ್ತಿದ್ದ ಹಾಗೇ ಸಮುದ್ರವೂ ಭೋರ್ಗೆರೆಯಲು ಆರಂಭ. ದೊಡ್ಡ ದೊಡ್ದ ಅಲೆಗಳೊಡನೆ ದಡಕ್ಕೆ ಅಪ್ಪಳಿಸುತ್ತಿದ್ದರೆ, ರಾಶಿ ರಾಶಿ ಮರಳು, ನೀರ ಪಾಲು. ಒಂದಿಷ್ಟು ಸಮಯ ಬಿಟ್ಟು , ಇನ್ನೂ ದೊಡ್ಡ ಅಲೆ, ಮತ್ತೊಂದಿಷ್ಟು ತೆಕ್ಕೆಗೆ ಸಿಕ್ಕಿದ್ದನ್ನ ತೆಗೆದುಕೊಂಡು ವಾಪಸಾಗುತ್ತಿತ್ತು. ಚೂರು ಚೂರೇ ಚೂರು ಚೂರೇ ನೆಲ ನೀರ ಪಾಲಾಗುತ್ತಿತ್ತು.

ಮೊದಲ ವರ್ಷ ಸ್ಟೀವನ್ ಪರ್ಬುಗಳ 20 ತೆಂಗಿನ ಮರವನ್ನ ಮತ್ತು ಪಂಪು ಶೆಡ್ಡನ್ನು ಸಮುದ್ರ ತೆಗೆದುಕೊಂಡು ಹೋಯಿತು. ಅಷ್ಟು ಹೊತ್ತಿಗೆ ಈ ಸುದ್ದಿ ಪೇಪರಿನಲ್ಲಿ ಬಂದು ಟೀವಿಯವರು ಶೂಟಿಂಗು ಮಾಡಿ, ಅವರ ಮನೆ ಸಾಲುಗಳೆದುರಿನ ಕಡಲ ದಂಡೆಗೆ ರಾಶಿ ರಾಶಿ ಮರಳ ಚೀಲಗಳು ಬಂದು ಬಿದ್ದವು. ಅಲ್ಲಿಗೆ ಒಂದು ಮಳೆಗಾಲ ಕಳೆಯಿತು. ಮುಂದಿನ ಮಳೆಗಾಲದಲ್ಲಿ ಅಲೆಗಳ ಆರ್ಭಟ ಮತ್ತೂ ಜಾಸ್ತಿಯಾಗಿ ಪರ್ಬುಗಳು ತಮ್ಮ ಮನೆಯನ್ನ ಖಾಲಿ ಮಾಡಿ, ಮಂಗಳೂರಿನ ತಮ್ಮ ಮಗನ ಮನೆಗೆ ಹೋಗಬೇಕಾಯಿತು. ಅಲೆಗಳ ಹೊಡೆತ ತಾಳಲಾರದೇ ಆ ಮನೆ ಒಂದು ಬೆಳಗ್ಗೆ ಕುಸಿದು ಬಿದ್ದಿತ್ತು. ಜೊತೆಗೆ, ಅಲ್ಲಿನ ಸಾಲು ಮನೆಗಳವರ ಧೈರ್ಯವೂ.

