• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರವಣಬೆಳಗೊಳ ಸಮ್ಮೇಳನ: ಅಂಕಿಅಂಶಗಳಲ್ಲಿ ಸಾರಾಂಶ

By ಶಾಮ್
|

ಶ್ರವಣಬೆಳಗೊಳ, ಫೆ 4 : ಎಂಭತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುವ ಜವಾಬ್ದಾರಿಯನ್ನು ಈ ಬಾರಿ ಯಾರು ನಿಭಾಯಿಸಬೇಕು ಎಂಬ ಜಿಜ್ಞಾಸೆಗೆ ಕಡೆಗೂ ಒಮ್ಮತ ಮೂಡಿದ್ದು ನವೆಂಬರ್ 25ರಂದು. ಹಾವೇರಿ, ರಾಣೆಬೆನ್ನೂರು ಮತ್ತು ಹಾಸನ - ಈ 3 ಜಿಲ್ಲೆಗಳ ನಡುವೆ ಭಾರೀ ಪೈಪೋಟಿ ಇತ್ತು. ಅಂತಿಮವಾಗಿ ಹಾಸನ ಗೆಲ್ತು, ಶ್ರವಣಬೆಳಗೊಳ ನಕ್ಕಿತು.

ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗಿ 2014-15ಕ್ಕೆ 100 ವರ್ಷ ತುಂಬಿತು. ಈ ಮುಂಚೆ 1967ರಲ್ಲಿ ಶ್ರವಣಬೆಳಗೊಳದಲ್ಲಿ 46ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಆ ಸಮ್ಮೇಳನದ ಅಧ್ಯಕ್ಷರಾಗಿದ್ದವರು, ಪ್ರಾಕೃತ ಮತ್ತು ಜೈನ ಸಿದ್ಧಾಂತದ ವಿದ್ವಾಂಸ ಡಾ. ಆದಿನಾಥ ನೇಮಿನಾಥ ಉಪಾಧ್ಯೆ.

ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚನೆಗೊಂಡು ನೊಂದಣಿ ಪ್ರಕ್ರಿಯೆಗೆ ಡಿಸೆಂಬರ್ 18ರಂದು ಚಾಲನೆ ಸಿಕ್ಕಿತು. ಡಿಸೆಂಬರ್ 19ರಿಂದ ಜನವರಿ 25ರವರೆಗೆ ಪ್ರತಿನಿಧಿ ನೊಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ನೊಂದಣಿ ಮಾಡಿಸಿದವರ ಸಂಖ್ಯೆ 9,800. ಸ್ಥಳದಲ್ಲೇ ನೊಂದಣಿ ಅವಕಾಶವನ್ನು ಬಳಸಿಕೊಂಡವರ ಸಂಖ್ಯೆ ಸುಮಾರು 4,000. ಪ್ರತಿನಿಧಿ ಶುಲ್ಕ 300 ರೂಪಾಯಿ.

Siddaramaiah in Shravanabelagola

ಸಮ್ಮೇಳನದ ಸಿದ್ಧತೆಗಳಿಗೆ ಸಾಕಷ್ಟು ಕಾಲಾವಕಾಶಬೇಕು, ಆದ್ದರಿಂದ ಫೆಬ್ರವರಿಯ ಕೊನೆ ವಾರದಲ್ಲಿ ಇಟ್ಟುಕೊಳ್ಳಬೇಕೆನ್ನುವುದು ಸ್ವಾಗತ ಸಮಿತಿಯ ಇರಾದೆ ಆಗಿತ್ತು. ಆದ್ರೆ, ಪರೀಕ್ಷೆಗಳು ಹತ್ತಿರ ಇರುವುದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿ, ಶಿಕ್ಷಕ, ಶಿಕ್ಷಕಿ, ಬೋಧಕೇತರ ಸಿಬ್ಬಂದಿಗೆ ತೊಂದರೆ ಆಗಬಾರದೆಂದು ಸಮ್ಮೇಳನ ದಿನಾಂಕಗಳನ್ನು ಜನವರಿ 31 - ಫೆಬ್ರವರಿ 1-2-3ಕ್ಕೇ ನಿಗದಿಗೊಳಿಸಲಾಯಿತು.

