• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಯೊಂದೂ ಕನ್ನಡದಲ್ಲೇ ಸಿಗಲಿ - ಆನಂದ್ ಜಿ

By ಆನಂದ್ ಜಿ, ಬೆಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಆನಂದ್ ಜಿ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಇಂಗ್ಲಿಷಿನಲ್ಲಿ "ದಿ ಗಾಡ್ಸ್ ಮಸ್ಟ್ ಬಿ ಕ್ರೇಜಿ" ಎನ್ನುವ ಒಂದು ಚಲನಚಿತ್ರವಿದ್ದು ಇದರಲ್ಲಿ ಆಫ್ರಿಕಾದ ಕಗ್ಗಾಡಿನ ಒಂದು ಜನಾಂಗದ ಜನರು ಆಧುನಿಕ ಜಗತ್ತಿನ ಜನಗಳನ್ನು ಎದುರಾಗುವ, ಆಧುನಿಕತೆಯನ್ನು ಎದುರಾಗುವ ಸನ್ನಿವೇಶವಿದ್ದು, ಈ ಮುಖಾಮುಖಿಯನ್ನು ಬಹಳ ಹಾಸ್ಯಮಯವಾಗಿ ತೋರಿಸಲಾಗಿದೆ.

ಯಾವುದೇ ನಾಡು ಜಗತ್ತಿನ ಆಗುಹೋಗುಗಳನ್ನು ಅರಿಯುತ್ತಾ, ಹೊಸತನಕ್ಕೆ ತೆರೆದುಕೊಳ್ಳುತ್ತಾ, ಹೊಸತನವನ್ನು ಅರಿತು ಅಳವಡಿಸಿಕೊಳ್ಳುತ್ತಾ ಇದ್ದಲ್ಲಿ ಉಳಿದ ಜಗತ್ತಿನ ಜೊತೆ ಏಳಿಗೆಯ ಓಟದಲ್ಲಿ ಸಮನಾಗಿ ಓಡಲು ಸಾಧ್ಯ, ಇಲ್ಲದಿದ್ದರೆ ಆಧುನಿಕತೆಯಿಂದ ಹಿಂದುಳಿಯಬೇಕಾದೀತು. ಯಾವುದೇ ಜನಾಂಗ ತನ್ನ ಸುತ್ತಲಿನ ಜಗತ್ತಿಗೆ ತಕ್ಕಂತೆ ಹೊಂದಿಕೊಳ್ಳುತ್ತಿದ್ದ ಕಾಲ ಮುಗಿದು, ಇಡೀ ಜಗತ್ತಿನಲ್ಲಿ ಎಲ್ಲೇ, ಏನೇ ಬೆಳವಣಿಗೆಯಾದರೂ ಅದಕ್ಕೆ ತೆರೆದುಕೊಳ್ಳುವ ಮತ್ತು ಅದನ್ನು ತನ್ನ ಸಮಾಜದಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಇಂದು ನಮ್ಮೆದುರಿಗಿದೆ. ಕನ್ನಡ ಸಮಾಜ ಇಂತಹ ಎಲ್ಲಾ ಹೊಸತನವನ್ನು ಅರಿತು, ತನ್ನ ಅಳವಿಗೆ ಬಗ್ಗಿಸಿಕೊಂಡು ಬೇಕಿರುವುದನ್ನು ತನ್ನ ಸಮಾಜದಲ್ಲಿ ಅಳವಡಿಸಿಕೊಳ್ಳಬೇಕೆಂಬುದು ನನ್ನಾಸೆ. [ಹಿಂದಿ ಹೇರಿಕೆ ಕುರಿತು ಆನಂದ್ ಲೇಖನ]


ನಾವೇ ಕಂಡುಕೊಳ್ಳುವುದು, ನಾವೇ ಕಂಡುಹಿಡಿಯುವುದು, ನಾವು ಅಳವಡಿಸಿಕೊಳ್ಳುವುದು, ಜಗತ್ತಿಗೆಲ್ಲಾ ಮಾರುವುದು... ಒಂದು ಬಗೆಯ ಸಮಾಜ ವಿಕಾಸಕ್ಕೆ ಕಾರಣವಾದರೆ ಬೇರೆಯವರು ಕಂಡುಕೊಂಡಿದನ್ನು ಅಭ್ಯಸಿಸಿ ನಮಗೆ ಅನುಕೂಲವಾಗುವಂತೆ ಅಳವಡಿಸಿಕೊಳ್ಳುವುದು ಎರಡನೆಯದು. ಈ ಅಳವಡಿಸಿಕೊಳ್ಳುವಿಕೆಯ ಓಟ ಇಂದು ನಿನ್ನೆಯದ್ದಲ್ಲಾ. ಇದರಲ್ಲಿ ಮುಂದಿರುವವರು ಮೊದಲನೆಯದರಲ್ಲೂ ಮುಂದಾಗಬಲ್ಲರು.

