ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಡಿತರಿಗೆ ಇಲ್ಲ, ಪಾಮರರಿಗೆ ಅಲ್ಲ

By Shami
|
Google Oneindia Kannada News

Dr. HS Venketesh Murthy
ಕನ್ನಡ ಸಾಹಿತ್ಯ ಪರಂಪರೆಯನ್ನು ಇನ್ನಷ್ಟು ಶ್ರದ್ಧೆಯಿಂದ ಅರಿಯಬೇಕೆಂದು ಅಪೇಕ್ಷಿಸುವ ಬೆಂಗಳೂರಿನ ಕೆಲವು ಕನ್ನಡಿಗರು ಕಲೆತು ತಮ್ಮತಮ್ಮೊಳಗೆ ಆಯೋಜಿಸಿಕೊಂಡಿರುವ ಅಪ್ಪಟ ಕನ್ನಡ ಸಾಹಿತ್ಯಿಕ ಕಾರ್ಯಕ್ರಮದ ಹೆಸರು 'ಅಭ್ಯಾಸ'. ಪ್ರತಿ ತಿಂಗಳು ಒಬ್ಬ ಕನ್ನಡಿಗನ ಮನೆಯಲ್ಲಿ ಆಸಕ್ತರು ಸೇರಿಕೊಳ್ಳುವುದು. ಉದ್ದಾಮ ಪಂಡಿತರಿಂದ ಕವಿ ಕಾವ್ಯ ಪರಂಪರೆಯ ವಿಷಯ ವಿಷದ ವಿಶೇಷಗಳನ್ನು ತನ್ಮಯತೆಯಿಂದ ಗ್ರಹಿಸುವುದು ಅಭ್ಯಾಸದ ಉದ್ದೇಶ.

'ಅಭ್ಯಾಸ' ಒಂದು ಖಾಸಗಿ ನೆಲೆಯಲ್ಲಿ ಒಬ್ಬರ ಖಾಸಗಿ ಮನೆಯಲ್ಲಿ ಏರ್ಪಡುವ ಕಾರ್ಯಕ್ರಮ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿತಿಂಗಳು ಕನ್ನಡ ಭವನದಲ್ಲಿ ಆಯೋಜಿಸುವ ಮನೆಯಂಗಳದಲ್ಲಿ ಮಾತುಕತೆಯಂತಾಗಲೀ ಅಥವಾ ಬಾದಾಮಿ ಹೌಸ್ ನಲ್ಲಿ ಜರುಗುವ 'ಬೆಳ್ಳಿ ಹೆಜ್ಜೆ' ಮಾದರಿಯ ಎಲ್ಲರೊಳಗೂ ಒಂದಾಗುವಂತಹ ಕಾರ್ಯಕ್ರಮಗಳಂತಲ್ಲ. ಇದು ವಿಮರ್ಶಕ ನಾಗರಾಜ ವಸ್ತಾರೆ ಅವರ ಕನ್ನಡ ಪ್ರೀತಿಯ ಸಣ್ಣದೊಂದು ಉಮೇದು ಮಾತ್ರ. ಪೂರ್ತಿ ವಿವರಗಳಿಗೆ ಕೆಳಗಡೆ ಅಭ್ಯಾಸ ಬಳಗದ ಪತ್ರ ಇದೆ. ಓದಿ.