ಸಮ್ಮೇಳನಕ್ಕೆ ಸ್ವಯಂಸೇವಕರಾಗಲು ಮುಂದೆ ಬರುವವರು ಸಾಮಾನ್ಯವಾಗಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಆಯಾ ಜಿಲ್ಲೆಗಳ ಕಸಾಪ ಸದಸ್ಯರು. ಹಾಗಾಗಿ, ಚನ್ನರಾಯಪಟ್ಟಣ ತಾಲ್ಲೂಕು ಶಾಲಾ ಕಾಲೇಜುಗಳಿಗೆ 5 ದಿನ, ಹಾಸನ ಜಿಲ್ಲಾ ಶಾಲಾಕಾಲೇಜುಗಳಿಗೆ 4 ದಿನ ರಜೆ ಕೊಡಲಾಗಿತ್ತು. ಪ್ರಾಂತ್ಯದಲ್ಲಿ 3 ದಿನ ಕನ್ನಡ ರಥೋತ್ಸವದ ವಾತಾವರಣ ಕಂಡುಬಂತು. [ಚಿತ್ರಗಳಲ್ಲಿ ಸಾಹಿತ್ಯ ಸಮ್ಮೇಳನ]

ನಮ್ಮ ಊರಲ್ಲಿ ಕನ್ನಡದ ಹಬ್ಬ ನಡೀತಾಯಿದೆ ಅಂದ್ರೆ ಅದೇನೋ ಸಂಭ್ರಮ, ಅದೇನೋ ಖುಷಿ. ಅಂತೆಯೇ, ಹಿರೀಸಾವೆ, ಚನ್ನರಾಯಪಟ್ಟಣ, ಶ್ರವಣಬೆಳಗೊಳದ ಸುತ್ತಮುತ್ತಲ 108 ಹಳ್ಳಿಯ ಕನ್ನಡ ಜನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸಿ ಸಂಭ್ರಮಿಸಿದರು. ಶಾಲೆಗೆ ಹೋಗಿಲ್ಲದ, ಅಕ್ಷರ ಕಲಿಯದ ಮಾದಲಗೆರೆಯ 100 ವರ್ಷದ ಅಜ್ಜಿ, ಬಚ್ಚಬಾಯಿಯ ಲಕ್ಕವ್ವ ಕೂಡ ಭಾಗವಹಿಸಿದ್ರು.

ಪ್ರಧಾನ ವೇದಿಕೆಯಲ್ಲಿ ಭಾನುವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಗಿಹೋದ 3 ಮಹಾನುಭಾವರಿಗೆ 2 ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಡಾ. ಸರೋಜಿನಿ ಮಹಿಷಿ, ಡಾ. ವೃಷಭೇಂದ್ರಸ್ವಾಮಿ ಮತ್ತು ಆರ್.ಕೆ. ಲಕ್ಷ್ಮಣ್. ಮಂಗಳವಾರ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ವೇಳೆ 93 ಜನ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಸಮ್ಮೇಳನದ ಬಜೆಟ್ 4.6 ಕೋಟಿ ರೂಪಾಯಿಗಳು. ಸರಕಾರ 2 ಕೋಟಿ ಕೊಟ್ಟಿದೆ. "ಕೊರತೆ' ಬಿದ್ದರೆ ಇನ್ನೂ 1 ಕೋಟಿ ರೂ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ತಮ್ಮ ಸಮ್ಮೇಳನದ ಭಾಷಣದ ವೇಳೆ ಘೋಷಿಸಿದರು. ಸಮ್ಮೇಳನದ ಬಜೆಟ್ಟಿನಲ್ಲಿ ಸಿಂಹಪಾಲು (1.75 ಕೋಟಿ) ವೇದಿಕೆಗಳ ನಿರ್ಮಾಣಕ್ಕೆ ಖರ್ಚಾಯಿತು. ಒಟ್ಟಾರೆ ಮದುವೆಗೆ ಎಷ್ಟು ಖರ್ಚಾಯಿತು ಅಂತ ಮದುವೆ ಆದಮೇಲೇ ಗೊತ್ತಾಗುವುದು.

