ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಹಸ್ತಪ್ರತಿ ರಿಜೆಕ್ಟ್ ಆಗಿಲ್ಲ

|
Google Oneindia Kannada News

Nagesh Hegde
ಕನ್ನಡ ಬ್ಲಾಗುಗಳ ಚಟುವಟಿಕೆ ಯಾಕೋ ಕಮ್ಮಿ ಆಯಿತು ಎಂದುಕೊಳ್ಳುತ್ತಿರುವ ಹೊತ್ತಿನಲ್ಲೇ ಕನ್ನಡ ಪುಸ್ತಕ ಕೃಷಿ ಚಳಿಗಾಲದಲ್ಲಿ ಜೋರಾಗಿದೆ. ಎಲ್ಲೋ ಮಳೆ ಆಗಿರಬೇಕು. ಸತತವಾಗಿ ಬರೆದುಕೊಂಡು ಬರುತ್ತಿರುವವರಿಗೆ ಇದು ಸಂಕ್ರಾಂತಿ ಸುಗ್ಗಿಯ ಕಾಲ. ನಮ್ಮ ಅಂತರ್ಜಾಲ ತಾಣಕ್ಕಂತೂ ಪ್ರತಿನಿತ್ಯ ಒಬ್ಬರಲ್ಲ ಒಬ್ಬರ ಪುಸ್ತಕ ಬಿಡುಗಡೆ ಅಥವಾ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳು ಬಂದು ಬೀಳುತ್ತವೆ. ಅಷ್ಟೂ ಪುಸ್ತಕಗಳ ಬಗೆಗೆ ಅಪ್ ಡೇಟ್ ಮಾಡುತ್ತಾ ಹೋದರೆ ಜ್ಯೋತಿ ಬಸು ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ತರುವವರು ಯಾರಪ್ಪಾ!

ಕನ್ನಡದ ನಂಬರ್ 1 ಅಥವಾ 2 ಅಥವಾ 3 ಅಥವಾ 4ನೇ ಶ್ರೇಯಾಂಕಿತ ಪತ್ರಿಕೆಗಳಿಗೆ ಇದು ಹದವಾದ ಕಾಲ. ಪುಸ್ತಕ ಪ್ರಪಂಚಕ್ಕೋಸ್ಕರ ಈ ಪತ್ರಿಕೆಗಳು ವಾರಕ್ಕೊಮ್ಮೆ ನಾಲಕ್ಕು ಪುಟ ಮೀಸಲಿಡಬಹುದು. ಅದಕ್ಕೆ ಪುಸ್ತಕ ಪುರವಣಿ, ಪುಸ್ತಕ ವಿಜಯ, ಪುಸ್ತಕ ವಾಣಿ, ಪುಸ್ತಕ ಕರ್ನಾಟಕ, ಪುಸ್ತಕ ಪ್ರಭ, ಪುಸ್ತಕ ದಿಗಂತ ಎಂಬಿತ್ಯಾದಿ ಸಪ್ಲಿಮೆಂಟುಗಳನ್ನು ಹೊರತರಬಹುದು. ಕಾಡು, ಮರ, ಪಲ್ಪ್, ಪೇಪರ್ ಮಿಲ್ಸ್, ಹಾಳೆ ಉತ್ಪಾದನೆ, ಮಾರುಕಟ್ಟೆ, ಬೆಲೆ, ಪುಸ್ತಕ ಪ್ರಕಾಶನ, ರಿಯಾಯಿತಿ ವಿವರ, ಸಂಭಾವನೆ ಕೊಟ್ಟರೆ ಗೌರವ ಧನ, ಪುಸ್ತಕ ಮೇಳ, ಹಳೆ ಪುಸ್ತದ ಅಂಗಡಿ, ಖಾಸಗಿ ಗ್ರಂಥಾಲಯ, ಗೌರ್ನಮೆಂಟ್ ಲೈಬ್ರೆರಿ ಮತ್ತು ಸಗಟು ಖರೀದಿ ಇತ್ಯಾದಿ ಸುದ್ದಿ ಸಮಾಚಾರಗಳನ್ನು ವಾರಕ್ಕೊಮ್ಮೆಯಂತೆ ಅಡಕ ಮಾಡುತ್ತಾ ಸಾಗಬಹುದು.

