ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ-ನಾವಿಕ : ಕುಲವೊಂದು ಕವಲೆರಡು

By * ಶಾಮ್
|
Google Oneindia Kannada News

The genesis of world kannada conventions
3.79 ದಶಲಕ್ಷ ಚದರ ಮೈಲಿ ವಿಸ್ತೀರ್ಣದಲ್ಲಿ ಪವಡಿಸಿರುವ ಉತ್ತರ ಅಮೆರಿಕ ಮಣ್ಣಿನಲ್ಲಿ 50 ರಾಜ್ಯಗಳಿವೆ. ದಶದಿಕ್ಕುಗಳಿಗೆ ಚಾಚಿಕೊಂಡಿರುವ ಈ ರಾಜ್ಯಗಳಲ್ಲಿ ನೆಲೆಸಿರುವ ಜಗತ್ತಿನ ಎಲ್ಲ ದೇಶ ಜನಪ್ರತಿನಿಧಿಗಳ ಒಟ್ಟು ಗಾತ್ರ, 2010 ಜುಲೈ 21ರ ಅಂಕೆ ಸಂಖ್ಯೆ ಪ್ರಕಾರ 31 ಕೋಟಿ. ಬೇರೆಬೇರೆ ದೇಶಗಳಿಂದ ವಲಸೆ ಬಂದು ಅಮೆರಿಕಾದಲ್ಲಿ ಠಿಕಾಣಿ ಹೂಡಿರುವ ಜನಾಂಗಗಳಲ್ಲಿ ಭಾರತೀಯರ ಸಂಖ್ಯೆ ಅಪಾರವಾಗಿದೆ. ಅಮೆರಿಕಾದಲ್ಲಿ ಜೀವನ ಅರಸುತ್ತಿರುವ ಅತಿಹೆಚ್ಚು ಪರದೇಶಿಗಳ ಸಾಲಿನಲ್ಲಿ ಭಾರತಕ್ಕೆ ಮೂರನೇ ಸ್ಥಾನ.

ಈ ಭಾರತೀಯರಲ್ಲಿ ಕರ್ನಾಟಕದಿಂದ ವಲಸೆಬಂದ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಕರಾರುವಾಕ್ಕಾದ ಅಂಕೆಸಂಖ್ಯೆಗಳು ಲಭ್ಯವಿಲ್ಲ. ಸುಮಾರು 60 ಸಾವಿರ ಕನ್ನಡಿಗರು ಅಮೆರಿಕದಲ್ಲಿ ಇದ್ದಾರೆ ಎಂದು ಅಕ್ಕದ ಮಾಜಿ ಸದಸ್ಯ ವಿ.ಎಂ. ಕುಮಾರಸ್ವಾಮಿಯವರು ತಮ್ಮ ಸರಣಿ ಇಮೇಲುಗಳಲ್ಲಿ ಆಗಾಗ ಬರೆಯುತ್ತಿದ್ದುದನ್ನು ಓದಿದ ನೆನಪು. ದಟ್ಸ್ ಕನ್ನಡದ ಅಂತರ್ಜಾಲ ದಾಖಲೆಗಳ ಪ್ರಕಾರ ಈ ಸಂಖ್ಯೆ ಮೂವತ್ತು ಸಾವಿರ ದಾಟಿಲ್ಲ.

ಭಾರತದಿಂದ ಅಮೆರಿಕೆಗೆ ವಲಸೆ ಹೋಗುವವರು ಖಂಡಿತವಾಗಿ ವಿದ್ಯೆ ಗಳಿಸಿದವರೇ ಆಗಿರುವುದರಿಂದ ಅವರ ಜೀವನ ಉದ್ಯೋಗಾವಕಾಶ ಮತ್ತು ವಾಣಿಜ್ಯ ಭರಿತ ಜನನಿಬಿಡ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಸಾಗುತ್ತದೆ. ಜಾರ್ಜಿಯ, ಕೆಂಟುಕಿ, ಮಿಸ್ಸಿಸಿಪ್ಪಿ ಮುಂತಾದ ಹಿಂದುಳಿದ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಕನ್ನಡಿಗರು ಸಿಯಾಟಲ್ ನಿಂದ ಫ್ಲಾರಿಡಾದವರೆಗೆ, ಉತ್ತರ ಕೆರೋಲಿನಾದಿಂದ ಸ್ಯಾನ್ ಡಿಯಾಗೋವರೆಗೆ ಸುಮಾರು 40 ರಾಜ್ಯಗಳಲ್ಲಿ, ವಿವಿಧ ಸಂಖ್ಯೆಗಳಲ್ಲಿ ಹರಿದು ಹಂಚಿಹೋಗಿದ್ದಾರೆ.

