ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಕತ್ತಿಯಲುಗಿನ ಮೇಲಿನ ನಡಿಗೆ- ಹಂಸಾನಂದಿ

By ಹಂಸಾನಂದಿ, ಅಮೆರಿಕ
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಹಂಸಾನಂದಿ, ಅಮೆರಿಕ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಅಂತರ್ಜಾಲದಿಂದ ನಾನು ಕನ್ನಡಕ್ಕೆ ಏನನ್ನ ಬಯಸ್ತೇನೆ ಅಂತ ಹೇಳುವಿರಾ ಎಂದು ಎಸ್.ಕೆ.ಶಾಮಸುಂದರ್ ಅವರು ಒಂದು ಇ ಮೆಯ್ಲ್ ಕಳಿಸಿದ್ದರು. ಕಳೆದ 15-16 ವರ್ಷಗಳಲ್ಲಿ ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ನೋಡಿರುವ ಮತ್ತೆ ಮುಂಬರಬಹುದಾದ ಸಾಧ್ಯತೆಗಳನ್ನ ನಾನು ಲೆಕ್ಕಕ್ಕೆ ತೆಗೆದುಕೊಂಡು ನನ್ನ ಪಟ್ಟಿಯನ್ನ ಮಾಡ್ತಿದೇನೆ. ಈಗ ಇರುವ ಕನ್ನಡ ಅಂತರ್ಜಾಲದಲ್ಲಿ ಇದರಲ್ಲಿ ಕೆಲವು ಅಂಶಗಳು ಬೇಡಿಕೆ ಇಲ್ಲ ಎನ್ನುವ ಕಾರಣಕ್ಕೋ, ಅಥವಾ ತಂತ್ರಜ್ಞಾನದ ಕೊರತೆಯಿಂದಲೋ ಅಥವಾ ಮಾಡಬೇಕು ಎಂದು ಮುನ್ನುಗ್ಗುವವರ ಕೊರತೆಯಿಂದಲೋ ಈಗ ಇಲ್ಲದೇ ಇರಬಹುದು. ಈ ಪಟ್ಟಿ ಯಾವುದೇ ಆದ್ಯತೆಯ ಪ್ರಕಾರವಾಗಿಲ್ಲದೇ, ಸುಮ್ಮನೆ ಮನಸ್ಸಿಗೆ ತೋಚಿದ ಹಾಗೆ ಬರೆದಿದ್ದೇನೆ.

Kannada online survey 2014 : My expectations - Hamsanandi

1) ಕನ್ನಡದಲ್ಲಿ ನಿತ್ಯದ ವ್ಯವಹಾರ : ಕನ್ನಡಿಗರಿಗೆ ತಮ್ಮ ದಿನ ನಿತ್ಯದ ಅಂತರ್ಜಾಲ ವ್ಯವಹಾರವನ್ನು ಕನ್ನಡದಲ್ಲೇ ಮಾಡಲು ಅನುವಾಗುವಂತಹ ಪರಿಸ್ಥಿತಿ ಬರಬೇಕಿದೆ. ಅದು ಬ್ಯಾಂಕ್ ವ್ಯವಹಾರ ಇರಬಹುದು, ಪಾಸ್ ಪೋರ್ಟ್ ಕಚೇರಿ ಇರಬಹುದು, ಅಥವಾ ಅಡುಗೆ ಅನಿಲ ಬುಕಿಂಗ್ ಮಾಡುವುದಿರಬಹುದು ಇಲ್ಲವೇ ಮೈಸೂರು ರೇಷ್ಮೆ ಸೀರೆಯೊಂದನ್ನು ಖರೀದಿ ಮಾಡುವ ಸಂದರ್ಭ ಇರಬಹುದು - ಈಗ ಇಂತಹ ಕೆಲಸಗಳಿಗೆ, ಅಂತರ್ಜಾಲದಲ್ಲಿ ಇಂಗ್ಲಿಷ್ ಬರದಿದ್ದರೆ ಆಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಇದು ಬದಲಾಗಬೇಕು. ಈಗಿನ ದಿನದಲ್ಲಿ ಇಂಗ್ಲಿಷ್ ಬರದೇ ಇರುವವರು ಯಾರು ಅಂತ ಪ್ರಶ್ನೆ ಬೇಡ. ಕನ್ನಡದಲ್ಲಿ ಈ ಕೆಲಸಗಳನ್ನು ಮಾಡುವ ಅವಕಾಶ ಇದ್ದರೆ ಎಷ್ಟೋ ಇಂಗ್ಲಿಷ್ ಬಲ್ಲ ಕನ್ನಡಿಗರೂ ಅದನ್ನು ಮೆಚ್ಚುವರು ಅಂತ ನನ್ನೆಣಿಕೆ. ಇಂತಹ ದಿನೋಪಯೋಗಿ ಕೆಲಸಗಳನ್ನು ಕನ್ನಡಿಗರು ಕನ್ನಡದಲ್ಲೇ ಮಾಡುವ ಸೌಲಭ್ಯ ಬರಲಿ!

