ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ದಡಗಳ ನಡುವೆ ಒಂದು ಕಂದರ - ಡಿಎಸ್ ಶ್ರೀನಿಧಿ

By ಡಿಎಸ್ ಶ್ರೀನಿಧಿ, ಮಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಡಿಎಸ್ ಶ್ರೀನಿಧಿ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಕಳೆದೊಂದು ದಶಕದಿಂದ ನಾನು ಅಂತರ್ಜಾಲದ ಬಳಕೆದಾರ. ಮೊದಲೊಂದೆರಡು ವರುಷಗಳ ಕಾಲ ಇಲ್ಲೆಲ್ಲ ಕನ್ನಡ ಓದಬಹುದು, ಬರೆಯಬಹುದು ಅನ್ನುವ ಅಂದಾಜೂ ನನಗಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ವೆಬ್ ಸೈಟ್ ಗಳಿದ್ದವು, ಅಷ್ಟೆ. (ದಟ್ಸ್ ಕನ್ನಡವೇ ನಾನು ನೋಡಿದ ಮೊದಲ ಕನ್ನಡ ಅಂ.ತಾಣ). ಆಮೇಲೆ ನಿಧಾನವಾಗಿ ಆರಂಭವಾದ ಬ್ಲಾಗು ಕ್ರಾಂತಿ ಕನ್ನಡದ ಭಾವಲೋಕ ಅಂತರ್ಜಾಲದಲ್ಲೂ ಪಸರಿಸಲು ಕಾರಣವಾಯಿತು.

ನನ್ನ ಗೆಳೆಯರೊಂದಿಬ್ಬರ ಬ್ಲಾಗು ನೋಡಿ ನಾನೂ ಶುರುಮಾಡಿದೆ. ಅಂದಿನಿಂದ ಇಂದಿನವರೆಗೂ ಅಂತರ್ಜಾಲ ಮತ್ತು ಕನ್ನಡ ನನ್ನ ಜೊತೆಗೇ ಸಾಗಿ ಬಂದಿದೆ. ಹೆಚ್ಚೂ ಕಡಿಮೆ ಪ್ರತಿದಿನ ಒಂದಲ್ಲ ಒಂದು ಕನ್ನಡ ವೆಬ್ ಸೈಟ್ ಬ್ರೌಸ್ ಮಾಡುತ್ತೇನೆ. ಕನ್ನಡದಲ್ಲಿ ಬರೆಯುತ್ತೇನೆ. ಕನ್ನಡ ಅಪಾರ ಸಾಧ್ಯತೆಗಳು ಅಂತರ್ಜಾಲದಲ್ಲಿ ತೆರೆದುಕೊಳ್ಳುತ್ತಿರುವುದನ್ನು ನೋಡಿ ಅಚ್ಚರಿ ಪಟ್ಟಿದ್ದೇನೆ. [ಒನ್ಇಂಡಿಯಾದಲ್ಲಿ ಪ್ರಕಟವಾದ ಶ್ರೀನಿಧಿ ಲೇಖನಗಳು]

ಆದರೆ ಕನ್ನಡದ ವೆಬ್ ಸೈಟ್ ಲೋಕದಲ್ಲಿ ಎರಡು ದಡಗಳಿದ್ದು, ಅವುಗಳ ಮಧ್ಯೆ ಕಂದರವೊಂದು ನಿರ್ಮಾಣವಾಗಿದೆ ಎಂದು ನನಗನಿಸುತ್ತದೆ. ಒಂದೋ ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಮಾತನಾಡುವ ಜಾಲತಾಣಗಳು, ಅಥವಾ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡುವ ವೆಬ್ ಸೈಟ್ ಗಳು-ಇವೆರಡು ಪ್ರಕಾರ ಎದ್ದು ಕಾಣುತ್ತದೆ. ಇವುಗಳೆರಡನ್ನೂ ಬೆಸೆಯಬಲ್ಲ ಬ್ರಿಡ್ಜ್ ಸೈಟ್ ಗಳು ಒಂದೋ ಎರಡೋ ಇರಬಹುದೇನೋ. ಸಾಹಿತ್ಯದ ತಾಣಗಳು ಮೊದಲಿಗೆ ಖುಷಿ ಕೊಟ್ಟರೂ, ನಂತರ ಅಲ್ಲಿನ ಏಕತಾನತೆ ಬೇಸರ ತರಿಸುತ್ತದೆ. ಅದದೇ ಬರಹಗಾರರು, ಅದೇ ಶೈಲಿಯ ಬರಹಗಳು ರುಚಿಸುವುದಿಲ್ಲ. ಮೊದಲಿಗೆ ಮೃಷ್ಟಾನ್ನದಂತೆ ಕಂಡದ್ದು, ನಂತರ ಚಿತ್ರಾನ್ನ!

