• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗದುಗಿನ ಪುಣ್ಯಾಶ್ರಮದ ಬಾಗಿಲುತಟ್ಟದ ಪ್ರಶಸ್ತಿ

By * ಶಾಮಿ
|

ಗದಗದ ಪುಣ್ಯಾಶ್ರಮದ ರಾಜ್ಯಪಾಲರು, ಗಾನಯೋಗಿ ಪಂಚಾಕ್ಷರಿಯ ಪಟ್ಟ ಶಿಷ್ಯರೂ ಆಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳು ಸ್ವರ್ಗವಾಸಿಗಳಾಗಿ ನಾಲ್ಕು ದಿನಗಳಾದವು. ಸ್ವರ್ಗಲೋಕದಲ್ಲಿರುವ ಅಂಧರಿಗೆ, ವಿದ್ಯಾರ್ಥಿಗಳಿಗೆ, ಜ್ಞಾನಪಿಪಾಸುಗಳಿಗೆ ಅವರು ಈಗ ಪಾಠ ಹೇಳಿಕೊಡುತ್ತಿರಬಹುದು.

ಹುಟ್ಟು ಕುರುಡರಾಗಿದ್ದ ಅವರು ಭಾರತದಲ್ಲಿ ಜನಿಸಿದ ಸುಪುತ್ರರಲ್ಲೊಬ್ಬರು ಎಂದು ಕನ್ನಡನಾಡಿನ ಸುದ್ದಿ ಚರಿತ್ರೆ ಪುಟಗಳಲ್ಲಿ ಅವರು ಇತ್ತೀಚೆಗೆ ವ್ಯಾಪಕವಾಗಿ ದಾಖಲಾದರು. ಶಿವಪೂಜೆಯ ಜತೆಗೆ ಅವರು ಸಮಾಜಸೇವೆಯನ್ನು ನಿತ್ಯ ತಪ್ಪದೆ ಮಾಡುತ್ತಿದ್ದರು. ಅವರ ಕುರಿತ ಜಾನಪದ ಕತೆಯಂಥ ಕಥೆಗಳು ಉತ್ತರ ಕರ್ನಾಟಕದಲ್ಲಿ ತುಂಬಾನೇ ಜನಜನಿತವಾಗಿದ್ದವು. ಆದ್ದರಿಂದಲೇ ಅವರ ಸಾವು ಉತ್ತರ ಕರ್ನಾಟಕದ, ಮುಖ್ಯವಾಗಿ ಧಾರವಾಡ, ಹಾವೇರಿ, ಗದಗದ ನಿವಾಸಿಗಳಿಗೆ ಹೆಚ್ಚೇ ದುಃಖ ತಂದಿತು.

ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಶ್ರೀಸಾಮಾನ್ಯರಿಗೆ ಅವರ ಜೀವನ ಶೈಲಿಯ ಪರಿಚಯ ಅಷ್ಟಾಗಿ ಇರಲಿಲ್ಲ. ಎಷ್ಟೋ ಜನಕ್ಕೆ ಅಂಥವರೊಬ್ಬರು ನಮ್ಮ ನಡುವೆಯೇ ಬಾಳಿ ಬದುಕಿದರು ಎಂದೂ ಗೊತ್ತಿರಲಿಲ್ಲ. ಅವರ ಸಾವಿನ ಸುದ್ದಿಯನ್ನು ಪತ್ರಿಕೆಗಳ ಮುಖಪುಟದಲ್ಲಿ ಕಂಡಾಗಲೇ ಗವಾಯಿಗಳ ಇರುವಿನ ಅರಿವಾಗಿ ಓ ಐ ಸೀ, ಇಟ್ಸ್ ಸ್ಯಾಡ್ ಎಂದು ಹಲವರು ಉದ್ಘರಿಸಿದ್ದರು.

