ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ ಮೊಬೈಲ್ ಫ್ರೆಂಡ್ಲಿ ಅವತಾರವೆತ್ತಲಿ - ರೇಖಾ ಹೆಗಡೆ

By ರೇಖಾ ಹೆಗಡೆ ಬಾಳೇಸರ, ಸಿಂಗಪುರ
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ರೇಖಾ ಹೆಗಡೆ ಬಾಳೇಸರ, ಸಿಂಗಪುರ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಮಾದ್ಯಮರಂಗದ 'ಮಾಡಿದ್ದುಣ್ಣೋ ಮಹಾರಾಯ' ಪ್ರವೃತ್ತಿಯ ನಡುವೆ 'ಓದುಗರಿಗೇನು ಬೇಕು, ಅವರ ನಿರೀಕ್ಷೆಗಳೇನು' ಎಂಬ ಮಾಹಿತಿ ಸಂಗ್ರಹಣೆಗೆ 'ದ್ಯಾಟ್ಸ್ ಕನ್ನಡ' ಎದುರಾಗಿರುವುದು ಸ್ವಾಗತಾರ್ಹ ಸಂಗತಿ. ಅಂತರ್ಜಾಲದ ಬಳಕೆ ನನ್ನ ಮಟ್ಟಿಗೆ ಸೀಮಿತವಾದದ್ದು. ಪತ್ರಿಕೋದ್ಯಮದ ಹಿನ್ನೆಲೆಯಿಂದ ಬಂದಿರುವುದರಿಂದ ಪತ್ರಿಕೆ, ಸುದ್ದಿ, ಭಾಷೆ ಇವುಗಳ ಕಡೆಗೆ ಆಸಕ್ತಿ ಹೆಚ್ಚು. ಸೀಮಿತ ಬಳಕೆಯ ನಡುವೆಯೇ ನನ್ನ ನಿರೀಕ್ಷೆಗಳನ್ನು ತಣಿಸಿದವೆಷ್ಟು, ತೃಷೆ ಉಳಿಸಿದವೆಷ್ಟು ಎಂಬ ಲೆಕ್ಕಾಚಾರ ಇಲ್ಲಿದೆ.

ಕನ್ನಡ ಅಂತರ್ಜಾಲದಿಂದ ಇರುವ ನಿರೀಕ್ಷೆಗಳಲ್ಲಿ ಮೊದಲ ಆದ್ಯತೆ ಭಾಷಾ ಶುದ್ಧಿಗೆ. ಮಾಧ್ಯಮಗಳ ಪೈಕಿ ಓದುಗ/ನೋಡುಗ/ಬಳಕೆದಾರರಿಗೆ ಅತಿ ಹೆಚ್ಚು ಭಾಗವಹಿಸುವ ಸ್ವಾತಂತ್ರ್ಯ ಇರುವುದು ಇ-ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ. ಭಾಗವಹಿಸುವಿಕೆ ಬರಹಗಳ, ಪ್ರತಿಕ್ರಿಯೆಗಳ ರೂಪದಲ್ಲಿರಬಹುದು ಅಥವಾ ಇನ್ನಾವುದೇ ಅಭಿಪ್ರಾಯ ಮಂಡನಾ ವಿಧಾನವಿರಬಹುದು... ಒಟ್ಟಿನಲ್ಲಿ ಮುಕ್ತ ಅವಕಾಶ ಇದೆ. ಈ ಕಾರಣದಿಂದ ಬರೆಯುವವರ ಸಂಖ್ಯೆಯೂ ಹೆಚ್ಚು. ಆದರೆ ಬರೆಯುವವರೆಲ್ಲರೂ ಬರಹಗಾರರಾಗಿರಬೇಕೆಂಬ ನಿಯಮ ಇಲ್ಲವಲ್ಲ. [ನಮ್ಮ ನಡುವಿನ 'ಮಹಾನ್' ಕಥೆಗಾರರು]

