• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲೆನಾಡ ನೇಗಿಲ ಯೋಗಿಯ ಹಾಡು ಪಾಡು

By Staff
|

Changing agriculture picture of malenaduಮೊನ್ನೆ ಮನೆಗೆ ಹೋಗಿದ್ದೆ. ಊರಿನ ಕೃಷಿ ಚಿತ್ರಗಳು ಕೆಡುತ್ತಿವೆ. ಕೂಲಿಗೆ ಜನ ಸಿಗುವುದಿಲ್ಲ, ಮಳೆ ಯಾವಾಗೆಂದರೆ ಆವಾಗ ಬರುತ್ತಿದೆ. ಅದ್ಯಾವ ಭತ್ತ ಬೆಳೆದರೂ ಕ್ವಿಂಟಾಲಿಗೆ 800ರ ಮೇಲೆ ಸಿಗದು.. ಚಿತ್ರಚಾಪಕ್ಕೆಂದ ಬರೆದ "ಕೃಷಿ" ನೆನಪಾಯಿತು..

* ಶ್ರೀನಿಧಿ ಡಿ.ಎಸ್.

ದಕ್ಷಿಣ ಕನ್ನಡದ ಹವಾಮಾನ ಸ್ವಲ್ಪ ವಿಚಿತ್ರ. ಈ ವರ್ಷ ಎಪ್ರಿಲ್‌ಗೇ ಶುರುವಾದ ಮಳೆ ಮುಂದಿನ ವರ್ಷ ಜುಲೈ ಬಂದರೂ ಆರಂಭವಾಗಿರುವುದಿಲ್ಲ. ಹೋದ ಮಳೆಗಾಲವನ್ನ ನಂಬಿಕೊಂಡು, ಜೊತೆಗೆ ಈ ಬಾರಿ ಮೇ ಕೊನೆಯಲ್ಲಿ ಬಂದ ಅರ್ಧಂಬರ್ಧ ಮಳೆಯನ್ನ ನೋಡಿ ಈ ಜೂನ್ ಮೊದಲನೇ ವಾರಕ್ಕೆ ನೇಜಿ ನೆಡಬೇಕು ಅಂತ ಯಾವನಾದರೂ ತೀರ್ಮಾನಿಸಿ ಭತ್ತ ನೆನೆಸಿಟ್ಟರೆ, ಮಳೆ ದೇವರಾಣೆಯಾಗೂ ಬರುವುದಿಲ್ಲ. ಆ ಗೋಣಿಚೀಲದಲ್ಲಿ ನೆನೆದ ಬೀಜ ಹೊರ ತೆಗೆದು, ಹರಡಿಸಿ, ಮೊಳಕೆ ಹೊರ ಬರುವ ವೇಗವನ್ನೆಲ್ಲ ಕಡಿಮೆ ಮಾಡಿ ಮತ್ತೆ ಆಕಾಶ ನೋಡಬೇಕಾದ ಪರಿಸ್ಥಿತಿ.

ನಮ್ಮ ಶಂಕರ ಭಟ್ಟರೂ ಅದೇ ಭಾನಗಡಿ ಮಾಡಿಕೊಂಡು ಬಿಟ್ಟಿದ್ದರು, ಒಂದು ಬಾರಿ. ಅವರ ಮನೆಗೆ ಒಂದು ಸಂಜೆ ಹೋಗಿ ನೋಡಿದರೆ, ಜಗಲಿ ತುಂಬ ಹರಡಿಟ್ಟ ಭತ್ತ. "ಏನ್ ಮಾಡುದು ಮಾರಾಯ, ಈ ಮಳೆ ಸರಿಯಾದ ಟೈಮಿಗೇ ಕೈಕೊಟ್ಟಿದೆ ಈ ಸಲ" ಅಂತ ತಲೆ ಬಿಸಿ ಮಾಡಿಕೊಂಡರು ಅವರು. ಒಂದು ಆರೆಂಟು ಎಕರೆ ಜಮೀನಿದೆ ಅವರಿಗೆ. ಬೆಟ್ಟು ಗದ್ದೆ, ಬಯಲು ಗದ್ದೆ ಅದೂ ಇದೂ ಅಂತ ಒಂದು ನಾಲ್ಕು ಪ್ರಭೇದಗಳು ಅದರಲ್ಲಿ. ಬೆಟ್ಟು ಗದ್ದೆ ಅಂದರೆ ಗುಡ್ಡದ ತಪ್ಪಲಿನ ಗದ್ದೆಗೆ ಅಲ್ಲಿಂದ ಹರಿದು ಬರುವ ನೀರೇ ಆಧಾರ. ಬಯಲು ಗದ್ದೆಗೆ ಎದುರಿನ ಹಳ್ಳದ ನೀರು ಸಾಕು, ಜನವರಿ ತಿಂಗಳವರೆಗೂ ನೀರಿಗೆ ತೊಂದರೆ ಇಲ್ಲ.

