ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಠಾತ್ ಪ್ರೇಮಕ್ಕೆ 108 ಕಾರಣ - ಸಹನಾ ವಿಜಯಕುಮಾರ್

By ಸಹನಾ ವಿಜಯಕುಮಾರ್, ಬೆಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಸಹನಾ ವಿಜಯಕುಮಾರ್, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಇತ್ತೀಚೆಗೆ ಎಲ್ಲರಿಗೂ ಕನ್ನಡವನ್ನು ಕಾಪಾಡಿಕೊಳ್ಳುವ ಉಮೇದು ಹೆಚ್ಚಾಗುತ್ತಿದೆ. ಭಾಷೆಯ ಬಗ್ಗೆ ಮೂಡುತ್ತಿರುವ ಈ 'ಹಠಾತ್' ಪ್ರೇಮಕ್ಕೆ ಕಾರಣಗಳು ನೂರೆಂಟಿದ್ದರೂ ಅದನ್ನು ಪ್ರೋತ್ಸಾಹಿಸಿ, ಪೋಷಿಸಬೇಕಾದ ಅಗತ್ಯ ಬಹಳ ಇದೆ. ಈ ಜವಾಬ್ದಾರಿಯ ಹೆಚ್ಚಿನ ಪಾಲು, ಬೇಡಬೇಡವೆಂದರೂ ಏರುವುದು ಮಾಧ್ಯಮಗಳ ಹೆಗಲನ್ನೇ!

ಅದರಲ್ಲೂ ಅಂತರ್ಜಾಲ ನಮ್ಮ ಬದುಕನ್ನು ಈ ಪರಿ ಆವರಿಸಿಕೊಂಡಿರುವ ಹೊತ್ತಿನಲ್ಲಿ, ಓದುಗರಿಗೆ ನಿಂತ ನಿಲುವಿನಲ್ಲೇ ಮಾಹಿತಿ ಸರಬರಾಜಾದಾಗ ಸಿಗುವ ಆನಂದ ವರ್ಣನಾತೀತ. ಓದುಗರ ಹಪಾಹಪಿಯನ್ನು ನೀಗಿಸುವ ಪ್ರಯತ್ನಗಳು ಜಾರಿಯಲ್ಲಿದ್ದರೂ ವಾಸ್ತವದಲ್ಲಿ ವೈವಿಧ್ಯತೆಯ ಅಭಾವ ಬಹಳಷ್ಟಿದೆ.

ಕನ್ನಡ ವೆಬ್‍ಸೈಟ್‍ಗಳು, ಬ್ಲಾಗ್‍ಗಳು, ಮಾಹಿತಿ ಹಾಗೂ ಗುಣಮಟ್ಟಗಳಲ್ಲಿ ಹಿಂದೆಂದಿಗಿಂತಲೂ ಈಗ ಹೆಚ್ಚು ಶ್ರೀಮಂತವಾಗಬೇಕಿದೆ. ಕನ್ನಡದ ಬರಹಗಳನ್ನು ನಮ್ಮ ಅಂತರಂಗದಲ್ಲಿ ಅಚ್ಚಾಗುವಂತೆ ಮಾಡುವ ಕೆಲ ಮಾರ್ಗಗಳು ಇಂತಿವೆ:

Kannada online survey 2014 : My expectations - Sahana, Bengaluru

1. ಕಲಬೆರಕೆಯಿಲ್ಲದ ಸವಿಗನ್ನಡ : ಎಲ್ಲ ಮಾಹಿತಿಗಳೂ ಶುದ್ಧವಾದ ಕನ್ನಡದಲ್ಲಿರಬೇಕು. ಆಂಗ್ಲ ಪದಗಳುಳ್ಳ ಮಿಶ್ರ ಭಾಷೆಗೆ ಆದಷ್ಟೂ ಕಡಿವಾಣ ಬೀಳಬೇಕು. ಇಂದು ನಮ್ಮ ಭಾಷೆಯನ್ನು ಶುದ್ಧವಾಗಿ, ಸ್ಪಷ್ಟವಾಗಿ, ನಿರರ್ಗಳವಾಗಿ ಮಾತನಾಡುವುದು ಹಾಗೂ ಬರೆಯುವುದು ಸಾಹಸವೇ ಸರಿ. ಸವಿಯಾದ ಕನ್ನಡದ ಬಳಕೆ ಕಡ್ಡಾಯವಾಗಬೇಕಾದ್ದು ಅತ್ಯಗತ್ಯ.

