ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಕಿ ತರಾಕ ರೊಕ್ಕ ಇಲ್ಲದಿದ್ರೂ ಮಟ್ಕ ಆಡ್ತಾಳ

By ಶ್ರೀನಿಧಿ ಡಿ.ಎಸ್
|
Google Oneindia Kannada News

ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಹಳ್ಳಿಹಳ್ಳಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಆಳವಾದ ಬೇರು ಬಿಳಲುಗಳನ್ನು ಬಿಟ್ಟಿರುವ ಮರವೆಂದರೆ ಮಟ್ಕ. ಈ ವಿಷಸಸ್ಯದ ಬೃಹತ್ತಾದ ಕೊಂಬೆಗಳು ಹುಬ್ಬಳ್ಳಿ, ಬೆಳಗಾವಿ, ಕಾರವಾರ, ದಾವಣಗೆರೆ ಜಿಲ್ಲೆಯಾದ್ಯಂತ ಪಸರಿಸಿಕೊಂಡಿದೆ. ಹೆಂಗಸರು, ಗಂಡಸರು, ಬಡವ, ಬಲ್ಲಿದ ಬೇಧಭಾವ ಈ ಆಟಕ್ಕಿಲ್ಲ.

ಮನೆಹಾಳ ಆಟವೆಂದೂ ಪ್ರಸಿದ್ಧವಾದ, ಕಾನೂನು ಬಾಹಿರ ಓಸಿ ಆಟಗಳು ಪೊಲೀಸರ, ಶಾಸಕರ ಮೂಗಿನ ಕೆಳಗೆ ನಡೆಯುವುದು ಈ ಭಾಗದ ಸಂಸ್ಕೃತಿಯೇ ಆಗಿದೆ. ಈ ಜೂಜಿನ ಗೀಳು ಗೋಳನ್ನು ವಿವರಿಸುವ ಎರಡು ಗಾದೆ ಓದಿ, ಮುಂದೆ ಸಾಗಿ. "ಓಪನ್ ಕೊ ಖಾನಾ ನಹೀ, ಕ್ಲೋಸ್ ಕೊ ನೀಂದ್ ನಹೀ"; " ಮಡಕಿ ತರಾಕ ರೊಕ್ಕ ಇಲ್ಲದಿದ್ದರೂ ಮಟ್ಕ ಆಡ್ತಾಳ"

ಅಂಕಣಕಾರ : ಶ್ರೀನಿಧಿ ಡಿ.ಎಸ್.

ಆವತ್ತೊಂದಿನ, ಗೆಳೆಯ ಸುರೇಶ ನಮ್ಮ ರೂಮಲ್ಲೇ ಮಲಗಿದ್ದವನು ಬೆಳಗ್ಗೆ ಎದ್ದು, 'ದೋಸ್ತಾ, ಬೆಣ್ಣೇಹೊಳೆಲಿ ಜೋರ್ ಪ್ರವಾಹನಲೇ, ಸುಮಾರ್ ದೊಡ್ ಮರ ಒಂದು ಕೊಚ್ಕಂಡ್ ಹೋಗ್ತಿತ್ತು" ಅಂದ. ಎಲ್ಲಲ್ಲೇ,ಯಾವಾಗ ಅಂದೆ ನಾನು ನಿದ್ರೆಗಣ್ಣಲ್ಲೇ. ಕನಸಲ್ಲಿ ಮಾರಾಯಾ ಅಂತ ಉತ್ರ ಬಂತು. ಥತ್ ಇವನಾ ಅಂದ್ಕೊಂಡು ಮತ್ತೆ ಪಕ್ಕಕ್ಕೆ ಹೊರಳಬೇಕು, ನನ್ನ ಪಕ್ಕದಲ್ಲೇ ಬಿದ್ಗಂಡಿದ್ದ ಹೆಗಡೆ ಗುಂಡು ಹೊಡೆದಂಗೆ, ಓಪನ್ 2ಕ್ಕೆ ಆಡು ಹಾಂಗಾರೆ, ಮರಕ್ಕೊಂದು ನೀರಿಗೊಂದು, ಟೋಟಲ್ ಎರಡು ಅಂದ. ನಿದ್ರೆ ಹಾರಿ ಹೋಗುವಷ್ಟು ಜೋರು ನಗು ಎಲ್ಲರಿಗೂ. ಏನಿದು, ಓಪನ್ ಅಂತ ಕ್ವಶ್ಚನ್ ಮಾರ್ಕಾ? ಇವತ್ ಅದ್ನೇ ಹೇಳೋಕೆ ಹೊರಟಿದ್ದು. ಹೆಗಡೆ ಹೇಳಿದ್ದು, ಓಸಿ ಆಟದ ಬಗ್ಗೆ. ಓಸಿ ಯಾನೆ ಮಟ್ಕಾ.