2) ಕನ್ನಡ ಪುಸ್ತಕ ನಿಧಿ ಕನ್ನಡಿಗರಿಗೆ ಸಿಗಲಿ : ಕನ್ನಡದಲ್ಲಿರುವ ಅಪಾರ ಪುಸ್ತಕ ಸಂಪತ್ತು ಸುಲಭವಾಗಿ ಎಲ್ಲರಿಗೂ ಸಿಗುವಂತಾಗಬೇಕು. ಉದಾಹರಣೆಗೆ ಹೇಳುವುದಾದರೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಜಾಲತಾಣದ ಕಾಪಿರೈಟ್ ಮೀರಿದ, ಈಗ ಮರು ಮುದ್ರಣವಾಗುವ ಸಾಧ್ಯತೆಯೇ ಇಲ್ಲದ ಹತ್ತಾರು ಸಾವಿರ ಕನ್ನಡ ಪುಸ್ತಕಗಳಿವೆ. ಇಂತಹ ತಾಣಗಳಲ್ಲಿ ಕನ್ನಡದಲ್ಲಿ ಹುಡುಕುವ ಅವಕಾಶ ಇಲ್ಲದೇ ಇರುವುದರಿಂದ ಹೆಚ್ಚಿನಂಶ ಕನ್ನಡಿಗೆ ಅಂತರ್ಜಾಲ ಬಳಕೆದಾರರಿಗೆ ಇಂತಹ ವಿಷಯಗಳು ತಿಳಿದಿರುವುದಿಲ್ಲ. ಇಂತಹ ಸಾರ್ವಜನಿಕ ಸ್ವತ್ತಿಗೆ ಎಲ್ಲರೂ ಹಕ್ಕುದಾರರಲ್ಲವೇ? ಇಂತಹ ಪುಸ್ತಕ ನಿಧಿಯು ಎಲ್ಲ ಕನ್ನಡಿಗರಿಗೂ ದೊರಕುವಂತಾಗಬೇಕು. [ಫೇಸ್ ಬುಕ್ | ಟ್ವಿಟ್ಟರ್]