ನಮ್ಮ ಸಮೂಹ ಮಾಧ್ಯಮಗಳಲ್ಲಿ ಗವಾಯಿಯಂಥ ಜನಕ್ಕೆ ಜಾಗ ಸಿಗುವುದು ಕಡಿಮೆ. ಸಚಿನ್, ರಮ್ಯಾ, ಆಲ್ ಖೈದಾ, ಪ್ರಮೋದ್ ಮುತಾಲಿಕ್ ದೇಸಾಯಿ, ಎಸ್ಎಲ್ ಭೈರಪ್ಪ, ಯುಆರ್ ಅನಂತಮೂರ್ತಿ, ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ, (ಡಾಕ್ಟರ್)ನಿತ್ಯಾನಂದ ಸ್ವಾಮಿ, ಹರತಾಳು ಹಾಲಪ್ಪ, ಆಪಲ್, ಐಫೋನ್, ವೋಕ್ಸ್ ವ್ಯಾಗನ್, ಗೋಹತ್ಯೆ, ಹುಂಡೈ ಕಾರು, ವಿಚ್ಛೇದನ, ವಂಚನೆ, ಕುಟುಂಬ ದೌರ್ಜನ್ಯ, ಬೀದಿ ನಾಯಿ, ಹುಲಿ ಸಾವು, ನಾಯಿಪಾಡು, ಅತ್ಯಾಚಾರ, ರೇಪ್ ಮುಂತಾದ ಸಂಗತಿಗಳಿಗೆ 24x7 ವಾರ್ತಾ ಪ್ರಸಾರ ಮುಡಿಪಾಗಿರುವುದರಿಂದಾಗಿ ಗವಾಯಿಗಳ ಸುದ್ದಿ ಸದ್ದುಗದ್ದಲ ಮಾಡುತ್ತಿರಲಿಲ್ಲ.

ಪುಟ್ಟರಾಜ ಗವಾಯಿಗಳು ಸ್ವಪ್ರೇರಣೆಯಿಂದ ಸಮಾಜ ಸೇವೆ ಕೈಗೊಂಡವರು. ಸಮಾಜ ಕಲ್ಯಾಣ ಇಲಾಖೆ, ಸಂಸ್ಕೃತಿ ಇಲಾಖೆಗಳ ಅನುದಾನ ಮತ್ತು ಅಫ್ರೂವಲ್ ಗಳನ್ನು ಅವರು ಕನಸು ಮನಸಿನಲ್ಲೂ ಎಣಿಸಿದವರಲ್ಲ. ಪರಂತು, ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುವವರನ್ನು ನಮ್ಮ ಸರಕಾರ ಹಾಗೆ ಸುಮ್ಮನೆ ಕೈಬಿಡುವುದಿಲ್ಲ. ಇಂಥವರನ್ನು ಗುರುತಿಸಿ ಗೌರವಾದರಗಳನ್ನು ಸಮರ್ಪಿಸುವುದಕ್ಕೆಂದೇ ನಮ್ಮ ಸರಕಾರ ಪ್ರಶಸ್ತಿಗಳನ್ನು ಸ್ಥಾಪಿಸಿದೆ. ಪ್ರಶಸ್ತಿಗೆ ಯಾರು ಅರ್ಹರು ಎಂದು ತೀರ್ಮಾನಿಸುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನೂ ಸಾಕುತ್ತಿದೆ.

ಕರ್ನಾಟಕ ರತ್ನ ಪ್ರಶಸ್ತಿ ಲಿಂಗೈಕ್ಯ : ಕರ್ನಾಟಕ ಸರಕಾರ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯನ್ನು ಪುಟ್ಟರಾಜ ಗವಾಯಿಗಳಿಗೆ ಕೊಡಬಹುದು ಎಂಬ ಆಲೋಚನೆ ಸಂಸ್ಕೃತಿ ಇಲಾಖೆಗೆ ಒಮ್ಮೆ ಹೊಳೆದಿತ್ತು. ಇದನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಇಲಾಖೆಯ ಅಧಿಕಾರಿಗಳು ಗವಾಯಿಗಳ ಬಯೋಡೇಟಾ ಕೇಳಿದ್ದರಂತೆ. ಇದರಿಂದ ಚಕಿತರಾದ ಗವಾಯಿಗಳು 'ಬಯೋಡೇಟಾ ಅಂದ್ರೇನು, ನಾವು ಯಾಕೆ ಕೊಡಬೇಕು' ಎಂದು ತಮ್ಮ ಶಿಷ್ಯರಲ್ಲಿ ವಿಚಾರಿಸಿದರಂತೆ. ಯಾರಿಗೂ ಏನೂ ಇಲ್ಲ ಎಂದು ಹೇಳದ ಗವಾಯಿಗಳು ಕೊನೆಗೆ ತಮ್ಮ ಬಯೋಡೇಟಾವನ್ನು ಅಧಿಕಾರಿಗಳಿಗೆ ಕೊಟ್ಟುಬಿಟ್ಟರಂತೆ.

