ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವೇಶ್ವರ ಭಟ್ ಬ್ಲಾಗಿಗೆ ದಾರಿ ಯಾವುದಯ್ಯ

By * ಶಾಮ್
|
Google Oneindia Kannada News

Journalist Vishweshwar Bhat
ಕನ್ನಡ ಪತ್ರಕರ್ತ, ಲೇಖಕ ಮತ್ತು ಲೋಕ ಪ್ರಸಿದ್ಧ ವಿಜಯ ಕರ್ನಾಟಕದ ವಿಶ್ವ ಪ್ರಸಿದ್ಧ ವಿಶ್ವೇಶ್ವರ ಭಟ್ ಅವರು ಅಂತರಜಾಲ ಕಕ್ಷೆಗೆ ತಮ್ಮನ್ನು ತಾವು ಉಡಾಯಿಸಿಕೊಂಡಿದ್ದಾರೆ. ಅವರದೇ ನಾಮಾಂಕಿತ, "ವಿಶ್ವೇಶ್ವರ ಭಟ್" ವೆಬ್ ಸೈಟು ಆರಂಭವಾಗಿದ್ದು ಕಳೆದ ಮೂರು ದಿನಗಳಿಂದ ಸೈಟು ಸೈಬರ್ ಗಲ್ಲಿಗಳಲ್ಲಿ ಗಿರಗಿರಗಿರ ತಿರುಗಲಾರಂಭಿಸಿದೆ.

ಅನೇಕ ಪತ್ರಕರ್ತರು ತಮ್ಮದೇ ಆದ ವೆಬ್ ಸೈಟು ಇಟ್ಟುಕೊಂಡಿದ್ದಾರೆ. ಆದರೆ, ಭಟ್ಟರ ವೆಬ್ ಸೈಟು ತೆರೆದಿರುವುದು ಸುದ್ದಿ ಆಗುತ್ತಿರುವುದು ಏಕೆ ಎಂದು ತಾವು ಕೇಳುವ ಮುನ್ನ, ವೆಬ್ ಸೈಟಿನಲ್ಲಿ ಭಟ್ಟರು ಅವರ ಬಗ್ಗೆ ಅವರೇ ಬರೆದುಕೊಂಡಿರುವ ಅವರ ಪರಿಚಯವನ್ನು ಮೊದಲು ಓದಿಕೊಳ್ಳಿ. ಅದು ಹೀಗಿದೆ.

ವಿಶ್ವೇಶ್ವರ ಭಟ್ ಉತ್ತರ ಕನ್ನಡದ ಕುಮುಟಾದ ಮೂರೂರಿನವರು. ಓದಿದ್ದು ಎಂ.ಎಸ್.ಸಿ ಹಾಗು ಎಮ್.ಎ. ನಾಲ್ಕು ಚಿನ್ನದ ಪದಕದ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. 48 ಪುಸ್ತಕಗಳ ಲೇಖಕ.

ಕನ್ನಡದ ಜನಪ್ರಿಯ ದೈನಿಕ 'ವಿಜಯ ಕರ್ನಾಟಕ"ದ ಮಾಜಿ ಪ್ರಧಾನ ಸಂಪಾದಕ. ಸೃಜನಶೀಲ ಬರಹಗಾರ, ಅಂಕಣಕಾರ. 'ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ" ಜನಪ್ರಿಯ ಅಂಕಣಗಳು. ಇಪ್ಪತ್ತೈದಕ್ಕೂ ಅಧಿಕ ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜೊತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ.


ಪತ್ರಕರ್ತರು ಒಂದು ಪತ್ರಿಕೆಯನ್ನು ತೊರೆಯುವ ವಿಷಯ ತೀರಾ ಸಾಮಾನ್ಯವಾದದ್ದು. ಆದರೆ, ಭಟ್ಟರು ವಿಕದಿಂದ ಹೊರನಡೆದದ್ದು ಇತ್ತೀಚೆಗೆ ಭಾರೀ ಸುದ್ದಿಗೆ, ಸುದ್ದಿಗೊಂದು ಗುದ್ದಿಗೆ, ಗುದ್ದಿಗೊಂದು ಗುಡುಗಿಗೆ ಆಹಾರವಾಗಿತ್ತು. ಯಾಕೆಂದರೆ, ಭಟ್ಟರು ವಿಕ ಬಿಟ್ಟಿದ್ದು ಅವರ ಅನೇಕ ಅಭಿಮಾನಿಗಳಿಗೆ ಕಳವಳ ಉಂಟುಮಾಡಿದ್ದರೆ ಅವರ ಕೆಲವು ವಿರೋಧಿಗಳಿಗೆ ಸಂತಸದ ಹೊಳೆಯನ್ನೇ ಹರಿಸಿತ್ತು.

