ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಆಶೋತ್ತರಕ್ಕೆ ಅಂತರ್ಜಾಲ ಸ್ನೇಹಸೇತುವಾಗಲಿ - ಮಧುಸೂದನ್ ಅಕ್ಕಿಹೆಬ್ಬಾಳ್

By ಮಧುಸೂದನ್ ಅಕ್ಕಿಹೆಬ್ಬಾಳ್, ಬಾಸ್ಟನ್, ಯುಎಸ್ಎ
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಮಧುಸೂದನ್ ಅಕ್ಕಿಹೆಬ್ಬಾಳ್, ಬಾಸ್ಟನ್, ಯುಎಸ್ಎ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

1999ರಲ್ಲಿ ಅಮೆರಿಕಾ ತಲುಪಿದಾಗ ಅದೇನೋ ಕಳೆದುಕೊಂಡ ತಳಮಳ. ಕುಟುಂಬದೊಂದಿಗೆ ಹೊಸ ಜಾಗದಲ್ಲಿ ತಳ ಊರಿ, ಹೊಸ ಸ್ನೇಹಿತರನ್ನು ಕಂಡುಕೊಂಡು, ಬಾಸ್ಟನ್ ನ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟಕ್ಕೆ ಸೇರಿದಾಗ ಸ್ವಲ್ಪ ಸಮಾಧಾನ. ಆದರೆ, ಆಗ ನಮ್ಮ ಊರು, ಕೇರಿ ಮತ್ತು ಜನರನ್ನು ಬಿಟ್ಟುಬಂದು ಅಲ್ಲಿನ ಆಗು ಹೋಗುಗಳ ಅರಿವು ಕಡಿಮೆ ಆಯಿತು!

ಅದೃಷ್ಟವಶಾತ್ ಅದೇ ಸಮಯಕ್ಕೆ ಪ್ರಪಂಚದೆಲ್ಲೆಡೆ ಅಂತರಜಾಲದ ಮಾಯಾಜಾಲ ಪ್ರಬಲವಾಗತೊಡಗಿತು. ಹಾಗೇ, "ಡಾಟ್ ಕಾಂ ಬೂಮ್" ನ ನಂತರ ಬಂದ "ಡೂಮ್" ಸಮಯದಲ್ಲೂ ಅಂತರಜಾಲದ ಪ್ರಯೋಗ ಹೆಚ್ಚುತ್ತಲೇ ಹೋಯಿತು! ಅದೇ ರೀತಿ ಅಂತರಜಾಲದಲ್ಲಿ ಕನ್ನಡ ಬೆಳೆಯಿತು - ಯೂಟ್ಯೂಬ್ ನಲ್ಲಿ ಮೊದಲ ಬಾರಿ "ವೀರಕೇಸರಿ" ಹಾಡು ನೋಡಿ ಬಲು ಆನಂದ! ಕನ್ನಡ ರೇಡಿಯೋ (ಆಕಾಶವಾಣಿ? ಅಲ್ಲ ಅಂತರಜಾಲ ವಾಣಿ!), ಕನ್ನಡ ವರ್ತಮಾನ ತಾಣಗಳು, ಕನ್ನಡ ಆಡಿಯೋ / ವಿಡಿಯೋ ಸೀಡೀ ಮಾರುವವರು - ಇಂತಹ ಎಷ್ಟೋ ತಾಣಗಳು ಹುಟ್ಟಿಕೊಂಡವು.

ಪ್ರಸ್ತುತ ನಮ್ಮ ಕನ್ನಡ ಭಾಷೆಯ ಹಲವಾರು ಆನ್ಲೈನ್ ಬ್ಲಾಗ್ ತಾಣಗಳು, ಮನರಂಜನೆ ಮತ್ತು ವರ್ತಮಾನ ತಾಣಗಳು ತಮ್ಮ ಸೇವೆ ಸಲ್ಲಿಸುತ್ತಿವೆ. ಹಲವು ವರ್ಷಗಳಿಂದ ನಾನು ದಟ್ಸ್ ಕನ್ನಡ (ಒನ್ಇಂಡಿಯಾ ಕನ್ನಡ), ಟೋಟಲ್ ಕನ್ನಡ ತಾಣಗಳಿಗೆ ಭೇಟಿ ನೀಡಿದ್ದೇನೆ. ಕನ್ನಡ ಆಡಿಯೋ ತಾಣದಲ್ಲಿ ಸಂಗೀತ, ಅವಧಿ/ಸಂಪದ ತಾಣಗಳ ಬರಹಗಳು ಹೀಗೆ ಹಲವಾರು ಪೋರ್ಟಲ್ ಗಳ ಉಪಯೋಗ ಪಡೆದಿದ್ದೇನೆ.

