ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ ಸೈಟಲ್ಲಿ ಏನೇನ್ ಇರ್ಬೇಕು ಗೊತ್ತಾ? - ಶಾಂತಲಾ ದಾಮ್ಲೆ

By ಶಾಂತಲಾ ದಾಮ್ಲೆ, ಬೆಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಶಾಂತಲಾ ದಾಮ್ಲೆ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಕನ್ನಡದ ಬರಹಗಳಲ್ಲಿದ್ದ ಗುಣಮಟ್ಟ ಮತ್ತು ಪ್ರಮಾಣದ ಕೊರತೆ ಆನ್ ಲೈನ್ ಮಾಧ್ಯಮ ಬಂದ ಮೇಲೆ ಶುರುವಾದ ಸಮಸ್ಯೆಯಲ್ಲ. 25-30 ವರ್ಷಗಳ ಹಿಂದೆಯೇ "ಕನ್ನಡದಲ್ಲಿ ಏನಿದೆ ಓದಲಿಕ್ಕೆ? 4-5 ಪುಟ ಸುದ್ದಿ, ವಾರಪತ್ರಿಕೆಗಳಲ್ಲಿ ಹಳಸಲು ಜೋಕುಗಳು, ಕಳಪೆ ಧಾರಾವಾಹಿಗಳು, ಅಡುಗೆ ಬಿಟ್ಟರೆ! ಹೆಂಗಸರಿಗೆ ಸಾಕು ಅಷ್ಟೆ!" ಎಂದು ಇಂಗ್ಲಿಷ್ ಓದಿಕೊಂಡಿದ್ದ ಅನೇಕ ಕನ್ನಡಿಗರು ಮೂಗುಮುರಿಯುತ್ತಿದ್ದರು. ವಿಷಾದವೆಂದರೆ, ಕನ್ನಡದ ಓದುಗರು, ಕನ್ನಡದ ಮಾಹಿತಿ ಉದ್ದಿಮೆಗಳು ಮುಂದೆ ಎದುರಿಸಲಿರುವ ಕೊರತೆ, ಹಪಹಪಿಯ ದಿಕ್ಸೂಚಿ ಆ ಹೀಯಾಳಿಕೆಯ ಮಾತುಗಳಲ್ಲಿತ್ತು.

ಮುಂದಿನ ವರ್ಷಗಳಲ್ಲಿ, ದೂರದರ್ಶನ ಮುಂತಾದ ದೃಶ್ಯಮಾಧ್ಯಮ, ಇಂಗ್ಲಿಷ್ ವಿದ್ಯಾಭ್ಯಾಸ ಕಡೆಗೆ ಒಲವು, ವಿದೇಶ ಪ್ರವಾಸದ ಅವಕಾಶಗಳು ಹೆಚ್ಚಿದಂತೆಲ್ಲಾ ಕನ್ನಡದ ಓದುಗರ ನಿರೀಕ್ಷೆ ಹೆಚ್ಚುತ್ತಾ ಹೋಯಿತು ಮತ್ತು ಓದಲು ದೊರೆಯುತ್ತಿದ್ದ ಸಾಮಗ್ರಿಗೂ, ಓದುಗರ ನಿರೀಕ್ಷೆಗೂ ಇರುವ ಅಂತರವೂ ಹೆಚ್ಚುತ್ತಾ ಹೋಯಿತು. ನಂತರ ಬಂದ ಆನ್ ಲೈನ್ ತಂತ್ರಜ್ಞಾನ ಈ ಅಂತರವನ್ನು ಇನ್ನಷ್ಟು ವೇಗವಾಗಿ ನೂರುಪಟ್ಟು, ಸಾವಿರಪಟ್ಟು ಹೆಚ್ಚಿಸಿತು.

ಕನ್ನಡದ ಓದುಗಳಾಗಿ ನಾನು ಆನ್ ಲೈನಲ್ಲಿ ಬಯಸುವ ವಿಷಯಗಳು ಲಾಭದಾಯಿಕ ಉದ್ದಿಮೆಯಾಗಲಾರದು ಎಂಬ ಅಳುಕಿನೊಂದಿಗೇ ಕೆಲವು ಆಶಯಗಳನ್ನು ಪ್ರಸ್ತಾಪಿಸುತ್ತೇನೆ.

