ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕಚೇರಿಯಲ್ಲಿ ಆಯುಧ ಪೂಜೆ ಸಖತ್

By Shami
|
Google Oneindia Kannada News

ಮನೆ, ವಾಹನ, ಕಚೇರಿ, ಫ್ಯಾಕ್ಟರಿಗಳಲ್ಲಿ ಉಪಕರಣಗಳಿಗೆ, ನಾವು ಬಳಸುವ ದಿನಬಳಕೆಯ ಪದಾರ್ಥಗಳಿಗೆ ಭರ್ಜರಿ ಅಲಂಕಾರ. ರಂಗೋಲಿ, ಹೂವು ಹಣ್ಣು ಸಿಹಿ ತಿಂಡಿಯ ಸಂಭ್ರಮದಲ್ಲಿ ಕರ್ನಾಟಕ ಇವತ್ತು ಮುಳುಗಿದೆ. ಬೆಂಗಳೂರಿನಲ್ಲೂ ಸಂಭ್ರಮವೋ ಸಂಭ್ರಮ. ನಗರದಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಅಲ್ಲಿ ಆಯುಧ ಪೂಜೆಯ ಉತ್ಸಾಹ.

ಹಣ್ಣು ಹೂವು ಬಾಳೆಗಿಡ ಮಾರುಕಟ್ಟೆಯಲ್ಲಿ ಗಿಜಿಗಿಜಿ ವಾತಾವರಣ. ರೇಟು ಎಷ್ಟಾದರೇನಂತೆ, ಖರೀದಿ ನಿಲ್ಲುವುದಿಲ್ಲ. ಒಂದು ಜತೆ ಬಾಳೆಗಿಡಕ್ಕೆ 50 ರೂ, ಮಾರುದ್ದ ಮಲ್ಲಿಗೆಗೆ 80 ರೂ. ಶಾವಂತಿಗೆ ಮಾರಿಗೆ 80 ರೂ. ಹಾದಿಯುದ್ದಕ್ಕೂ ಸರ್ವಾಲಂಕೃತ ವಾಹನಗಳ ಪೀಪೀ ಸದ್ದು. ಸ್ವೀಟ್ ಮೀಟ್ ಸ್ಟಾಲುಗಳಲ್ಲಿ ಸರತಿಯ ಸಾಲು.

ನಮ್ಮ ಕಚೇರಿಯಲ್ಲಿ ಸಂಭ್ರಮಕ್ಕೇನೂ ಕೊರತೆಯಿಲ್ಲ. ಮಂಗಳವಾರ ಲಂಚ್ ಅವರ್ ಅನ್ನು ಒಂದು ಗಂಟೆ ಹಿಂದಕ್ಕೆ ಹಾಕಲಾಗಿತ್ತು. 1 ಗಂಟೆಯ ಒಳಗೆ ಎಲ್ಲರೂ ಊಟ ಮಾಡಿ 2 ಗಂಟೆಗೆ ಟೆರೇಸಿನಲ್ಲಿ ಪೂಜೆಗೆ ಸೆರಬೇಕೆಂದು ಎಚ್ಆರ್ಡಿ ಇಂಟ್ರಾನೆಟ್ಟಿನಲ್ಲಿ ಮೆಸೇಜ್ ಹಾಕಿದ್ರು. ಸಿಬ್ಬಂದಿ ಬೆಳಗ್ಗೇನೇ ತಮ್ಮತಮ್ಮ ವಾಹನಗಳಿಗೆ ಮನೆಯಲ್ಲೇ ಪೂಜೆ ಮಾಡಿ ಕಚೇರಿಗೆ ಬಂದಿದ್ದರು. ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಿರುವ ಅಲಂಕರಿಸಿದ ಕಾರು, ಬೈಕುಗಳನ್ನು ನೋಡುವುದೇ ಚೆಂದ. [ಮೈಸೂರು ದಸರಾ 2012 - ಚಿತ್ರಸಂಪುಟ]