3) ಇ-ಪುಸ್ತಕಗಳ ಸೌಲಭ್ಯ : ಪುಸ್ತಕಗಳ ವಿಷಯಕ್ಕೆ ಬಂದಾಗ - ಇ-ಪುಸ್ತಕಗಳು ಇನ್ನೂ ಕನ್ನಡದಲ್ಲಿ ಹೆಚ್ಚಾಗಿ ಬಂದಿಲ್ಲ. ಇ-ಪುಸ್ತಕಗಳು ಹಲವಾರು ನಿಟ್ಟಿನಿಂದ ಅನುಕೂಲ. ನೀವು ಎಲ್ಲೇ ಇದ್ದರೂ, ಕ್ಷಣಾರ್ಧದಲ್ಲಿ ಪುಸ್ತಕ ನಿಮ್ಮ ಕೈ ಮುಟ್ಟುತ್ತದೆ. ನಿಮಗೆ ಬೇಕಿರುವಂತೆ ಅಕ್ಷರಗಳ ವಿನ್ಯಾಸವನ್ನೂ, ಅಳತೆಯನ್ನೂ ನಿಮ್ಮ ಕಣ್ಣಿಗೆ ಹಿತವಾಗುವಂತೆ ಬದಲಿಸಿಕೊಳ್ಳಬಹುದು. ನಿಮ್ಮ ಮೊಬೈಲ್ ನಲ್ಲೋ, ಟ್ಯಾಬ್ಲೆಟ್ ನಲ್ಲೋ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಓದಬಹುದು. ಇನ್ನು ಮುಂದೆ ಪ್ರಕಟವಾಗುವ ಕನ್ನಡ ಪುಸ್ತಕಗಳು ಎಲ್ಲವೂ ಇ-ಪುಸ್ತಕಗಳಾಗಿ ಬರುವಂತಹ ತಂತ್ರಜ್ಞಾನವೂ, ಅದನ್ನು ಬೇಕಾದವರು ಸುಲಭವಾಗಿ ಕೊಳ್ಳುವ ಸೌಲಭ್ಯವೂ ಕನ್ನಡಿಗರಿಗೆ ಸುಲಭವಾಗಿ ದೊರೆಯುವಂತಾಗಬೇಕು.

4) ಕನ್ನಡ ಸಾಹಿತ್ಯ ಭಂಡಾರ : ಈಗಾಗಲೇ ದಾಸಸಾಹಿತ್ಯ, ವಚನ ಸಾಹಿತ್ಯ ಮೊದಲಾದುವನ್ನು ಉತ್ಸಾಹಿಗಳು ಅಂತರ್ಜಾಲಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೇ ಇಂತಹ ಆಕರಗಳಲ್ಲಿ ಸಂಶೋಧನೆ ಮಾಡಲು ಆಕರಗಳೂ, ಸಾಧ್ಯತೆಗಳೂ ಇವೆ. ಕನ್ನಡ ವಿಕಿಪೀಡಿಯ ಇನ್ನೂ ಆರಕ್ಕೆ ಏರದೇ ಮೂರಕ್ಕಿಳಿಯದೇ ಇದೆ. ಇಲ್ಲಿ ಇನ್ನೂ ಹೆಚ್ಚಿನ ಬರಹಗಳು ಬರಬೇಕು. ಇದೇ ರೀತಿ ನಮ್ಮ ಹಿಂದಿನ ಸಾಹಿತ್ಯ, ಲಕ್ಷಣಗ್ರಂಥಗಳು, ಜನಪದ ಸಾಹಿತ್ಯ, ಸಂಪ್ರದಾಯದ ಹಾಡುಗಳು - ಇಂತಹವೆಲ್ಲ ಆಸಕ್ತರಿಗೆ ಸುಲಭವಾಗಿ ನಿಲುಕುವಂತಾಗಬೇಕು. ಏಕೆಂದರೆ ಕರ್ನಾಟಕದ ಕಲೆಯಾದ ಯಕ್ಷಗಾನವೋ ಗಮಕ ಕಲೆಯೋ ಇಂತಹವುಗಳ ಬಗ್ಗೆ ಮಾಹಿತಿ ಸಂಗ್ರಹಮಾಡುವವರಿಗೆ, ಸಂಶೋಧನೆ ಮಾಡುವವರಿಗೆ, ಅಥವಾ ಸುಮ್ಮನೇ ಆಸಕ್ತಿ ಹೊಂದಿದವರಿಗೆ, ಕನ್ನಡದಲ್ಲೇ ಆಕರಗಳು ದೊರೆಯುವಂತಾಗಬೇಕು.

