ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ - ವಿನಾಯಕ

By ವಿನಾಯಕ ಕೋಡ್ಸರ, ಪತ್ರಕರ್ತ, ಬೆಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ವಿನಾಯಕ ಕೋಡ್ಸರ, ಪತ್ರಕರ್ತ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಬರವಣಿಗೆ ಎಂಬ ವ್ಯಾಪಾರಿ ಸಂತೆಯಲ್ಲಿ...
ಎಲ್ಲ ಓದಲಿ ಎಂದು ನಾ ಬರೆಯವುದಿಲ್ಲ
ದಿನ ಬರೆಯುವುದು ಅನಿವಾರ್ಯ ಕರ್ಮ ಎನಗೆ...

ಬಹುಶಃ ದಿನ ಬೆಳಗಾದ್ರೆ ಎದ್ದು ಬರೆಯುವ ಯಾವುದೇ ಪತ್ರಕರ್ತರನ್ನು ಕೇಳಿದ್ರೂ ಹೊರಗೆ ಬರುವುದು ಇದೇ ಸಾಲುಗಳು. ಪತ್ರಕರ್ತರು ಅಂತಲ್ಲ, ಬರವಣಿಗೆಯನ್ನು ಹೊಟ್ಟೆಪಾಡು ಮಾಡಿಕೊಂಡವರು, ಬರವಣಿಗೆ ಎಂಬ ವ್ಯಾಪಾರಿ ಸಂತೆಯಲ್ಲಿ ಕಳೆದು ಹೋದವರು ಇದೇ ಮಾತನ್ನು ಹೇಳಬಹುದು!

ನಾನು ಮುಕ್ತವಾಗಿ, ಸ್ವತಂತ್ರವಾಗಿ, ಸ್ವಾಯತ್ತವಾಗಿ ನನಗೆ ಅನ್ನಿಸಿದ್ದನ್ನು ಬರೆಯುತ್ತೇನೆ ಎಂದರೆ ಖಂಡಿತವಾಗಿಯೂ ಅದಕ್ಕೊಂದು ವೇದಿಕೆ ಸಿಗಲಾರದು ಅನ್ನಿಸಲು ಶುರುವಾಗಿತ್ತು. ಅಂಥ ಕಾಲದಲ್ಲಿ ಹುಟ್ಟಿಕೊಂಡಿದ್ದು ಅಂತರ್ಜಾಲ ತಾಣಗಳು, ಬ್ಲಾಗ್‌ಗಳು. ಒಂದು ಕಾಲಕ್ಕೆ ಇಂಗ್ಲಿಷ್‌ನಲ್ಲಿ ಜನಪ್ರಿಯವಾಗಿದ್ದ ಈ ಅಂತರ್ಜಾಲ ಜಗತ್ತಿನ ಸಾಹಿತ್ಯ 2005-10ರ ಅವಧಿಯಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿತು.

ಆ ಕಾಲದಲ್ಲೇ ನಾವೆಲ್ಲ ಬ್ಲಾಗ್ ಎಂಬ ನಮ್ಮದೇ ಸ್ವಂತ ಸೋಗೆಯ(ಅಡಿಕೆ ಸೋಗೆ) ಸೂರನ್ನು ಕಟ್ಟಿಕೊಂಡಿದ್ದು. ಖುಷಿ-ಖುಷಿಯಾಗಿ ತೋಚಿದ್ದು, ಅನ್ನಿಸಿದ್ದನ್ನೆಲ್ಲ ಗೀಚಿಕೊಳ್ಳಲು ಶುರು ಮಾಡಿದ್ದು. ಒಂದಷ್ಟು ಒಳ್ಳೊಳ್ಳೆ ಬರಹಗಾರರ ಬರಹಗಳನ್ನು ಇಲ್ಲಿ ಓದಿ ಬಾಯಿ ಚಪ್ಪರಿಸುತ್ತಿದ್ದೆವು. ಈಗಲೂ ಅಪರೂಪಕ್ಕೆ ಕೆಲವರ ಅಂಥ ಬರಹಗಳು ಸಿಗುತ್ತವೆ! ಆದ್ರೆ ಇದು ಅತಿಯಾಗಿ ಒಂದು ಹಂತದಲ್ಲಿ ಅಂತರ್ಜಾಲ ಸಾಹಿತ್ಯ ಎಂಬುದು ಕೂಡ ಗಂಭೀರತೆ ಕಳೆದುಕೊಂಡಿತು. ಜೊತೆಗೆ ಅವುಗಳಲ್ಲಿ ನಮ್ಮ ಆಸಕ್ತಿಯು ಒಂಚೂರು ಕಡಿಮೆ ಆಯಿತು ಎನ್ನಬಹುದು. ಅಂಥ ಹೊತ್ತಿನಲ್ಲಿ ದಟ್ಸ್‌ಕನ್ನಡ ಶಾಮ್ ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ನೀವೇನು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಕಳುಹಿಸಿದ್ದಾರೆ.