Kannada online survey 2014 : My expectations - Shanthala Damle, Bengaluru

ಸುದ್ದಿ ಮಾಧ್ಯಮ : ಕನ್ನಡದ ಅನೇಕ ಪತ್ರಿಕೆಗಳು ಆನ್ ಲೈನ್ ಪ್ರಕಟಣೆ ಮಾಡುತ್ತವಾದರೂ, ಹೆಚ್ಚಿನವು ಪಿಡಿ‌ಎಫ್ ಮಾದರಿಯಲ್ಲಿ ಮಾತ್ರ ದೊರೆಯುತ್ತವೆ. ಆನ್ ಲೈನ್ ಓದಿನ ವೈಶಿಷ್ಟ್ಯವಾದ ಹುಡುಕುವ (ಸರ್ಚ್) ಮತ್ತು ವಿಷಯ ಅಥವಾ ಪದಗಳ ಬಗ್ಗೆ ಸಂಬಂಧಿಸಿದ ಅಂತರ್ಜಾಲದ ಪುಟಗಳಿಗೆ ಕೊಂಡಿ (ಲಿಂಕ್) ಒದಗಿಸುವ ಲಕ್ಷಣಗಳನ್ನು ಕನ್ನಡದ ಸುದ್ದಿಮಾಧ್ಯಮಗಳು ಅಳವಡಿಸಿಕೊಳ್ಳಬೇಕು.

ಉದಾಹರಣೆಗೆ, "ನ್ಯೂಯಾರ್ಕರ್" ಎಂಬ ಜಾಲತಾಣ. ನಮಗೆ ಬೇಕಾದ ಅಂಕಣಗಳನ್ನು ಅದರ ಮುದ್ರಿತ ಮಾದರಿಗಿಂತ ಸುಲಭವಾಗಿ ಅದರ ಜಾಲತಾಣದಲ್ಲಿ ಗುರುತಿಸಬಹುದು. ಜೊತೆಗೆ, ಒಬ್ಬ ಲೇಖಕನ ಬರಹಗಳು ಇಷ್ಟವಾದಲ್ಲಿ ಅವರ ಇತರ ಲೇಖನಗಳನ್ನು ಹುಡುಕುವ ಅನುಕೂಲ, ಪ್ರತೀ ಅಂಕಣದ ಹಿಂದಿನ ಬರಹಗಳನ್ನು ಹುಡುಕುವ ಅನುಕೂಲ, ಮುಂತಾದ ಅನೇಕ ಸೌಲಭ್ಯಗಳು ಹೊಸ ಓದುಗರನ್ನು ಆಕರ್ಷಿಸುತ್ತವೆ.

ಹಿಂದಿನ ದಿನದ ಸುದ್ದಿಯ ಜೊತೆಗೆ, ಮರುದಿನ ಪತ್ರಿಕೆಗಳಲ್ಲಿ ಏನು ಬರಲಿದೆ ಎಂಬ ಸೂಚನೆಯನ್ನು ಕೊಡಲು ಸಹಾ ತಮ್ಮದೇ ಜಾಲತಾಣವನ್ನು ಸುದ್ದಿಮಾಧ್ಯಮಗಳು ಸಮರ್ಥವಾಗಿ ಉಪಯೋಗಿಸುವುದರ ಮೂಲಕ ಇಡೀ ದಿನ ಬಿತ್ತರಿಸುವ ದೃಶ್ಯಮಾದ್ಯಮಗಳಿಗೆ ಸ್ವಲ್ಪ ಮಟ್ಟಿನ ಪೈಪೋಟಿಯನ್ನು ನೀಡಬಹುದು.

