ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾತ್ರೆ ಮುಗಿಸಿ ಹೊರಟು ನಿಂತ 'ಸುಳಿಮನೆ"ಯ ಹೃದಯವಂತ

By ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
|
Google Oneindia Kannada News

ಏಪ್ರಿಲ್ 30ರ ಮಧ್ನಾಹ್ನ, ಬೆಂಗಳೂರಿನಲ್ಲಿ ನಿಧನರಾದ ಮಧುಸೂದನ ಪೆಜತ್ತಾಯರು ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊಳೆ' ಎಂಬಲ್ಲಿದ್ದ ಸುಳಿಮನೆ' ಕಾಫಿ ಎಸ್ಟೇಟಿನ ಒಡೆಯರು. ಅದು ವೃತ್ತಿಯಾದರೆ ಅವರ ಪ್ರವೃತ್ತಿಗಳು ಹಲವು. ಅವರೊಂದು ಅನುಭವದ ಗಣಿ, ತಮ್ಮ ಅನುಭವಗಳನ್ನು, ತಾವು ಕಂಡುಂಡ ಬದುಕು, ವ್ಯಕ್ತಿ-ವ್ಯಕ್ತಿತ್ವಗಳನ್ನು ಸರಳಗನ್ನಡದಲ್ಲಿ ಬರೆಯುತ್ತಿದ್ದರು. ಎದುರಿಗೆ ಕುಳಿತಾಗ ಮನಮುಟ್ಟುವಂತೆ ಹೇಳುತ್ತಿದ್ದರು. ಈ ಅನುಭವಗಳನ್ನೇ ಕಾಗದದ ದೋಣಿ'ಯಾಗಿಸಿ ಅಕ್ಷರಸಾಗರದಲ್ಲಿ ತೇಲಿಬಿಟ್ಟವರು. ಕನ್ನಡ ಬಾರದ ಮಕ್ಕಳಿಗೂ ತಮ್ಮ ಬದುಕಿನ ಬಗ್ಗೆ ತಿಳಿಯಲೆಂದು ಕಾಗದದ ದೋಣಿ'ಯನ್ನು ಪೇಪರ್ ಬೋಟ್' ಎಂದು ಇಂಗ್ಲಿಷಿನಲ್ಲಿಯೂ ಬರೆದರು.

ತಮ್ಮ ಕೃಷಿಕ ಬದುಕಿನ ನೆನಪುಗಳನ್ನು ರೈತನಾಗುವ ಹಾದಿಯಲ್ಲಿ' , "ರೈತನೊಬ್ಬನ ನೆನಪುಗಳು' ಪುಸ್ತಕದಲ್ಲಿ ಹಿಡಿದಿಟ್ಟರು. ತಮ್ಮ ಮನೆಯಲ್ಲಿದ್ದ ಮುದ್ದಿನ ನಾಯಿ ರಕ್ಷಾ ಬಗ್ಗೆಯೂ ನಮ್ಮ ರಕ್ಷಕ ರಕ್ಷಾ' ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಿದ್ದರು. ಹಲವಾರು ದೈಹಿಕ ನೋವು ನ್ಯೂನತೆಗಳ ನಡುವೆಯೂ ನಾ. ಮೊಗಸಾಲೆಯವರ ಕೃತಿಯೊಂದನ್ನು ಇಂಗ್ಲಿಷಿಗೆ ಅನುವಾದಿಸಿದ್ದರು. ಮತ್ತೊಂದು ಪುಸ್ತಕದ ಅನುವಾದದಲ್ಲಿಯೂ ತೊಡಗಿಕೊಂಡಿದ್ದರು. [ಕಾಫಿ-ಕನ್ನಡಪ್ರೀತಿಯ ಇನ್ನೊಂದು ಕೊಂಡಿ ಕಳಚಿಕೊಂಡಿತು]

