ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದಿದೆ ಹೊಸ ವರುಷ ತಂದಿದೆ ಬಲು ಹರುಷ

By Staff
|
Google Oneindia Kannada News

Cheers! Let's celebrate the New Year!
ಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.

* ಶ್ರೀನಿಧಿ ಡಿ.ಎಸ್.

ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು ಸಂಭ್ರಮ, ಒಂದು ನವಿರು ಭಾವ ಗರಿಗೆದರುವ ಸಮಯ. ಎಲ್ಲದನ್ನ ಸಂತಸದ ಕಣ್ಣಲ್ಲಿ ನೋಡುವ ಆತುರ.

ಹೊಸ ವರ್ಷದ ಹಿಂದಿನ ದಿನದ ಸಂಜೆಯ ಸಂತೋಷಕೂಟದಲ್ಲಿ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಅವಸರ ಆತನಿಗೆ, ಇಂತಹ ಮಧುರ ಘಳಿಗೆಯಲ್ಲಿ ಆಕೆ ತನ್ನನ್ನ ತಿರಸ್ಕರಿಸಲಾರಳು ಅನ್ನುವ ಆಶಯ. ಆರೆಂಟು ತಿಂಗಳಿಂದ ಕಣ್ಣಲ್ಲೇ ಮಾತಾಡಿದ್ದು ಸಾಕಾಗಿದೆ ಅವನಿಗೆ.

ಆಕೆಗೆ, ಅವನು ತನ್ನ ಕೈಯನ್ನ ಇಂದಾದರೂ ಹಿಡಿದು ಪ್ರೀತಿಸುವ ಸಂಗತಿಯನ್ನ ಹೇಳಬಾರದೇ ಅನ್ನುವ ಆಸೆ. ತನಗೆ ಅದನ್ನ ಹೇಳುವ ಧೈರ್ಯ ಖಂಡಿತಾ ಇಲ್ಲ, ಅದು ಆತನಿಗೂ ತಿಳಿದಿಲ್ಲವೇ? ಹೊಸ ವರುಷ ಆ ಧೈರ್ಯ ಅವನಿಗಾದರೂ ಕೊಡಬಾರದೇ?

ಹಲವು ಕಾಲದ ಮೇಲೆ ಭೇಟಿಯಾಗುತ್ತಿರುವ ಜೀವದ ಗೆಳೆಯರ ಜೊತೆ ಕೂತು ಮಾತಾಡುವ ಸಂಭ್ರಮ ಇವನಿಗೆ. ಚಳಿಯ ರಾತ್ರಿಯಲ್ಲಿ ಯಾವುದೋ ಶಿಖರಾಗ್ರದಲ್ಲಿ ಬೆಂಕಿಯ ಸುತ್ತ ಕೂತು ಅದರ ಬೆಳಕೊಳಗೆ ಬೆಳಗು ಮಾಡುವ ಕಾತರ.. ಯಾವ ಗಲಾಟೆ, ಗೌಜೂ ಇಲ್ಲದೇ.

ಇಂದು ತನ್ನಿನಿಯ ಅಮೇರಿಕದಿಂದ ಬರುತ್ತಿದ್ದಾನೆ, ವರುಷದ ಕೆಲಸ ಮುಗಿಸಿ. ಆತ ಹೊಸವರುಷದಂದು ನನ್ನ ಜೊತೆ ಇರುತ್ತಾನೆ. ಅದಕ್ಕಿಂತ ಬೇರೇನು ಬೇಕು ಅನ್ನುವವಳು ಈ ಹುಡುಗಿ. ಅವನ ಹಿತಕರ ಅಪ್ಪುಗೆಯಲ್ಲಿ ಬೆಳಗು ಮಾಡಿದರೆ, ಅದುವೇ ಸ್ವರ್ಗ ಈಕೆಗೆ.

ಈ ಹುಡುಗನಿಗೆ ಹೊಸ ಕೆಲಸ ಸಿಕ್ಕಿದೆ, ಹೊಸ ವರುಷದಂದೇ ಸೇರಬೇಕಂತೆ, ರಜೆ ಇಲ್ಲ ಆವತ್ತು. ಅವನಿಗದು ಬಲು ಖುಷಿಯೇ! ನಾಳಿನಿಂದ ಕೆಲಸ ಹುಡುಕಿಕೊಂಡು ಫೈಲು ಹಿಡಿದು ಸುತ್ತ ಬೇಕಿಲ್ಲ. ಅಮ್ಮನನ್ನ ಕರೆದುಕೊಂಡು ದೇವಸ್ಥಾನಕ್ಕೆ ಹೋಗಬೇಕು ಅಂದು ಬೆಳಗು. ಪಾಪ ಅವಳು ಬಹಳ ಕಷ್ಟ ಪಟ್ಟಿದ್ದಳು ತನ್ನ ಒಳಿತಿಗೆ. ಆಕೆಗಿದು ಹೊಸ ವರ್ಷದ ಕಾಣಿಕೆ, ತನಗೂ ಕೂಡ.