ಮುಂದಿನ ಮಳೆಗಾಲದಲ್ಲಿ ಸಂಜೀವಣ್ಣನ ಮನೆ, ಅಂಗರನ ಜೊತೆಗೆ ಕೆಲಸಕ್ಕೆ ಬರುತ್ತಿದ್ದ ಕೇಶುವಿನ ಗುಡಿಸಲು ಎಲ್ಲ ಸ್ವಾಹಾ. ಅಂಗರನಿಗೆ ತಮ್ಮ ಮನೆ ಬಹಳ ದೂರವಿದೆ, ಏನೂ ಆಗಲಾರದು ಎಂಬ ವಿಶ್ವಾಸ. ಮರು ಬಾರಿಗೆ ಇವನ ಮನೆಯೆದುರಿನ ಮನೆಯೊಂದು ತೊಳೆದು ಹೋದಾಗ ವಿಶ್ವಾಸ ಕುಸಿಯುತ್ತ ಬಂತು. ಉಳಿದ ಕಾಲದಲ್ಲೆಲ್ಲ ತಮ್ಮಿಂದ ಮಾರುಗಟ್ಟಲೇ ದೂರದಲ್ಲಿ ಶಾಂತವಾಗಿ ಬಿದ್ದುಕೊಂಡಿರುವ ಸಾಗರ, ಇನ್ನು ಸ್ವಲ್ಪ ದಿನಕ್ಕೆ ಅದು ಹೇಗೆ ರೌದ್ರವಾಗಿ ಮನೆಯಂಗಳಕ್ಕೇ ಬಂದು ಹೆದರಿಸುತ್ತದೆ. ಛೇ ಅಂದುಕೊಂಡು ತಲೆ ಕೊಡವಿಕೊಂಡ, ಹೋದ ಮಳೆಗಾಲದಲ್ಲಿ ಅರ್ಧ ಕರಗಿ ಉಳಿದುಕೊಂಡಿದ್ದ ಮೋಟುಗೋಡೆಯ ಮೇಲೆ ಕೂತು ಸಮುದ್ರನೋಡುತ್ತಿದ್ದ ಅಂಗರ.

ರೇಡಿಯೋದ ಯಾವುದೋ ಕಾರ್ಯಕ್ರಮ ಚಹ ಕುಡಿಯುವಾಗ ಕಿವಿ ಮೇಲೆ ಬೀಳುತ್ತಿತ್ತು.. ಭೂಮಿಯ ಉಷ್ಣತೆ ಹೆಚ್ಚಾಗುತ್ತಿದೆ.. ದಕ್ಷಿಣ ಮತ್ತು ಉತ್ತರ ಧ್ರುವದ ಹಿಮ ಬಂಡೆಗಳು ಕರಗಿ ಸಮುದ್ರ ಮಟ್ಟ ಹೆಚ್ಚಾಗುತ್ತದೆ.. ಭೂಮಿಯ ಕರಾವಳಿ ತೀರದ ಪಟ್ಟಣಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ.. ಅಂಗರನಿಗೆ ಅದೆಲ್ಲ ಅರ್ಥವಾಗದೇ ರೇಡಿಯೋವನ್ನ ಪಟ್ ಅಂತ ಬಂದು ಮಾಡಿದ. ಮಗ ಬಹಳ ಆಸಕ್ತಿಯಿಂದ ಆ ಕಾರ್ಯಕ್ರಮ ಕೇಳುತ್ತಿದ್ದ, ಏನೋ ಹೇಳ ಹೊರಟವನು ಅಪ್ಪನ ಅಸಹನೆಯಿಂದ ಕೂಡಿದ ಮುಖ ನೋಡಿ ಸುಮ್ಮನಾದ.

ಜೂನ್ ಮೊದಲ ವಾರದಲ್ಲಿಯೇ ಈ ಸಲ ಮರಳ ಚೀಲ ತುಂಬುವ ಕಾಮಗಾರಿ ಅರಂಭವಾಗಿದ್ದು ನೋಡಿ ಬಹಳ ಆನಂದವಾಯ್ತು ಈ ಕೇರಿಯವರೆಲ್ಲರಿಗೂ. ಹೋದ ಸಲ ಗವರ್ಮೆಂಟು ಈ ಕಾರ್ಯ ಆರಂಭಿಸಿದ್ದು ಒಂದೆರಡು ಮನೆಹೋದ ಮೇಲೆಯೇ ಆಗಿತ್ತು. ಪ್ರತಿ ಬಾರಿಯೂ ಮರಳ ಚೀಲ ಹಾಕುವುದರ ಬದಲು ಅಲ್ಲಿ ಬೊಂಬಾಯಿಯಲ್ಲಿ ಮಾಡಿದ ಹಾಗೆ ಕಲ್ಲು ತಂದು ಹಾಕುವುದಕ್ಕೇನು ರೋಗ ಅಂತ ಎಲ್ಲ ಮಾತಾಡಿಕೊಂಡರು. ಅದನ್ನು ಹೋದ ಬಾರಿ ಬಂದ ಬಿಳಿ ಅಂಗಿಯವರಿಗೆ ಹೇಳಿದ್ದರು ಕೂಡಾ. ಆದರೆ ಅದೇನೂ ಪ್ರಯೋಜನವಾದ ಹಾಗಿಲ್ಲ. ಮಾಡುತ್ತೇವೆ, ನೋಡುವಾ ಅಂತ ಆವತ್ತು ಹೋದವರು ಮತ್ತೆ ಬಂದಿದ್ದು ಇವತ್ತೇ. ಪುಣ್ಯಕ್ಕೆ ಮನೆ ಹೋದವರಿಗೆ ಪರಿಹಾರ ಸಿಕ್ಕಿತ್ತು ಅನ್ನುವುದೇ ಸಮಾಧಾನ.