ಆಯಾ ಜಿಲ್ಲೆಗಳ ಸರಕಾರಿ ನೌಕರರು ತಮ್ಮ 1 ದಿನದ ಸಂಬಳವನ್ನು ಸಮ್ಮೇಳನದ ಜೋಳಿಗೆಗೆ ದೇಣಿಗೆ ಕೊಡುವುದು ವಾಡಿಕೆ. ಆದರೆ, ಹಾಸನದಲ್ಲಿ ಈ ಅಲಿಖಿತ ನಿಯಮಕ್ಕೆ ಧಕ್ಕೆ ಉಂಟಾಯಿತು. ಕೆಲವರು ಕೊಡುವುದೆಂತಲೂ, ಇನ್ನು ಕೆಲವರು ಬೇಡವೆಂತಲೂ, ಇನ್ನು ಕೆಲವರು 1/2 ದಿನದ ಸಂಬಳ ಕೊಡುವುದೆಂತಲೂ ಜಟಾಪಟಿ ಕೇಳಿಬಂದವು. ಇದು ಗೊಂದಲದ ಗೂಡು.

Charukirti Bhattaraka Swamiji

ಇನ್ನು, ಊಟ ಉಪಚಾರಗಳ ಜವಾಬ್ದಾರಿಯನ್ನು ಶ್ರೀ ಕ್ಷೇತ್ರದ ಮಠ ವಹಿಸಿಕೊಂಡಿದ್ದರಿಂದ ಸ್ವಾಗತ ಸಮಿತಿಗೆ ಹಣಭಾರ ಅಷ್ಟರಮಟ್ಟಿಗೆ ಕಡಿಮೆ ಆಯಿತು. 3 ತಿಂಡಿ, 6 ಊಟದ ವ್ಯವಸ್ಥೆಯನ್ನು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಸ್ವಪ್ರೇರಣೆಯಿಂದ ವಹಿಸಿಕೊಂಡಿದ್ದರು, ಮಠದ ಆವರಣದಲ್ಲಿರುವ ಎಲ್ಲ ವಸತಿಗೃಹಗಳನ್ನು ಸಮ್ಮೇಳನಾರ್ಥಿಗಳಿಗೆ ಬಿಟ್ಟುಕೊಟ್ಟಿದ್ದರು.

ಜಿಲ್ಲೆಯ ರೈತರು ಸ್ವಪ್ರೇರಣೆಯಿಂದ ದವಸ ಧಾನ್ಯ, ತೆಂಗಿನಕಾಯಿ, ಬಿಳಿಸೌತೇಕಾಯಿ, ಹಸಿಶುಂಠಿ ಮತ್ತಿತರ ತರಕಾರಿಗಳನ್ನು ದಾನವಾಗಿ ಕೊಟ್ಟರು. ಸಮ್ಮೇಳನವನ್ನು ಸಾಂಗವಾಗಿಸಲು ಮಠದ ಭಕ್ತರು ನಾನಾ ಬಗೆಯ ವಸ್ತು, ಪದಾರ್ಥಗಳನ್ನು ಕಾಣಿಕೆಯಾಗಿ ಸಲ್ಲಿಸಿದರು. 3 ದಿನ, ಸುಮಾರು 3 ಲಕ್ಷ ಜನಕ್ಕೆ ಅನ್ನ ದಾಸೋಹ ಅಚ್ಚುಕಟ್ಟಾಗಿ ನೆರವೇರಿತು. ಇವಕ್ಕೆಲ್ಲ ಬೆಲೆ ಕಟ್ಟಲಾಗದು.