ಬಳಸುವುದನ್ನೇ ಏಳಿಗೆ ಎಂದುಕೊಂಡಿದ್ದೇವೆ : ಮೊದಲಿಗೆ ಎಲ್ಲೋ ಯಾರೋ ಉಳುಮೆ ಮಾಡುವುದನ್ನು ಕಂಡುಕೊಂಡಿದ್ದರೆ ಮತ್ತು ಅದರಿಂದ ಲಾಭವಾಗುವಂತಿದ್ದರೆ ನಮ್ಮ ಸಮಾಜ ಚುರುಕಾಗಿ ಅದನ್ನು ತನ್ನದಾಗಿಸಿಕೊಳ್ಳಬೇಕು. 19 ಮತ್ತು 20ನೇ ಶತಮಾನಗಳಲ್ಲಿ ಶುರುವಾದ "ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರ"ಗಳಲ್ಲಿನ ಬೆಳವಣಿಗೆಗಳ ಅಂಬೆಗಾಲಿನ ಪಯಣದ ಜೊತೆಯಲ್ಲಿ ನಾವೂ ಹೆಜ್ಜೆ ಹಾಕುವಲ್ಲಿ ಬಲುಮಟ್ಟಿಗೆ ಎಡವಿದೆವು. ಹೀಗಾಗಿ ಕನ್ನಡದಲ್ಲಿ ಜ್ಞಾನ-ವಿಜ್ಞಾನದ ವಿಷಯಗಳು ಎಲ್ಲ ಜನರನ್ನೂ ತಾಕುವಂತೆ ಮೂಡಿಬರಲೇ ಇಲ್ಲ. ಈ ಕಾರಣದಿಂದಲೇ ಅಂತಹ ಕಲಿಕೆಗಳು ನಮ್ಮಿಂದ ದೂರವಾಗಿಯೇ ಉಳಿದವು. ಇದೇ ಕಾರಣದಿಂದಾಗಿ ಈ ನೆಲದಲ್ಲಿ ಹೊಸ ಕಂಡುಕೊಳ್ಳುವಿಕೆಗಳೂ ಅವಿಷ್ಕಾರಗಳೂ ಆಗಿದ್ದು ಕಡಿಮೆ ಎನ್ನಬಹುದು. ಹೀಗಾಗಿ ನಾವು ಬರೀ ಬಳಸುವವರಾಗಿದ್ದೇವೆ ಮತ್ತು ಹೀಗೆ ಬಳಸುವುದನ್ನೇ ಏಳಿಗೆ ಎಂದುಕೊಂಡಿದ್ದೇವೆ.