Madhusudana Pejattaya
ಪೆಜತ್ತಾಯರ ಬಗ್ಗೆ ಬರೆಯಲು ಹೊರಟರೆ ನೆನಪುಗಳು ಅಲ್ಲಿಂದಿಲ್ಲಿಗೆ ಸುತ್ತಿ ಕೊನೆಗೆ ದಟ್ಸ್ ಕನ್ನಡ' ಜಾಲತಾಣದ ಅಂಗಳಕ್ಕೆ (ಈಗ ಒನ್ ಇಂಡಿಯಾ.ಕಾಮ್) ಬಂದು ನಿಲ್ಲುತ್ತದೆ. ಹೌದು, ಈಗ ಅವರ ನಿಧನಕ್ಕೆ ಶೋಕಿಸುತ್ತಿರುವವರಲ್ಲಿ, ಭಾರತವಲ್ಲದೆ, ವಿವಿಧ ದೇಶಗಳಲ್ಲಿ ನೆಲೆಸಿರುವ ಹಲವಾರು ಕನ್ನಡಿಗರ ದೊಡ್ಡದೊಂದು ಬಳಗವೇ ಇದೆ. ಅವರಿಗೆಲ್ಲ ಮಧುಸೂದನ ಪೆಜತ್ತಾಯ' ಎಂಬ ಈ ಅದ್ಭುತ ವ್ಯಕ್ತಿಯ ಪರಿಚಯವಾಗಿದ್ದು ಈ ತಾಣದಿಂದಲೇ. ಅದು ಹೇಗೆಂದರೆ, ಲೇಖಕ ಶ್ರೀವತ್ಸ ಜೋಶಿಯವರ ಲೇಖನವೊಂದಕ್ಕೆ ಪೆಜತ್ತಾಯರು ಪ್ರತಿಕ್ರಿಯೆಯಾಗಿ ಸುಂದರವಾದೊಂದು ಪತ್ರವನ್ನು ಬರೆದಿದ್ದರು, ಅದನ್ನು ಜೋಶಿಯವರು ದಟ್ಸ್ ಕನ್ನಡದಲ್ಲಿ ಪ್ರಕಟಿಸಿದ್ದೇ ಮೊದಲು. ಅದಾದ ನಂತರ, ಪೆಜತ್ತಾಯರ ಸ್ನೇಹ ಬಳಗ ವೃದ್ಧಿಸುತ್ತಲೇ ಹೋಯಿತು.

ಅಪೂರ್ವ ಅನುಬಂಧ : ದಟ್ಸ್ ಕನ್ನಡದಲ್ಲಿ ಬರೆಯುತ್ತಿದ್ದ ನಾವೆಲ್ಲ ಅವರ ಮನೆಮಂದಿಯಂತಾದೆವು. ನಮ್ಮೆಲ್ಲರ ಲೇಖನಕ್ಕೆ ಅವರು ಸೊಗಸಾದ ಪ್ರತಿಕ್ರಿಯೆ ಬರೆಯುತ್ತಿದ್ದರು. ಪ್ರೋತ್ಸಾಹಿಸುತ್ತಿದ್ದರು. ಬರೆಯದಿದ್ದರೆ, ಯಾಕೆ ಬರೆದಿಲ್ಲ? ಈ ವಾರ ಬರೆಯದಿದ್ದರೆ ನಾನು ಸುಮ್ಮನಿರುವುದಿಲ್ಲ' ಎಂದು ಸ್ನೇಹದಲ್ಲಿ ಧಮಕಿ ಹಾಕುತ್ತಿದ್ದರು. ನಾನು ಆ ಸಮಯದಲ್ಲಿ, ತುಳಸಿವನ' ಅಂಕಣ ಬರೆಯುತ್ತಿದ್ದರಿಂದ, ನನ್ನನ್ನು ತುಳಸಿಯಮ್ಮಾ' ಎನ್ನುತ್ತಿದ್ದರು. ನನ್ನ ಗಂಡ, ಮಕ್ಕಳ ಬಗ್ಗೆ, ರಾಯರು ಕುಶಲವೇ?' ನನ್ನ ಮೊಮ್ಮಕ್ಕಳು ಹೇಗಿದ್ದಾರೆ?' ಎಂದು ವಿಚಾರಿಸಿಕೊಳ್ಳುತ್ತಿದ್ದರು. ಅದು ಹೇಗೋ ಏನೋ! ಅತಿ ಅಲ್ಪಕಾಲದಲ್ಲಿಯೇ ಅವರು ನಮ್ಮೆಲ್ಲರೊಂದಿಗೂ ಒಂದು ಅಪೂರ್ವ ಅನುಬಂಧವನ್ನು ಬೆಸೆದುಕೊಂಡುಬಿಟ್ಟರು.

