ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯವಾಗದ ಕನ್ನಡ ಅಂತರ್ಜಾಲದಲ್ಲಿ ಸಿಗಲಿ - ಗಿರೀಶ

By ಗಿರೀಶ ಕೆ.ಎಸ್., ಕೀಳನಪುರ, ಮೈಸೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಗಿರೀಶ ಕೆ.ಎಸ್., ಕೀಳನಪುರ, ಮೈಸೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಮೊದಮೊದಲಿಗೆ ಅಂತರ್ಜಾಲದಲ್ಲಿ ಕನ್ನಡವನ್ನು ನೋಡೋದೇ ದುಸ್ತರ ಅನ್ನೋ ಪರಿಸ್ಥಿತಿ ಇದ್ದಾಗ, ಅಖಂಡ ಕನ್ನಡಪ್ರೇಮಿಗಳಾದ ನನ್ನಂತವರಿಗೆ, ಅಂತರ್ಜಾಲದಲ್ಲಿ ಕನ್ನಡ ಕೈಗೆಟುಕದ ಗಗನಕುಸುಮವೇ ಅನ್ನಿಸಿದ್ದು ಮಾತ್ರ ಸುಳ್ಳಲ್ಲ. ಕ್ರಮೇಣ, ಯುನಿಕೋಡ್ ಬಂದಮೇಲೇ, ಅಂತರ್ಜಾಲದಲ್ಲಿ ಕನ್ನಡ ತನ್ನ ಗಮವನ್ನು ಹರಡಿದ್ದು ಸಹ ಅಷ್ಟೇ ಸತ್ಯದ ವಿಷಯ.

ಆದರೆ, ಒಬ್ಬ ಓದುಗನಿಗೆ, ಅದರಲ್ಲೂ ಕನ್ನಡ ಓದುಗನಿಗೆ ತನಗೆ ಬೇಕಾದ ಎಲ್ಲಾ ಸರಕುಗಳು, ವಿಷ್ಯಗಳು, ಅಂತರ್ಜಾಲದಲ್ಲಿ ಇಂದಿನವರೆವಿಗೂ ಸಂಪೂರ್ಣವಾಗಿ ಸಿಕ್ಕಿಲ್ಲ. ಆದರೆ ಸಿಗುವುದೂ ಸಹ ದೂರದ ಮಾತಲ್ಲ. ಒಬ್ಬ ಓದುಗನ ಬಯಕೆಯನ್ನ ಅರ್ಥಮಾಡಿಕೊಳ್ಳುವಲ್ಲಿನ ನಿಮ್ಮ ಈ ಸಮೀಕ್ಷೇ ನಿಜಕ್ಕೂ ಶ್ಲಾಘನೀಯ!

Kannada online survey 2014 : My expectations Gireesha, Hyderabad

ಬಹುಶ: ಕನ್ನಡದ ಪ್ರತಿಯೊಬ್ಬ ಓದುಗನೂ ಸಹ, Cartoon Network, POGO, Discovery Channelಗಳು ಕನ್ನಡದಲ್ಲಿ ಬಂದ್ರೆ, ಎಷ್ಟ್ ಚೆಂದವೋ ಅಂತಾ ಅಂದುಕೊಳ್ಳುತ್ತಾನೆ; ಅದೇ ರೀತಿ, ಆ ಮಟ್ಟಿಗಿನ ಬರವಣಿಗೆ, ಲೇಖನ, ವಿಮರ್ಶೆಗಳು ಕನ್ನಡದ ಅಂತರ್ಜಾಲದ ಪುಟಗಳಿಂದ ಸಿಗಲಿ ಅಂತಾ ಬಯಸೋದು ಸಹ ಅಷ್ಟೇ ಸಹಜ.

