ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸೆಗಳಿಗೆ ಕೊನೆಯೇ ಇಲ್ಲ - ಅಂಜಲಿ ರಾಮಣ್ಣ

By ಅಂಜಲಿ ರಾಮಣ್ಣ, ಬೆಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಅಂಜಲಿ ರಾಮಣ್ಣ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಕನ್ನಡ ಅಂತರ್ಜಾಲದಿಂದ ನಮ್ಮ ನಿರೀಕ್ಷೆಗಳೇನು ಎಂದು ಕೇಳಿಕೊಳ್ಳುವಷ್ಟು ಕನ್ನಡದ ಮನಸ್ಸು-ಮೆದುಳುಗಳು ಬದಲಾಗಿವೆ ಎನ್ನುವುದೇ ನನಗೆ ಅತೀ ಸಂತೋಷದ ವಿಷಯವಾಗಿದೆ. ಅಚ್ಚಾದ ಪುಸ್ತಕ, ದಿನಪತ್ರಿಕೆಗಳ ಮೇಲೆ ನನ್ನ ಹಿಂದಿನ ಒಲವು ಉಳಿಸಿಕೊಂಡೇ ಅಂತರ್ಜಾಲದ ವೆಬ್‍ಸೈಟುಗಳಲ್ಲಿ, ಬ್ಲಾಗುಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈಜುತ್ತಿರುತ್ತೇನೆ ಎನ್ನುವ ಹೆಮ್ಮೆಯೂ ಉಂಟು.

ಸ್ವ ಅನುಭವಕ್ಕೆ ಬಂದಂತೆ ವೆಬ್‍ಸೈಟುಗಳು ವ್ಯಾಪಾರೀಕರಣಕ್ಕೆ ಒಳಗಾಗಿವೆ ಮತ್ತು 'ಬಲಾಢ್ಯರು ಮಾತ್ರ ಉಳಿಯುತ್ತಾರೆ' ಎನ್ನುವ ನಿಯಮವನ್ನು ಕರಾರುವಕ್ಕಾಗಿ ಒಪ್ಪಿಕೊಂಡಿವೆ ಅನ್ನಿಸುತ್ತೆ. ರಾಜಕೀಯ ಸುದ್ಧಿಗಳು, ಮನೋರಂಜನೆ, ಗಂಭೀರ ಸಾಹಿತ್ಯ, ಬಿಸಿನೆಸ್ ಎಲ್ಲವನ್ನೂ ತೋಚಿದ ಪ್ರಮಾಣದಲ್ಲಿ ಒಂದೇ ಕುಕ್ಕರ್‍ನಲ್ಲಿ ಹಾಕಿ ಒಟ್ಟಿಗೆ ಬೇಯಿಸಿ ಕಲಸು ಮೇಲೋಗರದಂತೆ ಉಣಬಡಿಸುತ್ತಿವೆ. ಕಣ್ಣಿಗೆ ಗೋಜಲು, ಮನಸ್ಸಿಗೆ ನಿರಾಸಕ್ತಿ ಮತ್ತು ಬುದ್ಧಿಯ ಗತಿವಿರೋಧಿಯಂತೆ ಕಾಣುತ್ತವೆ.

Kannada online survey 2014 : My expectations - Anjali Ramanna, Bengaluru

ವೆಬ್‍ಸೈಟುಗಳು ನನ್ನ ನಿರೀಕ್ಷೆಯಂತೆ;

* ವೆಬ್‍ಸೈಟುಗಳು ಮೊದಲು ಚೊಕ್ಕವಾಗಿಯೂ, ಕಣ್ಣಿಗೆ ತ್ರಾಸು ನೀಡದಂತೆಯೂ ಕಾಣಬೇಕು. ಆಡಿಯೋ ಮತ್ತು ವಿಡಿಯೋ ಜಾಹೀರಾತುಗಳು ಬ್ರೌಸರ್‍ನ ತುದಿತುದಿಗೂ ಸಿಕ್ಕಿ ತಾವೇ ತಾವಾಗಿ ಓದುಗನ ಖಾಸಗೀತನದ ಮೇಲೆ ಅತ್ಯಾಚಾರ ಮಾಡುವುದು ತಪ್ಪಬೇಕು. ಆಗ ಸ್ವಲ್ಪ ನಿರಾಳವಾಗಿ ಪೇಜುಗಳ ಆಳಕ್ಕಿಳಿಯಬಹುದು. (ಮೊಬೈಲ್‍ನಲ್ಲಿ ಕನ್ನಡ ಬಳಸುವವರ ಅಳಲನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು.)