ಪ್ರತಿ ಬಾರಿ ನಮ್ಮ ಭಾರತ ಪ್ರವಾಸದಲ್ಲಿ ಒಂದು ದಿನ ಅವರ ಭೇಟಿಗೆ ಮೀಸಲಾಗಿರುತ್ತಿತ್ತು. ತಮ್ಮದೇ ಕಾರಿನಲ್ಲಿ ಬಂದು ಮನೆಗೆ ಕರೆದೊಯ್ಯುತ್ತಿದ್ದರು. ಸಿಹಿ ತಿನ್ನಿಸುತ್ತಿದ್ದರು. ಪೆಜತ್ತಾಯರು ತಮ್ಮ ಯಜಮಾನಿ' ಎನ್ನುತ್ತಿದ್ದ ಅವರ ಮಡದಿ ದಿವಂಗತ ಸರೋಜಮ್ಮನವರು, ಮಕ್ಕಳಾದ ರಾಧಿಕಾ, ರಚನಾ, ಎಲ್ಲರೊಂದಿಗಿನ ಒಡನಾಟದಲ್ಲಿ ಒಂದು ದಿನ ಸುಖವಾಗಿ ಕಳೆದುಹೋಗುತ್ತಿತ್ತು. ಅವರ ಭೇಟಿಯ ಖುಷಿಯಲ್ಲಿ ನಾವೂ ಮತ್ತೆ ಅಮೆರಿಕಕ್ಕೆ ಹಿಂತಿರುಗುತ್ತಿದ್ದೆವು. ಇಮೈಲುಗಳ ಮೂಲಕ ಪತ್ರ ಮೈತ್ರಿ ನಿರಂತರವಾಗಿರುತ್ತಿತ್ತು. ಈ ಅವಧಿಯಲ್ಲಿಯೇ ಪೆಜತ್ತಾಯರಿಗೆ ಅರವತ್ತು ತುಂಬಿ, ಷಷ್ಠ್ಯಬ್ಧಿ ಶಾಂತಿ' ಮಾಡಿಕೊಂಡರು. ಅವರ ಕುಟುಂಬದಲ್ಲಿ ಕೆಲವು ಶುಭಕಾರ್ಯಗಳಾದವು. ಕೆಲವು ಸಾವು-ನೋವುಗಳೂ ಆದವು. ಅವೆಲ್ಲವೂ ಅವರ ಪತ್ರಗಳ ಮೂಲಕ ನನ್ನೊಳಗೆ ಇಳಿಯುತ್ತಿತ್ತು. ಪೆಜತ್ತಾಯರು ಈ ರೀತಿ ಎಲ್ಲೋ ಇದ್ದರೂ, ನಮ್ಮೆಲ್ಲರೊಂದಿಗೂ ಇದ್ದರು.

ಬದುಕು ಹೀಗೆ ನಿರಾತಂಕವಾಗಿ ಸಾಗುತ್ತಿರುತ್ತದೆ ಎಂದು ನಾವಂದುಕೊಳ್ಳುತ್ತೇವೆ, ಆದರೆ ಅದು ಹಾಗಿಲ್ಲ. ಒಂದೂವರೆ ವರ್ಷಗಳ ಹಿಂದೆ ಸದಾ ಹಸನ್ಮುಖಿಯಾಗಿರುತ್ತಿದ್ದ ಸರೋಜಮ್ಮನವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೊಳಗಾಗಿ ತೀರಿಕೊಂಡರು. ಅದಾಗಲೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದು, ಹಲವಾರು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದ ಪೆಜತ್ತಾಯರು ಈ ಆಘಾತವನ್ನು ಹೇಗೆ ಎದುರಿಸುವರೋ ಎಂದು ನಾನು ಹೆದರಿದ್ದೆ. ಆದರೆ, ನನ್ನ ಈ ಅಂಜಿಕೆಯನ್ನು ಸುಳ್ಳಾಗಿಸುವಂತೆ, ಪೆಜತ್ತಾಯರು ಚೇತರಿಸಿಕೊಂಡರು. ಪ್ರತಿ ಪತ್ರದಲ್ಲೂ ನಾನು ಚೆನ್ನಾಗಿಯೇ ಇದ್ದೇನೆ. ನಾನು ನಗುತ್ತಲೇ ಇರುತ್ತೇನೆ. ನಾನು ಸಾವಿರವರ್ಷ ಬದುಕುತ್ತೇನೆ.' ಎಂದು ನನ್ನ ಅಳುಕನ್ನು ಮರೆಸಿ, ಖುಷಿ ಉಕ್ಕಿಸುವಂತೆ ಬರೆಯುತ್ತಿದ್ದರು.