2. ಓರಣವಾದ ವೆಬ್‍‍ಸೈಟ್ : ಮನಸಿಗೆ ಮುದ ನೀಡುವ ವೆಬ್ ಸೈಟ್ ವಿನ್ಯಾಸ, ಚೌಕಟ್ಟುಗಳು. ಮಾಹಿತಿಯ ವಿಂಗಡಣೆಯೂ ಅಷ್ಟೆ. ಹಲವು ವರ್ಗಗಳನ್ನಾಗಿ ವಿಭಜಿಸಿ, ಆಯಾ ವರ್ಗಕ್ಕೆ ಸೇರುವಂತೆ ಒಪ್ಪವಾಗಿ ಜೋಡಿಸಿಟ್ಟಿರಬೇಕು. ಹೀಗೆ ಲಭ್ಯವಾಗುವ ಮಾಹಿತಿಯ ಸರಕು ಓದುಗರಿಗೆ ಸುಲಭದಲ್ಲಿ ಅರ್ಥವಾಗುತ್ತವೆ. ಪುಟದ ಯಾವ ಭಾಗದಲ್ಲಿ ಏನನ್ನು ನಿರೀಕ್ಷಿಸಬಹುದೆಂಬುದನ್ನೂ ತಿಳಿಸುತ್ತವೆ. ಕೆಲ ವೆಬ್ ಸೈಟ್‍ಗಳು ಎಲ್ಲ ಮಾಹಿತಿಗಳನ್ನೂ ಒಟ್ಟಿಗೇ ತುರುಕಿ ಬಿಡುತ್ತವೆ. ಹಾಗೆ ಮಾಡಿದಾಗ ಓದುಗನ ಮನಸ್ಸು ಗೋಜಲವಾಗಿ, ಅವನು ಏನನ್ನೂ ಗಮನವಿಟ್ಟು ಓದಲಾರ. ವಿಷಯದ ಆಯ್ಕೆಯ ಜಾಣತನಕ್ಕೆ ಪ್ರಾಶಸ್ತ್ಯವಿಲ್ಲದಿದ್ದಲ್ಲಿ ಯಾವ ಸುದ್ದಿಯೂ ಓದುಗನನ್ನು ಹಿಡಿದಿಡಲಾರದು.

3. ತರಹೇವಾರಿ ಬರಹಗಳು : ನಿಖರವಾದ ಸುದ್ದಿಗಳಿಗಷ್ಟೇ ಅಲ್ಲದೆ ಎಲ್ಲ ರೀತಿಯ ಬರಹಗಳಿಗೂ ಉತ್ತೇಜನವಿರಬೇಕು. ಸಣ್ಣಕಥೆ, ಕವನಗಳಲ್ಲದೆ ನಗೆ ಬರಹಗಳು, ಹಾಸ್ಯ ಚಟಾಕಿಗಳ ಸವಿಯನ್ನು ನಿಯಮಿತವಾಗಿ ಉಣಬಡಿಸಬೇಕು. ಹಾಗೆಯೇ, ನಮ್ಮ ಸಾಹಿತ್ಯದ ಅಮೂಲ್ಯ ಕೃತಿಗಳು ಹಾಗೂ ಅವುಗಳ ಬರಹಗಾರರಿಗಾಗಿಯೇ ಕೆಲವೊಂದು ಪುಟಗಳು ಶಾಶ್ವತವಾಗಿ ಮೀಸಲಿರಬೇಕು. ಉದಾಹರಣೆಗೆ, ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲರ ಮಾಹಿತಿ (ಕೃತಿ ಮತ್ತು ವಿಸ್ತೃತವಾದ ಜೀವನ ಪರಿಚಯ ಸಮೇತ), ಸದಾ ಒಂದೆಡೆ ಲಭ್ಯವಿದ್ದರೆ ಬೇಕಾದಾಗಲೆಲ್ಲ ಅದನ್ನು ಓದಬಹುದು.

