ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲಗೆ ಚಪಲ ತಣಿಸುವ ರುಚಿಸಂತೆ, ನೀವೂ ಬರ್ತೀರಂತೆ

By Shami
|
Google Oneindia Kannada News

ಸಂತೆಗೆ ಹೋದನು ಭೀಮಣ್ಣ ಹಿಂಡಿಯ ಕೊಂಡನು
ಹತ್ತು ಮಣ. ಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ
ಜತೆಯಲಿ ಸಾಗಿಸಿದ

ಕತ್ತೆಯು ಕಿರುಚಿತು "ಓ ಗೆಳೆಯ ಅರ್ಧವ ನೀಹೊರು
ದಮ್ಮಯ್ಯ" ಕುದುರೆಗೆ ಕೂಗದು ಕೇಳಿಸಿತು ಕತ್ತೆಯ
ಕೂಗನು ಚಾಳಿಸಿತು.

ಕಾಸರಗೋಡಿನ ಆತ್ಮ ಕಯ್ಯಾರ ಕಿಞ್ಞಣ್ಣ ರೈ (1915-2015) ರಚಿಸಿದ ಮಕ್ಕಳ ಪದ್ಯ ನಿಮಗೆ ನೆನಪಿರಬಹುದು. ಮೂರನೇ ತರಗತಿಯಲ್ಲೋ ನಾಲ್ಕನೇ ತರಗತಿಯಲ್ಲೋ ಈ ಪದ್ಯ ನನ್ನ ಕನ್ನಡ ಪಠ್ಯ ಪುಸ್ತಕದಲ್ಲಿತ್ತು. ಏಳು ಚರಣಗಳ ಪದ್ಯದ ಎರಡು ಚರಣಗಳನ್ನು ಮಾತ್ರ ನಿಮ್ಮ ಮುಂದಿಟ್ಟಿದ್ದೇನೆ. ಸಂತೆಗೆ ಮೂರು ಮೊಳ ನೇಯುವ ನನ್ನಂಥವರಿಗೆ ಇಷ್ಟು ಸಾಕು!

ಏಳು ಸುತ್ತಿನ ಕೋಟೆ ಚಿತ್ರದುರ್ಗದ ಸಂತೆ ಸೋಮವಾರ. ಕೈಚೀಲಗಳನ್ನು ಹಿಡಿದು ನಾನು ಮತ್ತು ನನ್ನ ತಂದೆ ಸಂತೆಗೆ ಹೋಗುತ್ತಿದ್ದೆವು. ಉಪ್ಪು ಮೆಣಸಿನಕಾಯಿ ಸೊಪ್ಪು ಸೌತೆಕಾಯಿ ನೀರು ಸೇದುವ ಹಗ್ಗ ಬಿಂದಿಗೆ ನೇಗಿಲಿಗೆ ನಾಕು ಕಬ್ಬಿಣದ ಕುಳ ಆಕಳು ಎತ್ತುಗಳ ಮೈ ಮಾಲೀಷು ಮಾಡುವ ಅಂಗೈ ಗೋಣಿ ಚೀಲಗಳನ್ನು ಅಪ್ಪ ಖರೀದಿಸಿ ಚೀಲಗಳಿಗೆ ತುಂಬಿಸುತ್ತಿದ್ದರೆ ನನ್ನ ಕಣ್ಣುಗಳು ಗ್ಲಾಸುಗಳಲ್ಲಿ ತುಂಬಿಟ್ಟಿರುತ್ತಿದ್ದ ಹಸುರು ಕೆಂಪು ಹಳದಿ ಜ್ಯೂಸ್ ಗಳ ಕಡೆ ಹಾಯುತ್ತಿತ್ತು.