ಹಾಗಾಗಿ, ಭಟ್ಟರ ಮುಂದಿನ ಚನಲನವಲನಗಳೇನು ಎಂಬ ಬಗ್ಗೆ ಪತ್ರಕರ್ತರ ವಲಯಗಳಲ್ಲಿ ಸಾಕಷ್ಟು ಕದನ ಕುತೂಹಲವಿತ್ತು. ಈಗಲೂ ಇದೆ. ಅವರು ಪ್ರಜಾವಾಣಿ ಸಂಪಾದಕರಾಗುತ್ತಾರಂತೆ ಎಂಬ ಗುಲ್ಲಿಗೆ ಅನೇಕರು ಛೆಛೆ ಎಂದಿದ್ದರು, ಕನ್ನಡಪ್ರಭಕ್ಕೆ ಮರಳುತ್ತಾರೆ ಎಂಬ ಗಾಳಿಪಟಕ್ಕೆ ಅಯ್ಯೋ ಎಲ್ಲಾದರೂ ಉಂಟಾ ಎಂದಿದ್ದರು.

ಹಳೇ ಪೇಪರ್ ಸಂಯುಕ್ತ ಕರ್ನಾಟಕದ ಪ್ರಧಾನ ಸಂಪಾದಕರಾಗುತ್ತಾರೆ ಎಂಬ ಗಾಸಿಪ್ಪಿಗಂತೂ ಮಂದಿ ಗಹಗಹಿಸಿ ನಕ್ಕಿದ್ದರು. ಇನ್ನು ಪೈಗಳ ಸಹವಾಸದಲ್ಲಿ ಉದಯವಾಣಿ ಸಂಪಾದಕರಾಗುತ್ತಾರೆ ಎಂಬ ಗಾಳಿಸುದ್ದಿ ಕರಾವಳಿಯಲ್ಲಿ ಸುಳಿದು ಮಾಯವಾಯಿತು. ಉನ್ನತ ವ್ಯಾಸಂಗ ಕೈಗೊಳ್ಳುವ ಉದ್ದೇಶದಿಂದ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿದ್ದುದಾಗಿ ಹೇಳಿದ್ದ ಭಟ್ಟರ ಪ್ರೆಸ್ ಸ್ಟೇಟ್ ಮೆಂಟನ್ನು ಹಲವರು ಕಿವಿಯ ಮೇಲೆ ಹೂ ಎಂದೂ ಲೇವಡಿ ಮಾಡಿದ್ದರು.

ಭಟ್ಟರು ಯಾವುದಾದರೊಂದು ಟಿವಿ ಚಾನಲ್ ಸೇರಿಕೊಳ್ಳುತ್ತಾರೆಂಬ ಗುಲ್ಲಿಗೆ ಇಲ್ಲೇನು ಬರಗಾಲವಿಲ್ಲ. ಮುಖ್ಯವಾಗಿ ಅವರು ರೆಡ್ಡಿಗಳ ದುಡ್ಡಿನಿಂದ ಆರಂಭವಾಗಲಿರುವ ಜನಶ್ರೀ ಚಾನಲ್ಗೆ ಭರ್ತಿ ಆಗುತ್ತಾರೆಂಬ ಸುದ್ದಿ ದಟ್ಟವಾಗಿತ್ತು. ಆದರೆ, ಆ ಚಾನಲ್ಲಿನ ಮುಖ್ಯ ಸಲಹೆಗಾರರಾಗಿ ಇನ್ನೊಬ್ಬ ಪತ್ರಕರ್ತ ರವಿ ಬೆಳಗೆರೆ ಅವರು ಈಗಾಗಲೇ ಇರುವುದರಿಂದ ಆ ಸುದ್ದಿಗೂ ಕವೆಡೆ ಕಾಸಿನ ಕಿಮ್ಮತ್ತೂ ಸಿಗಲಿಲ್ಲ.

ಭಟ್ಟರು ತಮ್ಮದೇ ಆದ ಸ್ವಂತ ಪೇಪರ್ ತೆಗೆಯುತ್ತಾರೆಂಬ ಗುಸುಗುಸು ಟ್ಯಾಬ್ ಲಾಯ್ಡ್ ಪೇಪರ್ ಮಾರ್ಕೆಟ್ಟಿನಲ್ಲಿ ಸುಳಿದಾಡುತ್ತಿರುವುದರ ನಡುವೆಯೇ ಅವರು ವೆಬ್ ಸೈಟಿಗೆ ಧುಮುಕಿದ್ದಾರೆ. ಅಂತರಜಾಲ ಅಂಗಳಕ್ಕೆ ಕಾಲಿಟ್ಟಿರುವ ಭಟ್ಟರ ಈ ಪ್ರಯತ್ನ ಹವ್ಯಾಸಿ ನೆಲೆಯಲ್ಲಿ ಇರುವುದೋ ಅಥವಾ ಅದಕ್ಕೊಂದು ಬಿಸಿನೆಸ್ ಚೌಕಟ್ಟು ಲಭ್ಯವಾಗುವುದೋ? ಬಣ್ಣಿಸುವುದಕ್ಕೆ ಕಾಲ ಮಾಗಿಲ್ಲ. ಇದೇ ವೇಳೆ, ಈ ಮಾರ್ಗವಾಗಿ ನೀವು ವಿಶ್ವೇಶ್ವರಭಟ್ಟರ ವಿಭಟ್ ಡಾಟ್ ಇನ್ ವೆಬ್ ಸೈಟಿಗೆ ಪ್ರವಾಸ ಕೈಗೊಳ್ಳಬಹುದು. [ಕನ್ನಡ ಬ್ಲಾಗ್ ಲೋಕ]

English summary
Ex-Vijaya Karnataka editor Vishweshwar Bhat nose dives to web journalism. Floats his own Blog in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X