ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನುಭಾವರ ಸಾಧನೆ ದಾಖಲಿಸಿ : ಉಮಾ ವೆಂಕಟೇಶ್

By ಡಾ ಉಮಾ ವೆಂಕಟೇಶ್, ಕಾರ್ಡಿಫ್, ಯುನೈಟೆಡ್ ಕಿಂಗ್ಡಮ್
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಡಾ ಉಮಾ ವೆಂಕಟೇಶ್, ಕಾರ್ಡಿಫ್, ಯುನೈಟೆಡ್ ಕಿಂಗ್ಡಮ್. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಕನ್ನಡ ನಾಡಿನಿಂದ ಸಾವಿರಾರು ಮೈಲಿಗಳ ದೂರದಲ್ಲಿ, ಕಡಲಾಚೆಯ ಆಂಗ್ಲನಾಡಿನಲ್ಲಿ ಕಳೆದ 20 ವರ್ಷಗಳಿಂದ ಜೀವನ ನಡೆಸುತ್ತಿರುವ ನನ್ನಂತಹ ಅನಿವಾಸಿಗಳಿಗೆ ಕನ್ನಡ ನಡುಬಲೆಯ ತಾಣವೊಂದರಿಂದ ಏನು ನಿರೀಕ್ಷೆಯಿದೆ ಎನ್ನುವುದನ್ನು ಮಂಡಿಸುವುದೇ ಒಂದು ಸಂತೋಷದ ಸುದ್ದಿ.

ಕಳೆದ ಹತ್ತು ವರ್ಷಗಳಿಂದ ಈ ಕನ್ನಡ ತಾಣದಲ್ಲಿ ನೂರಾರು ಸುದ್ದಿಗಳು, ಲೇಖನಗಳು, ವಿಮರ್ಶೆಗಳು, ವರದಿಗಳು, ಛಾಯಾಚಿತ್ರಗಳು ಹೀಗೆ ಹತ್ತಾರು ವೈವಿಧ್ಯ ಮಾಹಿತಿಗಳನ್ನು ಓದಿ, ಹಾಗು ನನ್ನದೇ ಅನುಭವಗಳನ್ನು ಲೇಖನಗಳ ರೂಪದಲ್ಲಿ ಈ ತಾಣದ ಓದುಗರೊಂದಿಗೆ ಹಂಚಿಕೊಂಡು ಆನಂದಿಸಿದ್ದೇನೆ.

ಈಗ ಪ್ರಾರಂಭವಾಗಿರುವ ಮನದಂಚೆಗಳು (Blogs), ಮತ್ತು ಸಾಮಾಜಿಕ ಜಾಲಬಂಧ ತಾಣಗಳ (Social Network Sites) ಮತ್ತೊಂದು ಕ್ರಾಂತಿಯ ಬಿರುಗಾಳಿ ಎದ್ದಿರುವ ಸಮಯದಲ್ಲಿ, Oneindia.com ಮಾದರಿಯ ತಾಣದಿಂದ ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಅನೇಕ ಉತ್ತರಗಳಿವೆ. [ಇಟಲಿಯ ಅಮಾಲ್ಫೆ ಕರಾವಳಿಯ ಚೆಲುವಿನ ಚಿತ್ತಾರ]

Kannada online survey 2014 : My expectations Uma Venkatesh, UK

1. ಮತ್ತಷ್ಟು ಸಾಹಿತ್ಯ, ಸಂಸ್ಕೃತಿ ಸಮಾಚಾರ : ಕನ್ನಡಿಗರು ಜಗತ್ತನ್ನು ಸುತ್ತಲು ಪ್ರಾರಂಭಿಸಿದ್ದಾರೆ. ವೃತ್ತಪತ್ರಿಕೆಗಳು ಆನ್-ಲೈನ್ ಆವೃತ್ತಿಗಳನ್ನು ಪ್ರಾರಂಭಿಸಿದ್ದರೂ, ಪೂರ್ಣ ಪತ್ರಿಕೆಯನ್ನು ಓದಿ ಜೀರ್ಣಿಸಿಕೊಳ್ಳುವ ವ್ಯವಧಾನವಿರುವುದಿಲ್ಲ. ಈ ದಿಶೆಯಲ್ಲಿ Oneindia, ನಮಗೆ ಸುದ್ದಿಯನ್ನಷ್ಟೇ ಅಲ್ಲ, ಕನ್ನಡದ ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮತ್ತು ಅದರ ಹಲವು ಹತ್ತು ಮುಖಗಳನ್ನು ಏಕಕಾಲದಲ್ಲಿ ತಲುಪಿಸುವಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಬಹುದು.