Kannada online survey 2014 : My expectations - Vinayaka Kodsara

ಸರ್ ನೀವು ಕೂಡ ಹಿಟ್ಸ್ ಹೆಚ್ಚಾಗಲಿ ಅಂತಾ ಸುದೀರ್ಘವಾದ ಲೇಖನಗಳನ್ನು ತುಂಡು-ತುಂಡಾಗಿಸಿ ಹಾಕಬೇಡಿ. ಆ ಲೇಖನದ ಓದಿನ ಓಘ ಕಳೆದುಹೋಗುತ್ತದೆ. ಪ್ರಾಣಿಗಳ ಮಾಂಸದಂತೆ ಲೇಖನಗಳನ್ನು ಕತ್ತರಿಸಿ ಅದಕ್ಕೊಂದು ಗ್ಲಾಮರಸ್ ಫೋಟೊ ಹಾಕಿ ದಯವಿಟ್ಟು ಪ್ರಕಟಿಸಬೇಡಿ ಅಂತಾ ಶಾಮ್‌ಗೆ ತಮಾಷೆ ಮಾಡುತ್ತಿದ್ದೆ.

ಅಂತರ್ಜಾಲ ಟಿವಿಗಿಂತ ಪ್ರಭಾವಶಾಲಿ : ಇವತ್ತು ಅಂತರ್ಜಾಲ ಮಾಧ್ಯಮ ಎಂಬುದು ಒಂದು ಪತ್ರಿಕೆ, ಟಿವಿಗಿಂತ ಪ್ರಭಾವಶಾಲಿಯಾಗಿದ್ದು. ನೀವು ಆದಾಯದ ಮಾರ್ಗದಲ್ಲಿ ನೋಡುವುದಾದರೆ ಗೂಗಲ್, ಅಮೆಜಾನ್, ಇಬೇ, ಯೂಟ್ಯೂಬ್‌ನಂಥ ಜಾಲತಾಣಗಳು ದೊಡ್ಡ ಮಾಧ್ಯಮ ಸಂಸ್ಥೆಗೆ ಶ್ರೀಮಂತ. ಆದ್ರೆ ನಾವು ಮಾತ್ರ ಈ ಆನ್‌ಲೈನ್ ಜಗತ್ತನ್ನು ವ್ಯಾಪಾರಿ ದೃಷ್ಟಿಯಲ್ಲಿ ನೋಡುವುದನ್ನು ಇಷ್ಟಪಡುವುದಿಲ್ಲ.

ಮೊನ್ನೆ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ನಿರಂಜನ್ ವಾನಳ್ಳಿ ಮಾತಿಗೆ ಸಿಕ್ಕಿದ್ದರು. ಇವತ್ತಿನ ಪತ್ರಿಕೋದ್ಯಮಕ್ಕೆ ಅನೇಕ ಪ್ರತಿಭಾನ್ವಿತರನ್ನು ಕೊಟ್ಟ ಮೇಷ್ಟ್ರು ಅವರು. ಹೀಗೆ ಕಳೆದ 5 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಾದ ಬೆಳವಣಿಗೆಗಳನ್ನು, ಇವತ್ತಿನ ಪತ್ರಿಕೋದ್ಯಮದ ಕಾರ್ಪೊರೇಟೀಕರಣದ, ಕಳೆದು ಹೋಗಿರುವ ಸಕಾರಾತ್ಮಕ ಪತ್ರಿಕೋದ್ಯಮದ ಕುರಿತು ಅವರು ಮಾತಾಡುತ್ತಿದ್ದರು. ಆಗ ನಮಗೆ ಎದ್ದ ಪ್ರಶ್ನೆ, ಅದಕ್ಕೆ ಪರ್ಯಾಯ ಏನು ಎಂಬುದು? ಆಗ ನನಗೆ ತೋಚಿದ ಉತ್ತರ ಅಂತರ್ಜಾಲ.