Kannada online survey 2014 : My expectations - Madhusudhan Akkihebbal, Boston, USA

ಬ್ಲಾಗ್ ತಾಣ ಜನಪ್ರಿಯಗೊಳ್ಳಲಿ : ಬ್ಲಾಗ್ ತಾಣಗಳು ಇನ್ನೂ ಹೆಚ್ಚು ಜನಪ್ರಿಯಗೊಳ್ಳಬೇಕು. ಬಹು ಮಂದಿಗೆ ಅವುಗಳ ಇರುವೇ ಗೊತ್ತಿರುವುದಿಲ್ಲ! ಕನ್ನಡಿಗರು ಎಲ್ಲೇ ಇರಲಿ, ಅವರನ್ನು ತಲುಪಬೇಕಾದರೆ ಬ್ಲಾಗ್ ತಾಣಗಳ ನಿರ್ವಾಹಕರು ಬೇರೆ ಬೇರೆ ದೇಶಗಳ ಕನ್ನಡ ಕೂಟಗಳ ಜೊತೆ ಸೇರಿ ಕೆಲಸ ಮಾಡಬಹುದು. ಹಲವು ಕನ್ನಡ ಕೂಟಗಳಲ್ಲಿ ತಮ್ಮದೇ ಆದ ಕನ್ನಡ ಪತ್ರಿಕೆ / ಪೋರ್ಟಲ್ ಗಳನ್ನೂ ಸ್ಥಾಪಿಸಿದ್ದಾರೆ. ಆದರೆ ಕೂಟಗಳು ಮತ್ತು ಬ್ಲಾಗ್ ತಾಣಗಳ ನಡುವೆ ಒಂದು ಒಪ್ಪಂದ ನಡೆದು ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಬಹುದು.

ಕಾಯ್ಕಿಣಿ ಕಿವಿಮಾತು : ಜಯಂತ್ ಕಾಯ್ಕಿಣಿ ಅವರು ನಮ್ಮ ಕನ್ನಡ ಕೂಟಕ್ಕೆ ಬಂದಾಗ ನಮಗೆ ಕೊಟ್ಟ ಕಿವಿ ಮಾತು ಇದು - ನಿಮ್ಮ ಮನದಲ್ಲಿರುವುದನ್ನು ಬರೆಯಿರಿ, ನಿಮ್ಮ ಬಾಲ್ಯದ ಬಗ್ಗೆ, ನಿಮ್ಮ ಅನುಭವದ ಬಗ್ಗೆ ಬರೆಯಿರಿ ಎಂದು. ನಮ್ಮ ಕನ್ನಡ ಕೂಟದ ಇ-ಪತ್ರಿಕೆ ಶುರು ಆಗಿದ್ದೂ ಇದೆ ಸ್ಪೂರ್ತಿಯಿಂದಲೇ. ಹೆಚ್ಚಿನ ಬಾರಿ ಕನ್ನಡ ಕೂಟಗಳ ಪತ್ರಿಕೆಗಳಲ್ಲಿ ಬರೆಯುವ ಹವ್ಯಾಸ ಬೆಳೆಸಿಕೊಂಡವರು ಬೇರೆ ಬೇರೆ ಬ್ಲಾಗ್ ತಾಣಗಳಿಗೆ ತಮ್ಮ ಬರಹ ಕಳುಹಿಸಲು ಆರಂಭಿಸುತ್ತಾರೆ. ಉತ್ತಮ ಬರಹಗಳಿಗೆ ಇದು ನಾಂದಿ ಹಾಡುವುದು. ಒಟ್ಟಿನಲ್ಲಿ, ಬ್ಲಾಗ್ ತಾಣಗಳು ಪ್ರಪಂಚದಾದ್ಯಂತ ಇರುವ ಕನ್ನಡಿಗರ ಭಾವನೆಗಳನ್ನು ಬೆಸುಗೆ ಹಾಕುವ ಸ್ನೇಹ ಸೇತು ಆಗಿ ಮಾರ್ಪಾಡುಗೊಳ್ಳುತ್ತಾ ಇವೆ. ಆದರೆ ಅವುಗಳು ಕನ್ನಡಿಗರ ಮುಖ್ಯವಾಹಿನಿಗೆ ಆಗಮಿಸಬೇಕು ಮತ್ತು "ಕೆಲವರಿಂದ, ಕೆಲವರಿಗಾಗಿ ಮಾತ್ರ" ಎಂದಾಗಬಾರದು.