2. ಆನ್ ಲೈನ್ ನಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಸ್ತುಗಳು : ಪಾಶ್ಚಾತ್ಯ ದೇಶಗಳಲ್ಲಿ ಪ್ರಾರಂಭವಾಗಿರುವ ಆನ್-ಲೈನ್ ವ್ಯಾಪಾರವನ್ನು ನಮ್ಮ ಕನ್ನಡ ಪುಸ್ತಕಗಳು, ಚಲನಚಿತ್ರ ಡಿವಿಡಿ, ಕನ್ನಡ ಗೀತೆಗಳು, ಸಂಗೀತದ ಅಡಕ ಮುದ್ರಿಕೆಗಳು, ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡ ಪುಸ್ತಕಗಳು, (Kindle version of Kannada books), ಹೀಗೆ ಹಲವು ಹತ್ತು ವಿವಿಧ ರೂಪದಲ್ಲಿ ಕನ್ನಡಕ್ಕೆ ಸಂಬಂಧ ಪಟ್ಟ ವಸ್ತುಗಳು ಜಗತ್ತಿನ ಮೂಲೆಮೂಲೆಯಲ್ಲಿರುವ ಕನ್ನಡಿಗರಿಗೆ ಸುಲಭವಾಗಿ, ಒಂದು ಮೌಸ್ ಕ್ಲಿಕ್ಕಿನ ಸಹಾಯದಿಂದ ದೊರಕುವಲ್ಲಿ Oneindia ತಾಣವು ಸಹಾಯ ನೀಡಿದರೆ ಸಾಕಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.

3. ವಿಜ್ಞಾನಪ್ರಿಯರನ್ನು ಸೆಳೆಯುವ ಲೇಖನಗಳೇಕಿಲ್ಲ? : ವಿಜ್ಞಾನದ ಬಗ್ಗೆ ಲೇಖನಗಳನ್ನು ಸರಣಿಯ ರೂಪದಲ್ಲಿ ಪ್ರಕಟಿಸುವ ದಿಕ್ಕಿನಲ್ಲಿ Oneindia ಇನ್ನೂ ಪ್ರಗತಿ ಸಾಧಿಸಿಲ್ಲ. ಇಂದು ಜಗತ್ತಿನಲ್ಲಿ ವಿಜ್ಞಾನ ರಭಸದಿಂದ ಮುಂದುವರೆದಿದೆ. ಇಂದಿಗೂ ವಿಜ್ಞಾನದ ಉತ್ತಮ ಲೇಖನಗಳನ್ನು ಓದಲು ನಾವು ಆಂಗ್ಲ ಭಾಷೆಯ ತಾಣಗಳನ್ನೇ ಅವಲಂಬಿಸಿದ್ದೀವಿ. ಭಾರತ ಅಥವಾ ಜಗತ್ತಿನ ಯಾವುದೇ ಭಾಗದಲ್ಲಿ ನಡೆದ ಸಂಶೋಧನೆಯನ್ನು ಕೇವಲ ಒಂದು ತುಣುಕು ಸುದ್ದಿಯಂತಲ್ಲದೇ, ಒಂದು ಆಸಕ್ತಿಪೂರ್ಣ ಲೇಖನವನ್ನಾಗಿ ಪ್ರಕಟಿಸಿದರೆ, ಸಾಕಷ್ಟು ಹೆಚ್ಚಿನ ವಿಜ್ಞಾನಪ್ರಿಯ ಓದುಗರನ್ನು, ಅದರಲ್ಲೂ ತರುಣ ಪೀಳಿಗೆಯವರನ್ನು ಆಕರ್ಷಿಸಬಹುದು.