ಇಷ್ಟಪಟ್ಟರೆ ನೀವೂ ಈ 'ಅಭ್ಯಾಸ'ದಲ್ಲಿ ತೊಡಗಿಕೊಳ್ಳಬಹುದು. ನೆನಪಿಡಬೇಕಾದ ಅಂಶವೆಂದರೆ ಇದು ಪಂಡಿತರಿಗಲ್ಲ, ಪಾಮರರಿಗೂ ಅಲ್ಲ. ನೀವು ಹಳೆಗನ್ನಡ ಸಾಹಿತ್ಯದ ಕೊನೈಷರ್ ಆಗಿದ್ದರೆ 15 ತೃಪ್ತಿದಾಯಕ ಭಾನುವಾರಗಳಿಗೆ ಸಿದ್ಧರಾಗಬಹುದು. ಮನೆ ಚಿಕ್ಕದು, ಜಾಗ ಇಷ್ಟೆ. ಆದಕಾರಣ ಸಾಹಿತ್ಯ ಪರಿಚಾರಕ ರಾಜಶೇಖರ್ ಮಾಳೂರ್ ಅವರಿಗೆ ಈಗಲೇ ಒಂದು ಇಮೇಲ್ ಮಾಡಿ ಸ್ಥಳಾವಕಾಶ ಇದೆಯಾ? ತಿಳಿದು ಮುಂದುವರೆದರೆ ಕ್ಷೇಮ. ಅವರು ಈಗಾಗಲೇ ಹೌಸ್ ಫುಲ್ ಬೋರ್ಡ್ ಹಾಕಿದ್ದರೆ ನಾನು ಜವಾಬ್ದಾರನಲ್ಲ, ಕ್ಷಮಿಸಿ - ಶಾಮ್.

* ಶಾಮಿ

ನಾವು ಕೆಲವು ಸಾಹಿತ್ಯಾಸಕ್ತ ಗೆಳೆಯರು ಕನ್ನಡದ ಸಾಹಿತ್ಯಿಕ ಪರಂಪರೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸಿಕೊಳ್ಳುವ ಪ್ರಯತ್ನವೇ ಈ 'ಅಭ್ಯಾಸ". ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರ ಗುರುತ್ವದಡಿಯಲ್ಲಿ ಆಧುನಿಕಪೂರ್ವ ಕನ್ನಡದ ಮೇರು ಕವಿ/ಕೃತಿಗಳನ್ನು ಅಭ್ಯಸಿಸುವ ಇರಾದೆ ನಮ್ಮದು. ಇದೇ ಏಪ್ರಿಲ್ 18ನೇ ಭಾನುವಾರದಂದು 'ಅಭ್ಯಾಸ"ಕ್ಕೆ ಚಾಲನೆ ಮತ್ತು ಪ್ರಾರಂಭ.

ತಿಂಗಳಿಗೊಮ್ಮೆ ಒಂದು ಭಾನುವಾರ ನಮ್ಮಲ್ಲೊಬ್ಬ ಗೆಳೆಯನ ಮನೆಯಲ್ಲಿ ಸೇರಿ, ಒಬ್ಬ ಕನ್ನಡ ಕವಿ/ಕರ್ತೃವಿನ ಪರಿಚಯ, ಆತನ ದೇಶ/ಕಾಲಮಾನಗಳ ತಿಳಿವಳಿಕೆ, ಆತನ ಪದ್ಯ/ಗದ್ಯ/ಕಾವ್ಯದ ಉಲ್ಲೇಖ ಮತ್ತು ಅದರ ಬಗ್ಗೆ ವಿಚಾರ ವಿನಿಮಯ, ಮಾತುಕತೆ. ಇವು ಈ 'ಅಭ್ಯಾಸ"ದ ಉದ್ದೇಶ. ಆದಿಕವಿ ಪಂಪನನ್ನು ಮೊದಲುಗೊಂಡು ಮುದ್ದಣನವರೆಗೆ ಸುಮಾರು ಹದಿನೈದು ಕಾವ್ಯಗಳನ್ನು ಪರಿಚಯಿಸಿಕೊಳ್ಳುವ ನಮ್ಮ ಉತ್ಸುಕತೆಯಲ್ಲಿ ಪಾಲುಗೊಳ್ಳುವುದಿದ್ದರೆ ತಾವೂ ಬನ್ನಿ. ನಮ್ಮೊಡನೆ ಅಭ್ಯಾಸಿಗಳಾಗಿ.

