ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಮತದಾರರಿಗೆ ಗಿಫ್ಟ್ ಐಡಿಯಾಸ್

By * ಶಾಮಿ
|
Google Oneindia Kannada News

Karnataka ZP Elections : Gift For Votes
ನಮ್ಮ ಚೆಲುವ ಕನ್ನಡನಾಡು ಇನ್ನೊಂದು ಚುನಾವಣೆಗೆ ಸಿದ್ಧವಾಗುತ್ತಿದೆ. ಇದೇ ಡಿಸೆಂಬರ್ ಮಾಹೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗೆ ಚುನಾವಣೆಗಳು ನಡೆಯುವಂತೆ ಏರ್ಪಾಟಾಗಿದೆ. ಕರ್ನಾಟಕದ 30 ಜಿಲ್ಲೆಗಳಲ್ಲಿ ಮತದಾನ ಎರಡು ಹಂತದಲ್ಲಿ ನಡೆಯುತ್ತದೆ. 15 ಜಿಲ್ಲೆಗಳಲ್ಲಿ ಮತದಾನ ಶುಕ್ರವಾರ ಡಿಸೆಂಬರ್ 24ರಂದು ನಡೆದರೆ ಉಳಿದ 15 ಜಿಲ್ಲೆಗಳಲ್ಲಿ ವೋಟಿಂಗ್ ಶುಕ್ರವಾರ ಡಿಸೆಂಬರ್ 31ರಂದು ನಡೆಯುತ್ತದೆ.

ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಉನ್ನತ ಸ್ತರಗಳಲ್ಲಿ, ಅಂದರೆ ವಿಧಾನಸೌಧದಲ್ಲಿ, ಬೆಂಗಳೂರಿನ ಬಹುಮಹಡಿ ಕಟ್ಟಡಗಳಲ್ಲಿ ಮಾತ್ರ ಪಾಚಿಕಟ್ಟಬಾರದು. ದೂರದ ಹಳ್ಳಿಗಳಿಗೂ ಅಧಿಕಾರದ ಸೂತ್ರಗಳು ತಲುಪಬೇಕು. ಪ್ರಜೆಗಳು ಅವರನ್ನು ಅವರೇ ಆಳಿಕೊಳ್ಳಬೇಕು. ಅವರ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಬೇಕು. ಅವರ ಏಳಿಗೆಯನ್ನು ಅವರೇ ನಿರ್ಧರಿಸಿಕೊಳ್ಳಬೇಕು. ಇದು ಪಂಚಾಯತ್ ರಾಜ್ಯ ಕಲ್ಪನೆಯ ಧ್ಯೇಯ. ಅಧಿಕಾರ ವಿಕೇಂದ್ರೀಕರಣದ ಆಶಯ ಕೂಡ. ಈ ಉದ್ದಿಶ್ಯದಿಂದ ಪಂಚಾಯ್ತಿ ಚುನಾವಣೆ ಕರ್ನಾಟಕದಲ್ಲಿ ಮತ್ತೆ ಸಂಭವಿಸುತ್ತಿದೆ.

ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಹುರಿಯಾಳುಗಳು ಅಧಿಕ ಸಂಖ್ಯೆಯಲ್ಲಿ ಗೆದ್ದು ಅಧಿಕಾರ ಹಿಡಿದುಕೊಳ್ಳಬೇಕು ಎಂದು ರಾಜಕೀಯ ಪಕ್ಷಗಳ ಧುರೀಣರು ಸಹಜವಾಗಿಯೇ ಹಠತೊಟ್ಟಿದ್ದಾರೆ. ಆಡಳಿತ ಪಕ್ಷ ಭಾಜಪಗೆ ಮಾತ್ರ ಈ ಚುನಾವಣೆ ಅಗ್ನಿ ಪರೀಕ್ಷೆ ಆಗಿದೆಯಂತೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಮುಂದಾಳತ್ವದಲ್ಲಿ ಬಿಜೆಪಿ ಒಳ್ಳೆ ಪರ್ಫಾರ್ಮನ್ಸ್ ನೀಡಿದರೆ ಗಡ್ಕರಿ ಸಾಹೇಬರು ಬಹುತ್ ಅಚ್ಛಾ ಬಹುತ್ ಅಚ್ಛಾ ಎಂದು ಯಡ್ಡಿಯ ಬೆನ್ನು ತಟ್ಟುವವರಿದ್ದಾರೆ. ಜಯಭೇರಿ ಬಾರಿಸದಿದ್ದರೆ ಎಚ್ ಡಿ ಕುಮಾರಸ್ವಾಮಿ ಮತ್ತು ಸಂಗಡಿಗರು ಸರಕಾರ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುವುದಕ್ಕೆ ಪ್ರೆಸ್ ಕಾನ್ಫರೆನ್ಸ್ ಕರೆಯುವವರಿದ್ದಾರೆ. ಈ ಒತ್ತಾಯಕ್ಕೆ ಸಿದ್ದರಾಮಯ್ಯ ಮತ್ತು ಡಾ. ಪರಮೇಶ್ವರ್ ಕೂಡ ಹೌದು ಹೌದು ಎಂದು ತಲೆದೂಗುವವರಿದ್ದಾರೆ.

