ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಮುರುಕ ವರದಕ್ಷಿಣೆ ವಿರುದ್ಧ ಅಭಿಯಾನ

By * ಶಾಮ್
|
Google Oneindia Kannada News

Aryadan Shoukath
ನಾನು ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ ಮತ್ತು ನಾನು ವರದಕ್ಷಿಣೆಯನ್ನು ಕೊಡುವುದಿಲ್ಲ ಎಂದು ಆ ಹಳ್ಳಿಯ ಜನ ಪ್ರತಿಜ್ಞೆ ಮಾಡಿ ಒಂದು ವರ್ಷ ಆಯಿತು. ಸ್ವೀಕರಿಸಿದ ಪ್ರತಿಜ್ಞೆಯಂತೆ ನಡೆಯಲೂ ಅವರು ಆರಂಭಿಸಿದರು. ಅದರ ಫಲವಾಗಿ ಗ್ರಾಮದಲ್ಲಿ ಮನೆಮಾಡಿದ್ದ ಶೇ.85ರಷ್ಟು ವರದಕ್ಷಿಣೆ ಕೊಡುಕೊಳ್ಳುವಿಕೆ ಪಿಡುಗು ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 40ಕ್ಕೆ ಕುಸಿದು ಬಿತ್ತು.

ಸಾಮಾಜಿಕ ಪಿಡುಗುಗಳ ವಿರುದ್ಧ ಅವಿರತ ಹೋರಾಟ ನಡೆಸುವ ಸಂಘ ಸಂಸ್ಥೆಗಳ ಬಗ್ಗೆ ನಾವು ಓದುತ್ತಲೇ ಇರುತ್ತೇವೆ. ಆದರೆ ಕೇರಳದ ಮಲ್ಲಾಪುರಂ ಜಿಲ್ಲೆಯ ನಿಲಂಬೂರು ಗ್ರಾಮದ ಜನತೆ ವರದಕ್ಷಿಣೆ ವಿರುದ್ಧ ಹೋರಾಟಕ್ಕೆ ಸಂಕಲ್ಪ ಮಾಡಿದರು ಮತ್ತು ತಮಗೆ ತಾವೇ ಕೊಟ್ಟುಕೊಂಡ ವಚನವನ್ನು ಪಾಲಿಸಿಕೊಂಡೂ ಬಂದರು.

ಶೇ.40ಕ್ಕೆ ಕುಸಿದ ವರದಕ್ಷಿಣೆ ಪಿಡುಗಿನಿಂದ ಗ್ರಾಮಸ್ಥರು ಸಂತುಷ್ಟರೇನೂ ಆಗಿಲ್ಲ. ಅನಿಷ್ಟವನ್ನು ಬೇರು ಸಹಿತ ಕಿತ್ತು ಹಾಕುವ ಉದ್ದೇಶದ ಎರಡು ಅಂತರ್ಜಾಲ ತಾಣಗಳನ್ನು ಆರಂಭಿಸಲು ಅವರು ತಯ್ಯಾರಿ ನಡೆಸಿದ್ದಾರೆ. ಬರುವ ಸೋಮವಾರ 8ನೇ ತಾರೀಖು ಮತ್ತು ಅಂತರ್ಜಾಲ ತಾಣಗಳು ಕಾರ್ಯಾರಂಭ ಮಾಡುತ್ತವೆ. ವೆಬ್ ಸೈಟುಗಳನ್ನು ಕೇರಳದ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಅವರು ತಿರುವನಂತಪುರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.

ನಿಲಂಬೂರಿನ ಜನಸಂಖ್ಯೆ 50,000. ಇವರಲ್ಲಿ ಶೇ.40 ಮಂದಿ ಮುಸ್ಲಿಂರಾದರೆ ಉಳಿದವರು ಹಿಂದೂ ಮತ್ತು ಕ್ರಿಶ್ಚಿಯನ್ ಮತಕ್ಕೆ ಸೇರಿದವರಾಗಿದ್ದಾರೆ. ಗ್ರಾಮದಲ್ಲಿ ವರದಕ್ಷಿಣೆ ನಿರ್ಮೂಲನ ಚಳವಳಿಯ ಮುಂದಾಳು ಆರ್ಯಾಡನ್ ಶೌಕತ್. ಇವರು ಕೇರಳದ ಕಾಂಗ್ರೆಸ್ ನಾಯಕ ಆರ್ಯಾಡನ್ ಮೊಹಮದ್ ಅವರ ಮಗ.

