ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಒಲವು, ನನ್ನ ನಿಲುವು ಶನಿವಾರದಿಂದ ಆರಂಭ

By Shami
|
Google Oneindia Kannada News

It can seem complicated to write for a readership that includes beginners to experts. I've done it for over two decades. It can seem like there's too much to consider to meet them all at their own level - Liz.

ನಮಸ್ಕಾರ,

ಸಾವಿರದ ಒಂಬೈನೂರ ಎಪ್ಪತ್ತೊಂಭತ್ತನೇ ಇಸವಿಯಿಂದ ಎರಡು ಸಾವಿರ ಇಸವಿಯವರೆಗೆ ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡಿದೆ. ಸಂಜೆ ಪತ್ರಿಕೆ, ಮಾಸಪತ್ರಿಕೆ, ವಾರಪತ್ರಿಕೆ, ದಿನಪತ್ರಿಕೆ, ದೀಪಾವಳಿ ವಿಶೇಷಾಂಕಗಳನ್ನು ಸಿದ್ಧಪಡಿಸುವಲ್ಲಿ ವರ್ಷಗಳು ಉರುಳಿಹೋದವು. 'ನಮ್ಮ' ಪತ್ರಿಕೆಯ ಮೂಲ ಸೌಕರ್ಯ, ಆಶಯ, ಆಶೋತ್ತರಗಳಿಗೆ ತಕ್ಕಂತೆ ವಿಷಯಗಳನ್ನು ಕಲೆ ಹಾಕುವುದು, ಪ್ರಕಟಣ ಸಾಮಗ್ರಿಗಳನ್ನು ಒಟ್ಟುಮಾಡುವುದು, ಪ್ರಕಟಿಸುವುದು ಕಾಯಕ. ಕಾಗದದ ದೋಣಿ ಮಾಡಿ ಸಮುದ್ರದಲ್ಲಿ ತೇಲಿ ಬಿಡುವುದು.

ಅಷ್ಟು ಮಾಡಿದರೆ ನನ್ನ ಕೆಲಸ ಮುಗಿಯಿತು. ಅದನ್ನು ಯಾರು ಓದಿದರೋ, ಹೇಗೆ ಸ್ವೀಕರಿಸಿದರೋ, ಪರಮಾತ್ಮನಿಗೇ ಗೊತ್ತು. ಯಾಕೆಂದರೆ, ಓದುಗನ ಪ್ರತಿಕ್ರಿಯೆ, ಅನಿಸಿಕೆ, ಸಲಹೆ, ಟೀಕೆ-ಟಿಪ್ಪಣಿಗಳು ನಮ್ಮ ಕೈಸೇರುತ್ತಿರಲಿಲ್ಲ. ನಮ್ಮ ಪಾಡಿಗೆ ನಾವು, ಓದುಗನ ಪಾಡಿಗೆ ಓದುಗ, ವೀಕ್ಷಕನ ಪಾಡಿಗೆ ವೀಕ್ಷಕ ಎನ್ನುವಂತಾಯಿತು. ಪರಿಸ್ಥಿತಿ ಈಗಲೂ ಹಾಗೇ ಇದೆಯೋ ಏನಾದರೂ ಬದಲಾಗುತ್ತಿದೆಯೋ ತಿಳಿಯೆ. ಮುದ್ರಣ, ಟಿವಿ ಮಾಧ್ಯಮದ ಪರಿಣಿತರೇ ಹೇಳಬೇಕು.