ಯಸ್, ಎಲ್ಲ ಮಾಧ್ಯಮಕ್ಕೂ ಪರ್ಯಾಯವಾಗಿ ನಿಲ್ಲಬಲ್ಲ ಶಕ್ತಿ ಈ ಅಂತರ್ಜಾಲಕ್ಕಿದೆ. ಅದು ವಿದೇಶಗಳಲ್ಲಿ ಈಗಾಗಲೇ ಸಾಬೀತಾಗಿದೆ. ಆದ್ರೆ ಭಾರತದಲ್ಲಿ, ಕನ್ನಡ ನಾಡಿನಲ್ಲಿ ಈಗ ನಿಧಾನವಾಗಿ ಕವಲೊಡೆಯುತ್ತಿದೆ. ದಟ್ಸ್ ಕನ್ನಡ (ಒನ್ಇಂಡಿಯಾ ಕನ್ನಡ), ಅವಧಿಯಂಥ ಒಂದಷ್ಟು ತಾಣಗಳು ಈ ನಿಟ್ಟಿನಲ್ಲೊಂದು ಪುಟ್ಟ ಹೆಜ್ಜೆ ಇಟ್ಟಿವೆ. ಇಂಥ ಹೊತ್ತಿನಲ್ಲಿ ನಾವು ಸಕರಾತ್ಮಕವಾಗಿ ಅಂತರ್ಜಾಲ ಮಾಧ್ಯಮವನ್ನು, ವೆಬ್ ತಾಣಗಳನ್ನು ಕಟ್ಟಿಕೊಳ್ಳುವ ಯೋಚನೆ ಮಾಡಬೇಕು.

ಸಂಬಳ ಸಿಗಬೇಕು ಅಂದ್ರೆ... : ಹಿಂದೆಲ್ಲ ಮಾಧ್ಯಮದಲ್ಲಿ ಆಶ್ರಮ, ಅನಾಥಾಶ್ರಮದ ಸುದ್ದಿ ಮಾತ್ರ ಉಚಿತವಾಗಿ ಬರುತ್ತಿತ್ತು. ಈಗ ಆಶ್ರಮದ್ದು ಕೂಡ ಪೇಯ್ಡ್ ನ್ಯೂಸ್. ಬಾಕಿ ಇರುವುದು ಅನಾಥಾಶ್ರಮ ಮಾತ್ರ! ಯಾವುದೇ ಪತ್ರಿಕೆಯಲ್ಲಿ ಲೇಖನದ ಕೆಳಗೆ ಸಂಸ್ಥೆ ವಿಳಾಸ, ದೂರವಾಣಿ ಸಂಖ್ಯೆ ಹಾಕಿದ್ರು ಅಂದ್ರೆ ಅದು ಪೇಯ್ಡ್ ನ್ಯೂಸ್ ಅಂತಲೇ ಅರ್ಥ. ನಮ್ಮ ಮುದ್ರಣ, ದೃಶ್ಯ ಮಾಧ್ಯಮಗಳು ಇವತ್ತು ಅಷ್ಟರ ಮಟ್ಟಿಗೆ ಜಾಹೀರಾತು ಪ್ರಪಂಚದಿಂದಾಚೆಗೆ ಆಲೋಚಿಸುತ್ತಿವೆ! ಇದರ ಸರಿ, ತಪ್ಪುಗಳನ್ನು ಅವಲೋಕಿಸುವ ಸ್ಥಿತಿಯಲ್ಲಿ ಖಂಡಿತ ನಾವಿವತ್ತು ಇಲ್ಲ. ನಮಗೆಲ್ಲ ತಿಂಗಳಿಗೆ ಸರಿಯಾಗಿ ಸಂಬಳ ಬರಬೇಕು ಅಂದ್ರೆ ಅಂಥವೆಲ್ಲ ಅನಿವಾರ್ಯ. ಇವತ್ತು ಪತ್ರಿಕೆ ಒಂದು ಉದ್ಯಮ. ಬರವಣಿಗೆ ನನ್ನಂಥ ಸಹಸ್ರಾರು ಮಂದಿಗೆ ಹೊಟ್ಟೆಪಾಡು.

