ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂತಿ ನಿಮ್ಮ ಪ್ರೀತಿಯ ಕನ್ನಡಿಗ - ವಿದ್ಯಾಶಂಕರ ಹರಪನಹಳ್ಳಿ

By ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

"ಕನ್ನಡವೇ ಸತ್ಯ ಕನ್ನಡವೇ ನಿತ್ಯ" ಎಂಬುದು ಬಹು ಜನಪ್ರಿಯ ಕವಿವಾಣಿ. ಅಂತರ್ಜಾಲದ ಮಾಯಾಜಾಲ ಶುರುವಾದ ಮೇಲೆ, ಬೇಕೋ ಬೇಡವೋ ಎಲ್ಲರೂ ಒಂದಷ್ಟು ಸಮಯ ಕಂಪ್ಯೂಟರ್ ಮುಂದೆ, ಅಂತರ್ಜಾಲ ತಾಣಗಳನ್ನು ವಿವಿಧ ಕಾರಣಕ್ಕೆ ತಡಕಾಡುತ್ತಾ ಕಾಲ ಕಳೆಯುತ್ತೇವೆ. ಸ್ವಲ್ಪ ಉತ್ಪ್ರೇಕ್ಷೆ ಎನಿಸಿದರೂ, ಅಂತರ್ಜಾಲದಲ್ಲಿ ಕನ್ನಡ ಬರದೇ ಹೋಗಿದ್ದರೆ, ಕನ್ನಡದ ಬೆಳವಣಿಗೆ ಹಿನ್ನೆಡೆಯಾಗುತ್ತಿತ್ತು ಎಂಬುದು ನನ್ನ ಬಲವಾದ ನಂಬಿಕೆ. ವಿಶೇಷವಾಗಿ ಯುವಜನತೆ ಕನ್ನಡದಿಂದ ವಿಮುಖವಾಗುವ ಸಾಧ್ಯತೆ ಇತ್ತು. ಅಷ್ಟರ ಮಟ್ಟಿಗೆ ಅಂತರ್ಜಾಲ ಜಗತ್ತು ನಮ್ಮನ್ನು ಆವರಿಸಿದೆ.

ಸುಮಾರು 16 ವರ್ಷದಿಂದ ಅಂತರ್ಜಾಲದಲ್ಲಿ ಕನ್ನಡದ ಬೆಳವಣಿಗೆ ಗಮನಿಸಿದ್ದೇನೆ. ಅನೇಕ ಕನ್ನಡ ಅಂತರ್ಜಾಲ ತಾಣಗಳು ಸೃಷ್ಟಿಯಾಗಿವೆ. ಕೆಲವಂತೂ ಬಂದಷ್ಟೇ ವೇಗದಲ್ಲಿ ಮಾಯವೂ ಆಗಿವೆ. ಕೆಲವೊಂದು ಹಲ್ಲು ಕಚ್ಚಿ ಹೋರಾಟ ಮಾಡುತ್ತಿವೆ. ಕೆಲವೊಂದು ಕಾಲದೊಂದಿಗೆ ಬದಲಾವಣೆ ಒಳಗಾಗುತ್ತಾ, ಬದಲಾದ ಓದುಗರ ಅಭಿರುಚಿಗೆ ಒಗ್ಗಿಕೊಳ್ಳುತ್ತಾ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಅದರಲ್ಲಿ ಒನ್ಇಂಡಿಯಾ - ಕನ್ನಡ ಕೂಡ ಒಂದು (ನನ್ನಂತಹ ಹಳಬರಿಗೆ ಇದು ಈಗಲೂ 'ದಟ್ಸ್ ಕನ್ನಡ').

Vidyashankar Harapanahalli, Bengaluru

ಅನೇಕ ಅಂತರ್ಜಾಲ ತಾಣಗಳು ಉತ್ತಮ ಉದ್ದೇಶದೊಂದಿಗೆ, ಉತ್ತಮ ಗುಣಮಟ್ಟದೊಂದಿಗೆ ಶುರುವಾಗಿ ನಂತರ ನಿಂತು, ಕುಂತು, ಮತ್ತೆ ತುಸು ಕುಂಟುತ್ತಾ ಸಾಗಿ ನಂತರ ಮಕಾಡೆ ಮಲಗಿದ್ದನ್ನೂ ವಿಷಾದದಿಂದ ಗಮನಿಸಿದ್ದೇನೆ. ಹೆಸರುಗಳು ಬೇಡ, ನೀವು ಅಂತರ್ಜಾಲದಲ್ಲಿ ತುಸು ಸಕ್ರಿಯವಾಗಿದ್ದರೆ ನೀವು ಗಮನಿಸಿರುತ್ತೀರಿ.