ಸಮಗ್ರ ಮಾಹಿತಿ ಇರಲಿ : ಮನರಂಜನೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ತಾಣಗಳು ಇನ್ನಷ್ಟು ಮೂಡಿ ಬರಬೇಕು. ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಸಾಹಿತ್ಯಕ್ಕೆ ಒತ್ತು ಕೊಟ್ಟು ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಪರಿಚಯಿಸುವ ಕಾರ್ಯ ಆಗಬೇಕು. ಈಚೆಗೆ ಹಲವಾರು ಕನ್ನಡ ರೇಡಿಯೋ ತಾಣಗಳು ಹುಟ್ಟಿಕೊಂಡಿವೆ. ಇದು ಸ್ವಾಗತಾರ್ಹ - ಕಸ್ತೂರಿ, ವಿಡಿಯೋ ಗಿರ್ಮಿಟ್ ಇತ್ಯಾದಿ ತಾಣಗಳಿಂದ ಕನ್ನಡದಲ್ಲಿ "ಆರ್ ಜೇ" ಮಾಡುವ ಹವ್ಯಾಸ ಉಳ್ಳವರು ಮುಂದೆ ಬಂದಿದ್ದಾರೆ. ಇವುಗಳಿಂದ ಆಗಬಹುದಾದ ಉಪಯೋಗ ಎಂದರೆ ಆಯಾ ಪ್ರಾಂತದ ಕಲಾವಿದರು, ಅರಳು ಪ್ರತಿಭೆಗಳು, ಅಲ್ಲಿನ ಆಗು ಹೋಗುಗಳು ಮತ್ತು ಯಶಸ್ವಿ ಕನ್ನಡಿಗರ ಪರಿಚಯ ಮಾಡಿಸಿ ಆ ದೇಶಗಳ ವರ್ತಮಾನ ಮತ್ತು ಬೆಳವಣಿಗೆಗಳನ್ನು ಪ್ರಪಂಚಕ್ಕೇ ತಿಳಿಸಬಹುದು. ಬೇರೆ ಬೇರೆ ದೇಶಗಳ ಕನ್ನಡಿಗರು ಅದಕ್ಕೆ ಸ್ಪಂದಿಸಬಹುದು.