ಸಾಹಿತ್ಯ ಕೃತಿಗಳು : ಈಗ ಗೂಗಲ್ ಮುಂತಾದ ಅನೇಕ ಸಾಫ್ಟ್ ವೇರ್ ದಿಗ್ಗಜಗಳು, ಭಾಷಾಂತರವನ್ನು ಆನ್ ಲೈನಲ್ಲೇ ತಕ್ಷಣ ಮಾಡಿಬಿಡುವಂತಹ ವ್ಯವಸ್ಥೆಯನ್ನು ತಂದಿದ್ದಾರೆ. ಜಾಲತಾಣಗಳು ಕನ್ನಡದ ಉತ್ತಮ ಸಾಹಿತ್ಯ ಕೃತಿಗಳನ್ನು ಆನ್ ಲೈನ್ ನಲ್ಲಿ ಪ್ರಕಟಿಸಿ, ಭಾಷಾಂತರದ ಉಪಕರಣಗಳನ್ನು ಅದೇ ಪುಟದಲ್ಲಿ ಒದಗಿಸಿದರೆ, ಕನ್ನಡದ ಓದುಗರಿಗೆ ಉಪಯೋಗವಾಗುವುದಷ್ಟೇ ಅಲ್ಲ, ಕನ್ನಡದ ಸೃಜನಶೀಲತೆಯ ಪರಿಚಯ ಇತರರಿಗೂ ಆಗುತ್ತದೆ. ಬೇರೆಯವರೂ ಮೆಚ್ಚಿಕೊಳ್ಳುವಂತಹ ಕೃತಿಗಳು ಇನ್ನಷ್ಟು ಕನ್ನಡಿಗರನ್ನು ಓದಲು ಪ್ರೇರೇಪಿಸುತ್ತದೆ.

ಉದ್ದಿಮೆದಾರರಿಗೆ ಸಾಧ್ಯವಾಗದಿದ್ದರೆ, ಸಾಹಿತ್ಯ ಕೃತಿಗಳನ್ನು ಜಾಲತಾಣಗಳಲ್ಲಿ ಒದಗಿಸುವಂತೆ ಜನಸಾಮಾನ್ಯರು ಸರ್ಕಾರದ ಮೇಲೆ ಒತ್ತಡ ತರಬಹುದು ಮತ್ತು ವಿವಿಧ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆಗೆ ಮೀಸಲಿಟ್ಟ ಹಣದಲ್ಲಿ ಇದಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ಹಾಕಿಕೊಳ್ಳಬಹುದು.

ಅಂತೆಯೇ, ಬೇರೆ ಬೇರೆ ಭಾಷೆಗಳಲ್ಲಿ ಬರೆದಿರುವ ಉತ್ತಮ ಸಾಹಿತ್ಯ ಕೃತಿಗಳನ್ನು ಯಾಂತ್ರಿಕವಾಗಿ ಭಾಷಾಂತರ ಮಾಡುವ ಉಪಕರಣವನ್ನು ಒದಗಿಸಿ, ಕನ್ನಡದ ಓದುಗರಿಗೆ ಅನುಕೂಲ ಮಾಡಿಕೊಡಬಹುದು. ಹಾಗೆಂದು ಕನ್ನಡದಲ್ಲೇ ಮೂಲವಾಗಿ ಬರೆದ ಬರಹಗಳಷ್ಟು ತೃಪ್ತಿಯನ್ನು ಯಾಂತ್ರಿಕ ಭಾಷಾಂತರ ತರಲಾರವು. ಉದಾಹರಣೆಗೆ, ಅಮೆರಿಕಾದ ಇಂಗ್ಲಿಷ್ ಬರಹಗಳಲ್ಲಿ, ಫುಟ್ ಬಾಲ್ ಆಟಕ್ಕೆ ಸಂಬಂಧಿಸಿದ ಉಪಮೆಗಳಿರುತ್ತವೆ. ಕನ್ನಡದ ಜನತೆಗೆ ಇದರ ಬದಲು ಕ್ರಿಕೆಟ್ ಅಥವಾ ಕಬಡ್ಡಿಗೆ ಸಂಬಂಧಪಟ್ಟ ಉಪಮೆಗಳು ಹೆಚ್ಚಿಗೆ ಅರ್ಥವಾಗಬಹುದು, ಪ್ರಿಯವಾಗಬಹುದು. ಕನ್ನಡದ, ಭಾರತೀಯತೆಯ ಸೂಕ್ಷ್ಮತೆಯನ್ನು, ಸಂವೇದನೆಯನ್ನು ತರುವಲ್ಲಿ, ಸಂದರ್ಭೋಚಿತ ಅನುವಾದ ಮಾಡುವಲ್ಲಿ ಆನ್ ಲೈನ್ ಉಪಕರಣೆಗಳು ವಿಫಲವಾಗುತ್ತವೆ.