* ಒಂದು ವೆಬ್‍ಸೈಟ್ ಹೊಕ್ಕಿದರೆ ಎಲ್ಲಾ ಕ್ಷೇತ್ರಗಳ (ರಾಜಕೀಯ, ಸಾಹಿತ್ಯ, ಮನೋರಂಜನೆ) ಪ್ರಾಥಮಿಕ ವಿಷಯ, ವಿಚಾರಗಳೂ ದೊರೆಯುವಂತಿರಬೇಕು. ಹೆಚ್ಚಿನ ವಿವರ ಬೇಕಿದ್ದರೆ ಎಲ್ಲಿ ಲಭ್ಯವಿರುತ್ತದೆ ಎನ್ನುವ ಮಾಹಿತಿಯನ್ನೂ ಕೊಡುವಂತಾದರೆ ಸಂತೋಷ.

* ಕನ್ನಡ ನಿಘಂಟು ಮತ್ತು ಕನ್ನಡ ವ್ಯಾಕರಣದ ಮೂಲಭೂತ ಅನುಮಾನಗಳನ್ನು ಪರಿಹರಿಸುವ ಒಂದು ಪೇಜು ಇರಬೇಕು. ಹೊಸ ತಲೆಮಾರಿನ ಕನ್ನಡದ ಬಗೆಗೆ (ಬರೆಯಲು, ಓದಲು ಮತ್ತು ಮಾತನಾಡಲು) ಇರುವ ಕೀಳರಿಮೆ ಹೋಗಲಾಡಿಸಿ ವಿಶ್ವಾಸ ಬೆಳೆಸುವಂಥಾ ಒಂದಾದರೂ ಪ್ರಯತ್ನ ಇರಬೇಕು.

* ಹಳೆಯ ಬರಹಗಳನ್ನು ಓದಲು ಸುಲಭ ಮಾರ್ಗವಿರಬೇಕು ಮತ್ತು ಅವುಗಳ ಲಿಂಕ್ ಅನ್ನು ಒಂದೇ ಪೇಜಿನಲ್ಲಿ ವಿಷಯಕ್ಕನುಸಾರವಾಗಿ ಒದಗಿಸುವಂತಿದ್ದರೆ ಒಳಿತು. ಜೊತೆಗೆ, ಮುಖ್ಯವಾಹಿನಿಯ ಕೃಷಿಯ ಬಗೆಗೆ ಇರುವಂತೆಯೇ ಮನೆದೋಟಗಳಲ್ಲಿ, ಬಾಲ್ಕನಿ, ತಾರಸಿಗಳಲ್ಲಿ ಗಿಡ ಬೆಳೆಯುವವರ ಆಸಕ್ತಿಗೆ ಒಂದಷ್ಟು ಮಾಹಿತಿ ಒಂದೇ ಪೇಜಿನಲ್ಲಿ ದೊರೆತರೆ ಖುಷಿ. [ಗಗನಸಖಿ ಅಂಕಣ]

* ಪ್ರತೀ ವೆಬ್‍ಸೈಟಿನಲ್ಲೂ ಪ್ರತಿಕ್ರಿಯೆ ನೀಡಲು ಇಚ್ಛಿಸುವ ಓದುಗನಿಗೆ ಯಾವ ಸಾಧನದಿಂದಲಾದರೂ ಸರಿ ಸುಲಭವಾಗಿ ಕನ್ನಡ ಅಕ್ಷರಗಳನ್ನು ಬಳಸುವ ಅನುಕೂಲ ಮಾಡಿಕೊಟ್ಟಿರಬೇಕು.

* ಒಂದಷ್ಟು ಸರ್ಕಾರೀ ವೆಬ್‍ಸೈಟುಗಳು, ಎಲ್ಲಾ ಹೆಲ್ಪ್‌ಲೈನುಗಳು ಪರ್ಮನೆಂಟಾಗಿ ಒಂದು ಪೇಜಿನಲ್ಲಿ ಕುಳಿತ್ತಿದ್ದರೆ ಯಾವ ಹೊತ್ತಿನಲ್ಲೂ ಅವಶ್ಯಕತೆಯಿರುವವರಿಗೆ ಸಹಾಯವಾಗುತ್ತದೆ. ವಿದೇಶದಲ್ಲಿರುವ ಕನ್ನಡದವರಿಗೂ ಇಲ್ಲಿ ಅವರವರೂರಿನ ಮಾಹಿತಿ ಇರಬೇಕು ಎಂದು ನಾನು ಬಯಸಿದರೆ ಅದು ದುರಾಸೆಯಾಗಬಹುದೇ? ಗೊತ್ತಾಗುತ್ತಿಲ್ಲ.