ಬೇಕೆಂದೇ ಯಾವುದೋ ಒಂದು ಪಂಥದ-ಸಿದ್ಧಾಂತದ ಪರ ಬರಹಗಳನ್ನು ಪ್ರಕಟಿಸುವುದು, ಕಮೆಂಟುಗಳಲ್ಲಿ ಜನ ಹೊಡೆದಾಡಿಕೊಳ್ಳುವುದು- ನೋಡಲು ನೂರು ಕಮೆಂಟು ಕಂಡರೂ, ಬಂದ ನಾಲ್ಕೆಂಟು ಜನರೇ ತಿರುಗಿ ಬಂದಿರುತ್ತಾರೆ ಅಷ್ಟೇ. ಅಲ್ಲದೇ ಅದರಿಂದಾಗಿ ಆ ತಾಣ ಇನ್ನೊಂದಿಷ್ಟು ಓದುಗರನ್ನು ಕಳೆದುಕೊಳ್ಳುತ್ತದೆ. ನಾನೇ ವೈಯಕ್ತಿಕವಾಗಿ ಕೆಲ ತಾಣಗಳನ್ನು ನೋಡುವುದನ್ನೇ ಬಿಟ್ಟಿದ್ದೇನೆ. ಅದೆಷ್ಟು ದಿನಾಂತ ಬೀದಿ ಗಲಾಟೆ ನೋಡುತ್ತೀರಿ? [ಅಕ್ಷಯವಾಗದ ಕನ್ನಡ ಅಂತರ್ಜಾಲದಲ್ಲಿ ಸಿಗಲಿ]

Kannada online survey 2014 : My expectations - Sreenidhi DS, Mangaluru

ಇನ್ನು ವಿಜ್ಞಾನ, ಸಿನಿಮಾದಂತಹ ಜನಪ್ರಿಯ ವಿಷಯಗಳ ಬಗ್ಗೆ ಹೆಚ್ಚಿನ ವೆಬ್ ಸೈಟ್ ಗಳಿಲ್ಲ. ಬರಿಯ ಕ್ರೀಡೆಗಾಗಿನ, ಅಡುಗೆಗಾಗಿನ ಅಥವ ವೈದ್ಯಕೀಯ ಕ್ಷೇತ್ರಕ್ಕಾಗಿನ ಕನ್ನಡ ಜಾಲತಾಣ ಇಲ್ಲವೇ ಇಲ್ಲ! ಬ್ಲಾಗುಗಳಿವೆ, ಆದರೆ ಅವುಗಳಿಗೆ ಜಾಲತಾಣಗಳ ರೀಚ್ ಇಲ್ಲ. ಸುದ್ದಿಗಳಿಗಾಗಿ ಇರುವ ಸೈಟ್ ಗಳು ಮಾತ್ರ ಸಕ್ರಿಯವಾಗಿವೆ, ಉಸಿರಾಡುತ್ತಿವೆ. ಆದರೆ ಉಳಿದವೆಲ್ಲ ಕುಂಟುತ್ತಲೇ ಸಾಗಿವೆ. ದೊರಕದ ಹಿಟ್ಸ್-ಹೀಗಾಗಿ ದೊರಕದ ಜಾಹೀರಾತುಗಳು ಇದಕ್ಕೆ ಕಾರಣವಿರಬಹುದೇನೋ. ಇನ್ನು ಸರಿಯಾದ ತಯಾರಿ ಇಲ್ಲದೇ ಆರಂಭವಾದ ಹಲವು ವೆಬ್ ಸೈಟ್ ಗಳು ಅಕಾಲ ಮರಣಕ್ಕೀಡಾಗಿರುವುದನ್ನೂ ಗಮನಿಸಿದ್ದೇನೆ.

ಒಳ್ಳೆಯ ಕಂಟೆಂಟ್ ಇದ್ದೂ ಕೂಡ ಹೆಚ್ಚಿನ ಜನರನ್ನು ತಲುಪಲಾಗದೇ ಸೋತ ಅತ್ಯುತ್ತಮ ತಾಣಗಳಿವೆ. ಈಗಿನ ಸೋಶಿಯಲ್ ಮೀಡಿಯಾ ಕ್ರಾಂತಿಯ ಕಾಲದಲ್ಲೂ ಹೀಗಾಗಿರುವುದು ವಿಷಾದವೇ. ಅಂತರ್ಜಾಲದಲ್ಲಿ ಕನ್ನಡ ಜಾಲತಾಣಗಳಿಗೆ ಬರುವ ಹೆಚ್ಚಿನ ಯುವಕರು ಸಾಹಿತ್ಯಕ್ಕಿಂತ ಇತರ ವಿಚಾರಗಳಲ್ಲೇ ಆಸಕ್ತಿಯನ್ನು ಹೊಂದಿರುವುದೂ ಕೂಡ ಇದಕ್ಕೊಂದು ಕಾರಣವಿರಬಹುದು. ಬ್ರೇಕಿಂಗ್ ನ್ಯೂಸೇನಿದೆ ಎಂಬುದನ್ನು ನೋಡುವ ವರ್ಗ, ಕಥೆ ಕವನಗಳನ್ನು ಓದುವವರಿಗಿಂತ ಜಾಸ್ತಿ.