ಪಲ್ಪು ಇಲ್ಲ, ಜ್ಯೂಸೂ ಇಲ್ಲ ಅದು ಬರೀ ಬಣ್ಣದ ನೀರು ಕಣೋ ಶಾಮಿ ಎಂದು ನಮ್ಮ ಅಪ್ಪ ಎಚ್ಚರಿಸುತ್ತಿದ್ದರು. ಪೆಚ್ಚುಮುಖ ಹಾಕಿಕೊಂಡು ತುಂಬಿದ ಒಂದೊಂದೇ ಚೀಲಗಳನ್ನು ಬುಡನ್ ಸಾಬರ ಜಟಕ ಬಂಡಿಗೆ ತುಂಬುತ್ತಿದ್ದೆ. ಊರಲ್ಲಿರುವ ಎಲ್ಲ ಜಟಕಗಳ ಚಕ್ರ ಮರದಿಂದ ಮಾಡಿರುತ್ತಿದ್ದರೆ ಬುಡನ್ ಸಾಬ್ ಅವರ ಪ್ರೀಮಿಯಮ್ ಜಟಕಕ್ಕೆ ಮಾತ್ರ ಟೈರು ಇತ್ತು. ಹಾಗಾಗಿ ಅದು ದುಬಾರಿ. 12 ಆಣೆ. [ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

Ruchi Sante Bengaluru : Vegetarian ethnic food festival 2016


ಕೊಳ್ಳುವವರು ಮಾರುವವರು ಮುಖಾಮುಖಿಯಾಗುವ ಬಯಲು ಮಾಲು ಸಂತೆ. ಸೋಮವಾರ ಸಂತೆ, ಮಂಗಳವಾರ ಸಂತೆ, ಶುಕ್ರವಾರ ಸಂತೆ, ಶನಿವಾರ ಸಂತೆ, ಸಂತೆ ಮಾರನಹಳ್ಳಿ, ಸಂತೆ ಬೆನ್ನೂರುಗಳಿಗೆ ನಾನು ಬೆನ್ನು ಮಾಡಿ ದಶಕಗಳೇ ಉರುಳಿದವು. ನೂರು ಹಳ್ಳಿಗಳನ್ನು ನುಂಗಿ ಬೆಳೆದ ಬೆಂಗಳೂರಿಗೆ ಬಂದ ಹೊಸತರಲ್ಲಿ ಇಲ್ಲೂ ಸಂತೆಗಳಿದ್ದವೆನ್ನಿ. ಕೆರೆಗಳು ಕಳುವಾದ ಬೆನ್ನಲ್ಲೇ ಸಂತೆಗಳೂ ಮಾಯವಾಗಿ ಬೆಂಗಳೂರು ಜನಸಂತೆ ಆಗಿದೆ.

ಆದರೆ ಮಾತ್ರ ವಾರಕ್ಕೊಮ್ಮೆ ಸಂತೆಗೆ ಹೋಗುವ ಪರಿಪಾಠವನ್ನು ನಾನು ಕೈಬಿಟ್ಟಿಲ್ಲ. ಮಂತ್ರಿ, ಒರೈಯನ್, ಪಿವಿಆರ್, ಸೆಂಟ್ರಲ್, ಕ್ರೊಮಾ, ರಿಲಯನ್ಸ್ ಫ್ರೆಷ್, ಫುಡ್ ವರ್ಲ್ಡ್, ಮೋರ್, ನೀಲಗಿರಿಸ್, ಮೆಟ್ರೊ, ಬಿಗ್ ಬಜಾರುಗಳಲ್ಲಿ ವಾರಾಂತ್ಯ ಡೆಬಿಟ್ ಕಾರ್ಡ್ ಉಜ್ಜದಿದ್ದರೆ ತಿಂದ ರೆಡಿಮೇಡ್ ಫುಡ್ ಜೀರ್ಣವಾಗುವುದಿಲ್ಲ. ಹಾಗಂತ ಸಂತೆಯ ವಂಶ ನಿರ್ವಂಶ ಆಗಿದೆ ಎಂದು ಭಾವಿಸದಿರಿ.

ಜನವರಿ ಮೊದಲ ಭಾನುವಾರ (ಈ ಸಲ ಮೂರನೇ ತಾರೀಕು) ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಚಿತ್ರಸಂತೆ, ಹಾಸನದ ಜಾನುವಾರು ಸಂತೆ, ಹುಬ್ಬಳ್ಳಿಯ ವಿದ್ಯಾ ಸಂತೆ, ಕೇಕ್ ವಾಲಾ ಅವರ ಬಿಸ್ಕೆಟ್ ಸಂತೆ, ಬಂಟ್ವಾಳದ ಹಲಸಿನ ಸಂತೆ, ವೈಟ್ ಫೀಲ್ಡಿನ ಅಂಚು ಬೈಯಪ್ಪನಹಳ್ಳಿಯ soul sante, ಹುಚ್ಚ ವೆಂಕಟನ ಸುದ್ದಿ ಸಂತೆ!! ಆಗಾಗ ಅಲ್ಲಲ್ಲಿ ನಡೆಯುವ ಆಹಾರ ಸಂತೆಗಳ ಸಾಲಿಗೆ ಇದೀಗ ಹೊಸ ಸೇರ್ಪಡೆ - ರುಚಿ ಸಂತೆ. [ಜೋಳದ ರೊಟ್ಟಿ ಎಣಗಾಯ್ ಪಲ್ಯ ಗುರೆಳ್ಳು ಚಟ್ನಿ, ವಾಹ್!]