ತನ್ನ ಸ್ವಂತ ಲಿಪಿಯಿಲ್ಲದ, ಕೆಲವೇ ಕೆಲವು ವರ್ಷಗಳಷ್ಟು ಮಾತ್ರವೇ ಹಳೆಯದಾದ ಆಂಗ್ಲಭಾಷೆ ಹೇಗೆ ಅಂತರ್ಜಾಲದಲ್ಲಿ ತನ್ನ ಕಬಂಧಬಾಹುವನ್ನು ಹರಡಿದೆಯೋ ಹಾಗೆಯೇ, ಸಾವಿರಾರು ವರ್ಷಗಳ ಇತಿಹಾಸವಿರುವ, ತನ್ನ ಸ್ವಂತ ಲಿಪಿಯಿರುವ, ಆಡಿದಂತೆ ಬರೆಯಬಹುದಾದ, ಬರೆದಂತೇ ಓದಬಹುದಾದ, ನನ್ನ ಕನ್ನಡವೂ ಎಲ್ಲಾ ವಿವಿಧ ಪ್ರಕಾರಗಳಲ್ಲಿ ತನ್ನ ಕಬಂಧಬಾಹುವನ್ನು ಅಂತರ್ಜಾಲದಲ್ಲಿ ಹರಡಲಿ ಅನ್ನೋದು ನನ್ನ ಬಯಕೆ. ಹೆಚ್ಚಿನ ಕನ್ನಡಿಗರು, ಈ ಕಾರ್ಯಕ್ಕೆ ಕೈ ಜೋಡಿಸಿದರೆ, ಇಂತಾ ಕೆಲಸಕ್ಕೆ ಪ್ರೋತ್ಸಾಹಿಸಿದರೆ, ಇದು ಅತಿಶಯೋಕ್ತಿಯ ವಿಷಯವಂತೂ ಅಲ್ಲಾ!

ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಕೃತಿಗಳು ಸಿಗಲಿ : ಕನ್ನಡದ ಕಾದಂಬರಿಗಳು ಡಿಜಿಟಲ್ ಜಗತ್ತಿನಲ್ಲಿ ದೊರಕುವಂತಾಗಬೇಕು. ಯಾಕೆಂದರೆ, ಎಲ್ಲರೂ ಮುದ್ರಿತ ಪುಸ್ತಕವನ್ನು ಖರೀದಿಸರು, ಆದ್ರೆ ಡಿಜಿಟಲ್ ಆವೃತ್ತಿ ದೊರೆತರೆ, ಕನ್ನಡ ಕಾದಂಬರಿಗಳು ಇನ್ನೂ ಹೆಚ್ಚು ಜನರನ್ನು ತಲುಪಲು ಸಾಧ್ಯ.

ಇತ್ತೀಚೆಗೆ, ಕನ್ನಡ ದಿನಪತ್ರಿಕೆಗಳು ಅಂತರ್ಜಾಲದಲ್ಲಿ ಸಿಗುತ್ತಿರುವುದು, ಹೊರನಾಡ ಕನ್ನಡಿಗರಾದ ನಮಗೆ ಖುಷಿಯ ವಿಷಯ. ಆದರೆ, ಅದೇ ರೀತಿ ವಾರಪತ್ರಿಕೆಗಳು, ಪಾಕ್ಷಿಕಗಳೂ ಸಹ ದೊರೆತರೆ ಇನ್ನೂ ಸಂತಸದ ವಿಷಯ. ಅಂತಹ ಪ್ರಯತ್ನಕ್ಕೆ ನಮ್ಮವರು ಕೈ ಹಾಕಬೇಕು, ಅಂತಹ ಪ್ರಯತ್ನಕ್ಕೆ ನಮ್ಮ ಸಹಕಾರವಂತೂ ಇದ್ದೇ ಇದೆ.

ನಾವು ಚಿಕ್ಕವರಿದ್ದಾಗ, ಮಕ್ಕಳಿಗೇ ಅಂತ ಮೀಸಲಾದ ಕೆಲ ಪುಸ್ತಕಗಳು, ವಾರ, ಪಾಕ್ಷಿಕ ಪತ್ರಿಕೆಗಳು ಸಿಗ್ತಾ ಇದ್ದವು. ಇಂಥವು ಕೂಡ ಅಂತರ್ಜಾದಲ್ಲಿ ದೊರೆತರೆ, ನಮ್ಮ ಮಕ್ಕಳಿಗೆ ಅವನ್ನು ನಾವ್ ಓದಿ ಹೇಳಿ, ಕನ್ನಡದ ಬಗೆಗಿನ ಅವರ ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗ್ತವೆ.

ಚಿತ್ರರಂಗ ಇತ್ತ ಗಮನ ಹರಿಸಲಿ : ಇನ್ನು ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಹಾಡುಗಳು, ಸಿನೆಮಾಗಳು ಕೂಡ ಅಂತರ್ಜಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಿಲ್ಲ. ಆದ್ರೆ, ಬೇರೆ ಭಾಷೆಗಳಲ್ಲಿ ಮಾತ್ರ ಧಾರಾಳವೆನಿಸುವಷ್ಟು ಇವೆ. ನಮ್ಮ ಚಿತ್ರರಂಗದ ಪ್ರಮುಖರು, ಇದರ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು.

