ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಅಮೆರಿಕಾಗೆ ಎದೆ ತುಂಬಿ ಹಾಡುವೆನು

By * ಎಸ್ಕೆ. ಶಾಮ ಸುಂದರ
|
Google Oneindia Kannada News

SP Balasubramanyam
ಈಟಿವಿ ಕನ್ನಡ ಚಾನೆಲ್ಲಿನ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಎದೆ ತುಂಬಿ ಹಾಡುವೆನು' ಅಮೆರಿಕಾಗೆ ಬರಲು ಸಜ್ಜಾಗಿದೆ. ಕನ್ನಡ ಚಲನಚಿತ್ರದ ಹಾಡುಗಳನ್ನು ಹಾಡುವ ಇಂಪಾದ, ಸೊಂಪಾದ ಸ್ಪರ್ಧೆ ಈಗಾಗಲೇ ಕನ್ನಡ ನಾಡಿನಲ್ಲಿ ಜನಮನ ಸೂರೆಗೊಂಡಿರುವುದು ನಿಮಗೆ ಗೊತ್ತಿದೆ. ಎಸ್ ಪಿ ಬಾಲಸುಬ್ರಮಣ್ಯಂ ನಡೆಸಿಕೊಡುವ ಎದೆ ತುಂಬಿ... ಇದೀಗ ಸಾಗರದಾಚೆ ಇರುವ ಕನ್ನಡ ಕೋಗಿಲೆ ಮರಿಗಳಿಗೆ ಮಾಮರವಾಗಲಿದೆ. ಉತ್ತರ ಅಮೆರಿಕಾದಲ್ಲಿರುವ ಹಾಡು ಹಕ್ಕಿಗಳು ಎಸ್ ಪಿಬಿ ಎದುರೇ ಹಾಡಬಹುದಾದ ಈ ಅಪರೂಪದ ಅವಕಾಶಕ್ಕೆ ಸ್ವಾಗತ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಕನ್ನಡ ಕುಡಿಗಳಿಗೆ ಕೆಲವು ಕಿವಿಮಾತುಗಳು ಇಂತಿವೆ. ನಿಮಗೆ ಹಾಡುವ ಅದಮ್ಯ ಆಸೆ ಇರಬೇಕು. ಆಸೆಯ ಜತೆಗೆ, ಸಂಗೀತ ಅಭ್ಯಾಸ ಮಾಡಿದ್ದರೆ ಒಳಿತು. ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡುವುದರಲ್ಲಿ ಆಸಕ್ತಿಯಿದ್ದರಂತೂ ಈ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನೀವು ತುಂಬಾ ಲಾಯಕ್ಕು.

ನಿಬಂಧನೆಗಳು : ಭಾಗವಹಿಸುವುದಕ್ಕೆ ಕೆಲವು ನಿಬಂಧನೆಗಳಿವೆ. ಅದನ್ನು ಗುರುತುಹಾಕಿಕೊಳ್ಳಿ. ನಿಮ್ಮ ವಯಸ್ಸು 14ರಿಂದ 18ರ ಒಳಗೆ ಇರಬೇಕು. ನಿಮ್ಮ ಇತ್ತೀಚಿನ ಭಾವಚಿತ್ರ, ಜನ್ಮದಿನಾಂಕವನ್ನು ದೃಢಪಡಿಸಲು ಸೂಕ್ತವಾದ ದಾಖಲೆ, ನಿಮ್ಮ ತಾಯಿ ತಂದೆ ಅಥವಾ ಪೋಷಕರ ಒಪ್ಪಿಗೆ ಪತ್ರ ಮತ್ತು ನಿಮ್ಮ ಸ್ವವಿವರಗಳನ್ನು ಸಲ್ಲಿಸಬೇಕು. ಸ್ವವಿವರಗಳ ಜತೆಗೆ ನೀವೇ ಹಾಡಿದ ಒಂದು ಸಿನಿಮಾ ಹಾಡಿನ ಪ್ರತಿಯನ್ನು (ವಿಡಿಯೋ ಫೈಲ್) ಕಳಿಸಿಕೊಡಬೇಕು. ಕಳಿಸಬೇಕಾದ ವಿಳಾಸ : [email protected].