ಆನ್ ಲೈನ್ ಉಪಕರಣೆಗಳ ಯಾಂತ್ರಿಕ ಭಾಷಾಂತರದ ಗುಣಮಟ್ಟ ಸದ್ಯದಲ್ಲಿ ಕಳಪೆಯಾಗಿದೆಯಾದರೂ, ಸಾಮೂಹಿಕ ಕೊಡುಗೆ (ಕ್ರೌಡ್ ಸೋರ್ಸಿಂಗ್) ಪದ್ದತಿಯಿಂದಾಗಿ, ಇನ್ನು ಕೆಲವೇ ವರ್ಷಗಳಲ್ಲಿ ಉತ್ತಮ ಗುಣಮಟ್ಟದ ಭಾಷಾಂತರ ಲಭ್ಯವಾಗುವ ಸಾಧ್ಯತೆಯಿದೆ. ಕನ್ನಡದ ಉದ್ದಿಮೆದಾರರು ಈ ಭಾಷಾಂತರವನ್ನು ಉತ್ತಮಪಡಿಸುವ ಪ್ರಯತ್ನದ ಗುತ್ತಿಗೆ ಪಡೆಯಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಯೋಚಿಸಬೇಕು.

ವಿವಿಧ ವಿಷಯಗಳ ಬಗ್ಗೆ ಮಾಹಿತಿ : ಪ್ರತೀ ವಿಷಯಕ್ಕೂ ಸಂಬಂಧಿಸಿದಂತೆ ಗುಣಮಟ್ಟದ ಮಾಹಿತಿ ಕನ್ನಡದಲ್ಲಿ ಸಿಗಬೇಕೆಂದು ನನ್ನ ಆಶಯ. "ಲೋನ್ಲಿ ಪ್ಲಾನೆಟ್" ಎಂದ ಸಂಸ್ಥೆ ಪ್ರಪಂಚದ ಹೆಚ್ಚಿನ ಪ್ರದೇಶಗಳ ಬಗ್ಗೆ ಉತ್ಕೃಷ್ಟ ಗುಣಮಟ್ಟದ ಪ್ರವಾಸಿ ಪುಸ್ತಕಗಳನ್ನು, ಕೈಪಿಡಿಗಳನ್ನು ಪ್ರಕಟಿಸುತ್ತದೆ. ಈ ಸಂಸ್ಥೆ ಪ್ರವಾಸಿ ಮಾಹಿತಿಯನ್ನು ಆನ್ ಲೈನ್ ಓದುಗರಿಗೆ ಲಭ್ಯವಾಗಿಸಿದೆ. ಈ ಮಟ್ಟದ ಮಾಹಿತಿ ಕರ್ನಾಟಕದ ಪ್ರವಾಸಿ ಸ್ಥಳಗಳ ಬಗ್ಗೆ ಕನ್ನಡದಲ್ಲಿರಲಿ, ಇಂಗ್ಲಿಷಿನಲ್ಲಿಯೂ ಲಭ್ಯವಿಲ್ಲ.

ಪ್ರವಾಸಕ್ಕೆ ಸಂಬಂಧಪಟ್ಟ ಉದ್ದಿಮೆದಾರರು ಕರ್ನಾಟಕದ ಸ್ಥಳಗಳ ಬಗ್ಗೆ ಗುಣಮಟ್ಟದ ಮಾಹಿತಿಯನ್ನು ಒದಗಿಸುವ ಜಾಲತಾಣಗಳನ್ನು ರಚಿಸುವುದರ ಜೊತೆಗೆ, "ಲೋನ್ಲಿ ಪ್ಲಾನೆಟ್" ನಂತಹ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದುವುದರ ಮೂಲಕ ಪ್ರಪಂಚದ ಪ್ರವಾಸಿ ಸ್ಥಳಗಳ ಬಗ್ಗೆ ಕನ್ನಡದಲ್ಲಿ ಓದಲು ಸಾಧ್ಯವಾಗುವಂತಹ ಜಾಲತಾಣಗಳನ್ನು ಒದಗಿಸುವ ಸಾಧ್ಯತೆಯಿದೆಯೇ ಎಂಬ ಬಗ್ಗೆ ಮಾರುಕಟ್ಟೆಯ ವಿಶ್ಲೇಷಕರ, ಸಂಶೋಧಕರ ಅಭಿಪ್ರಾಯವನ್ನು ಪಡೆಯಲಿ.