ಒಂದು ಸ್ವಯಂಸೇವಾ ಸಂಸ್ಥೆ ಜನವರಿಯಲ್ಲಿ ಏರ್ಪಡಿಸಿರುವ ರುಚಿ ಸಂತೆಯ ನಾಲ್ವರು ಸ್ವಯಂಸೇವಕರು ನಿನ್ನೆ ನಮ್ಮ ಡಾಟ್ ಕಾಂ ಕಚೇರಿಗೆ ಬಂದಿದ್ದರು. 18 ಮಂದಿ ಸದಸ್ಯರಿರುವ ಸಂಸ್ಥೆಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸುವುದಕ್ಕೋಸ್ಕರ ಮಾತ್ರ ಹೆಸರು, ಕಚೇರಿ ವಿಳಾಸ, ಪದಾಧಿಕಾರಿಗಳಿದ್ದಾರೆಯೇ ವಿನಾ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕನ್ನಡ ಸ್ನೇಹಿತರು ಫೇಸ್ ಬುಕ್ ಮೂಲಕ ಪರಿಚಿತರಾಗಿ ಏನಾದರೂ ಒಳ್ಳೆ ಕೆಲಸ ಮಾಡೋಣ ಎಂದು ಒಟ್ಟಾಗಿದ್ದಾರೆ.

ರುಚಿ ಸಂತೆಯ ವಿವರಗಳನ್ನು ಡಿ ನರೇಶ್ ಬಾಬು ವಿವರಿಸಿದರು. ಬೆಂಗಳೂರಿನ 250 ಲೇಡೀಸ್ ಕ್ಲಬ್ ಗಳಲ್ಲಿ ಅಡುಗೆ ಸ್ಪರ್ಧೆ ನಡೆಸಲಾಗಿದೆ. ನಾನಾ ಹಂತಗಳಲ್ಲಿ ನಡೆದ ಸ್ಪರ್ಧೆಯ ಫೈನಲ್ ರುಚಿ ಸಂತೆಯಲ್ಲಿ ನಡೆಯುತ್ತದೆ. ಸಂತೆ ಕಲೆಯುವುದು ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಮರಾಠಾ ಹಾಸ್ಟೆಲ್. ಜನವರಿ 22-23-24. ಹುರಿಯಾಳುಗಳು ಸ್ಥಳದಲ್ಲೇ ಅಡುಗೆ ಮಾಡಬೇಕು, ಗೆದ್ದವರು ಸಿಹಿಕಹಿ ಚಂದ್ರು ಅವರಿಂದ ಬಹುಮಾನ ಪಡೀಬೇಕು.

ಬಗೆಬಗೆಯ ಆಹಾರ ಪದಾರ್ಥಗಳ ರುಚಿ ತೋರಿಸುವುದಷ್ಟೇ ಅಲ್ಲ. ನಮ್ಮ ಸಂತೆ ಪ್ರಮುಖವಾಗಿ ಸಸ್ಯಾಹಾರಿ ಆಹಾರ ಸಂಸ್ಕೃತಿಯ ನಾನಾ ಮುಖಗಳನ್ನು ಪರಿಚಯಿಸುತ್ತದೆ. ಇದು ಬರೀ ತಿಂಡಿಪೋತರ ಜಾತ್ರೆಯಲ್ಲ, ಸಿದ್ಧ ಆಹಾರ, ಕಿಚನ್ ವೇರುಗಳ ಮಾರಾಟ, ಎಂಡಿ ಪಲ್ಲವಿ ಅವರ ಗಾನಸುಧೆ, ಸುಧಾ ಬರಗೂರ್ ಅವರ ಕಚಗುಳಿ ಮುಂತಾದ ಮನರಂಜನೆಯ ಮಹಾಪೂರಗಳು ಇರ್ತದೆ ಎಂದು ಸಂತೆಯ ಮಾಧ್ಯಮ ಸಂಪರ್ಕ ಅಧಿಕಾರಿ ಹರಿಪ್ರಸಾದ್ ಎಸ್ ವರದ ಹೇಳಿದರು.


ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಸೆಲೆಬ್ರಿಟಿಗಳು ಸಂತೆಗೆ ರಂಗು ಬಳಿಯಲಿದ್ದಾರೆ. ಅಕ್ಕಿ ಸಚಿವರೆಂದೇ ಖ್ಯಾತಿ ಹೊತ್ತ ದಿನೇಶ್ ಗುಂಡೂರಾವ್ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಈ ವಿಶಿಷ್ಟ, ವಿನೂತನ, ಹಿಂದೆಂದೂ ನಡೆಯದ ಆಹಾರ ಸಂಸ್ಕೃತಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಆಯೋಜಕರು ಹೇಳಿದರು. ಸಂತೆಯಲ್ಲಿ ಸಿಗುವ ಆಹಾರ ಮತ್ತಿತರ ವಿವರಗಳನ್ನು ಇಲ್ಲಿರುವ ಚಿತ್ರದಲ್ಲಿ ನೀವೀಗ ಓದುತ್ತಿದ್ದೀರಿ.

ಚಿತ್ರಪಟದಲ್ಲಿಲ್ಲದ ತಿಂಡಿ ಎಂದರೆ ಚಿಂತಾಮಣಿಯ ಪಾನಿಪೂರಿ ಮತ್ತು ಮಂಗಳೂರು ಬಜ್ಜಿ ಎಂದವರು ಗೌರಸ್ವಾಮಿ ಕೃಷ್ಣಮೂರ್ತಿ ಉರುಫ್ ಕಿಟ್ಟಣ್ಣ. ಸಂತೆ ಮುಗಿಸಿ ನೀವು ಹೊರಡುವ ಗೇಟಿನಲ್ಲಿ ಜೀರ್ಣಕಾರಿ ಗುಳಿಗೆಗಳ ಮಾರಾಟ ವ್ಯವಸ್ಥೆಕೂಡ ಇರುತ್ತದೆ ಎಂದು ಕಿಟ್ಟಣ್ಣ ಸ್ಪಷ್ಟಪಡಿಸಿದರು. ತಿಂತಿನೋ ಬಿಡ್ತೀನೋ ನಾನಂತೂ ಸಂತೆಗೆ ಹೋಗುವುದು ನಿಶ್ಚಿತ. ಅಲ್ಲಿ ಸಿಗೋಣ!

ಅಂದಹಾಗೆ, ಈ ಉತ್ಸಾಹಿ ಯುವಕರ ಆಸಕ್ತಿ ನಾಲಗೆ ರುಚಿ ತಣಿಸುವ ಸಂತೆ ಏರ್ಪಡಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅರಳೀಕಟ್ಟೆ ಹೆಸರಿನ ವಿಭಾಗವಿದೆ. ಬಿರುಕು ಬಿಟ್ಟ ಗಂಡ ಹೆಂಡತಿ ಸಂಬಂಧದ ನಡುವೆ ಬೆಸುಗೆ ಹಾಕಲು ಪ್ರಯತ್ನಿಸುವ ಮೂಲಕ ವಿಚ್ಛೇದನಗಳ ನಾಗಾಲೋಟಕ್ಕೆ ಬ್ರೇಕ್ ಹಾಕುವುದು ಉದ್ದೇಶ. ಅವರ ಅತೃಪ್ತಿ, ಅಪನಂಬಿಕೆ, ಅಸಮಾಧಾನದ ನೆಲೆಗಳನ್ನು ಪತ್ತೆ ಮಾಡಿ ಪರಿಹಾರ ಸೂಚಿಸುವ ಕಟ್ಟೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳು ಫ್ರೀ ಆಗಿ ಕೆಲಸ ಮಾಡುತ್ತಾರೆ. [ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]

English summary
Heads Up : Hand full of Kannada Facebook friends flock together to host largest ever, ethnic and unique Vegetarian Food Festival in Bengaluru. A 3 day event during third week of January 2016 promises to tease taste buds of native food connoisseurs, Burrp!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X