ಕನ್ನಡಿಗರ ನಿರಭಿಮಾನ ಎಂದು ಹೇಳಿ ಕೈ ತೊಳೆದುಕೊಳ್ಳಬಹುದಾದರೂ, ಸ್ವಲ್ಪ ಆಳಕ್ಕಿಳಿದು ವಿಶ್ಲೇಷಣೆ ಮಾಡಿದರೆ ನಿಮಗೆ ಗೊತ್ತಾಗುತ್ತದೆ. ಬರಿ ಉತ್ಸಾಹದಿಂದ, ಅಭಿಮಾನದಿಂದ, ಆವೇಶದಿಂದ ಅಂತರ್ಜಾಲ ತಾಣಗಳನ್ನು, ಕನ್ನಡದ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಕೊಂಚ ಪ್ರೋತ್ಸಾಹ ಸರಕಾರದಿಂದಲೂ ಬೇಕು ಮತ್ತು ಕೊಂಚ ವ್ಯಾಪಾರೀಕರಣ ಅನಿವಾರ್ಯ.

ಕಳೆದ ಎರಡು ದಶಕದಲ್ಲಿ ಅನೇಕ ಕೆಲಸಗಳಾಗಿವೆ, ಕನ್ನಡ ಟೈಪಿಸುವುದಕ್ಕೆ ಅನೇಕ ಉಚಿತ ತಂತ್ರಾಂಶಗಳು, ಆನ್ಲೈನ್ ನಿಘಂಟುಗಳು, ಓದುವುದಕ್ಕೆ ಅನೇಕ ಬ್ಲಾಗ್ಗಳು, ವೆಬ್ ಮ್ಯಾಗಜಿನ್ಗಳು, ಸುದ್ದಿವಾಹಿನಿಗಳು, ಕನ್ನಡದ ಸಮಸ್ತ ದೈನಿಕ ಪತ್ರಿಕೆಗಳು, ಬಹುತೇಕ ಕನ್ನಡ ಟಿವಿ ಚಾನೆಲ್-ಗಳು ಅಂತರ್ಜಾಲದಲ್ಲಿ ಲಭ್ಯ. ಇವುಗಳ ಮಧ್ಯೆ ಅನೇಕ ಪೋಲಿ ಸೈಟುಗಳು ಕನ್ನಡದಲ್ಲಿ ಬಂದಿವೆ! [ಒನ್ಇಂಡಿಯಾದಲ್ಲಿ ಲೇಖಕರ ಅಂಕಣ]

ಇಷ್ಟೆಲ್ಲಾ ಆದರೂ ಮತ್ತಷ್ಟು ನಿರೀಕ್ಷೆಗಳು ಇವೆ :

(1) ಸಾಹಿತ್ಯಾಸಕ್ತರಿಗೆ ಹಳೆಗನ್ನಡ, ನಡುಗನ್ನಡ, ಅಧುನಿಕ ಕನ್ನಡ ಸಾಹಿತ್ಯ (ಕಾಪಿರೈಟ್ ಉಲ್ಲಂಘಿಸದೆ) ಎಲ್ಲರಿಗೂ ಅಂತರ್ಜಾಲದಲ್ಲಿ ಸಿಗುವಂತಾಗಬೇಕು. ಹುಡುಕಿದಾಗ ತಕ್ಷಣಕ್ಕೆ ಸಿಗುವಂತಿರಬೇಕು.

(2) ಕನ್ನಡ ಸಾಹಿತ್ಯ, ಸಂಸ್ಕೃತಿಯ ಪ್ರಸರಣಕ್ಕೆ ಶ್ರಮಿಸುತ್ತಿರುವ ಅಂತರ್ಜಾಲ ತಾಣಗಳಿಗೆ (ಲಾಭರಹಿತ) ಸರಕಾರ ಅನುದಾನ ನೀಡಬೇಕು. ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ನಿಂತುಹೋಗುವ ಅವಕಾಶಗಳಿವೆ, ನಿಂತುಹೋಗಿವೆ ಕೂಡ. ಯಾವುದ್ಯಾವುದೋ ಸಿನಿಮಾಗಳಿಗೆ ಸಬ್ಸಿಡಿ ರೂಪದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಸರಕಾರ ಈ ಕಡೆಯೂ ಗಮನ ಕೊಡಲಿ.