ದಿನಪತ್ರಿಕೆಗಳಲ್ಲಿ ನೀವು ಓದಿಯೇ ಇರುತ್ತೀರಿ. ಮಟ್ಕಾ ಆಡುತ್ತಿದ್ದವರ ಬಂಧನ, ಲಕ್ಷಾಂತರ ವಶ, ಇತ್ಯಾದಿ ಇತ್ಯಾದಿ. ಯಾವುದೋ ಒಂದು ಪ್ರಕಾರದ ಜೂಜು, ದರಿದ್ರದವರನ್ನ ಹಿಡಿದರು ಅಂತ ಆಲೋಚ್ನೆ ಮಾಡಿ, ಅದ್ನ ಅಲ್ಲಿಗೇ ಮರೆತೂ ಬಿಟ್ಟಿರುತ್ತೀರಿ ಕೂಡ. ಆದ್ರೆ ತೀರಾ ಅಷ್ಟೊಂದು ತಾತ್ಸಾರ ಮಾಡುವ ಹಾಗಿಲ್ಲ ಕಣ್ರೀ ಈ ಆಟಾನ! ಪ್ರಾಯಶಃ ಬರಿಯ ನಂಬಿಕೆಯ ಮೇಲೆ ಮತ್ತು ನಂಬಿಕೆಯ ಮೇಲಷ್ಟೇ ನಡೆವ ಜಗತ್ತಿನ ಅತ್ಯಂತ ದೊಡ್ಡ ಜೂಜು, ಈ ಓಸಿ ಆಟ. ಫಾರ್ ಯುವರ್ ಇನ್ ಫರ್ ಮೇಶನ್ ಈ ಜೂಜು ಹೇಗೆ ಕೆಲಸ ಮಾಡತ್ತೆ ಅಂತ ಹೇಳಿಬಿಡ್ತೀನಿ ಕೇಳಿ. ನೀವು ಕಾನೂನು ಬಾಹಿರ ಜೂಜೊಂದನ್ನ ನಾನು ವೈಭವೀಕರಣ ಮಾಡುತ್ತಿದ್ದೇನೆ ಅಂತ ತಪ್ಪು ತಿಳಿದುಕೊಳ್ಳಲೂ ಬಾರದು ಮತ್ತೆ.

ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ಆಟ ಭಲೇ ಸಿಂಪಲ್ಲು, ಆದ್ರೆ ಅಷ್ಟೇ ಕಾಂಪ್ಲಿಕೇಟೆಡ್ದು. ನಂಬರಿನ ಮೇಲೆ ದುಡ್ಡು ಕಟ್ಟೋ ಆಟ ಇದು. ಮಧ್ಯಾಹ್ನ, ಮತ್ತು ರಾತ್ರಿ ಎರಡು ಹಂತಗಳಲ್ಲಿ ಜೂಜು ನಡೆಯುತ್ತದೆ. ಜೂಜಾಡುವವರು ಮೊದಲಿಗೆ ಓಪನ್ ಒಂದರಿಂದ ಹತ್ತರೊಳಗಿನ ನಂಬರೊಂದರ ಮೇಲೆ ಜೂಜು ಕಟ್ಟಬಹುದು, ಅಥವಾ, ಒಂದರಿಂದ 99ರ ಒಳಗಿನ ಸಂಖ್ಯೆಯ ಮೇಲೂ ದುಡ್ಡು ಹಾಕಬಹುದು.