ಸಮ್ಮೇಳನದ ಆಮಂತ್ರಣ ಪತ್ರಿಕೆ 16 ಬಣ್ಣದ ಪುಟಗಳಲ್ಲಿ ಅಡಕವಾಗಿತ್ತು. ಸಾಂಸ್ಕೃತಿಯ ಕಾರ್ಯಕ್ರಮಗಳಿಗೆ 8 ಪುಟದ ಪ್ರತ್ಯೇಕ ಆಹ್ವಾನ ಪತ್ರಿಕೆ ಮಾಡಿಸಲಾಗಿತ್ತು. ಆಹ್ವಾನ ಪತ್ರಿಕೆ ನಮ್ಮಕೈಗೆ ಸಿಗಲಿಲ್ಲ ಅಂತ ಅನೇಕರು ಗೊಣಗುತ್ತಿದ್ದುದು 80 ಎಕರೆ ಪ್ರದೇಶದಲ್ಲಿ ನಿರ್ಮಿತವಾಗಿದ್ದ ಸಮ್ಮೇಳನ ಆವರಣದಲ್ಲಿ ಕೇಳಿಬರುತ್ತಿತ್ತು. ಪ್ರಧಾನ ವೇದಿಕೆಯಲ್ಲಿ ವ್ಯವಸ್ಥೆಯಾಗಿದ್ದ ಕಾರ್ಯಕ್ರಮಗಳನ್ನು ಹೊರತುಪಡಿಸಿ ಸಮಾನಾಂತರ ವೇದಿಕೆಯಲ್ಲಿ 7 ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

ಎಂದಿನಂತೆ ಪುಸ್ತಕ ಮಳಿಗೆ ಪ್ರಧಾನ ಆಕರ್ಷಣೆ. ಓದುತ್ತಾರೋ ಇಲ್ಲವೋ, ಪುಸ್ತಕ ಖರೀದಿಗೆ ಜನ ಮುಗಿ ಬಿದ್ದರು. ಒಟ್ಟು 700 ಮಳಿಗೆಗಳು ಇದ್ದವು. ಬೆಲ್ಲಕ್ಕೆ ಇರುವೆ ಮುತ್ತುವಂತೆ ಜನ ಮುತ್ತಿದ್ದರು. 47 ನೇ ಅವೃತ್ತಿ ಕಂಡಿರುವ ಡಾ. ಅನುಪಮಾ ನಿರಂಜನ ಅವರ "ತಾಯಿ ಮತ್ತು ಮಗು" ಕೃತಿಗೆ ಇನ್ನೂ ಸಹ ಬೇಡಿಕೆ ಇದ್ದದ್ದನ್ನು ಕಂಡಾಗ ಜನ ಏನು ಬಯಸುತ್ತಾರೆ ಎನ್ನುವುದಕ್ಕೆ ಉದಾಹರಣೆ ಆಗಿತ್ತು.

Bahubali Bhagawan

ಭಾನುವಾರ ಬೆಳಗ್ಗೆ, ಉದ್ಘಾಟನೆ ಆದ ದಿವ್ಸ ಎಲ್ಲಾ ಕಂಪನಿಗಳ ಫೋನುಗಳು, ಡೇಟಾ ಕಾರ್ಡುಗಳು ಕೈಕೊಟ್ಟವು. ಯಾರ ಬಾಯಿಗೆ ಯಾರ ಕಿವಿಯೂ ಸಿಗದ ಸನ್ನಿವೇಶ ತಲೆದೋರಿತು. ಯಾಕೆ ಹೀಗೆ ಎಂದು ವಿಚಾರಿಸುವಾಗ ಪುಕಾರುಗಳು ಹುಟ್ಟಿಕೊಂಡವು. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಫೋನು ಕಿರಿಕಿರಿ ತಪ್ಪಿಸಲು ಜಾಮರ್ ಹಾಕಿಸಿದ್ದಾರೆಂದು ಜನ ಮಾತನಾಡಿಕೊಂಡರು.

