ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಖ್ಯೆಗಾಗಿ ಮಾಡಬಾರದ್ದನ್ನು ಮಾಡಬಾರದು - ಮೈಶ್ರೀ ನಟರಾಜ್

By ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್, ಯು.ಎಸ್.ಎ.
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್, ಯು.ಎಸ್.ಎ.. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

"ಅದುವೆ ಕನ್ನಡ" ಇದು ನಾನು "ದಟ್ಸ್‌ಕನ್ನಡ" ಜಾಲತಾಣಕ್ಕೆ ಕೊಟ್ಟ ಹೆಸರು. ಆ ತಾಣವನ್ನು ಜಾಲಾಡಿಸಲು ತೊಡಗಿದ್ದು ಅದು ಹುಟ್ಟಿದ ಸಮಯದಿಂದಲೇ ಎಂದರೆ ತಪ್ಪಾಗಲಿಕ್ಕಿಲ್ಲ. ಆ ದಿನಗಳಲ್ಲಿ ಹುರುಪಿನಿಂದ ದಿನಕ್ಕೊಂದೆರಡು ಬಾರಿ ಜಾಲಪ್ರವೇಶ ಮಾಡದಿದ್ದರೆ ತಿಂದದ್ದು ಅರಗುತ್ತಿರಲಿಲ್ಲ. ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, ನಿತ್ಯ ಪ್ರಜಾವಾಣಿ ಓದದಿದ್ದರೆ ನಿದ್ದೆ ಬರುತ್ತಿರಲಿಲ್ಲ. ನಂತರ ಮುಂಬೈ ಐ.ಐ.ಟಿ. ಸೇರಿದಾಗ ಅಂಚೆಯ ಮೂಲಕ ಎರಡು ಕನ್ನಡ ದಿನಪತ್ರಿಕೆಗಳನ್ನು ತರಿಸುತ್ತಿದ್ದೆ, ಸುದ್ದಿಗಾಗಿ ಅಲ್ಲ, ಕನ್ನಡ ಲಿಪಿಯನ್ನು ನಿತ್ಯ ನೋಡುವ ಸಲುವಾಗಿ.

ನಾನು ಅಮೆರಿಕೆಗೆ ಬಂದ ನಂತರ, ನನ್ನ ಬೆಂಗಳೂರಿನ ಮಿತ್ರರು ಓದಿ ಮುಗಿಸಿದ "ಸುಧಾ," "ಕಸ್ತೂರಿ" ಮುಂತಾದ ನಿಯತಕಾಲಿಕಗಳನ್ನು ಸೀ ಮೈಲ್ ಮೂಲಕ ಹತ್ತಿಪ್ಪತ್ತು ಸಂಚಿಕೆಗಳನ್ನು ಒಟ್ಟೊಟ್ಟಾಗಿ ಕಳಿಸಿಕೊಡುತ್ತಿದ್ದರು. ನಂತರ ನಾನೇ ಚಂದಾದಾರನಾಗಿ ಹಲವಾರು ವರ್ಷ, ಕನ್ನಡ ವಾರ/ಮಾಸ ಪತ್ರಿಕೆಗಳನ್ನು ತರಿಸುತ್ತಿದ್ದೆ.

Kannada online survey 2014 : My expectations - M.S. Nataraj, USA

ನಂತರ ಬಂತು ಜಾಲತಾಣಗಳ ಕಾಲ! ಕಾಗದ ಲೇಖಣಿಗಳ ಸಹಾಯವಿಲ್ಲದೇ ತೆರೆಯಮೇಲೆ ಬರೆಯುವ ದಿನಗಳೂ ಬಂದವು. ಇಷ್ಟು ಹೊತ್ತಿಗೆ ನಾನು ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದೆ. ಅದುವೆ ಕನ್ನಡದಲ್ಲಿ ಅಂಕಣ ಬರೆಯಲು ಪ್ರಾರಂಭಿಸಿದ್ದೂ ಹೀಗೆ. ಅಂತೂ ನನಗೂ ಜಾಲಕ್ಕೂ ಒಂದು ಬಂಧವುಂಟಾಗಿ "ಜಾಲತರಂಗ" ಮತ್ತು "ಜಾಲತರಂಗಿಣಿ" ಎಂಬ ಅಂಕಣ ಲೇಖನಗಳ ಸಂಗ್ರಹ ಅಚ್ಚಾಯಿತು. ನನ್ನ ಮಟ್ಟಿಗೆ ಜಾಲತಾಣ ನನ್ನ ಕನ್ನಡದ ಓದು ಮತ್ತು ಬರಹವನ್ನು ಜೀವಂತವಾಗಿಟ್ಟುಕೊಳ್ಳುವ ಸಾಧನವಾಗಿದೆ.