ಹಳ್ಳದಲ್ಲಿ ನೀರು ಹರಿಯಬೇಕು ಅಂದರೆ, ಸರಿಯಾಗಿ 4 ಮಳೆಯಾದರೂ ಬರಲೇ ಬೇಕು. ಅದೂ ಹಿಂದಿನ ಗದ್ದೆ ಸಾಲುಗಳ ಬಾಯಾರಿಕೆಯನ್ನ ತಣಿಸಿ, ಮತ್ತೆ ಈ ಗದ್ದೆಗಳಿಗೆ. ಶಂಕರ ಭಟ್ಟರ ಗದ್ದೆಗೆ ಬಂದ ನೀರು ಅವರಿಗೆ ಮಾತ್ರವಲ್ಲ, ಪಕ್ಕದ ನಮ್ಮ ಗದ್ದೆಗೂ ಸಹ. ನಮ್ಮ ಗದ್ದೆಯಲ್ಲಿ ಹರಿದ ನೀರು ಮತ್ತೆ ಇಜಿನ ಸಾಯಿಬನ ಮರಳು ಗದ್ದೆಗೆ. ನಮ್ಮ ಹೊಲದಿಂದ ತನ್ನ ಗದ್ದೆಗೆ ನೀರು ಹೋಗಲು ದಾರಿ ಮಾಡಿಕೊಳ್ಳುವ ಜವಾಬ್ದಾರಿ ಇಜಿನನದೇ. ಇಜಿನನಿಗೆ ಈಗ ಎಪ್ಪತ್ತು ವರ್ಷ. ಆದರೆ ದಿನ ಬೆಳಗಾದರೆ ಒಂದು ಗುದ್ದಲಿ ಹಿಡಿದುಕೊಂಡು ಹಾಜರು, ನೀರ ದಾರಿಯನ್ನ ಸರಿ ಮಾಡಲು. ಅವನೇ ಬರದೇ ಬೇರೆ ವಿಧಿಯಿಲ್ಲ. ಮಕ್ಕಳು ಈ ಊರಲ್ಲಿದ್ದರೆ ತಾನೆ? ಅವನಿಗೂ ಐದಾರು ಎಕರೆ ಜಮೀನಿದೆ, ತೋಟ, ಗದ್ದೆ ಅಂತ.

ಅವನು ಗುದ್ದಲಿ ಹಿಡಿದು ಮರಳು ಪಕ್ಕಕ್ಕೆ ಹಾಕುತ್ತಲೋ, ಹುಲ್ಲು ಸವರುತ್ತಲೋ ಇದ್ದರೆ ಪಕ್ಕಕ್ಕೆ ಹೋಗಿ ನಿಂತಿರುವುದು ಭಲೇ ಸೊಗಸು. ಇದು ಇಂತಾ ಔಷಧಿಯ ಬೇರು, ಈ ಹುಲ್ಲ ಬೀಜ ಈ ರೋಗಕ್ಕೆ ಬರುತ್ತದೆ, ಒಂದೆಲಗ ಸೊಪ್ಪನ್ನ ಯಾವ ಯಾವ ಕಾಯಿಲೆ ನಿವಾರಣೆಗೆ ಬಳಸಬಹುದು, ಇತ್ಯಾದಿ ಇತ್ಯಾದಿ ಅಮೂಲ್ಯ ವಿಚಾರಗಳು ಹರಿದು ಬರುತ್ತಿರುತ್ತವೆ. ನಾವು ಕೇಳಲಿ, ಬಿಡಲಿ ಅವೆಲ್ಲ ನಮಗೂ ತಿಳಿದಿರುವುದು ಅತ್ಯವಶ್ಯಕ ಅನ್ನುವ ಧಾಟಿಯಲ್ಲಿ ಆತ ಹೇಳುತ್ತ ಹೋಗುತ್ತಾನೆ. ತನ್ನ ಯೌವನದ ಕಾಲದಲ್ಲಿ ಬೆಳೆದಷ್ಟು ಫಸಲು ಈಗ ಬೆಳೆಯುವುದಿಲ್ಲ ಅನ್ನುತಾನೆ ಇಜಿನ. ಈ ಬೇಸಾಯ ಮಾಡಿ ಸುಖ ಇಲ್ಲ ಅಂದರೂ ಯಾವಾಗಲೂ ಬಿಸಿಲು , ಮಳೆ ಅನ್ನದೇ ಗದ್ದೆಯ ಹಾಳಿ ಕೆತ್ತುತ್ತಲೋ, ಗೊಬ್ಬರ ಹಾಕಿಸುತ್ತಲೋ ಇರುತ್ತಾನೆ ಅವನು. ದೊಡ್ಡದಾಗಿ ದಾರಿಯಲ್ಲಿ ಹೋಗಿ ಬರುವವರನ್ನು ಮಾತನಾಡಿಸುತ್ತಾ ತಮಾಷೆ ಮಾಡುತ್ತಾ.