5) ಕರ್ನಾಟಕ ಪ್ರವಾಸ ಮಾಹಿತಿ : ಕರ್ನಾಟಕದಲ್ಲಿ ನೋಡಬೇಕಾದ್ದಂತಹ ಸುಂದರ ತಾಣಗಳು ಸಾವಿರಾರು. ಆದರೆ ಅನೇಕ ಸ್ಥಳಗಳ ಬಗ್ಗೆ ಮಾಹಿತಿ, ಅಲ್ಲಿಯ ಸ್ಥಳಪುರಾಣಗಳು, ಜಾನಪದ ಕಥೆಗಳು ಮೊದಲಾದುವು ಅಂತರ್ಜಾಲದಲ್ಲಿ ಸುಲಭವಾಗಿ ಸಿಗುವುದಿಲ್ಲ. ಅವು ಸಿಗುವಂತಾಗಬೇಕು. ದೊಡ್ಡಗದ್ದವಳ್ಳಿಯ ದೇವಾಲಯಕ್ಕೋ, ಮುತ್ಯಾಲಮಡುವಿನ ಜಲಪಾತಕ್ಕೋ ಹೋಗುವವರು, ಇಂಗ್ಲಿಷಿನಲ್ಲೇ ಹುಡುಕಬೇಕೇಕೆ? ಇಂಗ್ಲಿಷ್ ಬಾರದವರಿಗೂ ಇಂತಹ ಮಾಹಿತಿ ಸುಲಭವಾಗಿ ದೊರಕುವಂತಾಗಬೇಕು. ಈಗಂತೂ ಭಾರತದಲ್ಲಿ ಮೊಬೈಲ್ ಫೋನ್ ಕ್ರಾಂತಿಯೇ ಆಗಿ, ಅಂತರ್ಜಾಲದಲ್ಲಿರುವ ಮಾಹಿತಿಯು ಜನಸಾಮಾನ್ಯರ ಬೆರಳತುದಿಯಲ್ಲೇ ಇರುವಂತಾಗಿದೆ. ನೀವು ಪಾಶ್ಚಾತ್ಯ ದೇಶಗಳಲ್ಲಿ ನೋಡಿದರೆ ಚಿಕ್ಕಪುಟ್ಟ ಹಳ್ಳಿಗಳಿಗೂ ಅವುಗಳ ಇತಿಹಾಸ ಪ್ರಖ್ಯಾತಿ ಹೆಚ್ಚುಗಾರಿಕೆಗಳನ್ನು ತಿಳಿಸುವ ವೆಬ್ಸೈಟ್ ಗಳು, ಅಲ್ಲಿಯ ಉತ್ಪನ್ನಗಳನ್ನು ಕೊಳ್ಳಲು ಅವಕಾಶಗಳು ಬೇಕಾದಷ್ಟಿರುತ್ತವೆ. ಈ ರೀತಿ ಅವಕಾಶ ಕನ್ನಡಿಗರಿಗೆ, ಕರ್ನಾಟಕದಲ್ಲಿಯೇ ಆಗಲಿ, ಬೇರೆಲ್ಲೇ ಆಗಲಿ ಕನ್ನಡದಲ್ಲೇ ಮಾಡುವಂತಿದ್ದರೆ ಇನ್ನೂ ಚೆನ್ನಾಗಿರುತ್ತೆ.