ಇದು 2008ರ ಸುದ್ದಿ. ಆಗ ಕರ್ನಾಟಕದಲ್ಲಿ ಮೈತ್ರಿ ಸರಕಾರದ ಆಳ್ವಿಕೆ, ಆನಂತರ ಸರಕಾರದ ಪತನ, ತರುವಾಯ ಸಾರ್ವತ್ರಿಕ ಚುನಾವಣೆಯ ಸಮಯ. ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಏನು ಮಾಡಬೇಕೆಂದೇ ತೋಚಲೊಲ್ಲದಂತಹ ಸಂದಿಗ್ಧ ಸ್ಥಿತಿ. ಎಷ್ಟೇ ಗಡಿಬಿಡಿ ಮಾಡಿಕೊಂಡರೂ ತಪ್ಪು ನಿರ್ಣಯಕ್ಕೆ ಬಾರದ ಸರಕಾರ ಆ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿಯನ್ನು ಚರ್ಚಾತೀತ ಅರ್ಹರೊಬ್ಬರಲ್ಲಾದ ತುಮಕೂರು ಶ್ರೀ ಸಿದ್ದಗಂಗಾ ಸ್ವಾಮಿಗಳ ಪದತಲಕ್ಕೆ ಅರ್ಪಿಸಿ ಧನ್ಯವಾಯಿತು.

ಅತ್ತ, ತಮ್ಮ ಬಯೋಡೇಟಾವನ್ನು ಸರಕಾರಕ್ಕೆ ಕೊಟ್ಟ ಮರುಕ್ಷಣದಲ್ಲೇ ಗವಾಯಿಗಳು ಮರೆತುಬಿಟ್ಟಿದ್ದರು. ಅದಾಗಲೇ ಅವರಿಗೆ 94 ವರ್ಷ. 2009ರಲ್ಲಾದರೂ ತಮ್ಮ ಆರಾಧ್ಯ ದೈವಕ್ಕೆ ಕರ್ನಾಟಕ ರತ್ನ ದಯಪಾಲಿಸಲಾಗುವುದೆಂದು ಗವಾಯಿಗಳ ಶಿಷ್ಯಕೋಟಿಯ ಬಯಕೆ ಆಗಿತ್ತು. ಆದರೆ ಬೆಕ್ಕು ಅಡ್ಡ ಬಂತು. ಆ ವರ್ಷ ಧರ್ಮಸ್ಥಳದ ವೀರೇಂದ್ರ ಹೆಗಡೆ ಮತ್ತು ಮೈಸೂರಿನ ದೇ. ಜವರೇಗೌಡರಿಗೆ ಕರ್ನಾಟಕ ರತ್ನ ಪ್ರಶಸ್ತಿ ಹಂಚಲಾಯಿತು. ವಿಧಿಯಾಟ ಯಾರು ಬಲ್ಲರು? ಗವಾಯಿಗಳು ತಮ್ಮ 97ನೇ ವರ್ಷದಲ್ಲಿ ಪರಂಧಾಮರಾಗಿ ಹೊಳೆಯುವ ನಕ್ಷತ್ರಗಳಲ್ಲಿ ಒಂದಾದರೆ, ಅವರ ಬಯೋಡೇಟಾ ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಳೆಯುವ ಕಡತಗಳ ಕಪಾಟಿನಲ್ಲಿ ಸುಮ್ಮನಾಯಿತು.

ಈಗ ಹೊಸ ವರ್ಷದ ಸುದ್ದಿ ಏನಪ್ಪಾ ಅಂದ್ರೆ 2010ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾರಿಗೆ ಕೊಡಬೇಕೆಂದು ನಿರ್ಧಾರವಾಗಬೇಕಾಗಿದೆ. ಅರ್ಹರೆಲ್ಲ ಅರ್ಜಿ ಹಾಕಿಕೊಳ್ಳಬಹುದು. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕೂಡ ತಮ್ಮ ಬಯೋಡೇಟಾವನ್ನು ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೂರಿಯರ್ ಮಾಡಬೇಕೆಂದು ನನ್ನ ವಿನಮ್ರ ಸಲಹೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X