ಎಲ್ಲಾ ಹೊಸತನಗಳೂ ನಮಗೆ ಪಶ್ಚಿಮ ದೇಶಗಳಿಂದಲೇ ಬರಬೇಕೆಂಬ ಅಘೋಷಿತ ಕಾಯ್ದೆಯೊಂದು ಇದೆಯೇನೋ ಎನ್ನುವಷ್ಟರ ಮಟ್ಟಿಗೆ ಈ ಬೆಳವಣಿಗೆಗಳಾದವು ಎನ್ನುವುದು ನಿಜ. ವಿದ್ಯುತ್, ಆಟೋಮೊಬೈಲ್, ವಿದ್ಯುನ್ಮಾನ ಕ್ಷೇತ್ರಗಳಲ್ಲಿ ಹೊಸತನ್ನು ರೂಪಿಸುವಲ್ಲಿ ನಾವು ಹಿಂದೆ ಬಿದ್ದದ್ದು ಇಂದು ಅಂತರ್ಜಾಲಕ್ಕೂ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ನಾವು ಯೋಚಿಸಿದಾಗ ನಾವು "ಮಾಡುಗ"ರಾಗಿರದೆ ಬರೀ "ಬಳಸುಗ"ರಾಗಿದ್ದೀವಿ ಎನ್ನುವುದು ಎದ್ದು ಕಾಣುತ್ತದೆ. ಇದೇ ಕಾರಣದಿಂದಾಗಿ ನಾವು ಅಂತರ್ಜಾಲದಲ್ಲಿ ನಿಮಗೇನು ಬೇಕೆಂದರೆ ಅದರಲ್ಲಿನ ಉತ್ಪನ್ನಗಳನ್ನು ಬಳಸುವ ಬಗ್ಗೆ ಯೋಚಿಸುತ್ತೇವೆಯೇ ಹೊರತು ಅಂತರ್ಜಾಲ ಬಳಸಿ ಮಾಡುಗರ ಸಂಖ್ಯೆ ಹೆಚ್ಚಿಸುವ ಬಗ್ಗೆ ಯೋಚಿಸಲಾರೆವು. ನಮ್ಮ ಸಮಾಜಕ್ಕೆ ಅಂತರ್ಜಾಲದಿಂದ ಸಿಗಬೇಕಾಗಿರುವ ಲಾಭಗಳ ಪಟ್ಟಿಯಲ್ಲಿ ಈ ಮಾಡುಗತನವೇ ಮುಖ್ಯವಾದದ್ದೆಂದು ನನ್ನ ನಿಲುವು. [ಒತ್ತಡ ಹೇರಿದರೆ ಹಿಂದಿ ಕಲಿಯಲಾರೆ]

ಜ್ಞಾನ ವಿಜ್ಞಾನ ಕನ್ನಡದಲ್ಲಿ ಸಿಗಬೇಕು : ಬೇರೆಲ್ಲಾ ಕ್ಷೇತ್ರಗಳಲ್ಲೂ ನಾವು ಹೇಗೆ ಜಗತ್ತಿನ ಮೊದಲಸಾಲಿನ ಮಾಡುಗರಾಗಬೇಕೆಂದು ಬಯಸುತ್ತೇವೋ ಹಾಗೇ ಅಂತರ್ಜಾಲ ಕ್ಷೇತ್ರದಲ್ಲೂ ಆಗಬೇಕು. ಕನ್ನಡದಲ್ಲಿ ಜ್ಞಾನ ವಿಜ್ಞಾನ ತಂತ್ರಜ್ಞಾನಗಳು ಸಿಗಬೇಕು ಎನ್ನುವಾಗ ಅಂತರ್ಜಾಲದಲ್ಲೂ ಅದು ಸಿಗಬೇಕು ಎಂದರ್ಥ. ಅಂತರ್ಜಾಲವು ಹೆಚ್ಚು ಕನ್ನಡಿಗರಿಗೆ ಉಪಯುಕ್ತವಾಗಬೇಕಾದರೆ, ಇದು ಕನ್ನಡದಲ್ಲಿ ಎಲ್ಲಾ ಸರಕನ್ನೂ ಒದಗಿಸಿಕೊಡಬೇಕಾದುದೂ ಮುಖ್ಯ. ಹೀಗಾಗಿ ಕಥೆ, ಕವನ, ಲಘುಬರಹ, ಸುದ್ದಿ, ವಿಷ್ಲೇಷಣೆ, ಹಾಡು, ಮನರಂಜನೆ, ಮಾಹಿತಿಗಳು ಕನ್ನಡದಲ್ಲಿರುವುದರ ಜೊತೆಯಲ್ಲೇ ಅನ್ನದ, ಮೃಷ್ಟಾನ್ನದ ವಿದ್ಯೆಗಳನ್ನೂ ಜನರ ಕೈಗೆಟುಕಿಸಿಕೊಡುವ ಸಾಧನವಾಗಬೇಕು. ಈ ದೃಷ್ಟಿಯಲ್ಲಿ ನೋಡಿದರೆ ವಿಕಿಪೀಡಿಯಾ, ವಿಕ್ಷನರಿ, ಕಣಜ, ಹೊನಲು ಮೊದಲಾದ ತಾಣಗಳು ಮಹತ್ವದ್ದೆನ್ನಿಸುತ್ತವೆ.