ಯಾಕೋ ಭಾರಿ ಮಂಡೆ ಬಿಸಿ ಮಾಡಿಕೊಂಡಿದ್ದ ಅವನು ಒಂದು ದಿನ. ಏನಾಯ್ತು ಇಜಿನ ಸಾಯ್ಬರೇ ಅಂದಿದ್ದಕ್ಕೆ, "ನೋಡೀ, ಹೇಳಿ ಸುಖ ಇಲ್ಲ, ಈ ಸಲ ನಂಗೆ ನೇಜಿ ನೆಡ್ಲಿಕ್ಕೆ ಜನ ಸಿಗುದು ಡೌಟು" ಅಂದ. ಅರೇ , ಇನ್ನು ಅವನ ಭತ್ತದ ಸಸಿಗೆ ಎಂಟು ದಿನವೂ ಆಗಿಲ್ಲ, ಈಗಲೇ ನೇಜಿ ನೆಡುವ ಬಗ್ಗೆ ಯಾಕೆ ಚಿಂತೆ ಅಂದುಕೊಂಡೆ. ಆ ಪುಣ್ಯಾತ್ಮ, ನನ್ನ ಮನಸ್ಸನ್ನ ಓದಿಕೊಂಡವನಂತೆ, ಹೇಗೆ ವರುಷಾ ವರುಷಾ ಕೃಷಿಯ ಸಮಸ್ಯೆ ಜಾಸ್ತಿ ಆಗುತ್ತಿದೆ ಅನ್ನುವುದರ ಬಗೆಗೆ ನನಗೊಂದು ಸಣ್ಣ ಉಪನ್ಯಾಸವನ್ನೇ ನೀಡಿದ.

"ಭಟ್ರೇ, ಹೋದ ವರ್ಷ ನಾನು ಆ ಬಿಸಿಲಲ್ಲಿ ಇದ್ದ ಆಳುಗಳ ಮನೆಮನೆ ತಿರುಗಿ ಇಂತಾ ದಿನ ನಮ್ಮ ಮನೆಯಲ್ಲಿ ಗದ್ದೆ ನಟ್ಟಿ ಸುರುವಾಗುತ್ತದೆ ಅಂದಿದ್ದಕ್ಕೆ, ಹೇಳಿದ ಮೂವತ್ತರಲ್ಲಿ ಒಂದು 8ರಿಂದ 10 ಜನ ಬಂದಿದ್ರು. ಈ ಸಲ ಇನ್ನು ಯಾರ ಮನೆಗೂ ಹೋಗ್ಲಿಲ್ಲ ನಾನು ಈ ಕಾಲು ನೋವಿನ ಕಾಟದಲ್ಲಿ. ಈ ಹೆಂಗಸ್ರಿಗೆ ಬೀಡಿ ಕಟ್ಟುವ ಹುಚ್ಚು ಜಾಸ್ತಿ ಆದ ಹಾಗೆ ಕೆಸರಲ್ಲಿ ಕಾಲು ಹಾಕುವುದು ಬಿಟ್ಟಿದಾರೆ, ಅಲ್ಲಿ ದಿನಕ್ಕೆ 50 ರುಪಾಯಿ ಸಿಗುವಾಗ ನಮ್ಮ 4 ಸೇರು ಅಕ್ಕಿ ಯಾರಿಗೆ ಬೇಕು? ಅಲ್ಲದೇ ಹುಡುಗೀರು ಶಾಲೆಗೆ ಹೋಗುವ ಚಟ ಬೆಳ್ಸಿಕೊಂಡು ಈ ಕಡೆ ತಲೆ ಹಾಕುವುದಿಲ್ಲ".