ಭಾರತೀಯ ಸಂಸ್ಕೃತಿಯ ರಾಯಭಾರಿಗಳು

ಭಾರತೀಯ ಸಂಸ್ಕೃತಿಯ ರಾಯಭಾರಿಗಳು

ಹಬ್ಬದ ದಿನ ಅಲ್ವಾ, ಆದ್ದರಿಂದ ಎಥ್ ನಿಕ್ ದಿನ ಕೂಡ ಆಗಿತ್ತು. ಜೀನ್ಸ್ ಪ್ಯಾಂಟ್, ಟಿ ಶರ್ಟುಗಳು ಮಾಯವಾಗಿತ್ತು. ರೇಷ್ಮೆ ಸೀರೆ, ರೇಷ್ಮೆ ಪಂಚೆ, ಜುಬ್ಬಧಾರಿಗಳು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ಕಚೇರಿಯ ತುಂಬ ಓಡಾಡುತ್ತಿದ್ದರು. ಮಹಿಳಾ ಸಿಬ್ಬಂದಿಗಳು ನನ್ನ bayಗೆ ಬಂದು ಡೆಸ್ಕ್ ಟಾಪಿಗೆ, ಲ್ಯಾಪ್ ಟಾಪಿಗೆ ಕುಂಕುಮ, ಹೂವು ಮುಡಿಸಿ ಹೋದರು.

ಎಲ್ಲ ಭಾಷೆಯ ಸಂಗಮದ ಮಿನಿ ಇಂಡಿಯಾ

ಎಲ್ಲ ಭಾಷೆಯ ಸಂಗಮದ ಮಿನಿ ಇಂಡಿಯಾ

ನಿಮಗೆ ಗೊತ್ತಿರಲಿ, 1999ರಲ್ಲಿ ಒನ್ಇಂಡಿಯಾ ಆರಂಭವಾದಂದಿನಿಂದ ಪ್ರತಿವರ್ಷ ಗಣೇಶ ಚತುರ್ಥಿ, ದಸರಾ, ದೀಪಾವಳಿ, ಕನ್ನಡ ರಾಜ್ಯೋತ್ಸವ, ವಿಶು ಹಬ್ಬಗಳನ್ನು ಆಚರಿಸಿಕೊಂಡು ಬಂದಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಗುಜರಾತ್, ಇಂಗ್ಲಿಷ್ ಎಲ್ಲ ಭಾಷೆಯ ಸಂಗಮದ ಮಿನಿ ಇಂಡಿಯಾದಂತಿರುತ್ತದೆ ಒನ್ಇಂಡಿಯಾ. ಇವುಗಳಲ್ಲಿ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ.

ಶ್ರೀ ಸುದರ್ಶನ ಶರ್ಮಾರಿಂದ ವಿಧಿವತ್ತಾಗಿ ಪೂಜೆ

ಶ್ರೀ ಸುದರ್ಶನ ಶರ್ಮಾರಿಂದ ವಿಧಿವತ್ತಾಗಿ ಪೂಜೆ

ಮಧ್ಯಾನ್ಹ 2.30ಗೆ ಪೂಜೆ ಆರಂಭ. ಶ್ರೀ ಸುದರ್ಶನ ಶರ್ಮಾ ಅವರಿಂದ ವಿಧಿವತ್ತಾಗಿ ಪೂಜಾ ಕೈಕಂಕರ್ಯಗಳು ನೆರವೇರಿದವು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ (ಆನಂದ್ ಸ್ವೀಟ್ಸ್ ನ ಮೈಸೂರು ಪಾಕ್) ಮತ್ತು ಅಂತಿಮವಾಗಿ ಆಫೀಸ್ ಬಾಯ್ ಮಂಜುನಾಥ ರೆಡ್ಡಿ ಅವರಿಂದ ಕುಂಬಳಕಾಯಿ ಒಡೆಯುವ ಆಚರಣೆಯ ಫೋಟೋಗಳು ಸಿಬ್ಬಂದಿಯ ಮೊಬೈಲ್ ಫೋಟೋಗಳಲ್ಲಿ ಸೆರೆಯಾದವು.