ಅಂದರೆ, ನೀವು 8 ರ ಮೇಲೆ ಹತ್ತೋ, ಇಪ್ಪತ್ತೋ ದುಡ್ಡು ಹಾಕಬಹುದು, ಬರೀ ಓಪನ್ ಮೇಲೆ, ಅಥವ 86 ( 6 ಕ್ಲೋಸು ನಂಬರ್)ಅಂತ ಇಡೀ ಸಂಖ್ಯೆಯ ಮೇಲೂ( ಕ್ಲೋಸೂ ಸೇರಿ) ಕಟ್ಟಬಹುದು. ಮಧ್ಯಾಹ್ನ 3 ಗಂಟೆಗೆ ಓಪನ್ ನಂಬರ್ ಬಂದರೆ, ಮತ್ತೆರಡು ತಾಸು ಬಿಟ್ಟು ಕ್ಲೋಸ್ ನಂಬರ್ ಯಾವುದು ಅನ್ನೋದು ಗೊತ್ತಾಗತ್ತೆ. ರಾತ್ರಿ ಆಟದಲ್ಲಿ ಓಪನ್ 9.30ಗೆ ಬಂದರೆ ಕ್ಲೋಸ್ ಮಧ್ಯರಾತ್ರಿ 12 ಗಂಟೆಗೆ ಹೊರಬೀಳತ್ತೆ.

ನೀವು ಕಟ್ಟಿದ ದುಡ್ಡಿನ 80 ಪಟ್ಟು ನಿಮಗೆ ಸಿಗತ್ತೆ, ನಿಮ್ಮ ಲೆಕ್ಕಾಚಾರ ಸರಿ ಇದ್ದಿದ್ದೇ ಹೌದಾದರೆ!. ಅಂದರೆ, 10 ರೂಪಾಯಿಗೆ 800 ರೂಪಾಯಿ! ಜಗತ್ತಿನ ಬೇರೆ ಯಾವುದೇ ಜೂಜು ಕೂಡ ಇಷ್ಟೊಂದು ಪಟ್ಟು ಹಣ ಕೊಡುವುದಿಲ್ಲ! ನಾವು ಕಟ್ಟಿದ ದುಡ್ಡಿನ 80 ಪಟ್ಟು ದುಡ್ಡು ಹೇಗೆ ಬರತ್ತೆ,ಅದಕ್ಕೆ ಪ್ರೂಫು ಏನು?ಈ ಆಟದ ಹಿಂದಿನ ನೆಟ್ವರ್ಕ್ ಏನು ಎಂಬುದೆಲ್ಲ ನಿಮ್ಮಲಿನ ಪ್ರಶ್ನೆಗಳಾದರೆ, ಇಲ್ಲಿದೆ ಉತ್ತರ.

Matka( OC):A deep rooted gambling in Ktaka

ಮುಂಬೈ, ಈ ಆಟದ ಕೇಂದ್ರಸ್ಥಳ. ಇಡೀ ಭಾರತದ, ಅಷ್ಟೇಕೆ, ದುಬೈ, ಇರಾನ್ ನಂತಹ ಮಧ್ಯಪ್ರಾಚ್ಯ ರಾಷ್ಟ್ರಗಳವರೆಗೂ ವ್ಯಾಪಿಸಿದೆ, ಈ ಜೂಜಿನ ಹುಚ್ಚು. ರತನ ಖತ್ರಿ ಎಂಬ ಮನುಷ್ಯ 1962ರಲ್ಲಿ ಬೊಂಬಾಯಿಯಲ್ಲಿ ಈ ಮಟ್ಕಾವನ್ನು ಪ್ರಚಲಿತಗೊಳಿಸಿದ. ಬೊಂಬಾಯಿಯಲ್ಲಿ ಈತ ಪ್ರತಿ ರಾತ್ರಿ ಅಂದಿನ ನಂಬರ್ ಯಾವುದನ್ನುವುದನ್ನ ನಾಲ್ಕೆಂಟು ಜನರ ಮುಂದೆ ತಾನೇ ಲಾಟರಿ ಎತ್ತಿ ಅಂದಿನ ನಂಬರು ಯಾವುದೆಂದು ಹೇಳುತ್ತಿದ್ದ. ಯಾರೇ ಆಗಲಿ, ಅವರಾಡಿದ ನಂಬರು ಬಂದರೆ, ದುಡ್ಡು ಸಿಕ್ಕೇ ಸಿಗುತ್ತಿತ್ತು. ಅದೆಷ್ಟೇ ಲಕ್ಷ ಬೇಕಾದರೂ ಆಗಲಿ. ಯಾವುದೇ ಮೋಸ ಇರಲಿಲ್ಲ.