Kannada online survey 2014 : My expectations from editors desk

2000 ಇಸವಿಯಲ್ಲಿ ಅಂತರ್ಜಾಲ ಕ್ಷೇತ್ರ, ನ್ಯೂ ಮೀಡಿಯಾ ಅಂತಾರಲ್ಲ ಅದು, ಪ್ರವೇಶಿಸಿದ ಮೇಲೆ ಓದುಗ ಮತ್ತು ನನ್ನ ನಡುವೆ ನೇರ ಸಂವಹನ, ಸಂವಾದ ಸಾಧ್ಯವಾಗಲು ಶುರುವಾಯಿತು. ಸರ್, ನಿಮ್ಮ ವರದಿಯಲ್ಲಿ ಮಾಹಿತಿ ಅಪೂರ್ಣವಾಗಿದೆ ಎನ್ನುವುದು, ಕಾಗುಣಿತ ದೋಷ ಇದೆ ಅದನ್ನು ಸರಿಪಡಿಸಿ ಎಂದು ಅವರು ಈಮೇಲ್ ಹಾಕುವುದು, ಅದನ್ನು ನಾವು ತಿದ್ದುವುದು. ಹೀಗೆ.

ಕಾಲಕಾಲಕ್ಕೆ ಓದುಗನ ಅಪೇಕ್ಷೆಗಳು, ನಿರೀಕ್ಷೆಗಳು ಬದಲಾಗುತ್ತಿರುತ್ತವೆ. ಮಾಧ್ಯಮ ವೇದಿಕೆಗಳು ಇದನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಯಾರಿಗೂ ಪ್ರಯೋಜನವಿಲ್ಲ. " ನಾನು ಬರೆಯುತ್ತೇನೆ, ನೀನು ಬೇಕಿದ್ದರೆ ಓದು, ಇಲ್ಲದಿದ್ದರೆ ಮುಂದೆ ಹೋಗು" ಎಂಬ ಧೋರಣೆ ಬದಲಾಗತ್ತೆ, ಬದಲಾಗಬೇಕು. ಈಚೆಗೆ ಒಬ್ಬ ಓದುಗ ಒಂದು ಪತ್ರ ಬರೆದಿದ್ದ. ಅದು ಹೀಗಿದೆ.

"ಹಲೋ ಒನ್ಇಂಡಿಯಾ ಕನ್ನಡ, ನಾನು ಬೆಂಗಳೂರಿನಲ್ಲಿದ್ದೇನೆ. ಅಪಾರ್ಟ್ಮೆಂಟ್ ನಲ್ಲಿದ್ದೇನೆ. 130ರ ಪೈಕಿ 40 ಅಪಾರ್ಟ್ಮೆಂಟ್ಗಳಲ್ಲಿ ಮಾಲಿಕರೇ ವಾಸ ಮಾಡುತ್ತಿದ್ದಾರೆ. 56 ಅಪಾರ್ಟ್ಮೆಂಟ್ ಗಳಲ್ಲಿ ಬಾಡಿಗೆದಾರರು ಇದ್ದಾರೆ. ಉಳಿದವು ಖಾಲಿ ಇವೆ. ನಿವಾಸಿಗಳ ಕ್ಷೇಮಾಭ್ಯುದಯ ಸಂಘ ಕಟ್ಟುವ ಅಗತ್ಯ ಬಿದ್ದಿದೆ. ಮನೆ ಮಾಲಿಕರು, ಬಾಡಿಗೆದಾರರು, ಕಟ್ಟಡದ ಓನರ್ ಎಲ್ಲರೂ ಒಂದಾದರೆ ಮಾತ್ರ ಸಾಧ್ಯ. ಆದಾಗುತ್ತಿಲ್ಲ. ಏನು ಮಾಡಬೇಕು, ಸಲಹೆ ಕೊಡಿ..."