Kannada online survey 2014 : My expectations Rekha Hegde, Singapore

ಹೀಗಾಗಿ ಅನೇಕ ಬರಹಗಳಲ್ಲಿ ವಿಷಯ ಮಂಡನೆಗೆ ತೋರುವ ಆಸಕ್ತಿ ಭಾಷಾ ಶುದ್ಧಿಯಲ್ಲಿರುವುದೇ ಇಲ್ಲ. ಒತ್ತು, ಕೊಂಬು, ಸ,ಶ/ಷ, ಹಕಾರಗಳ ಸ್ಪಷ್ಟತೆ.... ಮುಖ್ಯವಾಗಿ ಭಾಷೆಯ ಕುರಿತಾದ ಮೂಲಭೂತ ಕಾಳಜಿ, ಪ್ರೀತಿಯ ಕೊರತೆ ಎದ್ದು ಕಾಣುತ್ತದೆ. ಅಲ್ಪಪ್ರಾಣ, ಮಹಾಪ್ರಾಣಗಳು ಇಂಥ ಲೇಖಕರ ಕೈಯಲ್ಲಿ ಪ್ರಾಣ ಕಳೆದುಕೊಳ್ಳುತ್ತವೆ. ಸಂತೆ ಹೊತ್ತಿಗೆ ಮೂರು ಮೊಳದ ಮಾಲೆ ಕಟ್ಟುವವರೇ ಹೆಚ್ಚು ಹೊರತು ಬರಹ ಮಾಲೆಯ ಅಕ್ಷರವೆಂಬ ಹೂಗಳನ್ನು ಅಕ್ಕರೆಯಿಂದ ಆಯ್ಕೆ ಮಾಡುವವರ ಕೊರತೆ ಇದೆ. ಮುದ್ರಿತ ಪತ್ರಿಕೆಗಳಲ್ಲಿರುವಂಥ ಭಾಷಾ ಶುದ್ಧಿ ಇ-ಲೇಖನಗಳಿಗೂ ಬರಲೇಬೇಕಿದೆ. [ಕಂಗ್ಲಿಷ್ ಬರೆಯುವುದನ್ನು ನಿಲ್ಲಿಸಲು ಉಪಾಯ]

ಇ-ಪತ್ರಿಕೆಗಳು ಬಂದ ಹೊಸತರಲ್ಲಿ, ಬ್ಲಾಗುಗಳ 'ಬೂಮ್' ಕಾಲದಲ್ಲಿ ಬರೆಯುವವರ ಸಂಖ್ಯೆ ಹೆಚ್ಚಿದ್ದಂತೆ ಪ್ರತಿಕ್ರಿಯಿಸುವವರೂ ಭಾರಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಮತ್ತದೇ ಏನು ಬರೆದರೂ ಪ್ರಕಟವಾಗುತ್ತದೆ ಎಂಬ ಧೈರ್ಯದಿಂದ, ಲೇಖಕರೆಡೆಗೆ ಮೂಲಭೂತ ಮರ್ಯಾದೆ ಸಹ ತೋರದೇ ಎರ್ರಾಬಿರ್ರಿಯಾಗಿ ಪ್ರತಿಕ್ರಿಯಿಸುವವರ ಹಾವಳಿಯೂ ಹೆಚ್ಚಿತ್ತು. ಈ ಕಾಮೆಂಟೀಕಾಸ್ತ್ರಗಳಿಂದ ಬೇಸತ್ತು ಆನ್ಲೈನ್ ಪತ್ರಿಕೆಗಳಿಗೆ ಬರೆಯುವುದನ್ನೇ ನಿಲ್ಲಿಸಿದವರೂ ಇದ್ದಾರೆ. ಈಗ ಸಾಮಾನ್ಯವಾಗಿ ಎಲ್ಲ ಇ-ಪತ್ರಿಕೆಗಳೂ ಪ್ರತಿಕ್ರಿಯೆಗಳನ್ನು ಸೋಸಿ, ಪ್ರಕಟಿಸುವುದರಿಂದ ಅಕ್ಷರ ಭಯೋತ್ಪಾದಕರ ಹಾವಳಿ ಒಂಚೂರು ಹಿಡಿತಕ್ಕೆ ಬಂದಿದೆ. ಆದರೆ ಪ್ರತಿಕ್ರಿಯೆ ನೀಡುವವರೇ ಕಡಿಮೆಯಾಗಿದ್ದಾರೆ ಅಥವಾ ಸಾಮಾಜಿಕ ಜಾಲತಾಣಗಳಿಗೆ ಜಾಲಾಂತರ ಮಾಡಿದ್ದಾರೆ.

ಅನೇಕ ವೆಬ್ ಸೈಟ್ಗಳು ಆರಂಭವಾಗಿದ್ದು ಆರೋಗ್ಯಕರ ಚರ್ಚೆಗೆ ವೇದಿಕೆಯಾಗುವ ಭರವಸೆಯೊಂದಿಗೆ. ಆದರೆ ದಿನಕಳೆದಂತೆ ಸಮತೋಲಿತ ಪ್ರತಿಕ್ರಿಯೆ, ಚರ್ಚೆಗಳು ಮಾಯವಾಗಿ ಅವು ಜಾತಿ, ಮತ, ಭೇದಗಳ ಅತಿ ಪ್ರದರ್ಶನದ ಅಡ್ಡೆ ಆಗಿವೆ. ಕನ್ನಡದ ಓದನ್ನು ಅರಸಿ ಸರ್ಫ್ ಮಾಡಹೋದರೆ ಇದ್ದಕ್ಕಿಂತೆ ಫೂತ್ಕರಿಸುವ ಸರ್ಪಗಳು ಎದುರಾಗಿ 'ಸಾಕಪ್ಪ ಸಾಕು' ಎನಿಸಿಬಿಡುತ್ತವೆ. ಇ-ಪತ್ರಿಕೆ, ಬ್ಲಾಗುಗಳಲ್ಲಿ ಮೊದಲಿನ ಸಂಖ್ಯೆಯಲ್ಲಿ, ಆದರೆ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ಚರ್ಚೆ, ಪ್ರತಿಕ್ರಿಯೆಗಳು ನಡೆಯಬೇಕು ಎನ್ನುವುದು ಇನ್ನೊಂದು ಆಶಯ.

