ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಇನ್ಫೋಸಿಸ್ ಕಚೇರಿಗೆ ಬೇಡವಾದ ಕನ್ನಡ

By * ಶಾಮಿ
|
Google Oneindia Kannada News

Total Kannada Lakshmikanth
ಕನ್ನಡ ಪುಸ್ತಕಗಳು, ಸಿಡಿಗಳು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮಹಾಮಹಿಮರ ಫಲಕಗಳು, ಮುಂತಾದ ಕನ್ನಡಮಯ ಪದಾರ್ಥಗಳನ್ನು ಮಾರುವುದಕ್ಕೆ ಬೆಂಗಳೂರಿನಲ್ಲಿ ಒಂದು ಅಂಗಡಿ ಇದೆ. ಹೆಸರು ಟೋಟಲ್ ಕನ್ನಡ ಡಾಟ್ ಕಾಂ. ಅದರ ಮಳಿಗೆ ಜಯನಗರದಲ್ಲಿದೆ. ಸಂಚಾರಿ ಪುಸ್ತಕ ಮಳಿಗೆಯೂ ಉಂಟು. ಅಂತರ್ ಜಾಲ ತಾಣವೂ ಇದೆ.

ಟೋಟಲ್ ಕನ್ನಡವನ್ನು ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿಕೊಂಡು ಬದುಕಿಸುತ್ತಿರುವ ಕನ್ನಡಿಗನ ಹೆಸರು ಲಕ್ಷ್ಮೀಕಾಂತ್ ಅಂತ. ಎಷ್ಟೇ ಕಷ್ಟಪಟ್ಟರೂ ಅವರಿಗೆ ಪಾಪ ಲಾಸೇ ಲಾಭ. ಮೊನ್ನೆ ಇವರು ಮತ್ತೆ ಕೈ ಸುಟ್ಟುಕೊಂಡರು. ಮೊದಲೇ ಕಪ್ಪಗಿರುವ ಅವರ ಮುಖ ಮತ್ತಷ್ಟು ಕಪ್ಪಿಟ್ಟಿತ್ತು. ಬಾಲ್ಡಿ ಲಕ್ಷ್ಮಿಕಾಂತ್ ತಲೆ ಸದ್ಯದಲ್ಲೇ ಪೂರ್ತಿ ಬೋಳಾಗುವ ಲಕ್ಷಣಗಳು ಕಂಡವು.

ಈ ಮನುಷ್ಯ ಬೆಂಗಳೂರಿನಲ್ಲಿ ಭಾನುವಾರ ಮುಕ್ತಾಯವಾದ ನಾವಿಕ ಸಂಸ್ಥೆಯ ಅಮೆರಿಕನ್ನಡೋತ್ಸವದಲ್ಲಿ [ಗ್ಯಾಲರಿ ನೋಡಿರಿ] ಭಾಗಿಯಾಗಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ ಪದಾರ್ಥಗಳ ಪ್ರದರ್ಶನ ಮಾರಾಟ ಹಾಕಿದ್ದರು. ಯಾರಾದರೂ ಬಿಲ್ ಬರೆಸುತ್ತಾರೆ ಎಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡಾರದಲ್ಲೇ ಇದ್ದರು.

ಮಳಿಗೆಗೆ ದಿನ ಬಾಡಿಗೆ 25 ಸಾವಿರ ಕೇಳಿದ್ದರಂತೆ. ಆದರೆ, ಕನ್ನಡದ ಕೆಲಸವಲ್ಲವೇ? ದಯೆತೋರಿ 10 ಸಾವಿರ ರೂಪಾಯಿಗೆ ಅಡ್ಜೆಸ್ಟ್ ಆಗಿತ್ತು. ಶನಿವಾರ 2.500 ರೂಪಾಯಿ ವ್ಯಾಪಾರ ಮಾಡಿದ ಟೋಟಲ್ ಕನ್ನಡ 7,500 ಸಾವಿರ ರೂ. ನಷ್ಟ ಅನುಭವಿಸಿತು. ಉತ್ಸವ ಮುಗಿಯುವವರೆಗೂ ಕಾಯದೆ ಭಾನುವಾರ ಜಯಚಾಮರಾಜೇಂದ್ರ ರಸ್ತೆಯಿಂದ ನಾಪತ್ತೆ ಆಯಿತು.