"ದುಡ್ಡಿರುವವರು ಹೆಣ್ಣಾಳುಗಳಿಗೆ 60 ರೂಪಾಯಿ ದುಡ್ಡು ಕೊಡುತ್ತೇವೆ ಬನ್ನಿ ಅಂತ ಕರೆಯುತ್ತಾರೆ. ನಾವು ಕೊಡುವ ಅಕ್ಕಿಗೆ ಆವಾಗ ಬೆಲೆಯೇ ಇಲ್ಲ. ನಾನು ದುಡ್ಡು ಕೊಡುತ್ತೇನೆ ಅಂತ ಕರೆದರೆ ನನಗೂ ಈಗ ಜನ ಬರುತ್ತಾರೆ, ಆದರೆ ನಂಗೆ ಅಷ್ಟೆಲ್ಲ ಮಾಡಿ ಬೇಸಾಯ ಮಾಡುವ ಚಟ ಇಲ್ಲ ನೋಡಿ, ಇದರಲ್ಲೇ ಜೀವನ ಆಗಬೇಕು ನನಗೆ. ಅವರಿಗೆಲ್ಲ ಗದ್ದೆ- ಬೇಸಾಯ ಸುಮ್ಮನೇ ಶೋಕಿಗೆ, ಬಾಕಿಯವರ ನೋವು ಅವರಿಗೆ ಗೊತ್ತಾಗಬೇಕಲ್ಲ".

"ಈಗೀಗ ಘಟ್ಟದ ಮೇಲಿಂದ ಗಂಡಾಳುಗಳು ಬರುವುದಕ್ಕೆ ಶುರು ಆಗಿದ್ದಾರೆ, ಅವರಿಗೆ ದಿನಕ್ಕೆ ನೂರು ರುಪಾಯಿ ಕೊಟ್ಟು ಪೂರೈಸುತ್ತಾದಾ ಹೇಳಿ, ನಿಮ್ಮಂತವರು ಕೊಡಬಹುದು, ನಾವೆಲ್ಲಿಗೆ ಹೋಗುವುದು ಹೇಳಿ ನೋಡುವಾ? ನಾವು ಮಾರುವ ಭತ್ತಕ್ಕೆ ಕೇಜಿಗೆ 5 ರುಪಾಯಿ, ಹೆಚ್ಚೂ ಅಂದ್ರೆ 6ರವರೆಗೆ ಹೋಗುತ್ತದೆ. ಇನ್ನು ಭತ್ತ ಬಡಿಯುವುದು, ಕ್ಲೀನು ಮಾಡುವುದು ಎಲ್ಲಾ ಸೇರಿ ನಾವು ಮಾಡುವ ಖರ್ಚು ನೋಡಿದರೆ ಅಸಲು ಹುಟ್ಟುವುದು ಕೂಡಾ ಡೌಟು" ಅಂತಂದ.

"ಇನ್ನು ಈ ಮಳೆ ಅನ್ನುವುದಕ್ಕಂತೂ ತಲೆಯಿಲ್ಲ ಬುಡ ಇಲ್ಲ. ನಾವು ನೇಜಿ ನೆಡುವ ಹೊತ್ತಿಗೆ ಇಷ್ಟೇ ಇಷ್ಟು ಬರುತ್ತದೆ. ಅಕ್ಟೋಬರು ತಿಂಗಳಲ್ಲಿ, ಭತ್ತದ ತೆನೆ ಬಲಿತು ಇನ್ನೇನು ಕೊಯ್ಲು ಶುರು ಮಾಡಬೇಕು ಅನ್ನುವ ಹೊತ್ತಿಗೆ ಜೋರಾಗಿ ಬರ್ತದೆ. ನಮ್ಮ ಹಾಗೆ ಉದ್ದ ತಳಿ ಹಾಕಿದವರ ಸಸಿಗಳೆಲ್ಲ ಅಡ್ಡ ಮಲಗಿ, ತೆನೆಗಳೆಲ್ಲ ನೀರಲ್ಲಿ ಮುಳುಗಿ ಮೊಳಕೆ ಬರುವಾಗೆ ಆಗ್ತದೆ ಮಾರಾರ್ಯೆ, ಏನು ಮಾಡುತ್ತೀರಿ ಹೇಳಿ? ಒದ್ದೆ ಗದ್ದೆ , ಕೊಯ್ಲು ಮಾಡುವ ಹಾಗಿಲ್ಲ, ಬಿಡುವ ಹಾಗೂ ಇಲ್ಲ. ಒಟ್ಟಾರೆ ಎಲ್ಲ ನಮ್ಮ ಕರ್ಮ, ಎಂತ ಮಾಡ್ಲಿಕ್ಕೂ ಆಗುದಿಲ್ಲ".

