ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಇವತ್ತಿನ ಇಂಡಿಯಾ ಹೆಡ್ ಲೈನ್ಸ್

By * ಶಾಮಿ
|
Google Oneindia Kannada News

PM President add insult to injury 26-11
ಮುಂಬೈ ನರಮೇಧದ ಕಹಿನೆನಪುಗಳಿಗೆ 365 ದಿವಸ ತುಂಬಿತು. ಇಂದು ಗುರುವಾರ, ಭಾರತ ದೇಶ ಪ್ರೇಮಿಗಳು ಒಂದಾಗಿದ್ದಾರೆ. ಉಗ್ರಗಾಮಿಗಳ ಆಕ್ರಮಣಕ್ಕೆ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರುವ ಸಭೆಗಳನ್ನು ನಡೆಸುತ್ತಿದ್ದಾರೆ. ಕೆಲವರು ಮೇಣದ ಬತ್ತಿ ಬೆಳಗಿಸಿ ಮೌನ ಆಚರಿಸಿದರೆ, ಅನೇಕರು ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡು ಭಯೋತ್ಪಾದನೆಯನ್ನು ಖಂಡತುಂಡವಾಗಿ ಖಂಡಿಸುತ್ತಿದ್ದಾರೆ. ಇಸ್ ಬಾರಿ ನಹಿ ಎಂಬ ಅರ್ಥಪೂರ್ಣ ಕವನ ವಾಚನವನ್ನು ಅಮಿತಾಬ್ ಬಚ್ಚನ್ ಮಾಡಿದ್ದಾರೆ. ಕರಾಳ ದಿನದ ಫ್ಯಾಷ್ ಬ್ಯಾಕ್ ಗಳನ್ನು ಮಾಧ್ಯಮಗಳು ತಮ್ಮ ತಮ್ಮ ವಾಹಿನಿಗಳ ಮೂಲಕ ಪುನಃ ಮೊಳಗಿಸುತ್ತಿವೆ. ನಮ್ಮ ದೇಶದ ಮೇಲೆ ಎರಗಿದ ಅಪಾಯದ ಜ್ವಾಲೆಗಳನ್ನು ಜನಸ್ತೋಮ ವಿಷಣ್ಣಭಾವದಿಂದ ಮನದಲ್ಲಿ ಚಿತ್ರಿಸಿಕೊಂಡು ಮತ್ತೆ ಅಯ್ಯೋ..ಎನ್ನುತ್ತಿದೆ.

ವಿಡಿಯೋ: ಮುಂಬೈದಾಳಿ ಕರಾಳ ನೆನಪು

ಮತ್ತೆ ಇಂಥ ದುರ್ಘಟನೆಗಳು ಸಂಭವಿಸದಿರಲಿ ಎನ್ನುವುದೇ ನಮ್ಮೆಲ್ಲರ ಮನದಾಳದ ಪ್ರಾರ್ಥನೆ ಆಗಿರಬೇಕು. ಉಗ್ರರನ್ನು ಬಗ್ಗಿಬಡಿಯಬೇಕು ಎಂದು ಶ್ರೀಸಾಮಾನ್ಯರು ಅವರವರಲ್ಲೇ ಕೇಳಿಕೊಳ್ಳುತ್ತಿದ್ದಾರೆ, ಹೇಳಿಕೊಳ್ಳುತ್ತಿದ್ದಾರೆ. ಆದರೆ, ಆಕ್ರಮಣಕ್ಕೆ ತುತ್ತಾದ ಅಮಾಯಕ ಕುಟುಂಬಗಳು ಮತ್ತು ಭದ್ರತಾ ಸಿಬ್ಬಂದಿ ಕುಟುಂಬ ವರ್ಗಗಳ ಆತ್ಮಸ್ಥೈರ್ಯ ವೃದ್ದಿಸುವ, ತನ್ಮೂಲಕ ದೇಶಪ್ರೇಮಿಗಳ ಹೆಮ್ಮೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಒಂದೇ ಒಂದು ಭಾಷಣ, ಒಂದು ಸಂದೇಶ ನಮ್ಮ ರಾಷ್ಟ್ರೀಯ ನಾಯಕರ ಬಾಯಿಂದ ಹೊರಬಿದ್ದಿಲ್ಲ. ಇದು ಇವತ್ತಿನ ಇಂಡಿಯಾ ಹೆಡ್ ಲೈನ್ಸ್.