* ಬ್ಲಾಗುಗಳಿಂದ ನಾನು ನಿರೀಕ್ಷಿಸುವುದು : ಹೆಚ್ಚಿನ ಬ್ಲಾಗುಗಳು ತಾಂತ್ರಿಕವಾಗಿ ಓದುಗ ಸ್ನೇಹಿಯಾಗಿಯೇ ಇವೆ. ವಿಷಯಗಳಲ್ಲಿ ಮಾತ್ರ ಏಕತಾನತೆ ಎದ್ದು ಕಾಣುತ್ತೆ. ಮನಸ್ಸಿಗೆ ತೋಚಿದ್ದನೆಲ್ಲಾ ಬರೆದು ಪ್ರಕಟಿಸುವುದೇ ಬ್ಲಾಗ್ ಎಂದು ತಿಳಿದುಕೊಂಡಿರುವ ಮನೋಸ್ಥಿತಿಯೂ ಬದಲಾಗಬೇಕು ಎನ್ನುವುದು ನನ್ನ ಆಸೆ. ನಮ್ಮದೇ ಕೆಲವು ಪ್ರಾದೇಶಿಕ ಭಾಷೆಗಳ ಮತ್ತು ಕೆಲವು ವಿದೇಶೀ ಭಾಷೆಗಳ ಬ್ಲಾಗುಗಳು ಗುಣಮಟ್ಟ ಕಾಯ್ತುಕೊಳ್ಳುತ್ತಿರುವುದು ಶ್ಲಾಘನೀಯ. ಕನ್ನಡದವರು ಹಾಗಾಗಲೆನ್ನುವ ಹಾರೈಕೆ.

* ಯಾವುದೇ ಸರ್ಚ್ ಎಂಜಿನ್‍ಗಳ ಮೂಲಕವೂ ಎಲ್ಲಾ ಬ್ಲಾಗುಗಳಿಗೂ ಹೋಗುವಂತಹ ಅನುಕೂಲವಿರಬೇಕು. ಸುಲಭದಲ್ಲಿ ನೆನಪಾಗುವ, ಮತ್ತು ಆಂಗ್ಲ ಭಾಷೆಯ ಅಕ್ಷರಗಳಲ್ಲಿ ಬರೆದಾಗಲೂ ಚಿಕ್ಕದಾಗಿಯೂ ಹಿತವಾಗಿಯೂ ಇರುವಂತಹ ಹೆಸರುಗಳನ್ನು ಬ್ಲಾಗ್‍ಗಳಿಗೆ ಇಟ್ಟುಕೊಳ್ಳುವುದು ಸೂಕ್ತವೇನೋ ಎನ್ನುವುದು ನನ್ನ ವೈಯಕ್ತಿಕ ಅನುಮಾನ!

* ಯಾವುದೋ ಒಂದು ತಾಣದಲ್ಲಿ ಎಲ್ಲಾ ಕನ್ನಡ ಬ್ಲಾಗುಗಳ ಮತ್ತು ವೆಬ್‍ಸೈಟುಗಳ ಎರಡು ಮೂರು ವಾಕ್ಯಗಳ ಪರಿಚಯ ಮತ್ತು ಲಿಂಕ್‍ಗಳು ಸಿಗುವಂತಿದ್ದರೆ ಅನುಕೂಲವೆನ್ನಿಸುತ್ತೆ. ವೆಬ್‍ಸೈಟು ಮತ್ತು ಬ್ಲಾಗುಗಳಿಂದ ಒಂದಷ್ಟು ಉತ್ತಮ ಅನುವಾದ ಸಾಹಿತ್ಯ/ಬರಹಗಳೂ ನನ್ನ ನಿರೀಕ್ಷೆ ಪಟ್ಟಿಯಲ್ಲಿದೆ.

* ಹೊಸ ತಲೆಮಾರಿನ ಕನ್ನಡ ಓದುಗ-ಬರಹಗಾರರಿಗೆ ನೆರವಾಗುವ ನಾಡು, ನುಡಿಯ ಪ್ರಾಥಮಿಕ ಪರಿಚಯಗಳು, ನಿಘಂಟು, ಪಾರಿಭಾಷಿಕ ಶಬ್ದಕೋಶ, ಸಮಾನಾರ್ಥ ಪದಕೋಶ, ಭಾಷಾ ಕಲಿಕೆಯ ಆನ್ ಲೈನ್ ಸಾಧನಗಳು, ಇವೆಲ್ಲ ಇರ್ಬೇಕು. ನನ್ನ ಮತ್ತು ಕನ್ನಡ ಆನ್ಲೈನ್ ಅನುಬಂಧಕ್ಕೆ, ಆಸೆಗಳಿಗೆ ಕೊನೆಯೇ ಇಲ್ಲ! ಧನ್ಯವಾದ. [ಸರಣಿಯ ಇತರ ಲೇಖನಗಳು]

English summary
Kannada online should connect with new age Kannada reader and writer. Web Portals and blogs should have permanent place to reflect collated information about land and language; English-Kannada, Kannada-Kannada dictionary, thesaurus, online language learning tools.. goes a long way in building language community on the web - My expectations from Kannada Online by, Anjali Ramanna, writer-advocate in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X