ಬಣ್ಣಬಣ್ಣದ ರಂಗೋಲಿಯ ಸುಂದರ ಚಿತ್ತಾರ

ಬಣ್ಣಬಣ್ಣದ ರಂಗೋಲಿಯ ಸುಂದರ ಚಿತ್ತಾರ

ರಂಗುರಂಗಿನ ಸೀರೆ ತೊಟ್ಟುಬಂದಿದ್ದ ಲಲನಾಮಣಿಗಳು ಒಟ್ಟುಸೇರಿ ಬಿಡಿಸಿದ ರಂಗೋಲಿಯ ಬಣ್ಣನೆ ಮಾಡಲು ಮಾತುಗಳೇ ಸಾಲವು. ಇನ್ನು ಪೂಜೆಯ ನಂತರ ಹತ್ತೇ ನಿಮಿಷದಲ್ಲಿ ನೃತ್ಯದ ಹೆಜ್ಜೆಗಳನ್ನು ಪ್ರಾಕ್ಟೀಸ್ ಮಾಡಿ ದಾಂಡಿಯಾ ನರ್ತನ ಮಾಡಿ ಸಿಬ್ಬಂದಿಗಳನ್ನೆಲ್ಲ ರಂಜಿಸಿದರು. ಇದೇ ಸಂಭ್ರಮ ನಮ್ಮ ಸಂಸ್ಥೆಯ ಮುಂಬೈ, ಹೈದರಾಬಾದ್, ದೆಹಲಿ, ಗಾಂಧಿನಗರ, ಚೆನ್ನೈ ಕಚೇರಿಗಳಲ್ಲಿ ಕೂಡ ಇತ್ತು ಎಂಬ ವರ್ತಮಾನ ಬಂದಿದೆ.

ನಿಮ್ಮ ಪರಿವಾರಕ್ಕೆ ನವರಾತ್ರಿ ಶುಭಾಶಯಗಳು

ನಿಮ್ಮ ಪರಿವಾರಕ್ಕೆ ನವರಾತ್ರಿ ಶುಭಾಶಯಗಳು

ನಿಮ್ಮ ಮನೆ, ಆಫೀಸಿನಲ್ಲೂ ಹಬ್ಬ ಜೋರು ಅಂತ ಕಾಣತ್ತೆ! ಒನ್ಇಂಡಿಯ ಕನ್ನಡ ಮತ್ತು ನಮ್ಮ ಇತರೆಲ್ಲ ಚಾನಲ್ಲುಗಳ ವತಿಯಿಂದ ನಮ್ಮ ಲೇಖನಗಳನ್ನು ಓದಿ ತಪ್ಪುಒಪ್ಪುಗಳನ್ನು ತಿದ್ದುವ ನಿಮಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಮತ್ತು ನಿಮ್ಮ ಪರಿವಾರಕ್ಕೆ ನವರಾತ್ರಿ ಶುಭಾಶಯಗಳು. ಅಂದ ಹಾಗೆ, ಬುಧವಾರವೂ ನಮ್ಮ ಕನ್ನಡ ಅಂತರ್ಜಾಲ ತಾಣ ಕಾರ್ಯನಿರತವಾಗಿರತ್ತೆ. ಕಾರಣ ನಿಮಗೂ ಗೊತ್ತು. ಅಕ್ಟೋಬರ್ 24, ನವರಾತ್ರಿಯ ಕೊನೆ ದಿನ, ಮೈಸೂರಿನಲ್ಲಿ ದಸರಾ ಮೆರವಣಿಗೆ ಸಂಭ್ರಮ.

English summary
Ayudha Puja observed in Oneindia Bangalore office with traditional gait and Navaratri fervor. Sri Sudarshana Sharma was the chief priest who guided us through the Puja rituals. We at Oneindia wish our browsers a very happy and prosperous Dasara Festival 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X