ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಡಸಂಪಿಗೆ ಬ್ಲಾಗ್ ಪುನರಾರಂಭ

By * ಎಸ್.ಕೆ. ಶಾಮಸುಂದರ
|
Google Oneindia Kannada News

Abdul Rasheed, Kendasampige editor (Courtesy : sotosay.wordpress.com)
ಕೆಲ ಕಾಲ ಸ್ಥಬ್ಧವಾಗಿದ್ದ ಕೆಂಡಸಂಪಿಗೆ ಕನ್ನಡ ಆನ್ ಲೈನ್ ಪುರವಣಿ ಮತ್ತೆ ಆರಂಭವಾಗುತ್ತಿದೆ. ಇದೇ ಸಂಕ್ರಾಂತಿ ಹಬ್ಬದ ದಿನ ಜನವರಿ 14ರ ಗುರುವಾರದಿಂದ ಸಂಪಿಗೆ ಪುನಃ ಪರಿಮಳ ಬೀರಲು ಸಜ್ಜಾಗಿದೆ ಎಂದು ಅಂತರ್ ಜಾಲ ತಾಣದ ಸಂಪಾದಕ ಅಬ್ದುಲ್ ರಶೀದ್ ಹೇಳಿದ್ದಾರೆ.

ವ್ಯಾಪಾರಿ ಉದ್ದೇಶವಿಲ್ಲದೆ ಕೇವಲ ಕನ್ನಡ ಬರಹಗಳ ಮಮತೆಯಿಂದ ಆರಂಭವಾದ ಪತ್ರಿಕೆ ಕೆಂಡಸಂಪಿಗೆ. ಅದೇ ಮಮತೆಯಿಂದಾಗಿಯೇ ಪ್ರಕಟಣೆಯನ್ನು ನಿಲ್ಲಿಸಬೇಕಾಗಿ ಬಂದ ಪತ್ರಿಕೆಯೂ ಹೌದು. ಈ ಆನ್ ಲೈನ್ ಪತ್ರಿಕೆಯನ್ನು ಹತ್ತಿರ ಹತ್ತಿರ ಎರಡುವರ್ಷ ನಡೆಸಿದ ಕನ್ನಡಧೀರ, ಉದ್ಯಮಿ ಶಶಿಕಿರಣ್ ಮುಳ್ಳೂರ್. ಅವರಿಗೆ ಮತ್ತು ಲೆಮನ್ ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ತಂಡಕ್ಕೆ ಹೊಸ ವರ್ಷ 2010ರ ಹಾರ್ದಿಕ ಶುಭಾಶಯಗಳು.

ಮೂರು ಕಾಸು ಉತ್ಪತ್ತಿ ಇಲ್ಲದೆ ಕನ್ನಡ ಅಕ್ಷರ ಸೇವೆ ಮಾಡುವ ಶಶಿಕಿರಣ್ ಅವರ ಸಾಹಸ ಮೆಚ್ಚಬೇಕಾ ಬೇಡವಾ ನನಗಂತೂ ತಿಳಿಯದು. ಆದರೆ, ಕೆಂಡಸಂಪಿಗೆ ನಿಂತು ಹೋದದ್ದರಿಂದ ಅನೇಕ ಬರಹಗಾರರಿಗೆ, ಚಾರಣಿಗರಿಗೆ ನಿರಾಶೆ ಆಗಿದ್ದು ಅವರೆಲ್ಲರ ಒತ್ತಾಯದ ಮೇರೆಗೆ ಮತ್ತೆ ಪತ್ರಿಕೆ ಆರಂಭವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಆನ್ ಲೈನ್ ಪತ್ರಿಕೆಯ ಸಂಪಾದಕ ರಶೀದ್ ಅವರು ಭಾವಜೀವಿ ಮತ್ತು ಅಕ್ಷರ ಜೀವಿ. ಕಥೆ ಕವಿತೆ ಬರೆಯುವುದರಲ್ಲಿ ಪಳಗಿದ ಲೇಖನಿ. ಕೇಂದ್ರ ಸರಕಾರದ ಒಡೆತನದ ಆಕಾಶವಾಣಿ ಮಡಿಕೇರಿ ಕೇಂದ್ರದಲ್ಲಿ ಉದ್ಯೋಗ. ಸೇವಾ ನಿಯಮಗಳ ಪ್ರಕಾರ ಅವರು ಇನ್ನೊಂದು ಲಾಭದಾಯಕ ವೃತ್ತಿಯನ್ನು ಕೈಗೊಳ್ಳುವಂತಿಲ್ಲ. ಸರಕಾರಿ ನೌಕರಿಯ ಸಂಬಳ ಹೊರತುಪಡಿಸಿದರೆ ಕನ್ನಡ ಪತ್ರಿಕೋದ್ಯಮವನ್ನು ವಾಣಿಜ್ಯ ಉದ್ದೇಶಗಳೊಂದಿಗೆ ಸರಿದೂಗಿಸಿ ಪತ್ರಿಕೆ ಸ್ವಾವಲಂಬಿಯನ್ನಾಗಿಸುವ ಕೌಶಲ್ಯವನ್ನು ಅವರು ಪ್ರದರ್ಶಿಸುವಂತಿಲ್ಲ. ಅವರೇ ಒಪ್ಪಿಕೊಳ್ಳುವ ಪ್ರಕಾರ ಆ ವಿದ್ಯೆ ಅವರ ಜಾಯಮಾನಕ್ಕೆ ಒಗ್ಗಿಬರುವುದಿಲ್ಲ.

ಅಂತೂ ಕೆಂಡಸಂಪಿಗೆಯ ಸೆಕೆಂಡ್ ಇನಿಂಗ್ಸ್ ಆರಂಭವಾಗುತ್ತಿದೆ. ಅಕ್ಷರ ಸಮಾರಾಧನೆ ಆಗಲಿ. ಸೋಲು ಗೆಲುವಿನ ಪ್ರಶ್ನೆ ಬೇಕಿಲ್ಲ. ಪಂದ್ಯ ಡ್ರಾ ಆಗುತ್ತದೆಂಬ ಎಣಿಕೆಯಲ್ಲಿ ನಿಮ್ಮ ಇಂಟರ್ನೆಟ್ ವಿಶ್ವಾಸಿ, ಶಾಮ್. [ರಶೀದ್ ಅವರ ಭಾವಚಿತ್ರ ಕೃಪೆ sotosay.wordpress.com/]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X