ಸ್ಮಾರ್ಟ್ ಫೋನ್ ನಲ್ಲಿ ಕನ್ನಡ ಆಪ್ ಹೆಚ್ಚಲಿ : ಕರ್ನಾಟಕ ಮೂಲದ ಹಲವು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು (ಕನ್ನಡಪ್ರಭ, ಪ್ರಜಾವಾಣಿ, ಉದಯವಾಣಿ ಇತ್ಯಾದಿ) ಇತ್ತೀಚಿನ ವರ್ಷಗಳಲ್ಲಿ ಉತ್ತಮ ಅಂತರಜಾಲ ತಾಣಗಳ ಮೂಲಕ ನಮಗೆ ದಿನ ಬೆಳಿಗ್ಗೆ ಬಸವನಗುಡಿಯಲ್ಲಿ ಕಾಫಿ ಕುಡಿಯುತ್ತಾ ದಿನಪತ್ರಿಕೆ ಓದುತ್ತಿದ್ದ ಅನುಭವ ಮರುಕಳಿಸುತ್ತಿವೆ. ಸುದ್ದಿ ಮತ್ತು ಮನರಂಜನಾ ಪೋರ್ಟಲ್ ಗಳಾದ ದಟ್ಸ್ ಕನ್ನಡ ಮುಂತಾದ ತಾಣಗಳು ತುಸು ವಿಭಿನ್ನ ಅನ್ನಬಹುದು. ಹೊರನಾಡ ಕನ್ನಡಿಗರ ವರ್ತಮಾನಕ್ಕೆ ಒತ್ತು ನೀಡುವಲ್ಲಿ ಈ ತಾಣಗಳು ಮುಂದಿವೆ. ಇದು ಇನ್ನೂ ದೊಡ್ಡ ರೀತಿಯಲ್ಲಿ ಮುಂದುವರೆಯಬೇಕು. ಈಗಿನ ಕಾಲದ ಸ್ಮಾರ್ಟ್ ಫೋನ್ ಗಳಲ್ಲೂ ಕನ್ನಡ / ಕರ್ನಾಟಕ ಕುರಿತಾದ ಒಳ್ಳೆ ಗುಣಮಟ್ಟದ "ಆಪ್"ಗಳು ಹೆಚ್ಚಬೇಕು.

ಕನ್ನಡಿಗರ ಆಶೋತ್ತರಕ್ಕೆ ಒತ್ತು ನೀಡಲಿ : ಅಕ್ಕ ಮತ್ತು ನಾವಿಕದಂಥ ಸಂಸ್ಥೆಗಳ ಜೊತೆಗೂಡಿ ಕನ್ನಡ ಅಂತರಜಾಲ ತಾಣಗಳು ಅಮೆರಿಕ, ಯು.ಕೆ, ಆಸ್ಟ್ರೇಲಿಯ, ಭಾರತ, ಜಪಾನ್, ಸಿಂಗಾಪುರ, ಗಲ್ಫ್, ಇತ್ಯಾದಿ ದೇಶಗಳಲ್ಲಿ ಬೀಡು ಬಿಟ್ಟಿರುವ ಕನ್ನಡಿಗರ ಆಶೋತ್ತರಕ್ಕೆ ಒತ್ತು ನೀಡಿ ನಮ್ಮ ನಡುವಿನ ಸ್ನೇಹ ಸೇತುಗಳಾಗಬಹುದು. ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ "ಕಂಟೆಂಟ್ ಇಸ್ ಕಿಂಗ್" - ವೈವಿಧ್ಯತೆ, ಕನ್ನಡತನ, ನಮ್ಮ ಮುಂದಿನ ಪೀಳಿಗೆಯನ್ನು ಗಮನದಲ್ಲಿ ಇಟ್ಟುಕೊಳ್ಳುವುದು, ಬೇರೆ ಬೇರೆ ದೇಶಗಳ ಕನ್ನಡಿಗರ ಮಧ್ಯೆ ವಿಚಾರ ವಿನಿಮಯ, ಹಾಸ್ಯ, ಮನರಂಜನೆ ಇವೆಲ್ಲವನ್ನೂ ಈಗಿರುವ ತಾಣಗಳಲ್ಲಿ ಇನ್ನೂ ಹೆಚ್ಚಾಗಿ ಕಾಣಬೇಕು ... ಕನ್ನಡದ ಕೀರ್ತಿ ಪತಾಕೆ ಹಾರಬೇಕು.

(ಮಧುಸೂದನ್ ಅಕ್ಕಿಹೆಬ್ಬಾಳ್, ಅಧ್ಯಕ್ಷರು, ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಬಾಸ್ಟನ್, ಯು.ಎಸ್.ಎ)

English summary
Kannada blogs should collaborate with websites of NRI associations and improve the quality of Kannada content online and reach out to large number of people. More Kananda Apps should be launched on smart phones too, feels Madhusudhan Akkihebbal, Boston, USA. Kannada Online - Oneindia survey 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X