Madhusudana Pejattaya
ನೆನಪಿಟ್ಟುಕೊಂಡು ಆಗಬೇಕಾದ್ದೇನು : ಕೆಲವು ತಿಂಗಳುಗಳ ಹಿಂದೆ ನಾನು ಬೆಂಗಳೂರಿನಲ್ಲಿಯೇ ಇದ್ದೆ. ಆಗ ಅವರಿಗೆ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್' ಇರುವುದು ಪತ್ತೆಯಾಯಿತು. ಆಗ ಎದೆಗುಂದಿದ್ದ ನನಗೆ ಧೈರ್ಯ ಹೇಳಿದ್ದು ಪೆಜತ್ತಾಯರೇ. ಹೀಗೆ ಪೆಜತ್ತಾಯರು ನಗುತ್ತಾ, ನಗಿಸುತ್ತಾ, ಅವರೇ ಹಲವಾರು ಬಾರಿ ಹೇಳುತ್ತಿದ್ದಂತೆ, ಸಾವಿರ ವರ್ಷಗಳು ನಮ್ಮೊಂದಿಗೆ ಇದ್ದುಬಿಡಲಿ ಎಂದೇ ಹೃದಯ ಹಾರೈಸುತ್ತಿತ್ತು. ನಮ್ಮೆಲ್ಲರ ನಂಬಿಕೆಗಳನ್ನು ಸುಳ್ಳು ಮಾಡಿ ಪೆಜತ್ತಾಯರು, ನಿನ್ನೆ ತಮ್ಮ ಪಯಣ ಮುಗಿಸಿ ಕಾಣದ ಲೋಕಕ್ಕೆ ನಡೆದೇಬಿಟ್ಟರು.

ಆದರೆ, ಹಲವಾರು ಸಾವುಗಳಲ್ಲಿ ಆಗಿರುವಂತೆ, ನನಗೆ ಈ ಬಾರಿ ಹಳಹಳಿಕೆಯಿಲ್ಲ. ಅವರೊಂದಿಗೆ ನಾನು ಹೆಚ್ಚುಕಮ್ಮಿ ಅವರ ಕೊನೆಯ ದಿನಗಳ ತನಕ ನಿರಂತರ ಸಂಪರ್ಕದಲ್ಲಿದ್ದೆ. ಇ-ಪತ್ರಗಳಲ್ಲದೆ, ಈಚೆಗೆ ಫೇಸ್‍ಬುಕ್ಕಿನಲ್ಲಿಯೂ ಸಕ್ರಿಯರಾಗಿರುತ್ತಿದ್ದರು. ಕೆಲದಿನಗಳ ಹಿಂದೆ, ನಾನು ದಿನಸಿ ಖರೀದಿಯಲ್ಲಿ ತೊಡಗಿದ್ದೆ. ಫೇಸ್‍ಬುಕ್ಕಿನ ಕಿಟಕಿಯಿಂದ, ಅಮ್ಮಾ, ಏನು ಮಾಡುತ್ತಿದ್ದೀರಿ?' ಪೆಜತ್ತಾಯರ ಸಂದೇಶ ತೇಲಿಬಂದಿತು. ನಮಗೆ ಮಧ್ಯಾಹ್ನವಾದರೆ, ಪೆಜತ್ತಾಯರಿಗೆ ನಡುರಾತ್ರಿ. ಇದೇನು ಈ ಹೊತ್ತಿನಲ್ಲಿ ಎದ್ದಿದ್ದಾರೆ ಅನ್ನಿಸಿ, ನಾನು ದಿನಸಿ ಖರೀದಿಸುತ್ತಿದ್ದೇನೆ. ನೀವೇಕೆ ಮಲಗಿಲ್ಲ?' ನನ್ನ ಉತ್ತರ. ಹಾಗಾದರೆ ನನಗೂ 10 ಪೌಂಡ್ ಸ್ವಿಸ್ ಚಾಕೊಲೇಟ್ ಖರೀದಿಸಿ.' ಎಂದರು. ನಾನು ಹತ್ತು ಸಾಧ್ಯವಿಲ್ಲ, ನಿಮಗೆ ಮೊದಲೇ ಆರೋಗ್ಯ ಸರಿ ಇಲ್ಲ, ಐದಾದರೆ ಓಕೆ.' ಎಂದೆ. ಸರಿ, ಅದನ್ನೇ ಇಲ್ಲಿಗೆ ಕಳಿಸಿ, ಹಸಿವಾಗುತ್ತಿದೆ.' ಎಂದರು. ಈ ನಗೆಚಾಟಿಕೆ ನಡೆಯುತ್ತಿರುವಾಗಲೇ, ಗಂಭೀರವಾಗಿ, ತಾಯೆ, ನಾನು ಕ್ಯಾನ್ಸರ್ ಬಗ್ಗೆ ಮರೆತು ಸುಖವಾಗಿದ್ದೇನೆ.' ಎಂದು ಮತ್ತೊಂದು ಸಂದೇಶ ಕಳಿಸಿದರು. ನಾನೆಂದೆ, ಹೌದಲ್ಲವೇ, ಮರೆಯಬೇಕಾದ್ದೆ ಅದು, ನೆನಪಿಟ್ಟುಕೊಂಡು ಆಗಬೇಕಾದ್ದೇನು?'. ಅದನ್ನು ಮರೆಸುವಂತೆ ಮತ್ತೇನೋ ಮಾತಾಡಿದರು. ಇನ್ನೇನೋ ಹೇಳಿ ನಗಿಸಿದರು.