ಸ್ಮಾರ್ಟ್ ಫೋನುಗಳಲ್ಲೇ ವ್ಯವಹಾರ, ಓದು, ಸಂವಹನ ನಡೆಯುವ ಈ ಕಾಲದಲ್ಲೂ ಕನ್ನಡದ ಬಹಳಷ್ಟು ವೆಬ್ ಸೈಟ್ಗಳು ಮಾತ್ರ ಇನ್ನೂ 'ಮೊಬೈಲ್ ಫ್ರೆಂಡ್ಲಿ' ಅವತಾರ ಎತ್ತಬೇಕಷ್ಟೇ! ಸಿಕ್ಕಿದ್ದೇ ಸೀರುಂಡೆ ಎಂದು ಬಳಸಬೇಕೇ ಹೊರತು ಬೇಕಾದ ವಿಷಯಗಳನ್ನು ಎತ್ತಿ ಹುಡುಕಿ ಓದಹೊರಟವರು ದ್ರಾವಿಡ ಪ್ರಾಣಾಯಾಮ ಕಲಿತಿರಬೇಕು. [ವೈಶಾಲಿ ಹೆಗಡೆ ಲೇಖನ]

ಇನ್ನೊಂದೆಡೆ ಕನ್ನಡ ಚಲನಚಿತ್ರಗಳ ಹಾಡು, ಭಾವಗೀತೆಯಂಥವುಗಳನ್ನು ಕಿರಿಕಿರಿಯಿಲ್ಲದೇ ಡೌನ್ಲೋಡ್ ಮಾಡಿಕೊಳ್ಳುವುದು ಇಂದಿಗೂ ಕಷ್ಟವೇ. ದುಡ್ಡು ಕೊಟ್ಟು ಖರೀದಿಸೋಣವೆಂದರೂ ಎಷ್ಟೋ ಸಲ ಬೇಕಾದ ಹಾಡುಗಳು ಇರುವುದಿಲ್ಲ. ಹಾರ್ಡ್ ಕಾಪಿ ರೂಪದಲ್ಲಿ ಸುಲಭಕ್ಕೆ ದೊರೆಯುವಂತೆಯೇ ಕನ್ನಡದ ವಿವಿಧ ಪ್ರಕಾರದ ಹಾಡುಗಳು, ಯಕ್ಷಗಾನ ಇಂಥವುಗಳ ಸುಸಜ್ಜಿತ ಇ-ಮಾರುಕಟ್ಟೆಯೂ ಆದರೆ ಆಸಕ್ತರಿಗೆ ಅನುಕೂಲ.

ಅದೇ ರೀತಿ ಮಕ್ಕಳಿಗೆ ಭಾಷೆ, ಶಿಶುಗೀತೆ, ಪಂಚತಂತ್ರದಂತಹ ನೀತಿಕತೆ ಕಲಿಸುವ, ಮನರಂಜಿಸುವ ಕನ್ನಡದ ಅನಿಮೇಶನ್ ವಿಡಿಯೋಗಳು ಬೆರಳೆಣಿಕೆಯಷ್ಟು. ಅವುಗಳ ಗುಣಮಟ್ಟವಂತೂ ಯಾವುದಕ್ಕೂ ಬೇಡ ಸರ್ವಜ್ಞ! ಇತರ ಭಾಷೆಯ ಉನ್ನತ ಮಟ್ಟದ ಉತ್ಪನ್ನಗಳನ್ನು ನೋಡಿದವರಿಗೆ ಏನೇನೂ ಸಮಾಧಾನ ತರದು. ಉತ್ತಮ ಮಟ್ಟದ ಅನಿಮೇಶನ್ ವಿಡಿಯೋಗಳು ತಯಾರಾಗಿ ಅವು ಇ-ಮಾರುಕಟ್ಟೆಯಲ್ಲಿ ಲಭಿಸುವಂತಾದರೆ ಪಾಲಕರಿಗೆ ಅನುಕೂಲ.

ಏನೇ ಆಗಲಿ, ದಿನ ಬೆಳಗಾದರೆ ತಂತ್ರಜ್ಞಾನ ಬದಲಾಗುವ ಈ ದಿನಗಳಲ್ಲಿ ಕನ್ನಡ ಅಂತರ್ಜಾಲ ಬಳಕೆದಾರರಿಗೂ 'ಅಚ್ಛೇ ದಿನ್' ಬರಬಹುದೆಂಬ ಸದಾಶಯವಂತೂ ಖಂಡಿತ ಇದೆ.

English summary
What are my expectations from Kannada online? Results of the Survey conducted by No 1 Kannada portal http://kannada.oneindia.com/: Rekha Hegde Balesara, Singapore, one of the respondents says the Kannada websites should be Mobile friendly. She says, Kannada web writers should inculcate habit of writing without spelling mistakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X