4. ಕನ್ನಡಕ್ಕಾಗಿ ದುಡಿದ ವ್ಯಕ್ತಿಗಳ ಸಂದರ್ಶನ ಸರಣಿ : ಕನ್ನಡದ ಅನೇಕ ಮಹಾನುಭಾವರ ಸಾಧನೆಗಳು ಕನ್ನಡಿಗರ ಮನಗಳಿಂದ ಮರೆಯಾಗುತ್ತಿವೆ. ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಭಾಷೆ ಮತ್ತು ಅದರ ಏಳಿಗೆಗಾಗಿ ವಿವಿಧ ರಂಗಗಳಲ್ಲಿ ದುಡಿದ ಮತ್ತು ದುಡಿಯುತ್ತಿರುವ ವ್ಯಕ್ತಿಗಳ ಬಗ್ಗೆ ಉತ್ತಮ ಮಾಹಿತಿ, ಅವರೊಡನೆ ಸಂದರ್ಶನಗಳನ್ನು ಸರಣಿಯ ರೂಪದಲ್ಲಿ ಪ್ರಕಟಿಸಿದರೆ ಒಳಿತು.

5. ಹೊಸ ಪುಸ್ತಕಗಳ ಕುರಿತು ಮಾಹಿತಿ : ಕನ್ನಡದಲ್ಲಿ ಪ್ರಕಟವಾಗುವ ಹೊಸ ಪುಸ್ತಕಗಳ ಬಗ್ಗೆ ಹೊರನಾಡ ಕನ್ನಡಿಗರಿಗೆ ಸಿಕ್ಕುವ ಮಾಹಿತಿ ತೀರಾ ಕಡಿಮೆ. ಅದನ್ನು ಕೊಂಡುಕೊಳ್ಳುವ ಅವಕಾಶಗಳೂ ಇಲ್ಲ. ಹೊಸ ಪುಸ್ತಕಗಳ ಒಂದು ಉತ್ತಮ ವಿಮರ್ಶೆ, ಮತ್ತು ಅದನ್ನು ಕೊಂಡು ಓದಲು ಅವಕಾಶ ನಮ್ಮಂತಹ ಹೊರನಾಡ ಕನ್ನಡಿಗರಿಗೆ ಸಹಾಯಕಾರಿಯಾಗಬಲ್ಲದು.

6. ಮಕ್ಕಳಿಗಾಗಿ ಅಂಕಣ : ಮಕ್ಕಳ ಸಾಹಿತ್ಯ, ಮಕ್ಕಳಿಗೆ ಸಂಬಂಧಪಟ್ಟ ವಿಷಯಗಳಿಗೆ ಪ್ರತ್ಯೇಕವಾದ ಅಂಕಣದ ಅಗತ್ಯವಿದೆ.

7. ಅನಿವಾಸಿ ಅಂಕಣ ಪುನರುಜ್ಜೀನವಗೊಳಿಸಿ : ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕವಾದ ಅಂಕಣವಿದ್ದರೂ, ಅದರಲ್ಲಿ ಹೊರನಾಡ ಕನ್ನಡಿಗರ ಸಮಾರಂಭದ ವರದಿಗಳಲ್ಲದೇ, ಮತ್ತೇನೂ ವಿಶೇಷವಾದ ಲೇಖನಗಳಿಲ್ಲ. ಈಗ ಹತ್ತು ವರ್ಷಗಳ ಹಿಂದೆ ಅಮೆರಿಕನ್ನಡಿಗ ಲೇಖಕರು ಸರಣಿಯಲ್ಲಿ ಬರೆಯುತ್ತಿದ್ದರು. ಅದನ್ನು ಇತರ ಹೊರನಾಡಿನಲ್ಲಿರುವ ಕನ್ನಡ ಲೇಖಕರನ್ನು ಆಹ್ವಾನಿಸಿ ಅವರಿಂದ ಲೇಖನಗಳನ್ನು ಪಡೆದು, ಅಲ್ಲಿನ ಜೀವನದ ಅನುಭವಗಳ ಬಗ್ಗೆಯೂ ಪ್ರಕಟಿಸಿ ಆ ಅಂಕಣವನ್ನು ಪುನಜ್ಜೀವನಗೊಳಿಸಬಹುದು.