ಯಾರಾದರೂ ಗೆದ್ದು ಸೋಲಲಿ ಅಥವಾ ಸೋತವರು ಸುಣ್ಣಾಗಲಿ. ನಾನೇನು ಕೇರ್ ಮಾಡಲ್ಲ. ಆದರೆ, ನಮ್ಮ ಗ್ರಾಮೀಣ ಮತದಾರರು ಯಾವ ಪಕ್ಷಕ್ಕೆ ಮತ ನೀಡುತ್ತಾರೆ ಎನ್ನುವುದು ನನಗೆ ತಡೆಯಲಾರದಷ್ಟು ಕುತೂಹಲ. ಇತ್ತಿತ್ತಲಾಗಿ ನಮ್ಮ ಮತದಾರರು ಗಿಫ್ಟ್ ಕೊಟ್ಟರೆ ಮಾತ್ರ ಮತಗಟ್ಟೆಗೆ ಬರುತ್ತಾರಾದ್ದರಿಂದ ಯಾವ ಯಾವ ಪಕ್ಷ ಯಾವ ಯಾವ ಗಿಫ್ಟ್ ರೆಡಿ ಮಾಡಿಕೊಂಡಿದೆ ಎನ್ನುವುದು ಅತೀವ ಕುತೂಹಲಕ್ಕೆ ದಾರಿಮಾಡಿಕೊಟ್ಟಿದೆ.

ಉಡುಗೊರೆ ಇರಲಿ : ಯಡಿಯೂರಪ್ಪ ಸರಕಾರ ಈಗಾಗಲೇ ಅನೇಕ ಉಡುಗೊರೆಗಳನ್ನು ಪ್ರಜೆಗಳಿಗೆ ಕೊಟ್ಟಿದೆ. ಆಗಿನ ಕಾಲದಲ್ಲೇ ಅವರು 7 ಲಕ್ಷ ಮಕ್ಕಳಿಗೆ ಸೈಕಲ್ ಉಡುಗೊರೆ ಕೊಟ್ಟಿದ್ದರು. ಮೂರು ತಿಂಗಳ ಹಿಂದೆ ಭಾಗ್ಯ ಲಕ್ಷ್ಮಿ ಯೋಜನೆ ಅಡಿಯಲ್ಲಿ ಲಕ್ಷಾಂತರ ಸೀರೆಗಳನ್ನು ಕೊಟ್ಟರು, ಮೊನ್ನೆಯಷ್ಟೇ ವಿ. ಸೋಮಣ್ಣ ಅವರು ಬಡವರ ಅಕ್ಕಿ ರೇಷನ್ ಪ್ರಮಾಣವನ್ನು 15 ಕೆಜಿಗಳಿಗೆ ಏರಿಸಿದರು. ಇನ್ನು, ನಿನ್ನೆ ಶೋಭಾ ಕರಂದ್ಲಾಜೆ ಅವರು ಏರಿಸಿದ್ದ ವಿದ್ಯುತ್ ಬೆಲೆಗೆ ಬ್ರೇಕ್ ಒತ್ತಿ ನಿಲ್ಲಿಸಿದರು. ಇವೆಲ್ಲ ಜನಕಲ್ಯಾಣ ಯೋಜನೆಗಳೆಂದು ಕೆಲವರು ಹೇಳಿದರೆ ಇನ್ನು ಕೆಲವು ಸಿನಿಕರು ಇವೆಲ್ಲ ಮತದಾರರಿಗೆ ಪರೋಕ್ಷವಾಗಿ ಒಡ್ಡಿದ ಆಮಿಷ ಎಂದು ಹೇಳಿದರು.