ಹೀಗಾಗಿ ದಿನೇ ದಿನೇ ಆಡುವವರೂ ಹೆಚ್ಚಿದರು, ದಂಧೆಯೂ ಬೆಳೆಯೆತು. ಈತನ ನೆಟ್ ವರ್ಕ್ ನಿಧಾನವಾಗಿ ದೇಶವಿಡೀ ಹಬ್ಬಿತು. ಇವತ್ತಿಗೂ ಅಷ್ಟೇ, ನೀವು ದುಡ್ಡು ಕಟ್ಟಿರುವ ನಂಬರನ್ನು ಒಂದು ಇಷ್ಟಗಲದ ಸಿಗರೇಟಿನ ಸಿಲ್ವರ್ ಪೇಪರ್ ಮೇಲೆ ಬರೆದು ಕೊಡುತ್ತಾನೆ ಮಟ್ಕಾದಂಧೆಯಾತ, ನಿಮ್ಮ ನಂಬರಿಗೆ ದುಡ್ಡು ಬಂದಿದ್ದರೆ ಆ ಚೀಟಿ ತೋರಿಸಿಬಿಡಿ, ಅದೆಷ್ಟು ಲಕ್ಷ ನಿಮಗೆ ಬಂದರೂ, ಬಟವಾಡೆ ಆಗುತ್ತದೆ!
ತೆರಿಗೆ ಇಲ್ಲ, ರಶೀದೀಯೂ ಇಲ್ಲ.

ನೀವು ಹುಬ್ಬಳ್ಳಿಯಲ್ಲಿ 86 ಅನ್ನುವ ನಂಬರಿಗೆ ಮಟ್ಕಾ ಆಡಿದ್ದಿರಿ ಅಂದುಕೊಳ್ಳಿ, ನಿಮ್ಮಂತಹ ಅದೆಷ್ಟೋ ಜನ ಅಲ್ಲಿ ದುಡ್ಡು ತೊಡಗಿಸಿರುತ್ತಾರೆ. ಹುಬ್ಬಳ್ಳಿ ಮುಖ್ಯ ಮಟ್ಕಾ ಏಜೆಂಟು, ಅಲ್ಲಿ ಆಡಿರುವ ನಂಬರುಗಳನ್ನ್ನು, ಮುಂಬೈಗೆ ಫೋನ್ ಮುಖಾಂತರ ಮುಟ್ಟಿಸುತ್ತಾನೆ. ಯಾವ ಸಂಖ್ಯೆ ಮೇಲೆ "ಲೋಡ್" ಜಾಸ್ತಿ ಇದೆಯೋ, ಅವುಗಳು ಮಾತ್ರ ಮುಂಬೈ ತಲುಪುತ್ತದೆ, ಸಣ್ಣ ಪುಟ್ಟ ಡೀಲುಗಳನ್ನೆಲ್ಲ, ಲೋಕಲ್ ಮಟ್ಕಾ ಏಜೆಂಟೇ ಚುಕ್ತಾ ಮಾಡುತ್ತಾನೆ.

ಹೆಚ್ಚು ದುಡ್ಡು ಒಂದೇ ಸಂಖ್ಯೆ ಮೇಲಿದ್ದರೆ, ರಿಸ್ಕ್ ಜಾಸ್ತಿ ಇರೋದ್ರಿಂದ, ಆ ನಂಬರುಗಳು ಮುಂಬೈ ಮಾರ್ಗ ಹಿಡಿಯುತ್ತವೆ. ಅದೇ ರೀತಿ ಎಲ್ಲ ಕಡೆಯಿಂದಲೂ ನಂಬರುಗಳ ಮಾಹಿತಿ ಮುಂಬೈ ತಲುಪಿರುತ್ತದೆ. ಅವುಗಳಿಗೆ ಸಂಬಂಧಿಸಿದ ದುಡ್ಡಿನ ವ್ಯವಹಾರವೂ ನಂಬಿಕೆ ಮೇಲೇ ನಡೆಯುತ್ತದೆ. ತನ್ನ ಸೆಂಟರಿನಲ್ಲಿ ಇಂಥಾ ನಂಬರಿನ ಮೇಲೆ ಇಷ್ಟು ಜನ ಆಡಿದ್ದಾರೆಂಬ ಚಾರ್ಟು ಕಳಿಸಿದರಾಯ್ತು, ಆ ಚಾರ್ಟಿನ ಆಧಾರದ ಮೇಲೆ, ದುಡ್ಡು ಸಂದಾಯ ಆಗುತ್ತದೆ.