ಈ ರೀತಿಯ ಅರ್ಥವಿರದ-ಸ್ವಾರ್ಥವಿರದ ಚುಟುಕು ಸಂಭಾಷಣೆಗಳು ಆಗೀಗ ನಮ್ಮೊಳಗೆ ನಡೆಯುತ್ತಲೇ ಇದ್ದವು. ಪೆಜತ್ತಾಯರು ಇನ್ನು ಹೆಚ್ಚು ದಿನ ನಮ್ಮೊಂದಿಗಿರುವುದಿಲ್ಲವೆಂಬ ಭಾವ ನನ್ನನ್ನು ಒಳಗೇ ಕಾಡುತ್ತಿದ್ದುದರಿಂದಲೋ ಅವರ ಪತ್ರಗಳಿಗೆ, ಸಂದೇಶಗಳಿಗೆ ಮರುಕ್ಷಣವೇ ಉತ್ತರಿಸುತ್ತಿದ್ದೆ. ಅವರಿಗೆ ಅದರಿಂದ ಸಂತೋಷವಾಗುತ್ತಿತ್ತು. ನನಗೊಂದು ಸಣ್ಣ ಸಮಾಧಾನ.

ರೊಟ್ಟಿಗಳು ಮತ್ತು ಪುಸ್ತಕಗಳು : ಪೆಜತ್ತಾಯರ ಮನೆ ದೂರದ ಕೋರಮಂಗಲದಲ್ಲಿದ್ದರಿಂದ, ಅಲ್ಲಿಯವರೆಗೆ ನನ್ನನ್ನು ಹೋಗಲುಬಿಡದೆ ತಾವೇ ಡ್ರೈವರೊಂದಿಗೆ ಕಾರಿನಲ್ಲಿ ಬಂದು ಭೇಟಿಯಾಗುತ್ತಿದ್ದರು. ನಂತರದ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣವಾಗುತ್ತಾ ಹೋದ ನಂತರವಷ್ಟೇ ಅವರ ಮನೆಯಲ್ಲಿ ಭೇಟಿಯಾಗುತ್ತಿದ್ದೆ. ಗಾಂಧಿಬಜಾರಿನ ಅಂಕಿತ ಪುಸ್ತಕ'ದ ಸನಿಹವೊ, ಅಥವಾ ರೋಟಿ ಘರ್' ಎದುರೋ ಕಾರು ನಿಲ್ಲಿಸಿ ಕಾದಿರುತ್ತಿದ್ದರು.