ಇವೆಲ್ಲ ನಿತ್ಯ ಇದ್ದದ್ದೇ. ನಮಗೇನು ಅಷ್ಟು ಮುಖ್ಯ ಸಂಗತಿಗಳು ಎನಿಸುವುದಿಲ್ಲ. ಡಿಸೆಂಬರ್ 24 ಮತ್ತು 31ರ ಮತದಾನಕ್ಕೆ ಮುಂಚೆ ನಮ್ಮ ಗ್ರಾಮೀಣ ಮತದಾರರಿಗೆ ಪ್ರಾಕ್ಟಿಕಲ್ ಆಗಿ ಏನು ಗಿಟ್ಟುತ್ತದೆ ಎಂಬುದರ ಮೇಲೆ ಮತದಾನದ ಶೇಕಡಾವಾರು ಪ್ರಮಾಣ ಮತ್ತು ಫಲಿತಾಂಶ ನಿರ್ಧಾರವಾಗುವುದು ನಿಶ್ಚಿತ. ಮುಂಚಿನ ಕಾಲದಂತೆ ನಮ್ಮ ಮತದಾರರು ಹೆಂಡ ಮತ್ತು ಹಣಕ್ಕೆ, ಸೀರೆಗೆ, ತಾಳಿಗೆ, ಅಕ್ಕಿಗೆ, ಪ್ಲಾಸ್ಟಿಕ್ ಬಕೆಟ್ಟು, ಬಿಂದಿಗೆಗೆ, ಬ್ಯಾಟು ಬಾಲಿಗೆ, ಮೂಗುತಿಗೆ, ಬೆಳ್ಳಿ ನಾಣ್ಯಕ್ಕೆ ಒಲಿಯುವವರಲ್ಲ. ಕಾಲ ಬದಲಾಗಿದೆ. ಇದು ಪಕ್ಷದ ನೇತಾರರಿಗೂ ಗೊತ್ತಿದೆ. ಹಾಗಾಗಿ, ಈ ಸಲ ಯಾವ ಪದಾರ್ಥವನ್ನು ಉಡುಗೊರೆಯಾಗಿ ನೀಡಿದರೆ ಮತದಾರ ಬಂಧು ತೃಪ್ತನಾಗುತ್ತಾನೆ? ಎಂಬ ಜಿಜ್ಞಾಸೆ ಪಕ್ಷದ ಕಚೇರಿಗಳಲ್ಲಿ ಚರ್ಚೆಯ ವಸ್ತುವಾಗಿದೆ.

ಕನ್ನಡನಾಡು ಶ್ರೀಗಂಧದ ನೆಲೆವೀಡು ಎನ್ನುತ್ತಿದ್ದ ಕಾಲವಿತ್ತು. ಈಗ ಇಲ್ಲ. ಇದ್ದಿದ್ದರೆ ಎಲ್ಲರಿಗೂ ಒಂದೊಂದು ಶ್ರೀಗಂಧದಲ್ಲಿ ಕೆತ್ತಿದ ಗಣೇಶ, ಶಾರದಾಂಬಾ ವಿಗ್ರಹಗಳನ್ನು ಕೊಡಬಹುದಿತ್ತು. ನಮ್ಮ ಕರ್ನಾಟಕ ಈಗ ಆಧುನಿಕವಾಗಿದೆ. ಎರಡು ಮನೆಗೊಬ್ಬ ಸಾಫ್ಟ್ ವೇರ್ ಇಂಜಿನಿಯರ್ ಓದಿಕೊಂಡವರು ಸಿಗುತ್ತಾರೆ. ಮಕ್ಕಳಂತೂ ಸದಾ ಮೂರುಹೊತ್ತು ಇಂಟರ್ನೆಟ್ಟಿನಲ್ಲಿ ಅದೇನೋ ನೋಡುತ್ತಾ ಕುಳಿತಿರುತ್ತಾರೆ. ಸಿಲಿಕಾನ್ ರಾಜ್ಯ ಎನ್ನುವುದಕ್ಕೆ ನಮ್ಮ ರಾಜ್ಯ ಅನ್ವರ್ಥನಾಮ ಆಗಿದೆ.

ಆದುದರಿಂದ ಯಾವ ಪಕ್ಷದವರು ಈ ಕೆಳಗೆ ಸೂಚಿಸಿದ ಪದಾರ್ಥಗಳಲ್ಲಿ ಯಾವುದಾದರೂ ಒಂದನ್ನು ಗಿಫ್ಟ್ ನೀಡುತ್ತಾರೋ ಅವರಿಗೆ ಮಾತ್ರ ನಿಮ್ಮ ಓಟು ಕೊಡಿ ಎಂದು ಮತದಾರರಿಗೆ ಕುಮ್ಮಕ್ಕು ನೀಡುವ ಪ್ರಚಾರಾಂದೋಲನವನ್ನು ನಮ್ಮ ವೆಬ್ ಸೈಟ್ ಮೂಲಕ ಅಧಿಕೃತವಾಗಿ ಆರಂಭಿಸುತ್ತಿದ್ದೇನೆ. ನಮ್ಮ ಓದುಗರು ಕೂಡ ತಮ್ಮ ಆಯ್ಕೆಯನ್ನು ಇಲ್ಲಿರುವ ಮತಗಟ್ಟೆಯಲ್ಲಿ ದಾಖಲಿಸಬಹುದು.

English summary
With just two weeks to go for Karnataka ZP, TP elections, political parties yet to decide about the gift articles for voters. Couple of modern Karnataka gift ideas from the editor, oneindia-kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X