8. ಕನ್ನಡ ಭಾಷೆ ಕಲಿಕೆಗೆ ಇ-ಪುಸ್ತಕಗಳು : ಇಂದಿನ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ, ನಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ನಿಮ್ಮ ತಾಣದಲ್ಲಿ, ತಂತ್ರಜ್ಞಾನದ ನೆರವಿನಿಂದ ಕಲಿಯುವ ಮತ್ತು ಕಲಿಸುವ ಒಂದು ವ್ಯವಸ್ಥೆಯಿದ್ದರೆ ಬಹಳ ಉಪಯೋಗವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಕಲಿಯಲು ಬೇಕಾಗುವ ಹಾಡುಗಳು, ವರ್ಣಚಿತ್ರಗಳಿಂದ ತುಂಬಿದ ಕನ್ನಡ ಇ-ಪುಸ್ತಕಗಳು ನಿಮ್ಮ ತಾಣದಲ್ಲಿ ಲಭ್ಯವಾದರೆ ಹೊರನಾದ ಕನ್ನಡಿಗರಿಗೆ ಬಹಳ ಸಹಾಯವಾಗುತ್ತದೆ.

9. ವಿವಿಧ ರಂಗಗಳ ತಜ್ಞರ ಲೇಖನ : ಇದರ ಜೊತೆಗೆ ಜಾಗತಿಕ ಸಮಸ್ಯೆಗಳು, ಪರಿಸರ, ರಾಜಕೀಯ, ತಂತ್ರಜ್ಞಾನ, ಹೀಗೆ ವಿವಿಧ ವಿಷಯಗಳ ಬಗ್ಗೆ ಆಯಾ ರಂಗದ ತಜ್ಞರ ಲೇಖನಗಳನ್ನು ಪ್ರಕಟಿಸಿ ತಾಣವನ್ನು ಮತ್ತಷ್ಟು ಶ್ರೀಮಂತಗೊಳಿಸಬಹುದು.

10. ಕರ್ನಾಟಕದ ವೈವಿಧ್ಯಮಯ ವಿಷಯಗಳ ಮಾಹಿತಿ : ಕರ್ನಾಟಕದ ಅನೇಕ ಆಕರ್ಷಕ ಪ್ರವಾಸ ಸ್ಥಳಗಳು, ನಮ್ಮ ಸಸ್ಯಸಂಪತ್ತು, ಶಿಲ್ಪಕಲೆ, ಜಾನಪದ ಕಲೆ, ಹಬ್ಬಹರಿದಿನಗಳು, ಅಪರೂಪದ ವ್ಯಕ್ತಿಗಳು ಮತ್ತು ಊಟತಿಂಡಿಗಳ ಬಗ್ಗೆ ಇನ್ನೂ ವಿಶೇಷವಾದ ಮಾಹಿತಿಯ ಅವಶ್ಯಕತೆಯಿದೆ.

11. ಆನ್ ಲೈನ್ ಕಮ್ಮಟಗಳ ದೃಶ್ಯ ಮತ್ತು ಶ್ರವ್ಯ ಕಡತ : ಕನ್ನಡ ಬರೆಯುವ ತಂತ್ರಾಂಶಗಳನ್ನು ಉಪಯೋಗಿಸಲು ನೆರವಾಗುವ ಆನ್-ಲೈನ್ ಕಮ್ಮಟಗಳನ್ನು ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳು ನಿಮ್ಮ ತಾಣದಲ್ಲಿ ದೊರೆಯುವ ಅವಕಾಶಗಳನ್ನು ಕಲ್ಪಿಸಿದರೆ ಯುಪಯುಕ್ತವಾಗುವುದು.

12. ರಸಪ್ರಶ್ನೆಗಳ ಅಂಕಣ : ವಿವಿಧ ವಿಷಯಗಳನ್ನು ಕುರಿತಾದ ಉತ್ತಮ ರಸಪ್ರಶ್ನೆಗಳ ಒಂದು ಅಂಕಣ, ಬುದ್ಧಿಜೀವಿಗಳು ಮತ್ತು ಕ್ವಿಝ್ ಹವ್ಯಾಸಿಗಳಿಗೆ ಒಂದು ಆಕರ್ಷಣೆಯೆನಿಸಬಹುದು. [ಸಾಗರ ದ್ವೀಪಗಳ ರಾಜ ಹವಾಯಿ]

English summary
What are my expectations from Kannada online? Results of the Survey conducted by No 1 Kannada portal http://kannada.oneindia.com/: Uma Venkatesh from United Kingdom interested to read articles about renowned people, science, literature, children, quiz, Kannada teaching tools etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X