4. ಚರ್ಚೆಗೆ ವೇದಿಕೆ : ಪ್ರಸಕ್ತ ವಿದ್ಯಮಾನಗಳ ಕುರಿತು ಪರ-ವಿರೋಧದ ಚರ್ಚೆಗೆ ಆಸ್ಪದವಿರಬೇಕು. ಇಂತಿಷ್ಟು ಪದಗಳ ಮಿತಿಯಲ್ಲಿ ಅಭಿಪ್ರಾಯವನ್ನು ಮಂಡಿಸಬಹುದು ಎಂಬಂಥ ಅವಕಾಶಗಳನ್ನು ನೀಡಿದರೆ ಹೆಚ್ಚು ಜನರನ್ನು ನೇರವಾಗಿ ತಲುಪುವುದೇ ಅಲ್ಲದೆ ಅವರು ಭಾಗವಹಿಸುವಂತೆ ಮಾಡಿ ಒಂದು ತೆರನಾದ ಬಾಂಧವ್ಯವನ್ನು ಸೃಷ್ಟಿಸಿಕೊಳ್ಳಬಹುದು.

5. ಚಿಣ್ಣರ ವಿಭಾಗ : ಇಂದಿನ ಮಕ್ಕಳು ಅಂತರ್ಜಾಲದಲ್ಲಿ ಸಕ್ರಿಯರು ಎಂಬ ಅಂಶವನ್ನು ನಾವು ಕಡೆಗಣಿಸಿದ್ದೇವೆ. ವಯೋಮಿತಿಗನುಗುಣವಾಗಿ ವರ್ಗೀಕರಿಸಿ, ಅವರಿಗೆಂದೇ ಮೀಸಲಾದ ಬರಹಗಳನ್ನು ಪ್ರಕಟಿಸಬೇಕು. ಸಣ್ಣಕಥೆ, ನಾಟಕ, ಸಾಮಾನ್ಯ ಜ್ಞಾನ ಹಾಗೂ ವಿಸ್ಮಯಗಳನ್ನು ಅವರಿಗೆ ಆಸಕ್ತಿಕರವಾಗಿ ಹೇಳುವ ಕಲೆಯನ್ನು ನಾವು ಕರಗತಗೊಳಿಸಿಕೊಂಡರೆ ಭಾಷೆಯ ಮೇಲಿನ ಅವರ ಹಿಡಿತವೂ ಬಲಗೊಳ್ಳುತ್ತದೆ.

ಒಟ್ಟಿನಲ್ಲಿ, ನಮ್ಮ ಭಾಷೆಯನ್ನು ಬೆಳೆಸುವ ಮಾರ್ಗವೆಂದರೆ ಅದನ್ನು ಹೆಚ್ಚು ಹೆಚ್ಚು ಬಳಸುವುದು. ಆಂತರ್ಜಾಲದಲ್ಲಿ ಕನ್ನಡ ಹೇರಳವಾಗಿ ಹರಿದಾಡಲಿ, ನಮ್ಮ ಮನೆ ಮನಗಳಲ್ಲೂ ನಲಿದಾಡಲಿ. ಈ ನಿಟ್ಟಿನಲ್ಲಿ ಯೋಚಿಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತಿರುವ ಶಾಮ್‍ಸುಂದರರಿಗೆ ಹಾಗೂ ಒನ್ಇಂಡಿಯಾದವರಿಗೆ ಶುಭವಾಗಲಿ!

English summary
Though many websites are providing content in Kannada there is dearth of variety. The onus is on Kannada websites to quench the thirst of Kannada lovers. Kannada website should avoid usage of English and stick to Kannada, feels Sahana Vijaykumar from Shivamogga, in response to the survey conducted by Oneindia-Kannada on Kannada online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X