ನನಗೆ ಅವನು ಹೇಳುವ ಮಾತಿನಲ್ಲಿ ತಪ್ಪು ಸರಿ ಎಲ್ಲಾ ಒಟ್ಟೊಟ್ಟಿಗೇ ಕಂಡು, ಏನು ಹೇಳಲೂ ತೋಚದೇ ಬಂದು ಬಿಟ್ಟಿದ್ದೆ. ನಾನು ಪೇಟೆಯಲ್ಲಿ ಬಾಲ್ಯ ಕಳೆದು ಒಮ್ಮೆಗೇ ಈ ಕೃಷಿ ಕ್ಷೇತ್ರಕ್ಕೆ ಬಂದವನು. ಮೊದಮೊದಲು ನಂಗೆ ಗದ್ದೆ- ಬೇಸಾಯ ಅಂದರೆ ಒಂದು ಮನರಂಜನೆಯ ಮಾಧ್ಯಮ ಆಗಿತ್ತು. ಬೆಳಬೆಳಗ್ಗೆ ಎದ್ದು ಕೋಣ ಕಟ್ಟಿ ಉಳುವವರು, ಒಂದು ಗೊರಬು ಹಿಡಿದುಕೊಂಡು ಮಳೆಯೊಳಗೇ ನೇಜಿ ನೆಡುವವರು ಮತ್ತು ಅವರವರೊಳಗೇ ಜೋರಾಗಿ ದನಿ ಎತ್ತಿ ತುಳುನಾಡಿನ ಪಾಡ್ದನ ಹಾಡುವವರು. ಇದೆಲ್ಲ ನೋಡುತ್ತಿದ್ದರೆ ಆನಂದವೋ ಆನಂದ. ನಾನು ಕ್ಲಾಸಿಗೆ ರಜೆ ಹಾಕಿ ಗದ್ದೆಯ ಕೆಸರಲ್ಲಿ ಕಾಲು ಎತ್ತೆತ್ತಿ ಹಾಕುತ್ತಾ, ನೇಜಿಯ ಸೂಡಿಗಳನ್ನ ನೆಡಲು ಸರಿಯಾಗುವಂತೆ ಎಲ್ಲರಿಗೂ ಕೊಡುತ್ತಾ, ಗದ್ದೆಯ ಬದುವಲ್ಲಿ ಕುಳಿತು ಆ ನೆಟ್ಟಿ ಹೆಂಗಸರೊಡನೆ ಚಹಾ ಕುಡಿಯುತ್ತಾ, ಹಾಯಾಗಿದ್ದೆ.