ಮುಂಬೈನ ಅದ್ಯಾವುದೋ ಮೂಲೆಯಲ್ಲಿ ಘೋಷಿಸಲ್ಪಟ್ಟ ನಂಬರು, ಬೆಳಗಾಂ ಗೆ ಫೋನಲ್ಲಿ ಬಂದು, ಅಲ್ಲಿಯವನು ಅದನ್ನ ಹುಬ್ಬಳ್ಳಿಗೆ ತಿಳಿಸಿ, ಅಲ್ಲಿಂದ ಅದು ಶಿರಸಿಗೆ ಬಂದು ಅಲ್ಲಿನ ಬಾಳೇಸರ ಅನ್ನುವ ಹಳ್ಳಿಗೆ ಹೋಗುವ ಕೊನೇ ಬಸ್ಸಿನ ಡ್ರೈವರು ಅದನ್ನ ಕೇಳಿಸಿ ಬರೆಸಿಕೊಂಡು ಬರುತ್ತಿದ್ದ. ಬಾಳೇಸರದ ಬಸ್ಟ್ಯಾಂಡಿನಲ್ಲಿ ಕಾಯುತ್ತಿರುವ ಮಂದಿ, ಆ ನಂಬರು ಕೇಳಿ, ನಂಬಿಕೊಂಡು ಮನೆಗೆ ಹೋಗುತ್ತಿದ್ದರು ಒಂದು ಕಾಲದಲ್ಲಿ ಅಂದರೆ ಏನು ಹೇಳಬೇಕು? ಫೋನುಗಳು ವ್ಯಾಪಕವಾಗಿಲ್ಲದ ಕಾಲದಲ್ಲಿ, ಬಸ್ಸು ಡ್ರೈವರೇ ಹಳ್ಳಿಗರ ಮಟ್ಕಾ ಕೊಂಡಿ. ಅವನು ಹೇಳಿದ ನಂಬರಿಗೆ ಹಳ್ಳೀ ದಲ್ಲಾಳಿಗಳು ತಮ್ಮೂರ ಜನಕ್ಕೆ ದುಡ್ಡು ಕೊಡುತ್ತಿದ್ದರು.

ಮಟ್ಕಾ ದಂಧೆ ಸಂಪೂರ್ಣವಾಗಿ ನಂಬಿಕೆಯಾಧಾರದ ಮೇಲೆ ನಡೆದರೂ, ಅದು ಅಷ್ಟೇ ನಿಗೂಢವೂ ಹೌದು.ತೇಜಸ್ವಿಯವರ ಜುಗಾರಿ ಕ್ರಾಸ್ ಓದಿದವರಿಗೆ, ಈ ಬಗ್ಗೆ ಒಂದಿಷ್ಟು ತಿಳಿದಿರುತ್ತದೆ. ನಿಮ್ಮೂರಿನಲ್ಲಿ ಸುಮ್ಮನೇ ಓಡಾಡಿಕೊಂಡಿದ್ದ ವ್ಯಕ್ತಿ ಸುಖಾಸುಮ್ಮನೆ ಕೊಲೆಯಾಗಿ ಹೋದ ಅಂದರೆ, ಆತ ಮಟ್ಕಾ ವ್ಯವಹಾರದಲ್ಲಿದ್ದ ಅಂತಲೇ ಅರ್ಥೈಸುತ್ತಾರೆ ಜನ. ನಂಬಿಕೆ ಮೇಲೆಯೇ ಯಾಕೆ ನಡೆಯುತ್ತದೆ ಅನ್ನುವುದು ನಿಮಗೂ ಗೊತ್ತಾಗಿರಬೇಕು ಈಗ. ಬರಿಯ ಫೋನು-ಚಾರ್ಟುಗಳಲ್ಲಿ ವ್ಯವಹಾರ ನಡೆಯುತ್ತಿದ್ದರೂ, ದಂಧೆ ನಡೆಸುವವರನ್ನ ಕಾಣದ ಕಣ್ಣೊಂದು ಕಾಯುತ್ತಲೇ ಇರುತ್ತದೆ ಅನ್ನುತ್ತಾರೆ. ಹೀಗಾಗಿಗೇ, ಬಡ ಜೋಗಪ್ಪನಿಗೂ, ಲಕ್ಷಲಕ್ಷ ಸಂದಾಯವಾಗುತ್ತದೆ, ಪ್ರಾಮಾಣಿಕವಾಗಿ.