ಪುಸ್ತಕಗಳ ಕಟ್ಟು ಪತ್ರಿಕಾ ಕಚೇರಿಗಳಿಗೆ ಹೇಗೂ ಬಂದು ಬೀಳುತ್ತವೆ. ಜೋಡಿಸಿಡುವುದಕ್ಕೆ ಇಬ್ಬರು ಬೇಕಾಗುತ್ತದೆ. ಖ್ಯಾತ ಪ್ರಕಾಶನ ಸಂಸ್ಥೆಗಳಲ್ಲದೆ ತಮ್ಮ ಕೃತಿಯನ್ನು ತಮ್ಮ ಖರ್ಚಿನಲ್ಲಿ ತಾವೇ ಬೆಳಕು ಕಾಣಿಸುವ ಲೇಖಕ ಲೇಖಕಿಯರಿಗೆ ಕರ್ನಾಟಕದಲ್ಲಿ ಯಾವತ್ತೂ ಕೊರತೆ ಇರುವುದಿಲ್ಲ. ಪತ್ರಿಕೆ ಆರಂಭಿಸುವುದಕ್ಕೆ ಕನಿಷ್ಠ ಟೈಟಲ್ ಕ್ಲಿಯರೆನ್ಸ್ ಆದರೂ ಬೇಕು ಪುಸ್ತಕಗಳಿಗೆ ಆ ಗೊಡವೆ ಇಲ್ಲ. ಆದುದರಿಂದ ಹೊಸ ಪುಸ್ತಕ, ಟಾಪ್ ಟೆನ್, ಬಾಟಮ್ ಟೆನ್ ವಿಭಾಗಳನ್ನು ತುಂಬುವುದಕ್ಕೆ ಎಂದಿಗೂ ತೊಂದರೆ ಆಗುವುದಿಲ್ಲ.

ಯಾರೂ ಬೇಕಾದರೂ ಬರೆಯಬಹುದು, ಯಾರು ಬೇಕಾದರೂ ಪ್ರಕಾಶನ ಮಾಡಬಹುದು ಎಂಬ ಸ್ವಾತಂತ್ರ ನಮ್ಮಲ್ಲಿದೆ. ಇದು ಒಳ್ಳೆ ಲಕ್ಷಣ. ಆದರೆ, ಪುಸ್ತಕ ಪ್ರಕಟಣೆ ಮುಂಚೆ ಕೃತಿಯ ಬಗೆಗೆ ಯಾರೊಬ್ಬರಾದರೂ 'ವಿಷಯ ತಜ್ಞರು' ಹಸ್ತಪ್ರತಿಯನ್ನು ಓದಿ, ಪರಿಷ್ಕರಣೆ ಮಾಡಿ, ತಿದ್ದುಪಡಿ ಮಾಡಿ ಸಮ್ಮತಿಸಿದರೆ ಕೃತಿಗೆ ಇನ್ನೂ ಮೆರಗು ಬರುತ್ತದೆ. ಉದಾಹರಣೆಗೆ ಪೆಂಗ್ವಿನ್ ಪ್ರಕಾಶನ ಸಂಸ್ಥೆಯಲ್ಲಿ ಒಬ್ಬ ಎಡಿಟರ್ ಅಂತ ಇರುತ್ತಾರೆ. ಅವರು ಓದಿ ಪಾಸು ಮಾಡದಿದ್ದರೆ ಕೃತಿ ಪ್ರಿಂಟ್ ಆಗುವುದಿಲ್ಲ. ಆಸ್ಕರ್ ವೈಲ್ಡ್ ಸಮಾಧಿಯಿಂದ ಎದ್ದು ಬಂದು ಹಸ್ತಪ್ರತಿ ಸಲ್ಲಿಸಿದರೂ ನೇರವಾಗಿ ಅಚ್ಚಿನ ಮನೆಗೆ ಹೋಗುವುದಿಲ್ಲ.