ನಮ್ಮಲ್ಲಿನ ಹಂಪಿ, ಬಾದಾಮಿ, ಐಹೊಳೆ, ಸೋಮನಾಥಪುರ, ಮೈಸೂರು, ಶ್ರೀರಂಗಪಟ್ಟಣ, ರಂಗನತಿಟ್ಟು, ಪಶ್ಚಿಮಘಟ್ಟಗಳು, ವಿಜಯಪುರ, ಕಲಬುರ್ಗಿ, ಬಳ್ಳಾರಿ, ಗೋಕರ್ಣ, ಮುರ್ಡೇಶ್ವರ ಮುಂತಾದ ತಾಣಗಳ ಬಗ್ಗೆ ಸರಿಯಾದ ಸಮಗ್ರ ಕೈಪಿಡಿ ಎಲ್ಲೂ ಸಿಗುತ್ತಿಲ್ಲ. ಇಂತಹ ವಿಷಯಗಳ ಬಗ್ಗೆ ಅಂತರ್ಜಾಲದಲಿ ಸಿಕ್ಕರೆ ಒಳ್ಳೆಯದೇ.

ನೆಟ್ಟಿನಲ್ಲಿ ರೈತರಿಗೆ ಮಾಹಿತಿ : ರೈತ ದೇಶದ ಬೆನ್ನೆಲುಬು ನಿಜ. ಆದರೆ, ವ್ಯವಸಾಯ, ವ್ಯಯಸಾಯೋತ್ಪನ್ನಗಳು, ಸಾವಯವ ಕೃಷಿ, ಬೀಜ, ಗೊಬ್ಬರ, ಬೆಳೆ, ಹವಾಮಾನ, ಸಬ್ಸಿಡಿ, ಬೆಳೆಗಳ ಬಗ್ಗೆ ಸರಿಯಾದ ಮಾಹಿತಿ, ರೋಗಬರದ ನಿಟ್ಟಿನಲ್ಲಿ ಬೆಳೆಗಳ ರಕ್ಷಣೆ - ಇತ್ಯಾದಿ ವಿಷಯಗಳು ಅಂತರ್ಜಾಲದಲ್ಲಿ ಬಂದರೆ ರೈತರ ಮಕ್ಕಳಾದ ನಾವುಗಳು ಅದನ್ನು ಸದುಪಯೋಗಪಡಿಸಿಕೊಳ್ಳಬಹುದು.

ದೇಶವಿದೇಶಗಳಲ್ಲಿ ಎಲ್ಲೇ ಹೋದರೂ ನಮಗೆ ಆಂಧ್ರಶೈಲಿಯ ಭೋಜನ ಖಾತರಿ ಸಿಗುತ್ತೆ. ಆದ್ರೆ ಕನ್ನಡನಾಡಿನ ಆಹಾರ ಸಿಗೋದು ಕಷ್ಟಸಾಧ್ಯ. ಹಾಗಾಗಿ, ಹೊರನಾಡಿನ, ದೇಶವಿದೇಶಗಳಲ್ಲಿನ ಕನ್ನಡ ಸೊಗಡಿನ ಭೋಜನಗೃಹಗಳ ಬಗ್ಗೆ ಮಾಹಿತಿ ಸಿಕ್ಕರೆ ಒಳ್ಳೆಯದು.

ಕನ್ನಡ ಬೆಳೆಯಲು ಕನ್ನಡ ಆಪ್ಸ್ : ಇತ್ತೀಚಿನ ದಿನಗಳಲ್ಲಿ, ಮೊಬೈಲ್‍ನಲ್ಲಿ ಕನ್ನಡ ಬಳಸುವವರ ಸಂಖ್ಯೆ ಹೆಚ್ಚು ಕಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕನ್ನಡಕ್ಕೆ ಸಂಬಂಧಿಸಿದ Appsಗಳು ಮಾತ್ರ ಬೆರಳೆಣಿಕೆಯಷ್ಟೇ. ನಮ್ಮ ಸಿಲಿಕಾನ್ ಸಿಟಿಯ ತಂತ್ರಜ್ಞರು ಈ ತರಹದ ಒಳ್ಳೆಯ ಅಪ್ಲಿಕೇಷನ್‍ಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಾಲದಲ್ಲಿ ಅವು ದೊರೆಯುವಂತೆ ಮಾಡಿದರೆ, ಕನ್ನಡ ಇನ್ನೂ ಬೆಳೆಯುತ್ತೆ ಹಾಗೂ ಮುಂದೆಯೂ ಉಳಿಯುತ್ತೆ.