ಕರ್ನಾಟಕದ ಎಲ್ಲ ಪ್ರಾಂತಗಳಲ್ಲೂ ಮಟ್ಕಾ ವ್ಯವಹಾರ ಜೋರಾಗಿದೆ. ಪೋಲೀಸರು ಅದೆಷ್ಟೇ ದಾಳಿ ನಡೆಸಿದರೂ, ಮತ್ತೆ ಚಿಗುರುತ್ತದೆ ಈ ದಂಧೆ. ಇಲಾಖೆಯ ಒಳವ್ಯವಹಾರಗಳ ಜೊತೆಗೆ, ಈ ದಂಧೆ ಅಷ್ಟೊಂದು ಅಸಡ್ಡಾಳವಾಗಿರುವುದೂ ಇದಕ್ಕೊಂದು ಕಾರಣವೇನೋ. ಚಾರ್ಟು ,ಫೋನು ಎಂತೆಲ್ಲ ಇದ್ದರೂ, ಮಟ್ಕಾ ನಡೆಸುವವರಿಗೊಂದು ನಿರ್ದಿಷ್ಟ ಜಾಗ ಅಂತ ಇಲ್ಲ, ಇಂತವನೇ ನಡೆಸುತ್ತಾನೆ ಅಂತ ಖಾತರಿ ಇಲ್ಲ, ಅವನ ಬಾಸ್ ಯಾರೋ, ಗೊತ್ತೇ ಆಗುವುದಿಲ್ಲ.

ನಮ್ಮೂರಿನಲ್ಲಿ ಒಬ್ಬ ಮಟ್ಕಾ ದಂಧೆ ನಡೆಸುತ್ತಿದ್ದ. ನೋಡಲು ಅತ್ಯಂತ ಬಡಪಾಯಿಯ ಹಾಗೆ ಕಾಣುವ ಆ ಮನುಷ್ಯ, ಒಂದು ಸೈಕಲ್ ಹಿಡಿಕೊಂಡು ದಿನಾ ಮಧ್ಯಾಹ್ನ ರಿಕ್ಷಾಪಾರ್ಕು, ಬಸ್ಟ್ಯಾಂಡ್ ಸುತ್ತ ಸುತ್ತಿ, ನಂಬರು ಕಲೆಕ್ಟ್ ಮಾಡಿಕೊಂಡು ನಾಪತ್ತೆಯಾದರೆ, ಮತ್ತೆ ಮಾರನೇ ದಿನವೇ ಪ್ರತ್ಯಕ್ಷ. ನೋಡಿದರೆ, ಪಾಪ, 10 ರೂಪಾಯಿ ಕೊಡೋಣ ಅಂತ ಕಾಣಿಸುವ ವ್ಯಕ್ತಿ, ಬಟ್ಟೆ ಚೀಲದಲ್ಲಿ ಸಾವಿರಗಟ್ಟಲೆ ದುಡ್ಡಿಟ್ಟುಕೊಂಡು ಬಟವಾಡೆ ಮಾಡುತ್ತಿದ್ದ!

ಇನ್ನು ಮಟ್ಕಾಕ್ಕೆ ದಾಸರಾದವರ ಕಥೆ . ಅವರುಗಳು ಕಂಪ್ಯೂಟರಿನ ಹಾಗೆಯೇ! ದಿನದ ಎಲ್ಲ ವ್ಯವಹಾರಗಳೂ ಅವರ ಮೆದುಳಲ್ಲಿ ಕನ್ವರ್ಟ್ ಆಗುವುದು ನಂಬರ್ ಆಗಿಯೇ. ದಿನನಿತ್ಯದ ಪ್ರತಿ ಹೆಜ್ಜೆಯಲ್ಲೂ ಮಟ್ಕಾ ನಂಬರು ಕಾಣುತ್ತದೆ! ಗಂಡಸಿಗೊಂದು, ಹೆಂಗಸಿಗೆರಡು, ಹಾವು ಕಂಡ್ರೆ ಏಳು, ದನ, ಎಮ್ಮೆಗೆ ನಾಲ್ಕು , ಹೀಗೆ. ಅತಿ ಹೆಚ್ಚು ಯಾವುದು ಬಂತೋ, ಅದು ಆವತ್ತಿನ್ ಫಿಟ್ ಸಂಖ್ಯೆ! ಕನಸುಗಳೂ ನಂಬರುಗಳೇ ಮತ್ತೆ. ಕನಸಲ್ಲಿ ಎರಡು ಹಾವ್ ಸೇರಿದ್ ಕಂಡ್ರೆ 36, ತೆಂಗಿನ ಮರಕ್ಕೊಂದು, ನದಿ ಕಂಡ್ರೊಂದು, ನಾಯಿ ಕಂಡ್ರೊಂದು ಹೀಗೆ.. ಗುಲ್ಬರ್ಗದಲ್ಲಿ ಯಾರೋ ಸ್ವಾಮೀಜಿ ನಿತ್ಯ ಓಸಿ ಶಕುನ ಬೇರೆ ಹೇಳುತ್ತಾರಂತೆ. ಅದೆಷ್ಟು ಜನ ಮನೆ ಮಾರಿಕೊಂಡಿದ್ದಾರೋ ಏನೋ, ಇವುಗಳನೆಲ್ಲ ನಂಬಿ!

