ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಟಿಕ್ ಬಾವುಟಕ್ಕೆ ನೋ ಎನ್ನೋಣವೇ?

By * ಶಾಮಿ
|
Google Oneindia Kannada News

Say NO to plastic flags (courtesy : traveholic)
ಭಾರತ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೂ ಐದು ದಿವಸಗಳಿರುವಂತೆಯೇ ಮೂರು ಬಣ್ಣದ ರಾಷ್ಟ್ರಧ್ವಜಗಳ ಮಾರಾಟ ಬೆಂಗಳೂರಿನಲ್ಲಿ ಆರಂಭವಾಗಿದೆ. ಮಾಲುಗಳಲ್ಲಿ, ಮಾರುಕಟ್ಟೆಗಳಲ್ಲಿ, ಮೂಲೆಯಂಗಡಿಯಲ್ಲಿ, ಮುಖ್ಯವಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಬಾವುಟ ಮಾರಾಟ ಭರಾಟೆ ಕಣ್ಣಿಗೆ ಎದ್ದು ಕಾಣುತ್ತಿದೆ. ಸೈಕಲ್ ಹ್ಯಾಂಡಲ್ಲಿಗೆ, ಮೋಟರ್ ಬೈಕ್ ಕನ್ನಡಿಗೆ, ಕಾರುಗಳ ಡ್ಯಾಶ್ ಬೋರ್ಡಿಗೆ, ಆಟೋರಿಕ್ಷ ಹೆಗಲ ಮೇಲೆ, ಲಾರಿಗಳ ತಲೆ ಮೇಲೆ ಧ್ವಜಾರೋಹಣಕ್ಕೆ ಅಣಿಯಾಗಲು ವಾಹನ ಚಾಲಕರ ಬಾವುಟ ಖರೀದಿ ನಿಧಾನವಾಗಿ ಚುರುಕುಗೊಳ್ಳುತ್ತಿದೆ.

ನೀವೂ ತ್ರಿವರ್ಣ ಧ್ವಜ ಹಾರಿಸುತ್ತೀರೇನು? ನಿಮ್ಮ ಮನೆಯ ಓವರ್ ಹೆಡ್ ಟ್ಯಾಂಕಿನ ಮೇಲೆ ಒಂದು ಬಾವುಟ ಹಾರಿಸಿದರೆ ಹೇಗೆ? ಅಥವಾ ಹೋದ ವರ್ಷ ಕೊಂಡ ಪ್ಲಾಸ್ಟಿಕ್ ಬಾವುಟ ಶೋ ಕೇಸಿನಲ್ಲಿ ಕುಳಿತಲ್ಲೇ ಹಾರುತ್ತಿದೆಯೇನು?

ಬಾವುಟ ಯಾವುದೇ ಆಗಿರಲಿ, ಅದು ಹಾರುತ್ತಿರಬೇಕು. ಸ್ಟಾಟಿಕ್ ಆಗಿದ್ದರೆ ಅದನ್ನು ಬಾವುಟ ಎಂದು ಕರೆಯುವುದಕ್ಕೆ ಮನಸ್ಸು ಒಪ್ಪದು. ನಮ್ಮ ಬದುಕಿನ ಎಲ್ಲ ಮಗ್ಗಲುಗಳಿಗೂ ಪ್ಲಾಸ್ಟಿಕ್ ಬಳಕೆ ನುಗ್ಗಿರುವುದರಿಂದ ಸಹಜವಾಗಿಯೇ ಅದು ನಮ್ಮ ರಾಷ್ಟ್ರಧ್ವಜವನ್ನೂ ಆವರಿಸದೆ ಬಿಟ್ಟಿಲ್ಲ. ಪ್ಲಾಸ್ಟಿಕ್ ಬಳಕೆ ಮಿತಿ ಮೀರಿರುವುದರಿಂದ ಮತ್ತು ಬಳಸಿ ಬಿಸಾಕಿದ ಪ್ಲಾಸ್ಟಿಕ್ ವಸ್ತುಗಳ ವಿಲೇವಾರಿ ಸಮಾಜಕ್ಕೆ ತಲೆನೋವಾಗಿರುವ ಅರಿವು ನಮಗಿದ್ದೇ ಇದೆ. ಆದರೆ, ಅದರ ಹಾವಳಿಯಿಂದ ಬಿಡುಗಡೆಯಾಗುವ ಮಾರ್ಗೋಪಾಯಗಳು ಕಾಣಿಸುತ್ತಿಲ್ಲ. ಮನುಕುಲಕ್ಕೆ ಅಪಾಯ ಒಡ್ಡುವ ಅಣು ತ್ಯಾಜ್ಯ ನಿರ್ವಹಣೆ ಕೌಶಲ್ಯಗಳನ್ನೇ ಕಲಿಯುತ್ತಿರುವ ಮಾನವ ಜುಜೂಬಿ ಪ್ಲಾಸ್ಟಿಕ್ ಭೂತದಿಂದ ಬಿಡಿಸಿಕೊಳ್ಳಲು ಹೆಣಗುತ್ತಿರುವುದು ವಿಪರ್ಯಾಸ.