ವಾರದ ಹಿಂದಷ್ಟೇ ಹೊಸ ಬೇಕರಿ ತೆರೆದಾತ ಈಗಾಗಲೇ ಖುಷಿಯಲ್ಲಿದ್ದಾನೆ, ಕೇಜಿಗಟ್ಟಲೆ ಕೇಕು ಖಾಲಿಯಾಗಿವೆ. ನಾಡಿದ್ದು ಅರ್ಧದಿನ ಅಂಗಡಿಯನ್ನ ಮುಚ್ಚಿ, ಹೆಂಡತಿಯನ್ನ ಸಿನಿಮಾಕ್ಕೆ ಕರೆದೊಯ್ಯುವ ಆಲೋಚನೆ ಅವನಿಗೆ. ಮಾಡಿದ ಸಾಲ ಬೇಗನೆ ತೀರುವಂತೆ ಕಾಣುತ್ತಿದೆ.

ಬ್ಲಾಕ್ ಟಿಕೇಟು ಮಾರುವ ಹುಡುಗನಿಗೆ ಸ್ವರ್ಗಕ್ಕೆ ಮೂರೇ ಗೇಣು, ಮುಂದಿನೆದಡು ದಿನದಲ್ಲಿ ತುಂಬ ದುಡ್ಡು ಮಾಡಿಬಿಡಬಹುದು, ಎಲ್ಲರಿಗೂ ರಜೆ, ಸಿನಿಮಾ ನೋಡಲು ಬಂದೇ ಬರುತ್ತಾರೆ. ತಮ್ಮನಿಗೆ ಸೈಕಲ್ಲು ತೆಗೆಸಿಕೊಡಲು ತನಗೆ ಇನ್ನು 500 ರೂಪಾಯಷ್ಟೇ ಬೇಕಾಗಿರುವುದು. ಅದನ್ನ ಹೇಗಾದರೂ ತನಗೆ ಹೊಸ ವರ್ಷ ಕೊಟ್ಟೇ ಕೊಡುತ್ತದೆ.

ರಸ್ತೆ ಬದಿಯಲ್ಲಿ ಭಜ್ಜಿ ಮಾಡುವ ಹೆಂಗಸಿಗೂ ಕೈ ತುಂಹ ಕೆಲಸ. ಮೊದಲೇ ಚಳಿ, ಜನ ತಡರಾತ್ರಿಯ ವರೆಗೂ ರಸ್ತೆಯಲ್ಲಿರುತ್ತಾರೆ. ಎಂದಿಗಿಂತ ಹೆಚ್ಚಿನ ವ್ಯಾಪಾರ ಆಗಲೇ ಬೇಕು. ಮಗಳಿಗೆ ಹೊಸ ಬಟ್ಟೆ ಕೊಡಿಸಬೇಕು. ಹೊಸ ವರ್ಷ ತನಗೇನಾದಾರೂ ಕೊಟ್ಟರೆ, ತಾನು ಮಗಳಿಗೆ ಏನಾದರೂ ಕೊಟ್ಟೇನು.

ಹೊಸ ವರ್ಷಕ್ಕೆ ಹಲವು ಬಣ್ಣ, ಹಚ್ಚುವವರೂ ಹಲವರು. ಬನ್ನಿ, ನಾವೂ ಏನಾದರೂ ಬಣ್ಣ ಹಚ್ಚೋಣ, ಖುಷಿಯ ಕುಂಚ ಹಿಡಿದು, ಬದುಕ ಫಲಕದಲ್ಲಿ.

ನನ್ನ ನೆಚ್ಚಿನ ಕವಿ ಕೆ.ಎಸ್ ನರಸಿಂಹ ಸ್ವಾಮಿ, ತಮ್ಮ ಕವನವೊಂದರಲ್ಲಿ ಹೊಸ ವರುಷವನ್ನು ಹೀಗೆ ಬಣ್ಣಿಸುತ್ತಾರೆ.

ನೋವಿಗೆ ನಲಿವನು ಲೇಪಿಸಿದಂತೆ
ಮೌನದೊಳಿಂಪನು ರೂಪಿಸಿದಂತೆ,
ತಳಿರಲಿ ಕಿರಣದ ಛಾಪಿಸಿದಂತೆ,
ಹಸಿರಲಿ ಕೆಂಪಗೆ ಕಿರುನಗೆಯಂತೆ
ಬಂದಿದೆ, ಬಂದಿದೆ ಹೊಸ ವರುಷ ;
ತಂದಿದೆ ಲೋಕಕೆ ಬಲು ಹರುಷ.

ಯಾವ ನೋವ ಮರೆಸಲು ಇದು ಬಂತು,
ಬಾಗಿಲ ತೆರೆಯುತ ಬೀದಿಯೊಳಿಂತು?
ಹೂಗಂಪಿನ ತಂಗಾಳಿಗಳಲೆದು
ಶುಭವನು ಕೋರುವ ನುಡಿಗಳು ಸುಳಿದು
ಬಂದಿದೆ, ಬಂದಿದೆ ಹೊಸ ವರುಷ ;
ತಂದಿದೆ ಲೋಕಕೆ ಬಲು ಹರುಷ.

ಹೊಸ ವರುಷ, ಎಲ್ಲರಿಗೂ ಶುಭ ತರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X