ಅಪ್ಪ ಪ್ರತಿ ವರುಷದ ಬೇಸಾಯದ ನಂತರ ಉಸ್ಸಾಪ್ಪಾ ಅಂತ ಕೂರಲು ಶುರು ಮಾಡಿದ ಮೇಲೆ, ಈ ವ್ಯವಸಾಯದ ಒಳ ಗುಟ್ಟು ತಿಳಿಯಲಾರಂಭಿಸಿತು. ನಮಗಂತೂ ನನಗೆ ತಿಳಿದಂತೆ ಇಲ್ಲಿಯವರೆಗೆ ಲಾಭವಾಗಿದ್ದೇ ಇಲ್ಲ. ನಮಗೇ ಅಂತ ಅಲ್ಲ, ಪ್ರಾಯಶಃ ಸಣ್ಣ ಪ್ರಮಾಣದಲ್ಲಿ ಬೇಸಾಯ ಮಾಡುವ ಯಾರಿಗೂ ಲಾಭವಾಗುವುದಿಲ್ಲ. ಹಾಗಂತಾ ಯಾರೂ ಗದ್ದೆ ಖಾಲಿ ಬಿಡುವುದಿಲ್ಲ. ಭೂ ತಾಯಿಯನ್ನ ಗೌರವಿಸಬೇಕು ಅನ್ನುವ ಭಾವನೆ. ಒಂದು ವರ್ಷ ಅಪ್ಪ ಬೇಸತ್ತು ಒಂದು ಹೊಲ ಖಾಲಿ ಬಿಟ್ಟಿದ್ದರು, ಏನೂ ಮಾಡದೇ. ಆ ಸಲ ಇದ್ದಬದ್ದವರೆಲ್ಲ ಕೇಳುವವರೆ, "ದಾನೆ ಮಾಸ್ಟ್ರೇ, ಈಯೊಡು ಖಂಡ ಖಾಲಿ ಬುಡ್ತಿನಿ, ದಾದ ಆಂಡ್" ಅಂತ! (ಏನು ಮಾಸ್ಟ್ರೇ, ಈ ಸಲ ಗದ್ದೆ ಖಾಲಿ ಬಿಟ್ಟಿದ್ದೀರಿ, ಏನಾಯ್ತು?) ಅಪ್ಪಂಗೆ, ನಮಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿ ಮರು ವರ್ಷವೇ ಗದ್ದೆಯಲ್ಲಿ ತೆಂಗಿನ ಸಸಿಗಳನ್ನು ನೆಡಲು ಶುರು ಮಾಡಿದರು.

ಪ್ರತಿ ಮಳೆಗಾಲ ಕಳೆದ ಮೇಲೆ ನಮ್ಮ ಇಜಿನ ಸಾಯಿಬ, ಶಂಕರ ಭಟ್ಟರು, ನರಸಿಂಹಜ್ಜ ಎಲ್ಲರೂ ಮಾತಾಡುತ್ತ ಕುಳಿತಾಗ ಈ ಬೇಸಾಯದ ಸಹವಾಸ ಈ ವರ್ಷಕ್ಕೇ ಸಾಕು, ಇನ್ನು ಮುಂದೆ ಇದರ ಸುದ್ದಿಗೇ ಹೋಗುವುದಿಲ್ಲ ಅಂತ ಅವರಲ್ಲಿ ಯಾರಾದರೂ ಪ್ರತಿಜ್ಞೆ ಮಾಡುತ್ತಾರೆ. ಸುತ್ತ ಕುಳಿತ ಎಲ್ಲರೂ ಹೌದು ಹೌದು ಸರಿಯೇ ಸರಿ ಅಂತ ತಲೆ ಆಡಿಸುತ್ತಾರೆ. ಮುಂದಿನ ಬಾರಿ ಮಳೆಗಾಲ ಆರಂಭವಾದಾಗ ಯಾರಿಗೂ ತಾವು ಹೋದ ಬಾರಿ ಮಾತನಾಡಿದ್ದು ನೆನಪಿರುವುದಿಲ್ಲ. ಶಂಕರ ಭಟ್ಟರು ತಮ್ಮ ಟಿಲ್ಲರಿನ ನಟ್ಟು ಬಿಗಿ ಮಾಡುತ್ತಾರೆ, ಇಜಿನ ಸಾಯಿಬ ತನ್ನ ಕೋಣಗಳನ್ನ ಹೊರ ಕಟ್ಟುತ್ತಾನೆ. ನರಸಿಂಹಜ್ಜನಿಗೆ ಹೊಸ ತಳಿಯ ಭತ್ತ ತಂದು ಕೊಟ್ಟಿದ್ದಾರೆ ಯಾರೋ. ಅದರಲ್ಲಿ ಫಸಲು ಹೆಚ್ಚಿಗೆ ಬರುತ್ತದೆ ಅಂತ ಆ ಬೀಜ ಕೊಟ್ಟವರು ಹೇಳಿದ್ದಾರೆ, ಉಮೇದು ಜಾಸ್ತಿಯಾಗಿದೆ ಅವರಿಗೆ. ಅಪ್ಪ ಈ ಬಾರಿ ತೋಟ ಹಾಕುವುದರ ಬಗ್ಗೆ ಮಾತಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more