ಅದು ಹಾಗಲ್ಲ, ರಾಜಕೀಯವಾಗಿ ಸೂಕ್ಷ್ಮವಾಗಿರುವ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿರುವುದರಿಂದ ಸರಕಾರದವರೇ ಜಾಮರ್ ಹಾಕಿಸಿದ್ದಾರೆ ಅಂತ ಗುಲ್ಲು ಶುರುವಾಯಿತು. ಈ ಗುಲ್ಲು ನಿಜಾನಾ ಅಥವಾ ಸುಳ್ಳಾ ಅಂತ ಪರೀಕ್ಷೆ ಮಾಡುವುದಕ್ಕೆ ಫೋನು ಕೆಲಸ ಮಾಡುತ್ತಿರಲಿಲ್ಲ. ಇನ್ನು, ಸ್ಮಾರ್ಟ್ ಫೋನು, ವಾಟ್ಸ್ ಆಪ್ ಬಳಸಿ ವರದಿ ಮಾಡುವ ಪತ್ರಕರ್ತರು ಫೇಲ್ ಆದ್ರು. ಒನ್ಇಂಡಿಯಾ ಕನ್ನಡ ನ್ಯೂಸ್ ಆಪ್ ಬಳಸಿ ಸುದ್ದಿ ಓದಬೇಕೆನ್ನುವ ಓದುಗರಿಗೂ ನಿರಾಶೆಯಾಯಿತು.

ಅಂತಿಮವಾಗಿ ಸತ್ಯಮೇವ ಜಯತೇ ಆಯಿತು. ಶ್ರವಣಬೆಳಗೊಳ ಒಂದು ಹೋಬಳಿ. ಜನಸಂಖ್ಯೆ ಅಬ್ಬಬ್ಬಾ ಅಂದ್ರೆ 6 ಸಾವಿರ. ಲಕ್ಷಗಟ್ಟಳೆ ಜನ ಏಕಕಾಲಕ್ಕೆ ದಾಳಿ ಇಟ್ಟಿದ್ದರಿಂದ ಟೆಲಿಫೋನ್ ಗೋಪುರಗಳು ಕರೆಗಳ ಭಾರ ತಾಳಲಾರದೆ ಕುಸಿದುಬಿದ್ದವು. 1 ಲಕ್ಷ ಫೋನುಗಳ ಕಲರವಗಳನ್ನು ಆಲಿಸಲಾಗದ ಶ್ರವಣಬೆಳಗೊಳ, ಇನ್ನೆರಡು ವರ್ಷದಲ್ಲಿ ಬರುತ್ತಿರುವ ಮಹಾಮಸ್ತಕಾಭಿಷೇಕದಲ್ಲಿ ಕಲೆಯುವ 30 ಲಕ್ಷ ಭಕ್ತರ ಕರೆಗಳನ್ನು ಅದ್ಹೇಗೆ ಕೇಳಿಸಿಕೊಳ್ಳುವುದೋ ಗೊತ್ತಿಲ್ಲ.

Kannada activist in Shravanabelagola

ಆಗಿಹೋದ 80 ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನವೇ ಈ ಸಮ್ಮೇಳನದ ನಿರ್ಣಯವಾಗಬೇಕು ಎಂಬ ಕೂಗಿನ ನಡುವೆ, 1ರಿಂದ 5ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಇರಬೇಕು ಎನ್ನುವುದು ಈ ಸಮ್ಮೇಳನದ ನಿರ್ಣಯವಾಗಿ ಹೊರಹೊಮ್ಮಿತು. ಇದೇ 81ನೇ ಸಮ್ಮೇಳನದ ಆಶಯ ಭಾಷಣ, ಆಶಯ ಗೀತೆ. ಇದೇ ವೇಳೆ, ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು 1 ಕೋಟಿ ಸಹಿ ಚಳವಳಿ ಆರಂಭವಾಯಿತು.

ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮೀಡಿಯಂ ಹಗ್ಗಜಗ್ಗಾಟದ ನಡುವೆ ಕನ್ನಡನಾಡು ಹೈರಾಣವಾಗಿದೆ. ಮಕ್ಕಳಿಗೆ ಇಂಗ್ಲಿಷ್ ಮೀಡಿಯಮ್ ನಲ್ಲಿ ವಿದ್ಯಾಭ್ಯಾಸಕ್ಕೆ ಹಾತೊರೆಯುತ್ತಾ, ಕನ್ನಡ ಮಾಧ್ಯಮ ಎನ್ನುವ ನುಡಿಗಟ್ಟಿಗೆ ಪುಳಕಗೊಳ್ಳುವ ಕನ್ನಡಿಗರ ಮಾತೃಭಾಷೆಯ ಕಕ್ಕಲುತನಕ್ಕೆ ಚೆಲುವ ಕನ್ನಡನಾಡು ಬೆಚ್ಚಿಬಿದ್ದಿದೆ. 4,500 ಖಾಸಗಿ ಶಾಲೆಗಳು ಮತ್ತು ಕರ್ನಾಟಕ ಸರಕಾರದ ನಡುವಿನ Medium of Instruction ವ್ಯಾಜ್ಯ ಸುಪ್ರಿಂಕೋರ್ಟಿನಲ್ಲಿದೆ. ಈ ಕೇಸನ್ನು ಗೆದ್ದು ಬಾ ಮಗನೇ ಅಂತ, ಕನ್ನಡ ಸಾಹಿತ್ಯ ಪರಿಷತ್ತು ಸಿದ್ದರಾಮಯ್ಯನವರನ್ನು ಹಾರೈಸುವದರ ಜತೆಗೆ, ಅವರ ಕೊರಳಿಗೆ ಹೋರಾಟದ ಗಂಟೆ ಕಟ್ಟಿದೆ.

ಸೈನ್ಯವಿಲ್ಲದೆ ಸೇನಾಧಿಪತಿ ಪದವಿಗೆ ಅರ್ಥವೇ ಇಲ್ಲ. 28 ಲೋಕಸಭಾ ಸದಸ್ಯರು, ಮತ್ತು ರಾಜ್ಯಸಭೆಗೆ ಆಯ್ಕೆಯಾಗಿ ವಿಮಾನ ಹತ್ತಿರುವ ಖಾಲೀಪೀಲಿ ಸದಸ್ಯರು ಸಿದ್ದರಾಮಯ್ಯ ಅವರ ಜತೆ ಹೋರಾಟಕ್ಕೆ ಇಳೀತಾರಾ ಅಥವಾ ಕನ್ನಡ ಕಡ್ಡಾಯ ಹಕ್ಕಿಗೆ ಕಲ್ಲು ಕಟ್ಟಿ ಮೆಟ್ಟೂರು ಡ್ಯಾಂನಲ್ಲಿ ಈಜಲು ಬಿಡುತ್ತಾರಾ, ನೋಡೋಣ!

ಅಂದಹಾಗೆ, 82ನೇ ಸಮ್ಮೇಳನ ಆಯೋಜಿಸುವುದಕ್ಕೆ ರಾಯಚೂರು ಆಯ್ಕೆಯಾಗಿದೆ. ಇದು ಒಮ್ಮತದ ತೀರ್ಮಾನ. ಶ್ರವಣಬೆಳಗೊಳದಿಂದ ರಾಯಚೂರಿಗೆ ರಸ್ತೆ ಮೂಲಕ 445 ಕಿಲೋಮೀಟರ್. ರಾಷ್ಟ್ರೀಯ ಹೆದ್ದಾರಿ - NH 167 > ಶ್ರವಣಬೆಳಗೊಳ-ಹಿರಿಯೂರು-ಚಿತ್ರದುರ್ಗ-ಬಳ್ಳಾರಿ-ಅದೋನಿ-ರಾಯಚೂರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Total Recall : 81st All India Kannada Sahitya Sammelana, Shravanabelagola, Hassan. The Convention resolves to fight for Kannada Compulsory as medium of Instruction in Karnataka schools, class 1 to 5.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more