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕಳೆದು ಹೋದ ನಮ್ಮನ್ನು ನಾವು ಹುಡುಕಿಕೊಳ್ಳಲು, ನಮ್ಮೊಳಗಿನ ನಿಜವಾದ ಬರವಣಿಗೆಯನ್ನು ಹೊರಗೆ ತೆಗೆಯಲು ನಮಗಿರುವ ವೇದಿಕೆ ಈ ಅಂತರ್ಜಾಲ ಜಗತ್ತು. ಇದು ನಮ್ಮ ನಂಜನ್ನು ಕಾರಿಕೊಳ್ಳುವ, ಮತ್ತೆ ಇಲ್ಲಿ ಯಾರನ್ನೋ ಓಲೈಸುವ, ಹೀಗೆ ಬರೆದ್ರೆ, ಅದ್ರ ಬಗ್ಗೆ ಬರೆದ್ರೆ ನನಗೇನು ಲಾಭ ಎಂದು ಆಲೋಚಿಸುವ ವೇದಿಕೆ ಆಗಬಾರದು.

ಬೇರೆ ಯಾವುದೇ ಜಾಗದಲ್ಲಿ ಬರೆದ್ರೂ ನಿಮ್ಮ ಬರಹಕ್ಕೆ ಕತ್ತರಿ ಪ್ರಯೋಗ ಆಗುತ್ತದೆ. ನಿಮಗೆ ಒಳ್ಳೆಯದು, ಅದ್ಭುತ ಅನ್ನಿಸಿದ್ದು ಅವರಿಗೆ ತೀರಾ ಕ್ಲಿಷೆ ಎನ್ನಿಸುತ್ತದೆ. ನೀವೊಬ್ಬ ಅನಕ್ಷರಸ್ಥ ಸಾಧಕನ ಬಗ್ಗೆ ಬರೆದ್ರೆ, ಪರಿಸರ, ಕೃಷಿ ವಿಚಾರಗಳನ್ನು ಹೇಳಿದ್ರೆ, ಅದಕ್ಕಿಂತ ಸಚಿವರು ಸ್ನಾನ ಮಾಡಿದ ಸೋಪು, ಮೈ ಒರೆಸಿಕೊಂಡ ಟವೆಲ್ಲು, ನಟಿಯೊಬ್ಬಳು ಮೂಸಿಬಿಟ್ಟ ಹೂವು, ನಟನೊಬ್ಬ ಸುಸ್ಸು ಮಾಡಿದ ಜಾಗ... ಇವೆಲ್ಲವೂ ಅತ್ಯಂತ ಪ್ರಮುಖ ಸರಕಾಗುತ್ತದೆ.

ಅನ್ನ ರಾಗಿ ಅಂಬಲಿಯತ್ತ ದೃಷ್ಟಿ ಹಾಯಿಸಿ : ಸಿನಿಮೀಯ ರೀತಿಯಲ್ಲಿ ಕೊಲೆ ನಡೆದಿರುವಾಗ ಯಾರೋ ಒಬ್ಬ ಗಾಂಧೀವಾದಿ ಯಾವುದೋ ಒಬ್ಬ ಸಾಧಕನ ಕುರಿತು ಹೇಳಿದ್ರೆ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಯಾರಿಗೂ ಇಲ್ಲ. ಯಸ್, ಪಾನಿಪುರಿ, ಗೋಬಿಮಂಚೂರಿ, ಪಿಜ್ಜಾ, ಬರ್ಗರ್ ಎಲ್ಲವೂ ನಮ್ಮ ನಿತ್ಯದ ಅನ್ನಕ್ಕಿಂತ ಅತ್ಯದ್ಭುತ ರುಚಿ. ತಂಬುಳಿ, ಗೊಜ್ಜು, ಸಾರು ಯಾವುದೂ ಈ ಸ್ನ್ಯಾಕ್ಸ್‌ನ ಎದುರು ನಿಲ್ಲುವುದಿಲ್ಲ. ಹಾಗಂತ ಎಷ್ಟು ದಿನ ನೀವು ಅದನ್ನೇ ತಿನ್ನುವಿರಿ? ಹೊಟ್ಟೆ ಕೆಟ್ಟಾಗಲಾದರೂ ಅನ್ನ, ರಾಗಿ ಅಂಬಲಿಯತ್ತ ದೃಷ್ಟಿ ಹಾಯಿಸಲೇ ಬೇಕಲ್ವಾ? ಇವೆಲ್ಲವು ಒಂಥರ ಹಾಗೆ. ಒಂದಲ್ಲ ಒಂದು ದಿನ ನಾವು ಬೆಳೆ ಬೆಳೆಯುವ ರೈತರತ್ತ, ಸಮಾಜ ಕಟ್ಟುವ ವ್ಯಕ್ತಿಗಳತ್ತ ದೃಷ್ಟಿ ಹಾಯಿಸಲೇಬೇಕು. ಅಂಥ ದೃಷ್ಟಿಕೋನಕ್ಕೆ ಈ ಅಂತರ್ಜಾಲ ಜಗತ್ತು ವೇದಿಕೆಯಾಗಬೇಕು ಎಂಬ ಬಯಕೆ ನನ್ನದು.