ಹತ್ತಿ ಬಟ್ಟೆಯಿಂದ ತಯಾರಿಸಿದ ಬಾವುಟದ ಮೈಮಾಟವೇ ಚೆನ್ನ. ಅದನ್ನೇ ಕೊಳ್ಳಬೇಕು ಮತ್ತು ಹಾರಿಸುತ್ತಿರಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ಔದ್ಯೋಗಿಕ ಕೆಲಸಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಲಿ ಮಾಡಬೇಕು. ಹಾಗಾದಲ್ಲಿ ಮಾತ್ರ ರೆಕ್ಸೀನು, ಪ್ಲಾಸ್ಟಿಕ್ಕು, ಪಾಲಿಥೀನಿನಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ನಿರಾಕರಿಸುವುದು ಸುಲಭ. ಪ್ಲಾಸ್ಟಿಕ್ ಹಾವಳಿಯನ್ನು ವಿರೋಧಿಸುವುದಕ್ಕೆ ಪ್ಲಾಸ್ಟಿಕ್ ಬಾವುಟಗಳ ನಿಷೇಧ ಭಾರತ ಜನನಿಯ ತನುಜಾತೆ ಕರ್ನಾಟಕದ ರಾಷ್ಟ್ರೀಯ ಸಂಕೇತವಾಗಲೂಬಹುದು. ಹತ್ತಿಯಿಂದ ಮಾಡಿದ ಬಾವುಟಗಳನ್ನು ದೇಶವಾಸಿಗಳು ಬಳಸಲು ಆರಂಭಿಸಿದರೆ ಉತ್ತರ ಕರ್ನಾಟಕದ ಗರಗದ ಧ್ವಜ ತಯಾರಕರು ಮತ್ತು ವಿದರ್ಭದ ಹತ್ತಿ ಬೆಳೆಗಾರರು ಸಂತೋಷಪಡಬಹುದು.

ನಾವು ಮುನ್ನೂರಾ ಅರುವತ್ತೈದು ದಿನ ಪ್ಲಾಸ್ಟಿಕ್ ಬಳಸುತ್ತಿರುವಾಗ ಆಗಸ್ಟ್ 15ರ ಒಂದು ದಿನಮಾತ್ರಕ್ಕೆ ಪ್ಲಾಸ್ಟಿಕ್ ನಿರಾಕರಿಸಿ ಏನು ಪ್ರಯೋಜನ ಎಂದು ಮರುಪ್ರಶ್ನೆ ಹಾಕುವವರೂ ಇದ್ದಾರೆ. ಅದಕ್ಕೆ ನಮ್ಮ ಬಳಿ ಉತ್ತರವಿಲ್ಲ. ಆಗಸ್ಟ್ 15ರ ದಿನ ಕೆಲವು ಕಡೆ, ಪ್ರಮುಖವಾಗಿ ಸರಕಾರಿ ಕಟ್ಟಡಗಳ ಮೇಲೆ ಧ್ವಜ ಹಾರಿಸುವುದು ಪದ್ದತಿ. ಈ ಉತ್ಸಾಹ ಖಾಸಗಿ ಕಟ್ಟಡಗಳಲ್ಲಿ ಕಾಣಸಿಗದು. ಖಾಸಗಿ, ಸರಕಾರಿ ಭೇದಭಾವವಿಲ್ಲದೆ ನಗರಗಳ ಆಯಕಟ್ಟಿನ ಜಾಗೆಗಳಲ್ಲಿ ಸದಾಕಾಲ ಹಾರಾಡುವ ಮೂರು ನಕ್ಷತ್ರಗಳ ರಾಷ್ಟಧ್ವಜಗಳನ್ನು ಇತ್ತೀಚೆಗೆ ನಾವು ಅಮೆರಿಕಾದಲ್ಲಿ ಕಂಡೆವು. ನಾನಾ ನಮೂನೆಗಳಲ್ಲಿ ಉತ್ಪಾದಿಸಿದ ಅಮೆರಿಕನ್ ಬಾವುಟಗಳು ಅಲ್ಲಿ ಯಾವಾಗ ಬೇಕಾದರೂ ಕೊಳ್ಳಲು ಲಭ್ಯವಿರುತ್ತದೆ.

ಕಳೆದ ಜುಲೈ 6ರಂದು ಅರಿಜೋನಾದ ಆಲ್ ವೇಸ್ ವಾಲ್ ಮಾರ್ಟ್ ಗೆ ನಾವು ಹೋಗಿದ್ದೆವು. ಅಮೆರಿಕಾ ಬಾವುಟಗಳನ್ನು ಜೋಡಿಸಿಟ್ಟಿದ್ದ ಶೆಲ್ಫ್ ನಲ್ಲಿ ಅನೇಕ ಆಕಾರ, ವಿನ್ಯಾಸಗಳಲ್ಲಿದ್ದ ಬಾವುಟಗಳು ಕಣ್ಣಿಗೆ ಬಿದ್ದವು. ಅವೂ ಕೂಡ ಭಾರತದ ರೀತಿ ಪ್ಲಾಸ್ಟಿಕ್ ಅಥವಾ ಗಾಜಿನಿಂದ ಮಾಡಿದವೇ. ಒಂದು ವ್ಯತ್ಯಾಸವೆಂದರೆ ಅಮೆರಿಕಾದ ಬಾವುಟಗಳ ಮೇಲೆ Made in China ಎಂಬ ಟ್ಯಾಗುಗಳು ಕಾಣಿಸಿಗುತ್ತವೆ. ಭಾರತದಲ್ಲಿ ಹಾಗಿಲ್ಲ. Anywhichway, Happy 15th.

ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X