ಇಂಥಹದೇ ಒಂದು ಭೇಟಿಯಲ್ಲಿ, ಪೆಜತ್ತಾಯರು ನನಗೆ ಕರೆ ಮಾಡಿ ಅಲ್ಲಿ ಕಾಯುತ್ತಿದ್ದರು. ಆ ಬಾರಿಯ ಭಾರತ ಪ್ರವಾಸದಲ್ಲಿ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಕಳೆದುಹೋಗಿ, ಅವರನ್ನು ಭೇಟಿಯಾಗಲು ಸಮಯವಾಗದೆ ಹಿಂದಿರುಗುವ ದಿನವೇ ಬಂದಾಗಿತ್ತು. ಅಂದು ರಾತ್ರಿಯ ವಿಮಾನಕ್ಕೆ ನಾನು ಅಮೆರಿಕಕ್ಕೆ ಮರಳುವುದಿತ್ತು. ಅವರ ಕರೆ ಬಂದೊಡನೆ ನಾನಲ್ಲಿಗೆ ಹೋದೆ, ನನ್ನೊಂದಿಗೆ ಕೆಲವು ನಿಮಿಷಗಳು ಮಾತಾಡಿದ ನಂತರ ಕಾರಿನಿಂದ ದೊಡ್ಡದೊಂದು ಪ್ಯಾಕೆಟ್ಟನ್ನು ತೆಗೆದರು. ಪೆಜತ್ತಾಯರು ಅದೆಲ್ಲವನ್ನೂ ಜಯನಗರದ ಯಾವುದೋ ಅಂಗಡಿಯಿಂದ ನನಗಾಗಿ ಖರೀದಿಸಿ ತಂದಿದ್ದರು.

ಆಗಷ್ಟೇ ತಯಾರಿಸಿದಂತಿದ್ದ ಬಿಸಿಬಿಸಿ ರೊಟ್ಟಿಗಳು, ಚಟ್ನಿ, ರಂಜಕ, ಬಾಳಕ ಮೆಣಸಿನಕಾಯಿ, ಉತ್ತರ ಕರ್ನಾಟಕದ ಇನ್ನಿತರ ವಿಶೇಷ ತಿನಿಸುಗಳು. ಜೊತೆಗೊಂದಿಷ್ಟು ಅವರಿಗಿಷ್ಟವಾಗಿ, ನನಗೂ ಇಷ್ಟವಾಗಬಹುದೆಂದು ತಂದಿದ್ದ ಪುಸ್ತಕಗಳು! ಅದಾಗಲೇ ನನ್ನ ಲಗ್ಗೇಜುಗಳು ತುಂಬಿ ಹೊರಡಲು ಅಣಿಯಾಗಿದ್ದರಿಂದ, ನನ್ನ ಸೂಟ್‍ಕೇಸಿನಲ್ಲಿ ಅವುಗಳಿಗೆ ಜಾಗವಿರಲಿಲ್ಲ, ಅವರಿಗೆ ಅದನ್ನೇ ತಿಳಿಸಿದೆ. ಅವರು ಅದನ್ನು ಒಪ್ಪುವ ಹಾಗಿರಲಿಲ್ಲ. ಅದನ್ನು ತೆಗೆದುಕೊಂಡು ಹೋಗಿ ಮಕ್ಕಳೊಂದಿಗೆ ನಾನು ತಿನ್ನಲೇಬೇಕೆಂದು ಆಗ್ರಹಿಸಿದ್ದರು.

ಕರಗದ ಬುತ್ತಿ : ಆ ಪಿತೃವಾತ್ಸಲ್ಯ ನನ್ನನ್ನು ಕಟ್ಟಿಹಾಕಿತು, ಅದನ್ನೂ ಅವರಿಗೆ ಹೇಳಿಯೇಬಿಟ್ಟೆ: ಈ ಬಿರುಬಿಸಿಲಿನಲ್ಲಿ ಇದನ್ನೆಲ್ಲಾ ಹೊತ್ತುಕೊಂಡು ಬಂದು, ತಂದೆಯಂತೆ ಇಲ್ಲಿ ನಿಂತು ಕಾಯುತ್ತಿದ್ದೀರಲ್ಲಾ? ಇದಾವ ಜನ್ಮದ ಅನುಬಂಧ?' ನನ್ನ ಕಣ್ಣಲ್ಲಿ ನೀರುಕ್ಕಿತು. ಅವರೂ ಭಾವಪರವಶರಾದರು. ತಾಯೆ, ನಿಮ್ಮ ಮಾತಿನಿಂದ ಎಂದೂ ಅಳದ ನನ್ನನ್ನೂ ಅಳಿಸಿಬಿಟ್ಟಿರಿ.' ಎಂದರು.