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡುವುದು ನಮ್ಮಲ್ಲಿ ಪರಂಪರೆ. ಅಂದು ಸರಿ, ಆದರೆ ಪರಂಪರೆಯನ್ನು ಕಾಪಾಡುವುದೇ ನಮ್ಮ ಕರ್ತವ್ಯವೇನು? ರಾಯರ ನೆನೆಯಲು ಗುರುವಾರವೇ ಬರಬೇಕೇನು ? ದೇಶಪ್ರೇಮದ ಗೀತೆ ಹಾಡಲು ಸಮಯಾಸಮಯವುಂಟೇನು?. ಆದರೆ 26/11 ರ ಮುನ್ನಾ ದಿನ ನಮ್ಮ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರು ಪುಣೆಯಲ್ಲಿದ್ದರು. ಅವರಿಗೆ ಸುಖೋಯ್ 30 ಯುದ್ಧ ವಿಮಾನವನ್ನು ಹಾರಿಸುವ ಚಪಲ. ಒಬ್ಬ ಮಹಿಳೆ ಇಂಥ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಕೆಲವು ಮಾಧ್ಯಮ ವೇದಿಕೆಗಳು ದಪ್ಪ ಅಕ್ಷರಗಳಲ್ಲಿ ಬರೆದುಕೊಂಡವು. ಆದರೆ ಪ್ರತಿಭಾ ಯುದ್ಧ ವಿಮಾನ ಹಾರಿಸುವುದನ್ನು ಕಲಿತು ಯಾರ ಮೇಲೆ ಯುದ್ಧ ಸಾರಲು ಹೋಗುತ್ತಾರೆ ?

ರಾಷ್ಟಪತಿಯಂತಹ ಅತ್ಯುನ್ನತ ಹುದ್ದೆಯಲ್ಲಿ ಕುಳಿತು ಆಕೆ ನಮ್ಮೆಲ್ಲರನ್ನೂ ಉದ್ದೇಶಿಸಿ ಎರಡು ಮಾತನಾಡಬೇಕಾಗಿತ್ತು. ಅಂಥ ಅವಕಾಶ, ಸಂದರ್ಭ ಆಕೆಗೆ ನಿನ್ನೆ 25/11ರ ಬುಧವಾರ ಬಂದಿತ್ತು. ಅದನ್ನು ಬಿಟ್ಟು ವಿಮಾನದಲ್ಲಿ ಜಾಲಿ ರೈಡ್ ಹೋಗುವಂಥಹ ಹಕೀಕತ್ತು ಯಾಕೆ ಬೇಕಿತ್ತು. ಅವರಿಗೆ ಅದು ಮಹಾಸಾಧನೆ ಎನಿಸಿರಬಹುದು. ಆದರೆ ನಾವೆಲ್ಲ ನಾಚಿಕೆ ಇಂದ ತಲೆ ತಗ್ಗಿಸುವಂತಾಯಿತು. ವಿಷಾದದ ಸಂಗತಿಯೆಂದರೆ ರಾಷ್ಟ್ರೀಯ ಹಿತದ ಬಗೆಗೆ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಬೇಕು ಎಂಬ ಐಡಿಯಾ ನಮ್ಮ ರಾಷ್ಟ್ರೀಯ ನಾಯಕರಿಗೆ ಹೊಳೆಯುವುದೇ ಇಲ್ಲ, ಇನ್ನೈವತ್ತು ವರ್ಷ. ಭಯೋತ್ಪಾದನೆಯನ್ನು ಖಂಡಿಸಿ, ಪಾಕಿಸ್ತಾನವನ್ನು ನಿಂದಿಸಿ ಯಾರು ಬೇಕಿದ್ದರೂ ಭಾಷಣ ಬಿಗಿಯಬಹುದು. ಆದರೆ, ಪ್ರಜೆಗಳನ್ನು ಹುರಿದುಂಬಿಸುವ ಉಪನ್ಯಾಸ ನೀಡುವವರು ಇವತ್ತಿನ ಭಾರತದಲ್ಲಿ ಇಲ್ಲ.