ಒಬ್ಬ ಓದುಗನ ಪ್ರತಿಕ್ರಿಯೆ ಸಾವಿರಾರು ಓದುಗರ ಪ್ರತಿಕ್ರಿಯೆ ಆಗಿರುತ್ತದೆ. ಲಕ್ಷಾಂತರ ಓದುಗರ ಧ್ವನಿ ಒಬ್ಬ ಓದುಗನ ಈಮೇಲಿನಲ್ಲಿ ಅನುರಣಿಸುತ್ತದೆ. ಎಲ್ಲೋ ಕುಳಿತು ಕೂಗುವವನ ಶಬ್ದಗಳನ್ನು ಆಲಿಸುವ ಮನಸ್ಥಿತಿ, ವೃತ್ತಿಪರತೆ, ತಾಳ್ಮೆ ಸಂಪಾದಕೀಯ ಬಳಗಕ್ಕೆ ಇರಬೇಕಾಗತ್ತೆ. ಅದು ಎಷ್ಟಿದ್ದರೂ ಸಾಲದು!

ಓದುಗರ ನಾಡಿ ಮಿಡಿತ ಅರಿಯಲು ನಮ್ಮ ಅಂತರ್ ಜಾಲ ತಾಣ ಅನೇಕ ಸಮೀಕ್ಷೆಗಳನ್ನು ಈ ಹಿಂದೆ ಮಾಡಿದ್ದಿದೆ. ಸಮೀಕ್ಷೆಗಳ ಫಲಿತಾಂಶದಲ್ಲಿ ಸಾರ್ವಕಾಲಿಕವಾದ ಅಂಶಗಳು ವ್ಯಕ್ತವಾಗಿವೆ. ಬದಲಾಗುತ್ತಿರುವ ಜೀವನ ಶೈಲಿಯಿಂದ ಉದ್ಭವವಾಗುವ ಹೊಸ ಹೊಸ ಅಪೇಕ್ಷೆಗಳು ಗೋಚರವಾಗಿವೆ. ಮಾಧ್ಯಮಗಳಿಂದ ಓದುಗ ಬಯಸುವ ಸಂಗತಿಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿರುವುದು ಸತ್ಯಸ್ಯ ಸತ್ಯ. ಇದೂ ಹೀಗೆ ನಡೆಯುತ್ತಿರುತ್ತದೆ.

ಈ ಬಾರಿಯ ಕನ್ನಡ ರಾಜ್ಯೋತ್ಸವ (59ನೇದು) ಸಂದರ್ಭಕ್ಕೆ ಮತ್ತೊಂದು ಸಮೀಕ್ಷೆ ಮಾಡುವ ಇಂಗಿತಕ್ಕೆ ನನ್ನ ಸಹೋದ್ಯೋಗಿಗಳು ಒಪ್ಪಿಗೆ ಸೂಚಿಸುವ ತಲೆ ಅಲ್ಲಾಡಿಸಿದರು. ಅದರ ಪ್ರಕಾರವಾಗಿ - ಕನ್ನಡ ಅಂತರ್ ಜಾಲದಿಂದ ನಾನು ಬಯಸುವುದು ಏನು? ನನಗೇನು ಬೇಕು, ನನಗೇನು ಇಷ್ಟ ಎಂಬ ಪ್ರಶ್ನಾವಳಿಯನ್ನು ನಾನಾ ವರ್ಗ, ನಾನಾ ಪ್ರದೇಶಗಳಿಂದ ಆಯ್ದ 30 ಮಂದಿಗೆ ಕಳಿಸಿದ್ದೇನೆ. ಅವರಿಂದ ಉತ್ತರಗಳು ಬರಲಾರಂಭಿಸಿವೆ. ಈ ಸರಣಿಯ ಲೇಖನಗಳು ನಾಳೆ, ಅಂದರೆ ನವೆಂಬರ್ 1ರ ಶನಿವಾರದಿಂದ ಬೆಳಕು ಕಾಣುತ್ತವೆ. ಓದಿ, ಪ್ರತಿಕ್ರಿಯಿಸುವ ಕಳಕಳಿ ನಿಮ್ಮದು.

English summary
What are my expectations from Kannada Online. Online users speak out. Kannada.oneindia.com survey - 2014 on the occasion of Karnataka formation day, 59th Kannada Rajyotsava. An Introduction to the survey by Shama Sundara S.K., Editor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X