ಶೌಕತ್ ಚಲನಚಿತ್ರ ನಿರ್ಮಿಸುತ್ತಾರೆ. ಕಮರ್ಷಿಯಲ್ಲೂ ಅಲ್ಲ, ಕಲಾತ್ಮಕ ಚಿತ್ರವೂ ಅಲ್ಲ. ಸಾಮಾಜಿಕ ಸಂದೇಶ ಬೀರುವ ಅಚ್ಚುಕಟ್ಟಾದ ಚಿತ್ರಗಳು ಅವರ ಆಯ್ಕೆ. ಮುಸ್ಲಿಂ ಜನಾಂಗದಲ್ಲಿ ಚಿಕ್ಕ ಹೆಣ್ಣು ಮಕ್ಕಳನ್ನು ವೃದ್ಧರಿಗೆ ಮದುವೆ ಮಾಡಿಕೊಡುವ ಅಮಾನವೀಯ ಸಂಪ್ರದಾಯ ಅಥವಾ ಅನಿವಾರ್ಯತೆಯ ವಿರುದ್ಧ ಜನಜಾಗೃತಿ ಸಾರುವ ಚಿತ್ರ ನಿರ್ಮಿಸಿದ್ದರು. 2002ರ ಗುಜರಾತ್ ಗಲಭೆಯ ನಂತರದ ದಿನಗಳಲ್ಲಿ ಇವರು ತೆಗೆದ 'ವಿಲಪಂಗಲ್ಕು ಅಪ್ಪುರಂ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಸುಹಾಸಿನಿ ಅಭಿನಯದ ಆ ಚಿತ್ರಕ್ಕೆ ಶೌಕತ್ ಅವರದೇ ಕಥೆ.

ಒಂದು ಸಮೀಕ್ಷೆಯ ಪ್ರಕಾರ ನಿಲಂಬೂರು ಗ್ರಾಮದಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದಂತೆ 18ರಿಂದ 40 ವಯೋಮಾನದೊಳಗಿನ 4,698 ಮಂದಿ ಅವಿವಾಹಿತರಿದ್ದಾರೆ. ಇವರ ಪೈಕಿ ಈಗಾಗಲೇ 2,000 ಮಂದಿ ವೆಬ್ ಸೈಟಿನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. 'ವರದಕ್ಷಿಣೆ ರಹಿತ ಮದುವೆ' ಎನ್ನುವುದೇ ಅವರೆಲ್ಲರ ಘೋಷವಾಕ್ಯವಾಗಿದೆ.

ಗ್ರಾಮದಲ್ಲಿ ಈ ಚಳವಳಿ ಆರಂಭವಾದದ್ದು ಒಂದು ಆಕಸ್ಮಿಕ. ಎರಡು ವರ್ಷದ ಹಿಂದೆ ಗ್ರಾಮ ಸಭೆಯು ಒಂದು ಸಮೀಕ್ಷೆ ಕೈಗೊಂಡಿತ್ತು. ವಾಸಕ್ಕೆ ತಮ್ಮದೇ ಎನುವಂಥ ಮನೆಯಿಲ್ಲದ ಎಷ್ಟು ಮಂದಿ ಗ್ರಾಮದಲ್ಲಿ ಇದ್ದಾರೆ ಎಂದು ತಿಳಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು. ಈ ವೇಳೆ ಆಕಸ್ಮಾತ್ ಗೊತ್ತಾದ ಅಂಕಿಅಂಶವೆಂದರೆ ಗ್ರಾಮದಲ್ಲಿ ಆರ್ಥಿಕವಾಗಿ ಕೆಳಸ್ತರದಲ್ಲಿರುವ ಶೇ. 25ರಷ್ಟು ಮಂದಿಗೆ ಸ್ವಂತ ಮನೆಯಿರಲಿಲ್ಲ. ಯಾಕೆಂದರೆ, ಅವರೆಲ್ಲರೂ ತಮ್ಮ ಮಗಳ ಮದುವೆ, ವರದಕ್ಷಿಣೆ ಖರ್ಚು ನಿಭಾಯಿಸಲು ಮನೆಗಳನ್ನು ಮಾರಿಕೊಂಡಿದ್ದರು.

ವರದಕ್ಷಿಣೆ ಪಿಡುಗನ್ನು ಸೀಮೆ ಎಣ್ಣೆ ಹಾಕಿ ಸುಡಬೇಕು ಎಂದು ಸಂಕಲ್ಪ ಮಾಡಿರುವ ನಿಲಂಬೂರು ಗ್ರಾಮಸ್ಥರ ಹೆಸರಿನಲ್ಲಿ ಇನ್ನೊಂದು ದಾಖಲೆ ಇದೆ. ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಕನಿಷ್ಠ ನಾಲಕ್ಕನೆ ತರಗತಿಯವರೆಗೆ ಓದು ಪೂರೈಸಿದ ಭಾರತದ ಪ್ರಥಮ ಹಳ್ಳಿ ಎಂಬ ಸಮ್ಮಾನಕ್ಕೆ ಅವರು ಪಾತ್ರರಾಗಿದ್ದಾರೆ. ಈ ದಾಖಲೆ ಬರೆದು ಎರಡು ವರ್ಷವೇ ಕಳೆದಿದೆ. ಈಗ ಇನ್ನೊಂದು ದಾಖಲೆ ನಿರ್ಮಿಸುವತ್ತ ಹಳ್ಳಿ ಜನ ಹೆಜ್ಜೆ ಹಾಕುತ್ತಿದ್ದಾರೆ. ವರದಕ್ಷಿಣೆಗೆ ಗುಡ್ ಬೈ.

(ಮಾಹಿತಿ : ಹರಿಕೃಷ್ಣನ್, ಮಲ್ಲಾಪುರಂ)

English summary
Residents of a Kerala village in Malappuram district would neither ask for dowry in marriage nor give any. The villagers are now launching two websites on dowry-free marriages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X