(3) ಓದುವ ರೀತಿ ನೀತಿಗಳು ಬದಲಾಗಿದೆ. ಏಕಾಂತ ಅಪರೂಪವಾಗಿದೆ. ಬಸ್ಸಲ್ಲಿ, ರೈಲಲ್ಲಿ, ಏರೋಪ್ಲೇನ್-ನಲ್ಲಿ ಪಯಣಿಸುತ್ತಾ, ಕಾಯುತ್ತಾ ಜನರು ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಬಿಚ್ಚಿ ಜನ ತಮಗಿಷ್ಟವಾದದ್ದನ್ನು ಅಂತರ್ಜಾಲದಲ್ಲಿ ಜಾಲಡಿ ಹುಡುಕಿ ಓದುತ್ತಿದ್ದಾರೆ. ಹಾಗಯೇ ಓದುವ ವಿಷಯಗಳ ವೈವಿಧ್ಯತೆ ಕೂಡ ಹೆಚ್ಚಾಗಿದೆ. ನ್ಯೂಸ್, ಟೆಕ್ನಾಲಜಿ, ಕತೆ, ಕವನ, ಸಿನಿಮಾ, ಸಾಂಸ್ಕೃತಿಕ ಸುದ್ದಿ, ದೇಶ ವಿದೇಶಗಳ ಸುದ್ದಿ, ತಮ್ಮೂರಿನ ಸುದ್ದಿ ಇತ್ಯಾದಿ... ಅದನ್ನೆಲ್ಲಾ ಓದುಗರಿಗೆ ತಲುಪಿಸಬೇಕಾಗಿದೆ. ಅಷ್ಟೇ ಅಲ್ಲ ತಲುಪಿಸುವ ವೇಗ ಕೂಡ ಮುಖ್ಯವಾಗಿದೆ. ಇಪ್ಪತ್ತು ಚಿಲ್ಲರೆ ಕನ್ನಡ ಟಿವಿ ಚಾನೆಲ್-ಗಳು ಇರುವ ರಾಜ್ಯದಲ್ಲಿ ಉತ್ತಮ ಕನ್ನಡ ಅಂತರ್ಜಾಲ ತಾಣಗಳು ಕಡಿಮೆಯಿರುವುದು ವಿಷಾದನೀಯ.

(4) ಐಟಿ ಕ್ಯಾಪಿಟಲ್ ಎಂದು ಬೀಗುವ ಬೆಂಗಳೂರಿನಲ್ಲಿ ನೆಲಸಿರುವ ಎಲ್ಲಾ ಐಟಿ ಕಂಪನಿಗಳು ಖಡ್ಡಾಯವಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಕೊಡುಗೆ ನೀಡಬೇಕು. ಉದಾಹರಣೆಗೆ : ಕನ್ನಡ ತಂತ್ರಾಂಶ ಅಭಿವೃದ್ಧಿ, ಕನ್ನಡ ಯ್ಯಾಪ್ (App) ರೂಪಿಸುವುದು, ಕನ್ನಡ ಅಂತರ್ಜಾಲ ತಾಣ ರೂಪಿಸುವುದು, ಅನುವಾದಕ ತಂತ್ರಾಂಶ ಅಭಿವೃದ್ಧಿ, ಒಂದು ಫಾಂಟ್-ನಿಂದ ಮತ್ತೊಂದಕ್ಕೆ ಪರಿವರ್ತಕ ತಂತ್ರಾಂಶಗಳು, ಮೊಬೈಲ್-ನಲ್ಲಿ ಕನ್ನಡ ಬಳಕೆ ಸುಲಭಗೊಳಿಸುವುದು ಇತ್ಯಾದಿ. ಇದೆಲ್ಲಾ ಆಗುತ್ತಿದೆ. ಕೆಲವು ಉತ್ಸಾಹಿ ಗುಂಪುಗಳಿಂದ ಮುಂದೆ ಇನ್ನೂ ವ್ಯವಸ್ಥಿತವಾಗಿ ನಡೆದರೆ ಕನ್ನಡಕ್ಕೇ ಲಾಭ.

(5) ಕನ್ನಡ ಸಾಹಿತ್ಯ ಪರಿಷತ್ತು ಮತ್ತಿತರ ಕನ್ನಡ ಸಾಂಸ್ಕೃತಿಕ ಸಂಸ್ಥೆಗಳು ಹೊಸ ತಂತ್ರಜ್ಞಾನಕ್ಕೆ, ಅಂತರ್ಜಾಲ ತಾಣಕ್ಕೆ ತೆರೆದುಕೊಳ್ಳಲಿ. ಇಲ್ಲದಿದ್ದರೆ ಅಪ್ರಸ್ತುತವಾಗುವುದರಲ್ಲಿ ಸಂಶಯವೇ ಇಲ್ಲ.

ಮುಂದಿನ ಕರ್ನಾಟಕ ರಾಜ್ಯೋತ್ಸವಕ್ಕೆ ಕೆಲವಾದರೂ ನಿರೀಕ್ಷೆಗಳು ನಿಜಾವಾದಾವು ಎಂಬ ನಿರೀಕ್ಷೆಯಲ್ಲಿ.

(ಲೇಖಕರು ಮೊಬೈಲ್-ನಲ್ಲಿ ಕನ್ನಡ ಕೀ ಬೋರ್ಡ್ ಬಳಸಿ ಪ್ರಾಯೋಗಿಕ ಕಿರು ಕಾದಂಬರಿ ಬರೆದ್ದಿದ್ದಾರೆ ಮತ್ತು ಕನ್ನಡ ಕವಿತೆಗಳ ಆಂಡ್ರಾಯ್ಡ್ App ರೂಪಿಸಿದ್ದಾರೆ)

English summary
Kannada software development, font conversion tools, creating APPs, Kannada organizations, both government and private must make use of already available technology to drive their content online. Time is running out, warns Vidyashankar Harapanahalli, a techie and a Kannada writer in Bengaluru. Kannada Online - Oneindia survey 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X