6) ಕತ್ತಿಯಲುಗಿನ ಮೇಲಿನ ನಡಿಗೆ : ಈಗಿರುವ ವೆಬ್ ಸೈಟ್ ಗಳನ್ನೂ ಬ್ಲಾಗ್ ಗಳನ್ನೂ ಒಂದೇ ಅಳತೆಗೋಲಿನಲ್ಲಿಟ್ಟು ನೋಡಲಾಗುವುದಿಲ್ಲ. ಏಕೆಂದರೆ ಬ್ಲಾಗರುಗಳು ತಮ್ಮ ಮಟ್ಟಕ್ಕೆ, ತಮ್ಮ ಆಸಕ್ತಿಯ ವಿಷಯಗಳ ಮೇಲೆ ಬರೆಯುತ್ತಾ ಹೋಗುತ್ತಾರೆ. ಹಾಗಾಗಿ, ಎಲ್ಲರಿಗೂ ಬಳಕೆಯಾಗುವಂತಹ ಕೆಲಸವು ಬ್ಲಾಗರ್ ಗಳಿಂದ ಆಗಬೇಕೆಂದರೆ ಅದು ದೂರದ ಮಾತು (ಆದರೂ ನಿಜ ಹೇಳಬೇಕೆಂದರೆ ಇಂದಿನ ದಿನ ಪ್ರವಾಸ ಮಾಹಿತಿ ಕನ್ನಡದಲ್ಲಿ ಬೇಕೆಂದರೆ ಅದಕ್ಕೆ ಬ್ಲಾಗ್ ಬರಹಗಳೇ ಒಳ್ಳೇ ಆಕರ). ಆದರೆ ಇನ್ನೂ ಹರಹು ಹೆಚ್ಚಾಗಿರುವ ವೆಬ್ ಸೈಟ್ ಗಳು ಇನ್ನೂ ಸುಲಭವಾಗಿ ಹೆಚ್ಚು ಜನರನ್ನು ಮುಟ್ಟಬಲ್ಲವು (ಬ್ರಾಂಡ್ ಪ್ರಭಾವ!).

ಹಾಗಾಗಿ ಕನ್ನಡ ವೆಬ್ ಸೈಟ್ ಗಳನ್ನು ನಡೆಸುವವರು ಹೊಸಬಗೆಯ ತಂತ್ರಗಳನ್ನು ಅಳವಡಿಸಿಕೊಂಡು, ಹೊಸಹೊಸ ವಿಷಯಗಳನ್ನೂ - ಅದರಲ್ಲೂ ಬರೀ ಚಲನಚಿತ್ರಗಳಿಗೆ ಮಾತ್ರವೇ ಮೀಸಲಾಗದೇ ಎಲ್ಲ ಬಗೆಯ ಕಲಾಪ್ರಕಾರಗಳು, ವಿಜ್ಞಾನ ವಿಶೇಷಗಳು, ಜಾನಪದ ಜೀವನ ವೈಶಿಷ್ಟ್ಯ, ಬಗೆಬಗೆಯ ಸಾಹಿತ್ಯ-ಸಂಪ್ರದಾಯಗಳು- (ಹೀಗೆ ಈ ಪಟ್ಟಿಗೆ ಕೊನೆಯಿಲ್ಲ) ಮೊದಲಾದುವುಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಕೈಗೊಳ್ಳಬೇಕು. ಇದು ಒಂದು ರೀತಿ ಕತ್ತಿಯಲುಗಿನ ಮೇಲಿನ ನಡಿಗೆ ಅನ್ನೋದೇನೋ ನಿಜ. ಏಕೆಂದರೆ ಈ ಪ್ರಯತ್ನದಲ್ಲಿ ಅವರು ಹಣಗಳಿಕೆಯನ್ನೂ ನೋಡಬೇಕಲ್ಲ! ಹಾಗಾಗಿ ತಮ್ಮ ಹಣಕಾಸಿನ ಗುರಿಗೆ ಅಡೆತಡೆಯಾಗದಂತೆ ಎಷ್ಟು ಸಾಧ್ಯವೋ ಅಷ್ಟನ್ನು ಮಾಡುವುದಕ್ಕೆ ಕನ್ನಡ ವೆಬ್ ಸೈಟ್ ಗಳು ಅವರವರ ಕಾರ್ಯಕ್ಷೇತ್ರದಲ್ಲಿ ಮಾಡಿದರೆ ಎಷ್ಟನ್ನೋ ಸಾಧಿಸಬಹುದು ಎನ್ನಿಸುತ್ತೆ.

English summary
My expectations from Kannada Online by Hamsanandi, USA. Huge treasure of Kannada books are not available online. Along with that folk literature, Karnataka tourism information should be made accessible on the net. He also says every online details should be in Kannada only. Hope his dream comes true.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X