ಅದರಂತೆಯೇ ಬೇರೆ ಬೇರೆ ಉದ್ದಿಮೆಗಳಲ್ಲಿಯೂ, ಪಾಲುದಾರಿಕೆಯ ಮೂಲಕ, ಭಾಷಾಂತರದ ಮೂಲಕ, ಮತ್ತು ಜೈವಿಕವಾಗಿ ಮಾಹಿತಿಯನ್ನು ತಯಾರಿಸುವ ಮೂಲಕ, ಗುಣಮಟ್ಟದ, ಸಮೃದ್ಧವಾದ ಬರಹಗಳನ್ನು ವೈವಿಧ್ಯ ವಿಷಯಗಳ ಬಗ್ಗೆ ಕನ್ನಡದ ಓದುಗರಿಗೆ ದೊರಕಿಸಲಿ ನನ್ನ ಆಶಯ.

ಅಕಲ್ಪಿತ ಮತ್ತು ಗಂಭೀರ ಬರಹಗಳು : ಸಮಾಜ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮುಂತಾದ ಗಂಭೀರ ವಿಚಾರಗಳಲ್ಲಿ ತಜ್ಞರನ್ನು ಒಂದು ಕಡೆ ತರುವ, ಅದರ ಮೂಲಕ ಓದುಗರನ್ನು ಚರ್ಚೆ, ಚಿಂತನೆಗಳಿಗೆ ಅವಕಾಶ ಮಾಡಿಕೊಡುವಂತಹ "ಪ್ರಾಜೆಕ್ಟ್ ಸಿಂಡಿಕೇಟ್" ನಂತಹ ಪೋರ್ಟಲ್ ಗಳ ಕೊರತೆ ಕನ್ನಡದಲ್ಲಿದೆ. ಮುಖ್ಯವಾಗಿ, ಕರ್ನಾಟಕದ ಬಗ್ಗೆ - ಕಾವೇರಿ ವಿವಾದ ಮುಂತಾದ ಸ್ಥಳೀಯ ವಿಷಯಗಳಿಗೆ ಒತ್ತು ಕೊಡುವಂತಹ ಸ್ಥಳೀಯ ಚಿಂತಕರ ಬರಹಗಳು, ಸಮಗ್ರ ಮಾಹಿತಿ ಮತ್ತು ವಿವಿಧ ದೃಷ್ಟಿಕೋನಗಳನ್ನು ಪ್ರತಿಪಾದಿಸುವಂತಹ ಬರಹಗಳು ಒಂದೇ ಕಡೆ ಲಭ್ಯವಾಗುವಂತಹ ಜಾಲತಾಣಗಳು ಕನ್ನಡದಲ್ಲಿ ಬರಬೇಕು.

ಕಡೇ ಪಕ್ಷ ಕನ್ನಡದಲ್ಲಿ ಪ್ರಕಟವಾಗುವ ಗಂಭೀರ ಬರಹಗಳ, ಗಂಭೀರ ಪುಸ್ತಕಗಳ ಬಗ್ಗೆ ಕೊಂಡಿಗಳನ್ನು ಒಂದು ಕಡೆ ಕ್ರೋಢೀಕರಿಸುವಂತಹ "ಆರ್ಟ್ಸ್ ಅಂಡ್ ಲೆಟರ್ಸ್ ಡೈಲಿ" ತರಹದ ಪ್ರಯತ್ನಗಳು ಆಗಬೇಕಿದೆ.

ವಿವಿಧ ಮಾನವಾಸಕ್ತಿಯ ಲಘುಬರಹಗಳು : ಈ ಹಿಂದೆಲ್ಲಾ ಬರೆಯುತ್ತಿದ್ದವರು ಹೆಚ್ಚಾಗಿ ಕನ್ನಡ (ಅಥವಾ ಕೆಲವೊಮ್ಮೆ ಇಂಗ್ಲಿಷಿನ) ಪ್ರೊಫೆಸರ್ ಗಳು. ಆನ್ ಲೈನ್ ತಂತ್ರಜ್ಞಾನದಿಂದಾಗಿ, ಬೇರೆ ಬೇರೆ ಉದ್ದಿಮೆಗಳಲ್ಲಿರುವವರು, ಹೊಸ ಹೊಸ ದೃಷ್ಟಿಕೋನದಲ್ಲಿ ಜೀವನವನ್ನು, ಸಮಾಜವನ್ನು ನೋಡುತ್ತಾ, ಅವರವರ ಬ್ಲಾಗ್ ಗಳಲ್ಲಿ ವೈವಿಧ್ಯತೆಯ ಲೇಖನಗಳನ್ನು ಬರೆದಿರುತ್ತಾರೆ.