ವರ್ಷಧಾರೆ ಜೋರಾಯಿತು. ಮರಳ ಚೀಲಗಳ ಸುದ್ದಿಗೆ ಅಲೆಗಳೂ ಬರಲಿಲ್ಲ, ಒಂದು 10-15 ದಿನ. ಸೇಸುವಿನ ಮುಖದ ದುಗುಡವೂ ಮಾಯವಾಗಿತ್ತು. ಅಂಗರ ಮನೆ ಹಂಚು ರಿಪೇರಿ, ಅಂಗಳಕ್ಕೆ ತೆಂಗಿನ ಮಡಲು ಹಾಕುವುದು ಇತ್ಯಾದಿ ಮಾಡುತ್ತಲಿದ್ದ. ಮಳೆಯಾದ್ದರಿಂದ ಬೋಟು ನೀರಿಗಿಳಿದಿರಲ್ಲ. ಮಗ ಶಾಲೆಗೆ ಹೋಗಿ ಬರುವುದಷ್ಟೇ ವೃತ್ತಿ. ಆವತ್ತು ರಾತ್ರೆ ಮಲಗಿದ್ದ ಸೇಸುವಿಗೆ ಒಮ್ಮೆಗೇ ಎಚ್ಚರವಾಯ್ತು. ಕುಂಭದ್ರೋಣ ಮಳೆ ಹೊರಗೆ. ಜೋರು ಶಬ್ದ. ಹಾಗೇ ಕುತೂಹಲಕ್ಕೆ ಬಾಗಿಲು ತೆಗೆದವಳಿಗೆ, ಆ ಕತ್ತಲೆಯಲ್ಲೊ ಸಮುದ್ರ ತಮ್ಮ ಅಂಗಳದಿಂದ ಮಾರು ದೂರದಲ್ಲಿ ಅಪ್ಪಳಿಸುತ್ತಿದೆ ಅನ್ನುವುದು ಗೊತ್ತಾಗಿ ಎದೆ ಧಸಕ್ ಅಂದಿತು. ಗಂಡ ಮಗನನ್ನ ಗಡಬಡಿಸಿ ಎಬ್ಬಿಸಿದಳು. ಮೂರು ಜನವೂ ಹೊರ ಬಂದು ಮಳೆಯಲ್ಲಿ ನೆನೆಯುತ್ತಾ ಸಮುದ್ರದ ಅಲೆಯ ಹೊಡೆತವನ್ನೇ ನೋಡುತ್ತ ನಿಂತರು.

ಹೆಂಡತಿ ಮತ್ತು ಮಗನನ್ನ ಹಿಡಿದುಕೊಂದು ನಿಂತಿದ್ದ ಅಂಗರ , ತಾವು ಸಮುದ್ರದ ಜಾಗದಲ್ಲಿ ಮನೆ ಕಟ್ಟಿದ್ದೆವೋ, ಅಥವಾ, ಸಮುದ್ರಕ್ಕೇ ಈಗ ತಮ್ಮ ಜಾಗ ಹೊಸತಾಗಿ ಬೇಕೋ ಅನ್ನುವುದನ್ನ ಆಲೋಚಿಸುತ್ತಾ ನಿಂತಿದ್ದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X