ಯಾಕಂದ್ರೆ ನಿಮಗಿಲ್ಲಿ ಹೀಗೇ ಬರೆಯಬೇಕು ಎಂದು ಬರೆಸುವ ನಕಲಿ ಬೀಜದ ಕಂಪನಿಯಿಲ್ಲ. ದುಡ್ಡು ಕೊಟ್ಟು ಸ್ಲಾಟು ಖರೀದಿಸಿ ಪ್ರವಚನ ಮಾಡುವ ಬೋಗಸ್ ಸ್ವಾಮಿಗಳಿಲ್ಲ. ಇದು ನಿಮ್ಮದೇ ಜಗತ್ತು. ನಿಮಗೆ ಸರಿ ಅನ್ನಿಸಿದ್ದನ್ನು, ನಿಮಗೆ ಸತ್ಯ ಎಂದು ಕಂಡಿದ್ದನ್ನು ಬರೆಯಬಹುದು. ನಿಮಗೆ ಥ್ರಿಲ್ಲಿಂಗ್ ಅನ್ನಿಸಿದ ಅನುಭವಗಳನ್ನು ಹಂಚಿಕೊಳ್ಳಬಹುದು.

ಅಂತರ್ಜಾಲಕ್ಕೆ ನೀತಿಸಂಹಿತೆ, ಜಾಗೃತೆಯೂ ಅಗತ್ಯ : ಹಾಗಂತ ಇಲ್ಲೂ ನಮಗೆ ನಾವು ಚೌಕಟ್ಟು ಹಾಕಿಕೊಳ್ಳುವ ಅಗತ್ಯವಿದೆ. ಅದು ನಮಗೆ ನಾವೇ ರೂಪಿಸಿಕೊಳ್ಳುವ ನೀತಿ ಸಂಹಿತೆ. ಯಾರದ್ದೋ ತೇಜೋವಧೆ ಮಾಡುವುದು, ಯಾರದ್ದೋ ಸಂಸಾರದ ಕಥೆ ಬರೆದು ನಾವು ವಿಕೃತ ಖುಷಿ ಅನುಭವಿಸುವುದು ಬೇಡ.

ನಿಮಗೆ ಫೋಟೋಗ್ರಫಿ ಇಷ್ಟವಾದ್ರೆ ಅಂಥ ಫೋಟೋಗಳನ್ನು ಹಾಕಿಕೊಳ್ಳಿ ಜೊತೆಗೆ ಕಳ್ಳರು ಅದನ್ನು ಕದಿಯದಂತೆ ಎಚ್ಚರಿಕೆವಹಿಸಿ! ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದ್ರೆ, ಈ ಜಾಗದಲ್ಲಿ ನಾಗರಿಕ ಪತ್ರಿಕೋದ್ಯಮಕ್ಕೆ ಅವಕಾಶವಿದೆ. ಅಂಥ ಅವಕಾಶದತ್ತ ನಾವು ಗಮನಹರಿಸಬೇಕಿದೆ. ಯಾವುದೋ ಟಿವಿ, ಪತ್ರಿಕೆ ಬೈಯ್ಯುತ್ತ ಕೂರುವುದರ ಬದಲು ಕನ್ನಡದಲ್ಲೊಂದು ಸಕರಾತ್ಮಕ ಸುದ್ದಿತಾಣ, ವೆಬ್‌ತಾಣಗಳನ್ನು ನಿರ್ಮಿಸಬಹುದು. ನಾನಂತೂ ಇಲ್ಲಿಂದ ಬಯಸುವುದು ಇದನ್ನೆ ಮತ್ತು ಇವಷ್ಟನ್ನೆ. ಸಂತೆಯಲ್ಲಿ ಬರವಣಿಗೆ ವ್ಯಾಪಾರ ಒಂದೆಡೆಯಿರಲಿ. ಅದರ ಜೊತೆ ತಿನ್ನುವ ಆಹಾರಗಳನ್ನು ನಮ್ಮದೇ ಸೂರಿನಲ್ಲಿ ಬೆಳೆಯೋಣ...

English summary
Kannada online survey 2014, My expectations : Internet has the capability to be an alternative media. Few Kannada portals have proved it too. But, we want Kannada website which, apart from making business, can create positive vibes, provide platform for citizen reporting, says Vinayaka Kodsara, journalist in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X