ಇನ್ನೊಂದು ವಿಷಯ. ಪಂಪ, ರನ್ನ ಅನ್ನುತ್ತಲೇ 'ಕಬ್ಬಿಣದ ಕಡಲೆ"ಯೆಂದು ಹಿಂಜರಿಕೆ ಬೇಡ. ಇದು ಸಾಹಿತ್ಯೇತರ/ಕನ್ನಡೇತರ ಲೋಕದಲ್ಲಿರುವ ನಮ್ಮಂಥವರಿಗೆಂದೇ ಹೇಳಿ ಮಾಡಿಸಿರುವ ಅತಿ ಸರಳ ಪಠ್ಯಕ್ರಮ. ಕಾವ್ಯದ ಘನವಾದ ಓದು ನಮ್ಮ ಉದ್ದೇಶವಲ್ಲ. ಸಾವಿರಾರು ವರ್ಷಗಳಲ್ಲಿ ನಮ್ಮ ನುಡಿ ಬೆಳೆದು ಬಂದ ಬಗೆಯನ್ನು ಸಂಕ್ಷಿಪ್ತವಾಗಿ ಅರಿಯುವುದಷ್ಟೇ ಇಂಗಿತ.

ಹದಿನೈದು ತಿಂಗಳುಗಳ ಈ ಸರಣಿಯಲ್ಲಿ; ಪಂಪ, ರನ್ನ, ಜನ್ನ, ನಾಗಚಂದ್ರ, ಅಲ್ಲಮ, ಬಸವಣ್ಣ, ಅಕ್ಕ ಮಹಾದೇವಿ, ಪುರಂದರ, ಕನಕ, ರಾಘವಾಂಕ, ಹರಿಹರ, ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ ಮತ್ತು ಮುದ್ದಣ:- ಇವರುಗಳನ್ನು ಸಂಕ್ಷಿಪ್ತವಿದ್ದರೂ ಪ್ರಾತಿನಿಧಿಕವಾಗಿ ನಮಗೆ ಓದಿಸಲು ನಮ್ಮೊಡನೆ ಕನ್ನಡದ ಕೆಲವು ಮುತ್ಸದ್ದಿಗಳಿರುತ್ತಾರೆ. ಇಡೀ ಸರಣಿಯ ಒಟ್ಟು ರೂಪುರೇಷೆಯನ್ನು ಡಾ. ವೆಂಕಟೇಶಮೂರ್ತಿಯವರು ಮಾಡಿರುತ್ತಾರೆ.

* ಏಪ್ರಿಲ್ ಹದಿನೆಂಟರ ಭಾನುವಾರದಂದು ಮುಂಜಾನೆ 9.30ರ ಸುಮಾರಿಗೆ.
* 217, ಪೃಥಾ, 3ನೇ ಮುಖ್ಯರಸ್ತೆ, ರಾಮಾಂಜನೇಯ ನಗರ, ಚಿಕ್ಕಲ್ಲಸಂದ್ರದಲ್ಲಿ.
* ನಡೆಯಲಿರುವ ಮೊದಲ 'ಅಭ್ಯಾಸ"ದಲ್ಲಿ ಡಾ. ಎಚ್ಚೆಸ್ವಿಯವರೇ ಆದಿಕವಿ ಪಂಪನನ್ನು ಓದಿ ಓದಿಸುತ್ತಾರೆ.
* ಪಾಲುಗೊಳ್ಳಿ.

('ಅಭ್ಯಾಸ"ವನ್ನು ನಾವು ಅತ್ಯಂತ ಆಪ್ತ ಮತ್ತು ಖಾಸಗೀ ನೆಲೆಯಲ್ಲಿ ನಡೆಸುತ್ತಿರುವುದರಿಂದ ಅಭ್ಯಾಸಿಗಳ ಗರಿಷ್ಠ ಸಂಖ್ಯೆಯನ್ನು ಇಪ್ಪತ್ತೈದೆಂದು ನಿಗದಿಸಿದ್ದೇವೆ. ಹಾಗಾಗಿ ತ್ವರೆ ಮಾಡಿ.) ಮೊದಲು ನೊಂದಾಯಿಸಿಕೊಂಡವರಿಗೆ ಆದ್ಯತೆ. ಆಸಕ್ತರು ಈ ಇಮೇಲ್ ವಿಳಾಸಕ್ಕೆ ಬರೆದುಕೊಂಡು ಸ್ಥಳಾವಕಾಶ ಲಭ್ಯತೆ ಬಗೆಗೆ ತಿಳಿದುಕೊಳ್ಳಬಹುದು. ರಾಜಶೇಖರ್ ಮಾಳೂರ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X