ಪ್ರಧಾನ ಮಂತ್ರಿಯ ಕಥೆಯೂ ಅಷ್ಟೆ. ನನ್ನನ್ನು ಕೇಳಿದರೆ ದೇಶದ ನಾಯಕರಾಗಿ ಅವರು ಇವತ್ತು ಭಾರತದ ನೆಲದಲ್ಲಿ ಇರಬೇಕಿತ್ತು. ಅಮೆರಿಕಾ ಅಧ್ಯಕ್ಷರೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಲಲ್ಲೆ ಹೊಡೆಯಲು ಅವರು ಅಲ್ಲೀತನಕ ಹೋಗುವ ಅವಶ್ಯಕತೆ ಇರಲಿಲ್ಲ. ವಾಷಿಂಗ್ ಟನ್ನಿನಲ್ಲಿ ಕುಳಿತುಕೊಂಡು ಉಪಖಂಡದ ಕೊಳೆ ತೊಳೆಯುವ ಅಗಸನ ಕೆಲಸ ಮಾಡುವ ಪ್ರಮೇಯ ಇರಲಿಲ್ಲ. ಶ್ವೇತಭವನದ ಸುಪ್ಪತ್ತಿಗೆಯಲ್ಲಿ ಕುಳಿತು ಪಾಕಿಸ್ತಾನವನ್ನು ನಿಂದಿಸುವ ಮತ್ತು ಆ ಹೇಳಿಕೆಗಳನ್ನು ನಾವಿಲ್ಲಿ ಕುಳಿತುಕೊಂಡು ಆಲಿಸುವುದು ಬೇಕಾಗಿರಲಿಲ್ಲ.

ಮನ್ ಮೋಹನ್ ಸಿಂಗ್ ಇಲ್ಲದಿದ್ದರೇನಂತೆ ನಾವಿದ್ದೇವೆ ಎಂದು ಎದೆ ಉಬ್ಬಿಸಿ ಮಾತನಾಡುವ ಒಬ್ಬೇಒಬ್ಬ ಸಂಸತ್ ಸದಸ್ಯಕೂಡ ನಮಗೆ ದಕ್ಕಲಿಲ್ಲ. ಕಳೆದ ಕೆಲವು ದಿನಗಳಿಂದ ನಮ್ಮ ಸಂಸತ್ ದೆವ್ವದ ಮನೆ ಆಗಿದೆ. ಕೂಗಾಟ, ಅರಚಾಟ, ಪರಸ್ಪರ ಕೆಸರು ಎರಚಾಟದಲ್ಲಿ ಅಮೂಲ್ಯ ಸಮಯ ಹಾಳಾಗುತ್ತಿದೆ. ಅಯೋಧ್ಯೆಯ ಕರ್ಮಕಾಂಡ, ಲಿಬರ್ಹಾನ್ ವರದಿ, ಕಬ್ಬಿನ ಬೆಲೆ ನಿಗದಿ ವಿಚಾರಗಳ ಬಗೆಗೆ ಅಬ್ಬರದ, ಬೊಬ್ಬೆಗಳು ಕೇಳಿಬಂದವೇ ಹೊರತು ಮಜ್ಜಿಗೆಯಿಂದ ಬೆಣ್ಣೆ ಪ್ರತ್ಯೇಕವಾಗಲಿಲ್ಲ. ಇಲ್ಲಿ ಯಾರ ನೆತ್ತಿಯೂ ತಂಪಾಗಲಿಲ್ಲ.

ರಾಜ್ಯಸಭೆಯಲ್ಲಿ ಇವತ್ತೂ ಅದೇ ಸೀನು. ಮತ್ತದೇ ಕೋಲಾಹಲ, ಪುನಃ ಅಡ್ಜರ್ ನ್ಮೆಂಟು. ಮತ್ತದೇ ನ್ಯೂಸ್ ಹೆಡ್ ಲೈನ್ಸ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X