ಈ ಪ್ರಸಂಗವನ್ನು ಅವರು ನಮ್ಮ ಮುಂದಿನ ಭೇಟಿಗಳಲ್ಲಿಯೂ ನೆನಪು ಮಾಡಿಕೊಳ್ಳುತ್ತಿದ್ದರು. ಅವರು ಕಟ್ಟಿಕೊಟ್ಟ ತಿಂಡಿಗಳನ್ನು ನಾನು ಇಲ್ಲಿಗೆ ತಂದೆ. ಫ್ರಿಜ್ಜಿನಲ್ಲಿಟ್ಟುಕೊಂಡು, ಅವರ ನೆನಪುಗಳೊಂದಿಗೆ ನೆಂಚಿಕೊಳ್ಳುತ್ತಾ, ವಾರ ಪೂರ್ತಿ ತಿಂದೆ. ಈಗಲೂ ಅಷ್ಟೇ, ಪೆಜತ್ತಾಯರು ಕಟ್ಟಿಕೊಟ್ಟ ನೆನಪುಗಳ ಬುತ್ತಿಯನ್ನು ನನ್ನ ಜೀವನದುದ್ದಕ್ಕೂ ಸವಿಯುತ್ತಲೇ ಇರುತ್ತೇನೆ.

ಪೆಜತ್ತಾಯರದು ತುಂಬು ಬದುಕು. ಅಂದುಕೊಂಡಿದ್ದೆಲ್ಲವನ್ನೂ ಆಗಿಸಿಕೊಂಡ ಸಾರ್ಥಕ ಬದುಕು. ಪೆಜತ್ತಾಯರು ಎಂದೂ ನೋವು ಹೇಳಿಕೊಂಡವರಲ್ಲ, ಗೋಳು ತೋಡಿಕೊಂಡವರಲ್ಲ, ಅವರ ನಿಧನಕ್ಕೆ ಶೋಕಿಸುವುದು ಸರಿಯಲ್ಲ. ಅವರನ್ನು ಸಂತೋಷದಿಂದ ಕಳಿಸಿಕೊಡಬೇಕು ಎಂದುಕೊಳ್ಳುತ್ತೇನೆ. ಆದರೆ ನೊಂದ ಮನಸ್ಸಿಗೆಲ್ಲಿ ಅರ್ಥವಾಗಬೇಕು ಈ ಒಣವೇದಾಂತ? ಕಣ್ಣುಗಳು ಕಂಬನಿಗರೆಯುತ್ತಲೇ ಇವೆ. ಕಣ್ಣೀರು ತುಂಬಿಕೊಂಡೇ ನನ್ನ ಕೆಲವು ನೆನಪುಗಳನ್ನು ಇಲ್ಲಿ ಅಕ್ಷರವಾಗಿಸಿದ್ದೇನೆ.

ಪೆಜತ್ತಾಯರೇ, ಹೋಗಿಬನ್ನಿ. ತೀರ್ಥರೂಪ ಸಮಾನರಾದ ನಿಮಗೆ ನನ್ನ ನಮಸ್ಕಾರಗಳು. ಅಲ್ಲಿಂದಲೇ ನನ್ನನ್ನು ಹರಸಿರಿ!

English summary
You were my best friend, a gentle, kind and generous soul, I will always remember the sacrifices you've made to keep everyone happy. The unconditional love you gave, you fought to stay alive, you could have given up long ago, but your love for us made you stay and fight for your life - Triveni Sreenivasa Rao, in Chicago, a long time friend of email friend pays glowing tributes to Madhusudana Pejattaya, fatherly figure, Coffee planter and a Kannada writer, passed away in Bengaluru. Neither the cancer, nor death of pet dog Raksha, nor untimely death of his beloved wife Sarojamma stopped him from chasing his jest for life, Love all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X