ಬಹುತೇಕ ಹೊರನಾಡಿನ ಕನ್ನಡಿಗರ ಮಕ್ಕಳ ಕಲಿಕಾ ಭಾಷೆ, ಅಲ್ಲಿನ ಸ್ಥಳೀಯ ಇಲ್ಲವೇ ಹಿಂದಿ ಮತ್ತು ಆಂಗ್ಲಭಾಷೆಯ ಮೇಲೆ ಅವಲಂಬಿತವಾಗಿರುತ್ತೆ. ನಾಳೆ ಆ ಮಕ್ಕಳು ಕನ್ನಡನಾಡಿಗೆ ಬಂದರೆ, ಕನ್ನಡ ಅಂದರೆ ಎನ್ನಡ, ಎಕ್ಕಡ ಅನ್ನುವ ಪರಿಸ್ಥಿತಿ ಇದೆ. ಹಾಗಾಗಿ, ಆ ಮಕ್ಕಳು ಅಂತರ್ಜಾಲದ ಮುಖೇನ ತಮ್ಮ ಮಾತೃಭಾಷೆಯನ್ನು ಇಷ್ಟದಿಂದ ಕಲಿಯುವಂಥ ವ್ಯವಸ್ಥೆ ಸಿಕ್ಕರೆ ಅದಕ್ಕಿಂತಾ ಒಳ್ಳೆಯ ಕೊಡುಗೆ ಇರದು ಅನ್ಸುತ್ತೆ ಆ ಮುಂದಿನ ಪೀಳಿಗೆಗೆ.

ಬಿಹಾರದಲ್ಲಿ ಮಾತ್ರ ತುಂಬಾ ಜನ ಪ್ರತಿ ಸಲ, IASನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗ್ತಾ ಇದಾರೆ. ಆದ್ರೆ, ನಮ್ಮ ಕನ್ನಡಿಗರು ಮಾತ್ರ ಬೆರಳೆಣಿಕೆಯಷ್ಟು. ಅಂತಹ ಸ್ಪರ್ಧಿಗಳಿಗೆ ಬೇಕಾದ ಆಕರ ಗ್ರಂಥಗಳು, ಪುಸ್ತಕ, ಪರಿಕರಗಳು ಒಂದೇ ಸೂರಿನಡಿಯಲ್ಲಿ ಅಂತರ್ಜಾಲದಲ್ಲಿ ಸಿಕ್ಕರೆ, ನಮ್ಮಲ್ಲೂ ಕೂಡ ತುಂಬಾ ಜನ ಒಳ್ಳೊಳ್ಳೇ ಆಫೀಸರ್ಸ್ ಆಗೋ ಚಾನ್ಸ್ ತುಂಬಾ ಇರುತ್ತೆ.

ಹೀಗೇ, ಕನ್ನಡದ ಅಂತರ್ಜಾಲದಲ್ಲಿ ಇನ್ನೂ ಬೇಕೂ ಅನ್ನೋದು ತುಂಬಾನೇ ಇವೆ. ನಮಗೆ ಬೇಕಿರುವುದು ಒಳ್ಳೆಯ, ಮೊಗೆದರೂ ಮುಗಿಯದ ಅಕ್ಷಯ ಕನ್ನಡ, ಮೊಗೆದರೂ ಅವುಗಳ ಸತ್ವ ತೀರದ ಕನ್ನಡ, ಮೊಗೆದರೂ ಉಕ್ಕುತ್ತಲೇ ಇರುವ ಚಿಲುಮೆಯಂತಾ ಕನ್ನಡ, ಮೊಗೆದರೂ ಮುಗಿದು ಹೋಗದಂತಹ ಚೈತನ್ಯದ ಕನ್ನಡ ಬೇಕು. [ಟ್ವಿಟ್ಟರ್ | ಫೇಸ್ ಬುಕ್]

English summary
What are my expectations from Kannada online? Results of the Survey conducted by No 1 Kannada portal http://kannada.oneindia.com/: Gireesha K.S. from Mysore, but staying in Hyderabad, wishes Kannada novels, cartoons, Movies, magazines, travel info, Apps, info about agriculture should be available in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X