ಶನಿವಾರ ಸಾಯಂಕಾಲ ಮಳಿಗೆಗೆ ಹೋಗಿ ಲಕ್ಷ್ಮೀಕಾಂತ್ ಅವರನ್ನು ಮಾತನಾಡಿಸಿದ್ದೆ. ಕಷ್ಟ ಸುಖ ವಿಚಾರಣೆ ಮಾತಷ್ಟೆ. ಕೆಲವು ಪ್ರಾಮಿನೆಂಟಾದ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದ ಅವರು ಇನ್ ಫೊಸಿಸ್ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಬೆಂಗಳೂರಿನ ಇನ್ಫಿ ಕಾರ್ಪೊರೇಟ್ ಕಚೇರಿಯಲ್ಲಿ ಟೋಟಲ್ ಕನ್ನಡ ಮಳಿಗೆಯನ್ನು ತೆರೆಯಬೇಕೆಂಬ ಹಂಬಲ ಅವರಿಗಿದೆ.

ಕಳೆದ ಒಂದು ವರ್ಷದಿಂದ ಇನ್ಫಿ ಕಚೇರಿ ಇಮೇಲ್ ವಿಳಾಸಕ್ಕೆ ಪತ್ರ ಬರೆದದ್ದೇ ಬಂತು ಭಾಗ್ಯ ಎಂದರು. ಅಲ್ಲಿ ಉತ್ತರ ಕೊಡುವವರೇ ಗತಿಯಿಲ್ಲ. ಇನ್ನು ಸುಧಾ ಮೂರ್ತಿ ಅವರನ್ನು ಸ್ವತಃ ಭೇಟಿ ಮಾಡಿ ನಿವೇದಿಸಿಕೊಳ್ಳಬೇಕೆಂಬ ಆಸೆಯೂ ಮರೀಚಿಕೆ ಆಗಿದೆ. ಸುಧಾ ಅವರ ಮನೆಗೆ ಹೋದರೆ ಸೆಕ್ಯುರಿಟಿ ಗಾರ್ಡ್ ಒಳಗೆ ಬಿಡುವುದಿಲ್ಲ. ವಿಸಿಟಿಂಗ್ ಕಾರ್ಡ್ ನೋಡುವ ಸೆಕ್ರೆಟರಿಗೆ ಇಂಥವರ ಅಪಾಯಿಂಟ್ ಮೆಂಟ್ ಇಂಪಾರ್ ಟೆಂಟ್ ಅನಿಸುವುದಿಲ್ಲ.

ಸದ್ಯ ಬೆಂಗಳೂರಿನ ಇನ್ಫಿ ಕಚೇರಿ ಆವರಣದಲ್ಲಿ ಪುಸ್ತಕ ಮಳಿಗೆಯೊಂದಿದೆ. ಇಂಗ್ಲಿಷ್ ಕೃತಿಗಳನ್ನು ಮಾತ್ರ ಬಿಕರಿ ಮಾಡುವ ಅಂಗಡಿಯ ಹೆಸರು Strand book stall. ಸರಿಸುಮಾರು 25 ಸಾವಿರ ಸಿಬ್ಬಂದಿ ಕೆಲಸ ಮಾಡುವ ಇನ್ಫಿ ಕ್ಯಾಂಪಸ್ ನಲ್ಲಿ 8-10 ಸಾವಿರ ಕನ್ನಡಿಗರು ಇರಬಹುದೆಂಬ ಅಂದಾಜಿದೆ.

English summary
How to lose your hair over Kannada : Kannada books and gift article sellar V Lakshmikanth maintains a book shop, totalkannada.com in Jayanagar. How he manages his business? read; indeed a heart warming story. Especially his shattered dream to open one book selling counter in Infosys campus Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X