ಅಂತಹ ಬರಹಗಳಿಗೆ ಒಂದು ವೇದಿಕೆ ಒದಗಿಸುವಂತಹ "ಪೋರ್ಟಲ್"ಗಳು ಲಭ್ಯವಿದ್ದಲ್ಲಿ ಕನ್ನಡದ ಓದುಗರಿಗೆ ಅನುಕೂಲವಾಗುತ್ತದೆ ಮತ್ತು ಪ್ರಕಾಶಕರಿಂದ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲದೇ, ಸ್ವತಂತ್ರ ಬರಹಗಾರರಿಂದಲೇ 'ವಿಷಯ ರಚನೆ'ಯನ್ನು ನಿರಂತರವಾಗಿ ಮಾಡುವಂತಹ ಅವಕಾಶಗಳನ್ನು ಸೃಷ್ಟಿಸಬಹುದು. ಬರಹಗಾರರು ಮತ್ತು ಓದುಗರ ಮಧ್ಯೆ ಸಂವಾದಕ್ಕೆ ಅವಕಾಶ ಮಾಡಬಹುದು. ಓದುಗರೇ ಕೃತಿಯ ಬೆಲೆಗಳನ್ನು ಪ್ರತಿಕ್ರಿಯೆಯ ಮೂಲಕ (ಉದಾಹರಣೆಗೆ, ಒಂದರಿಂದ ಐದರವರೆಗೆ ಗುಣಮಾಪಕ) ತೋರಿಸುವ ಅವಕಾಶವನ್ನು ಇಂತಹ ಪೋರ್ಟಲ್ ಗಳು ಕಲ್ಪಿಸಿಕೊಟ್ಟಲ್ಲಿ, ಬರಹಗಾರರಿಗೂ ಉತ್ತೇಜನ, ಗುಣಮಟ್ಟ ಹೆಚ್ಚಿಸಲು ಪ್ರೇರೇಪಣೆ ದೊರೆಯುತ್ತದೆ.

ತಂತ್ರಜ್ಞಾನ ಎಷ್ಟು ಸವಾಲುಗಳನ್ನು ಒಡ್ಡುತ್ತದೆಯೋ, ಅಷ್ಟೇ ಅವಕಾಶಗಳನ್ನೂ ಕಲ್ಪಿಸುತ್ತದೆ. ಇಂದು ಕನ್ನಡದ ಆನ್ ಲೈನ್ ಉದ್ದಿಮೆ ನಡೆಸುವವರು, ಬರಹಗಳ ಪ್ರಮಾಣ ಮತ್ತು ಗುಣಮಟ್ಟವಷ್ಟೇ ಅಲ್ಲದೇ, ತತ್ರಾಂಶ, ಭಾಷಾಂತರದ ಉಪಕರಣೆಗಳು, ಮಾಹಿತಿ ಹುಡುಕುವ ಸೌಲಭ್ಯ ಮುಂತಾದ ತಂತ್ರಜ್ಞಾನವನ್ನು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಬಳಸುವುದರ ಬಗ್ಗೆಯೂ ಗಮನ ಹರಿಸಿದರೆ, ಓದುಗರ ಹೊಸ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಲು ಸಾಧ್ಯ ಎಂದು ನನ್ನ ಅಭಿಪ್ರಾಯ. [ಶಾಂತಲಾ ಫೇಸ್ ಬುಕ್ ಪುಟ]

English summary
Can WE not create, rather imitate a Lonely Planet, New Yorker, Project Syndicate, Arts and Letters Daily? Sorry, if I am asking for too much. Nevertheless, WE must go for it - Shanthala Damles expectations from Kannada Online. Oneindia Kannada Survey 2014. The author, an NRI Kannadathi, returned to India for good.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X