ಆಸಕ್ತಿಯನ್ನು ವ್ಯಕ್ತಪಡಿಸಿ ಅರ್ಜಿಗಳನ್ನು ಸಲ್ಲಿಸಿದ ಮಕ್ಕಳ ವಿವರಗಳು ಮತ್ತು ಕಂಠ ಮಾಧುರ್ಯವನ್ನು ಅಳೆದು ನೋಡಲಾಗುತ್ತದೆ. 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ ನಿರ್ವಾಹಕರು ನಡೆಸುವ ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸಿ ಅವರ ಹಾಡುಗಳ ಧ್ವನಿ ಮುದ್ರಣ ಮಾಡಿಕೊಳ್ಳಲಾಗುತ್ತದೆ. ಹಲವು ಸುತ್ತುಗಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗುವಂತೆ ಸ್ಪರ್ಧೆಯಲ್ಲಿ (screening test) ಪಾಸಾದ ಒಟ್ಟು 36 ಮಕ್ಕಳನ್ನು ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಲಾಗುತ್ತದೆ.

ಕೊನೆಯ ದಿನಾಂಕ : ನಿಮ್ಮ ವಿವರಗಳನ್ನು ಒಳಗೊಂಡ ಪ್ರವೇಶ ಪತ್ರಗಳನ್ನು ಕಳಿಸಲು ಕಡೆಯ ದಿನಾಂಕ ಭಾನುವಾರ ಅಕ್ಟೋಬರ್ 10, 2010. ವಿಳಾಸ : [email protected]. ಗಮನಿಸಿ : ಅರ್ಜಿ ಸಲ್ಲಿಸಿದವರನ್ನು ಎದೆ ತುಂಬಿ ಕಾರ್ಯಕ್ರಮದ ನಿರ್ವಾಹಕರೇ ಸಂಪರ್ಕಿಸುತ್ತಾರೆ.

ದಟ್ಸ್ ಕನ್ನಡ ಓದುಗರಲ್ಲಿ ವಿಶೇಷ ವಿನಂತಿ: ನಮ್ಮ ಅಂತರ್ಜಾಲ ತಾಣವನ್ನು ಅಮೆರಿಕದಾದ್ಯಂತ ಚದುರಿರುವ ಕನ್ನಡಿಗರು ನಿತ್ಯ ಬಳಸುತ್ತಾರಷ್ಟೆ. ಆದರೆ, ಎದೆ ತುಂಬಿ ಸ್ಪರ್ಧೆಯ ಸುದ್ದಿ ಎಲ್ಲರ ಕಣ್ಣಿಗೂ ಬೀಳದೇ ಹೋಗಬಹುದು. ಆದಕಾರಣ, ಇದನ್ನು ಓದಿದವರು ದಯಮಾಡಿ ನಿಮ್ಮ ನಿಮ್ಮ ರಾಜ್ಯಗಳಲ್ಲಿರುವ ಕನ್ನಡ ಕೂಟ ಅಥವಾ ಕನ್ನಡ ಸಂಘದ ಅಧ್ಯಕ್ಷರು ಮತ್ತು ಕೂಟ ವೆಬ್ ಸೈಟ್ ಮಾಡರೇಟರುಗಳಿಗೆ ಈ ಪುಟದ ಕೊಂಡಿಯನ್ನು ಫಾರ್ವರ್ಡ್ ಮಾಡುವುದು. ಮಾಡರೇಟರುಗಳು ತಮ್ಮ ಡೇಟಾ ಬೇಸಿನಲ್ಲಿರುವ ಸಂಘದ ಸದಸ್ಯ ಕುಂಟುಂಬ ವರ್ಗಗಳಿಗೆ ಈಟಿವಿ ಕರೆಯನ್ನು ತಲುಪಿಸಿದರೆ ಆಸಕ್ತಿ ಇರುವ ಎಲ್ಲ ಮಕ್ಕಳನ್ನೂ ತಲುಪುತ್ತದೆ. ಥ್ಯಾಂಕ್ಯು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X