ಇಂದು ನಮಗಿನ್ನೂ ಸಿಗುತ್ತಿಲ್ಲದ ಹಣಕಾಸು, ಮಾರುಕಟ್ಟೆ, ಉದ್ದಿಮೆಗಾರಿಕೆಯ ವಿಷಯಗಳೂ ಕನ್ನಡದಲ್ಲಿ ಸಿಗುವಂತಾಗಬೇಕು. ಮೊಬೈಲ್ ಮೂಲಕ ಅಂತರ್ಜಾಲ ಜನರಿಗೆ ಮತ್ತಷ್ಟು ಹತ್ತಿರವಾಗಿರುವಾಗ ದನಿ ಗುರುತಿಸುವ, ಓದನ್ನು ದನಿಗೆ ಬದಲಿಸುವ, ಮಾತನ್ನು ಅಕ್ಷರಕ್ಕಿಳಿಸುವ ತಂತ್ರಾಂಶಗಳು ಕನ್ನಡಿಗರಿಗೆ ತಮ್ಮ ನುಡಿಯಲ್ಲೇ ದಕ್ಕಬೇಕು. ಕೆಲವೇ ವರ್ಷಗಳಿಂದ ನಾಡಿನಲ್ಲಿ ಆಗಿರುವ ತಾಂತ್ರಿಕ ಬೆಳವಣಿಗೆಯ ವೇಗಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳದಿದ್ದರೆ ತಂತ್ರಜ್ಞಾನವನ್ನು ದಕ್ಕಿಸಿಕೊಳ್ಳದೆ ಬೆರಗುಗೊಂಡ "ಗಾಡ್ಸ್ ಮಸ್ಟ್ ಬಿ ಕ್ರೇಜಿ"ಯ ಜನರಂತೆ ಕನ್ನಡಿಗರೂ ಅಜ್ಞಾನದ ಕತ್ತಲೆಯಲ್ಲಿ ಅಲೆದಾಡಬೇಕಾಗುತ್ತದೆ.

ತಾಯ್ನುಡಿಯಾದ ಕನ್ನಡದಲ್ಲಿ ಪ್ರತಿಯೊಂದು ಸಿಗಲಿ : ಸರಳವಾಗಿ ಹೇಳಬೇಕೆಂದರೆ ಜರ್ಮನಿಯಲ್ಲಿ ಹುಟ್ಟಿದ ಮಗುವೊಂದಕ್ಕೆ, ಬಾಲ್ಯದಿಂದಲೂ ಅಂತರ್ಜಾಲದಲ್ಲಿ ತನ್ನ ತಾಯ್ನುಡಿಯಾದ ಜರ್ಮನ್ ಭಾಷೆಯಲ್ಲಿ ಏನೆಲ್ಲಾ ಸಿಗುತ್ತದೆಯೇ ಅವೆಲ್ಲವೂ ಕನ್ನಡದ ಕೂಸಿಗೂ ತನ್ನ ತಾಯ್ನುಡಿಯಾದ ಕನ್ನಡದಲ್ಲಿ ಸಿಗುವಂತಾಗಬೇಕು. ಇಂತಹ ಸಿಗುವಿಕೆಯು ಸಾಧ್ಯವಾಗಲೆಂಬುದು ನನ್ನಾಸೆ. ಈ ದಿಕ್ಕಿನಲ್ಲಿ ಅಂತರ್ಜಾಲದ ಬಳಕೆದಾರರೆಲ್ಲರಿಗೂ ತಮ್ಮ ಅರಿಮೆಯನ್ನು ಅಂತರ್ಜಾಲದಲ್ಲಿ, ಕನ್ನಡದಲ್ಲಿ ಕೂಡಿಡಬೇಕಾದ, ನಮ್ಮ ಸಮಾಜಕ್ಕೆ ಸಿಗುವಂತೆ ಮಾಡಬೇಕಾದ ಹೊಣೆಗಾರಿಕೆ ಇದೆ. ನಮ್ಮ ಮುಂದಿನ ಪೀಳಿಗೆಯನ್ನು ಕನ್ನಡದೊಂದಿಗೆ ಬೆಸೆದುಕೊಂಡಿರುವಂತೆ ಮಾಡಲು ಇದೂ ಕೂಡಾ ಮುಖ್ಯವಾದುದಾಗಿದೆ.

English summary
What are my expectations from Kannada online? Results of the Survey conducted by No 1 Kannada portal http://kannada.oneindia.com/: Anand G from Bengaluru says we Kannadigas should be ahead not just using online tools, but also creating. Anand expects everything should be available in Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X