ಅಂದಹಾಗೆ, ಈ ಜೂಜಿಗೆ ಕಾನೂನಿನ ಸಮ್ಮತಿಯಿಲ್ಲ. ಮಹಾರಾಷ್ಟ್ರದ ಗಡಿಭಾಗದಿಂದ ಆರಂಭವಾಗಿ ಉತ್ತರ ಕರ್ನಾಟಕ, ಉತ್ತರ ಕನ್ನಡ ಮತ್ತು ಬಯಲುಸೀಮೆಯ ದಾವಣಗೆರೆ, ಚಿತ್ರದುರ್ಗದವರೆಗೂ ಹಬ್ಬಿಕೊಳ್ಳುವ ಈ ಪಾಪಾಸುಕಳ್ಳಿಯನ್ನು ಸಾಕಿ ಸಲಹುವವರು ಪೊಲೀಸರೆ. ಪ್ರತಿಯೊಂದು ತಾಲೂಕು, ಪ್ರತಿಯೊಂದು ಜಿಲ್ಲೆಯ ಬಿಡ್ಡರ್ ಪ್ರತಿತಿಂಗಳು ಪೊಲಿಸು ಠಾಣೆಗೆ ಮಾಮೂಲು ತಲುಪಿಸುತ್ತಾನೆ.

ನಮ್ಮ ರಾಜ್ಯದಲ್ಲಿ ಮಟ್ಕಾ ತಾಂಡವವಾಡುತ್ತಿರುವ ಪ್ರದೇಶಗಳೆಂದರೆ, ಕಾರವಾರ, ಸಿರಸಿ, ಹಾವೇರಿ, ಬೆಳಗಾವಿ, ಹುಬ್ಬಳ್ಳಿ, ಗಂಗಾವತಿ, ಹಾವೇರಿ, ರಾಯಚೂರು, ಬಳ್ಳಾರಿ, ಇತ್ಲಕಡೆ ಭದ್ರಾವತಿ, ದಾವಣಗೆರೆ, ರಾಣೆಬೆನ್ನೂರು, ರಟ್ಟಿಹಳ್ಳಿ. ಹೇಳುತ್ತ ಹೋದ್ರೆ ಸಾಕಷ್ಟಿದೆ, ಸದ್ಯಕ್ಕೆ ಇಷ್ಟು ಸಾಕು. ಇನ್ನು ನೀವು ಈಗ ಕೂತಲ್ಲೆ ಓಪನ್ ಮಾಡಿಟ್ಟ ವಿಂಡೋಗಳ ಸಂಖ್ಯೆಯನ್ನೋ, ಕಿಟಕಿ ಹೊರಗಿನ ಕರೆಂಟುಕಂಬದ ಮೇಲೆ ಕೂತ ಕಾಗೆಗಳನ್ನೋ ಲೆಕ್ಕ ಹಾಕುತ್ತ ಕೂತುಬಿಡಬೇಡಿ, ಯಾವ ನಂಬರು ಇವತ್ತಿಗೆ ಫಿಟ್ ಆಗುತ್ತದೆ ಅನ್ನೋ ಲೆಕ್ಕಾಚಾರದಲ್ಲಿ

English summary
About Matka, illegal gambling right under the nose of Karnataka police. The number game originates from Mumbai is ramphant in Uttara Kannada and North Karnataka taluks and villages. Here is an Explanatory article by Shreenidhi DS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X