ಹಾಗೆಂದು ಕನ್ನಡ ಸಾಹಿತ್ಯವು ಅಂತರ್ಜಾಲದಲ್ಲಿ ಸೊರಗಿಲ್ಲ. ಪ್ರಾಯಶಃ ಕನ್ನಡದಲ್ಲಿ ಕಥೆ ಕವನಗಳನ್ನು ಬರೆಯುವವರ ಸಂಖ್ಯೆ ಹೆಚ್ಚಲು ಅಂತರ್ಜಾಲ ತಾಣಗಳೂ, ಬ್ಲಾಗುಗಳೂ ಕಾರಣವೇ. ಪತ್ರಿಕೆ ಮ್ಯಾಗಜೀನುಗಳಲ್ಲಿ ಸಿಗದ ಅವಕಾಶ ಅಂತರ್ಜಾಲದಲ್ಲಿ ದೊರಕಿದೆ. ಇಂದು ಕಳಿಸಿದ ಕವನವೋ, ಲಹರಿಯೋ ನಾಳೆಯೇ ವೆಬ್ ಸೈಟಿನಲ್ಲಿ ಪ್ರಕಟವಾಗುತ್ತದೆ. ಕಾಯುವ ಕೆಲಸವಿಲ್ಲ. ಇಷ್ಟೆಲ್ಲ ಆದರೂ ಕನ್ನಡ ಅಂತರ್ಜಾಲ ತಾಣಗಳಲ್ಲಿ ಅದೇನೋ ಕೊರತೆ ಕಾಣುತ್ತಿದೆ. ಅಂದ ಚಂದಗಳಿಂದ ತೊಡಗಿ ಕಂಟೆಂಟ್ ನವರೆಗೆ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಕಾಣುತ್ತಿಲ್ಲ.

ಥಟ್ಟನೇ ನೋಡಿದ ಕೂಡಲೇ ಆಕರ್ಷಕವಾಗಿ ಕಾಣುವ ವೆಬ್ ಸೈಟ್ ಗಳಂತೂ ಬಹಳ ಕಡಿಮೆ. ಗೋಜಲು ಗೋಜಲಾದ ಲೇ ಔಟ್ ಗಳು, ಹಳೇ ಶೈಲಿಯ ಪುಟಗಳನ್ನು ಹೊಂದಿರುವ ಅದೆಷ್ಟೋ ಜಾಲತಾಣಗಳನ್ನು ಗಮನಿಸಿದ್ದೇನೆ. ಹೊಸ ತಂತ್ರಜ್ಞಾನದ ಬಗ್ಗೆ ಬಂದ ಬರಹವು ಹಳೆಯ ಸ್ಟೈಲ್ ನ ಪೇಜ್ ನಲ್ಲಿ ಪ್ರಕಟವಾಗಿರುತ್ತದೆ-ಮೊಬೈಲ್ ನಲ್ಲಿ ಸರಿಯಾಗಿ ಓದಲೇ ಬರುವುದಿಲ್ಲ! [ಆಸೆಗಳಿಗೆ ಕೊನೆಯೇ ಇಲ್ಲ]

ಥಿಂಕ್ ಗ್ಲೋಬಲ್, ಆಕ್ಟ್ ಲೋಕಲ್ ಅನ್ನುವ ಹಳೇ ಸಿದ್ದಾಂತವನ್ನು ಸರಿಯಾಗಿ ಬಳಸಿಕೊಂಡರೆ ನಮ್ಮ ಭಾಷೆಯು ಇನ್ನಷ್ಟು ವೇಗವಾಗಿ ಅಂತರ್ಜಾಲದಲ್ಲಿ ಬೆಳೆಯಲು ಸಾಧ್ಯವೇನೋ. ಹೆಚ್ಚು ಹೆಚ್ಚು ಮೋಬೈಲ್ ಅಪ್ಲಿಕೇಶನ್ ರೂಪದ ತಾಣಗಳು ಬಂದರೆ ಇನ್ನೂ ಹೆಚ್ಚಿನ ಓದುಗರನ್ನು ತಲುಪಲು ಸಾಧ್ಯ. ಟ್ಯಾಬ್ಲೆಟ್ಟು ಮೊಬೈಲು ಕಂಪ್ಯೂಟರುಗಳಿಗೆ ಹೊಂದುವ ರೀತಿಯ ಬದಲಾವಣೆಗಳು, ಉತ್ತಮ ದರ್ಜೆಯ ಆಕರ್ಷಕ ಪುಟ ವಿನ್ಯಾಸ ಕೂಡ ಈ ನಿಟ್ಟಿನಲ್ಲಿ ಸಹಕರಿಸಬಹುದು. ಓದುಗನನ್ನು ಧನಾತ್ಮಕವಾಗಿ ಸೆಳೆಯುವ ಕೆಲಸ ಮೊದಲು ನಡೆಯಬೇಕು, ಕಿಂದರಿಜೋಗಿ ತಯಾರಾದರೆ, ಹಿಂಬಾಲಕರೂ ತಯಾರಾಗುತ್ತಾರೆ. ಸಿರಿಗನ್ನಡಂ ಗೆಲ್ಗೆ!

English summary
Kannada Journalist DS Shreenidhi from Mangaluru bats for bridge sites to populate content and engagement on Kannada language sites - My expectations from Kannada websites and blogs http://kannada.oneindia.com/ survey findings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X