ಕನ್ನಡ ಪುಸ್ತಕ ಜಗತ್ತಿನಲ್ಲಿ ಇಂಥ ಪ್ರಕಾಶಕರ ಸಂಖ್ಯೆ ಕಡಿಮೆ. ಎಲ್ಲೋ ಒಂದು ಅಕ್ಷರ ಪ್ರಕಾಶನ, ಎಲ್ಲೋ ಒಂದು ನವಕರ್ನಾಟಕ, ಒಂದು ಛಂದ, ಅಂದ ಪ್ರಕಾಶನದಂತಹ ಸಂಸ್ಥೆಗಳನ್ನು ಹೊರತುಪಡಿಸಿದರೆ ಅನೇಕ ಕೃತಿಗಳು ಬರೀ ಲೇಖಕರ ಹೆಸರು, ವರ್ಚಸ್ಸಿನ ಆಧಾರದ ಮೇಲೆ ಲೋಕಾರ್ಪಣೆಗೆ ಸಿದ್ಧವಾಗುತ್ತವೆ. ನಿಮಗೆ ಗೊತ್ತಿರಬಹುದು. ಎಸ್ ಎಲ್ ಭೈರಪ್ಪ ಅವರ ಮೊದಲ ಕಾದಂಬರಿ 'ಭೀಮ ಕಾಯ' ಕೃತಿಯನ್ನು ಪ್ರಕಟಿಸಲು ಆಗುವುದಿಲ್ಲ ಎಂದು ಪ್ರಕಾಶಕರು ಹೇಳಿದ್ದರು. ಆಗ ಅಲ್ಲಿನ ಸಬ್ಜೆಕ್ಟ್ ಎಕ್ಸ್ ಪರ್ಟ್ ಕೀರ್ತಿನಾಥ ಕುರ್ತುಕೋಟಿಯವರು ಭೀಮ ಕಾಯ ಒಳ್ಳೆ ಕೃತಿಯಲ್ಲ ಎಂದು ರಿಜೆಕ್ಟ್ ಮಾಡಿದ್ದರು!

ಪ್ರಕಾಶನ ಸಂಸ್ಥೆ ಆರಂಭಿಸುವ ಮುಂಚೆಯೇ 'ಪುಸ್ತಕ ಸಂಪಾದಕ'ನ ಮಹತ್ವವನ್ನು ಮನಗಂಡ ಯುವತಿಯೊಬ್ಬರನ್ನು ನಾನು ಈಚೆಗೆ ಭೇಟಿ ಆಗಿದ್ದೆ. ಅವರ ಹೆಸರು ದಿವ್ಯಾ. ಇದೇ ಜನವರಿ 31ರಂದು ಅವರ ಪ್ರಕಾಶನ ಸಂಸ್ಥೆ 'ಭೂಮಿ ಬುಕ್ಸ್' ಆರಂಭವಾಗುತ್ತದೆ. ಪ್ರಕಾಶನದ ವತಿಯಿಂದ ವಿಜ್ಞಾನ, ಪರಿಸರ, ಇಕಾಲಜಿ ಕಾಳಜಿಗಳ ಕೃತಿಗಳು ಹೊರಬರುತ್ತವೆ. ಹಸ್ತಪ್ರತಿಗಳನ್ನು ನೋಡಿ, ಪರಿಷ್ಕರಿಸಿ ಪ್ರಕಟಣೆಗೆ ಪಾಸು ಮಾಡುವ ಎಡಿಟರ್ ನಾಗೇಶ್ ಹೆಗಡೆ.

ಪ್ರಕಾಶನ ಸಂಸ್ಥೆಗಳಿಗೆ ಒಬ್ಬ ಎಡಿಟರ್ ಅಂತ ಇದ್ದರೆ ಲೇಸು. ಹಸ್ತಪ್ರತಿಗಳನ್ನು ಜರಡಿಯಾಡುವುದಕ್ಕೆ ಸಂಪಾದಕ ಎನ್ನುವ ಪ್ರಾಣಿ ಇರಬೇಕು. ಆಗಷ್ಟೆ ಕನ್ನಡ ಪುಸ್ತಕೋದ್ಯಮದ ಮರ್ಯಾದೆ ಹೆಚ್ಚಾಗುತ್ತದೆ. ಸೊಂಪಾದ ಸಾಹಿತ್ಯ, ನಿಖರ ಮಾಹಿತಿ, ವಿಷಯ ನಿರೂಪಣೆಗೆ ಒಪ್ಪುವ ಭಾಷೆ, ಸೂಕ್ತ ಪದಪ್ರಯೋಗ ಇಲ್ಲದ ಪುಸ್ತಕಗಳು ಹಾಳೆಯನ್ನು ತಿನ್ನುತ್ತವೆ, ಕಾಡನ್ನು ಅಳಿಸುತ್ತವೆ, ಹೊಳೆಯನ್ನು ಒಣಗಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X