ಜಾಲದ ಮೇಲೆ ಏನಿರಬೇಕು, ಹೇಗಿರಬೇಕು ಮುಂತಾದ ಚರ್ಚೆಗಳು ನಡೆದೇ ಇವೆ. ನಾನು ಹೆಚ್ಚು ಹೇಳುವಂಥದು ಏನೂ ಇಲ್ಲವೆನ್ನಿಸುತ್ತದೆ. ಕೆಲವರಿಗೆ ಅದು ತೆರೆಯಮೇಲಿನ ವಾಚನಾಲಯ, ಇನ್ನು ಕೆಲವರಿಗೆ ವಿಷಯಸಂಗ್ರಹಣೆ ಮಾಡಲು ಉಪಯುಕ್ತವಾದ "ಸಮಗ್ರಕೋಷ." ಹೆಚ್ಚಿನ ಜನರಿಗೆ ಕೆಲಸದ ನಡುವೆ ಬಿಡುವಿನಲ್ಲಿ ಮನರಂಜನೆಗಾಗಿ ತಡಕಾಡುವ "ಮಾಹಿತಿ-ಮಾಲ್!" ಸಿನಿಮಾ, ನಾಟಕ, ಸಂಗೀತ, ರಾಜಕೀಯ, ಹೀಗೆ ವಿವಿಧ ವಿಷಯಗಳ ಮೇಲೆ ಸದ್ದಿಲ್ಲದೇ ಸರಕ್ಕನೆ ಪಕ್ಷಿನೋಟಮಾಡುವ ಸಾಧನ.

ಇದೊಂದು ಚಟ ಅಥವಾ ತೆವಲಾಗಿಬಿಡುವುದೂ ಉಂಟು. ಬೆಳಗಾಗೆದ್ದು ಕಾಫಿ ಕುಡಿಯುವುದು ಎಷ್ಟಗತ್ಯವೋ ಜಾಲವನ್ನು ತಡಕುವುದೂ ಅಷ್ಟೇ ಅಗತ್ಯ. ಈಗಂತೂ ಎಲ್ಲಿ ಅಂದರೆ ಅಲ್ಲಿ ಕೂತು ಲೀಲಾಜಾಲವಾಗಿ ಜಾಲಾಡಬಹುದಾದ "ಜಾಲಲೀಲಾತಾಣ"ಗಳು ನಮ್ಮ ಅಂಗೈಯ ಮೇಲೇ ಇರಬಾಹುದಾದ ಯುಗದಲ್ಲಿ ನಾವಿದ್ದೇವೆ. ಸೀರೆ ಬೇಕಾದರೆ ಸೀರೆ ಅಂಗಡಿಗೆ, ಪುಸ್ತಕ ಬೇಕಾದರೆ ಪುಸ್ತಕದ ಮಳಿಗೆಗೆ, ಮೊಳೆ, ಸುತ್ತಿಗೆ ಬೇಕಾದರೆ ಹಾರ್ಡ್‍ವೇರ್ ಸ್ಟೋರಿಗೆ ಹೋಗಬಹುದು, ಅಥವಾ ಎಲ್ಲವೂ ಸಿಗುವ ಮಾಲಿಗೆ ಭೇಟಿ ಕೊಡಬಹುದಲ್ಲವೇ?

ಹಾಗೆ, ಇಂದಿನ ಕೆಲವು ತಾಣಗಳು ಕೆಲವೇ ಸೀಮಿತ ಉದ್ದೇಶಗಳನ್ನು ಹೊಂದಿವೆ. ಮತ್ತೆ ಕೆಲವು ಬೇಕಾದವರಿಗೆ ಬೇಕಾದ್ದನ್ನು ಕೊಡುವ-- "ಪಾಡಿದವರಿಗೆ ಬೇಡಿದ ವರಗಳ"-- ಅಲ್ಲ, "ಜಾಲಾಡಿದವರಿಗೆ ಜಮ್ಮನೆ ತೋರುವ" ವರದಾನವಾಗಿದೆ. ತಾಣವೀಕ್ಷಕರ ಸಂಖ್ಯೆಯೇ ಜಾಲತಾಣಗಳಿಗೆ ಮಾರ್ಗಸೂಚಿ, ಹಾಗೆಂದಮಾತ್ರಕ್ಕೆ ಕೇವಲ ಸಂಖ್ಯೆಗಾಗಿ ಮಾಡಬಾರದ್ದನ್ನು ಮಾಡಬಾರದು. ಜಾಲತಾಣಗಳ ಸಹಯೋಗದಿಂದ ಎಲ್ಲವನ್ನೂ ಕನ್ನಡ ಅರಗಿಸಿಕೊಳ್ಳುವಂತಾಗಲಿ, ತನ್ನದಾಗಿಸಿಕೊಳ್ಳಲಿ, ಬೇರೂರಿಸಿಕೊಂಡು ಬೆಳೆಯಲಿ, ಉಳಿಯಲಿ, ಗೆಲ್ಲಲಿ, ಇತರ ಭಾಷೆಗಳಿಗಿಂತ ಮುಂದಿರಲಿ, ಆದರೆ, ಗುಣಮಟ್ಟವನ್ನು ಸದಾ ರಕ್ಷಿಸಿಕೊಳ್ಳಲಿ!

ಸಿರಿಗನ್ನಡಂ ಗೆಲ್ಗೆ.

English summary
My expectations from Kannada Online by Dr M S Nataraj, Scientist and Kannada Scholar in Maryland, USA. Nataraj says the Kannada portals should not do anything for the sake of numbers and should concentrate on quality of content.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X