ತಾವಿರುವ ಪ್ರದೇಶದಲ್ಲಿ ನಮ್ಮವರು ತಮ್ಮವರು ಯಾರಾದರೂ ಇದ್ದಾರಾ ಎಂದು ಈ ಕನ್ನಡಿಗರು ಹುಡುಕುತ್ತಿರುತ್ತಾರೆ. ಹತ್ತು ಕುಟುಂಬಗಳು ಜತೆಯಾದರೆ ಸಾಕು. ಅವೆರೆಲ್ಲ ಜತೆಗೂಡಿ ಒಂದು ಕನ್ನಡ ಸಂಘವನ್ನು ಕಟ್ಟಿಕೊಳ್ಳುತ್ತಾರೆ. ಅವುಗಳಿಗೆ ಪಂಪ, ಶ್ರೀಗಂಧ, ಕಸ್ತೂರಿ, ಮಲ್ಲಿಗೆ, ಕಾವೇರಿ, ಬೃಂದಾವನ, ವಿದ್ಯಾರಣ್ಯ, ಸಹ್ಯಾದ್ರಿ ಮುಂತಾದ ಕರ್ನಾಟಕ ಸ್ಮರಣೆಯ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಸಂಘದ ಆಶ್ರಯದಲ್ಲಿ ವರ್ಷಕ್ಕೆ ಮೂರೋ ನಾಲಕ್ಕೋ ಕರ್ನಾಟಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ. ಕನ್ನಡ ಜನರ ಈ ಪರಿಯ ಪ್ರಾದೇಶಿಕ ಸಂಘಗಳು ಅಮೆರಿಕೆಯಲ್ಲಿ ಮೂವತ್ತೇಳಿವೆ.

ಎಲ್ಲಾ ರಾಜ್ಯಗಳ ಎಲ್ಲಾ ಸಂಘಗಳ ಸದಸ್ಯರು ಒಟ್ಟಾಗಿ ಕಲೆತು ಸಂಭ್ರಮಿಸುವಂಥ ಒಂದು ವೇದಿಕೆಯ ಕಲ್ಪನೆ ಮೈದಾಳಿದ್ದು ಹನ್ನೆರಡು ವರ್ಷಗಳ ಹಿಂದೆ. ಅಮೆರಿಕಾದ ಎಲ್ಲ ಕನ್ನಡಿಗರನ್ನೂ ಕಲೆಹಾಕಿ ವಿಶ್ವ ಕನ್ನಡಿಗರ ಸಮ್ಮೇಳನ ನಡೆಸಬೇಕೆಂಬ ಆಲೋಚನೆ ಮೂಡಿದುದು ಮರಳುಗಾಡಿನ ನಗರ ಫೀನಿಕ್ಸಿನಲ್ಲಿ (1998). ಈ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಅಮೆರಿಕ ವಿಶ್ವ ಕನ್ನಡ ಸಮ್ಮೇಳನದ ಪದಗುಚ್ಛದ ಬೀಜಗಳು ಮೊಳಕೆ ಒಡೆದದ್ದು ಅಲ್ಲೇ.

ಅಲ್ಲಿಂದೀಚೆಗೆ ಅಮೆರಿಕನ್ನಡಿಗರು ಆಯೋಜಿಸುವ ಒಟ್ಟು ಆರು ಸಮ್ಮೇಳನಗಳು ಆಗಿಹೋಗಿವೆ. ಎರಡು ವರ್ಷದ ಹೆಣ್ಣುಕೂಸು ನಾವಿಕ ವತಿಯಿಂದ ಒಂದು, ಎಂಟು ವರ್ಷದ ಹುಡುಗ ಅಕ್ಕ ವತಿಯಿಂದ ಐದು. ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ. ವಿಶಾಲ ಅಮೆರಿಕದಲ್ಲಿ ಕಾರ್ಯೋನ್ಮುಖವಾಗಿರುವ ಈ ಎರಡೂ ಕನ್ನಡ ಸಂಸ್ಥೆಗಳ ಧ್ಯೇಯ ಮತ್ತು ಉದ್ದೇಶ ವಿಶಾಲ ತಳಹದಿಯಲ್ಲಿ ಒಂದೇ ಆಗಿರಬೇಕೆಂದು ಬಹು ಸಂಖ್ಯಾತ ಕನ್ನಡಿಗರು ಅಪೇಕ್ಷೆ ಪಡುತ್ತಾರೆ. ಅವು ಸ್ಥೂಲವಾಗಿ ಹೀಗಿವೆ:

ಅಮೆರಿಕಾದಲ್ಲಿ ಕರ್ನಾಟಕ ಪರಿವಾರದ ರಾಜಕೀಯೇತರ ಸಂಘಟನೆ, ಕನ್ನಡಿಗರ ಸಮ್ಮಿಲನಗಳು, ಕರ್ನಾಟಕದೊಂದಿಗೆ ನಿರಂತರ ಬೆಸುಗೆ, ತಾಯ್ನಾಡಿನೊಂದಿಗೆ ಅರ್ಥಪೂರ್ಣ ವಾಣಿಜ್ಯ, ಭಾವನಾತ್ಮಕ ಸಾಂಸ್ಕೃತಿಕ ಬಾಂಧವ್ಯ ವೃದ್ಧಿ. ಈ ಉದ್ದೇಶಗಳನ್ನು ಸಾಧಿಸಲು ಎರಡು ಸಂಘಟನೆಗಳು ಬೇಕಿತ್ತೇ ಎಂಬ ಪ್ರಶ್ನೆ ಕೇಳುವ ಕಾಲ ಮಿಂಚಿಹೋಗಿದೆ. ಅಮೆರಿಕ ಕನ್ನಡಿಗರ ಹೊಲಗಳಲ್ಲಿ ಅಕ್ಕ ಮತ್ತು ನಾವಿಕ ಸಂಸ್ಥೆಗಳು ಜೋಡೆತ್ತಿನ ಬೇಸಾಯ ಮಾಡುವ ಕಾಲಘಟ್ಟ ಸನ್ನಿಹಿತವಾಗಿರುವುದು ಸ್ಪಷ್ಟವಾಗಿದೆ.

English summary
The genesis of world kannada conventions manifested by karnataka persons in north America. An aerial view by Sham.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X