ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಬ್ಬರಿ ಬಳಸಿರಿ, ಪಿಎಚ್ ಡಿ ಪಡೆಯಿರಿ

By * ಶಾಮಿ
|
Google Oneindia Kannada News

Dry coconut to embellish your recipe
ಇಂಗು ತೆಂಗು ಇದ್ದರೆ ಮಂಗಮ್ಮನೂ ಚೆನ್ನಾಗಿ ಅಡುಗೆ ಮಾಡುತ್ತಾಳೆ, ಎನ್ನುತ್ತದೆ ಗಾದೆ. ಗಾದೆಗಳು ಋಗ್, ಯಜುರ್, ಅಥರ್ವ, ಸಾಮವೇದಕ್ಕೆ ಸಮ. ಜಿಡ್ಡು ಮತ್ತು ರಾಸಾಯನಿಕ ವಸ್ತು ಬೆರೆತಿಲ್ಲದ ಸಿಹಿ ಪದಾರ್ಥ ತೆಂಗು. ಹಲವು ಗುಣಗಳ ಖಣಿಯೇ ಕಲ್ಪವೃಕ್ಷ. ನಮ್ಮ ದೈನಂದಿನ ಆಹಾರಕ್ಕೆ ಸ್ವಾದ, ಸಮೃದ್ಧಿ ಮತ್ತು ಆಪ್ಯಾಯಮಾನತೆಯನ್ನು ತಂದುಕೊಡುವ ಆದರೆ, ತಾರಾ ವರ್ಚಸ್ಸಿಲ್ಲದ ಆಹಾರ. ತೆಂಗಿನಕಾಯಿ ತುರಿ ಅಥವಾ ತೆಂಗಿನ ಹಾಲು ಅಥವಾ ಒಣಕೊಬ್ಬರಿ ಹಾಕದೆ ಮಾಡುವ ಅಡುಗೆಯೂ ಒಂದು ಅಡುಗೆಯೇ ಎಂದು ಯಾರಾದರೂ ಸವಾಲೆಸೆದರೆ ಎದುರು ಮಾತಾಡುವುದು ಕಷ್ಟ.

ಅನೇಕ ವೇಳೆ ಅಡುಗೆ ಮನೆಯಲ್ಲಿ ತೆಂಗಿನಕಾಯಿ ದಾಸ್ತಾನು ಇಲ್ಲದೇ ಹೋಗುವ ಸಾಧ್ಯತೆಗಳುಂಟು. ಅಡುಗೆ ಸಿದ್ದವಾಗಿ ಇನ್ನೇನು ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸಿಂಪಡಿಸಬೇಕು ಎನ್ನುವ ಹೊತ್ತಿಗೆ ಬಗ್ಗಿ ಬುಟ್ಟಿಗೆ ಕೈಹಾಕಿದರೆ ತೆಂಗಿನಕಾಯಿ ಖಾಲಿಯಾಗಿರುವ ಪ್ರಮೇಯಗಳಿರುತ್ತವೆ. ಹುಡುಗರನ್ನು ಅಂಗಡಿಗೆ ಓಡಿಸಿದರೆ, ಪಾಪಮ್ಮನ ಅಂಗಡಿ ಬಾಗಿಲುಹಾಕಿದೆ ಅಮ್ಮ ಎಂಬ ಉತ್ತರ ಹಿಡಕೊಂಡು ಮಕ್ಕಳು ಬರಬಹುದು. ಇಷ್ಟರ ಮೇಲೆ ಪಕ್ಕದ ಮನೆಯ ಅನಸೂಯ ಬೀಗ ಹಾಕಿಕೊಂಡು ಮಾರ್ನಿಂಗ್ ಶೋಗೆ ನೋಡಕ್ಕೆ ಬೇರೇ ಹೋಗಿದ್ದಾಳೆ.

ಅನೇಕರಿಗೆ ಗೊತ್ತಿಲ್ಲದ ಅನೇಕ ವಿಷಯಗಳಿರುತ್ತವೆ. ಗೊತ್ತಿದ್ದರೂ ಮುಂದಾಲೋಚನೆಯಿಂದ ಒಪ್ಪವಾಗಿ ಸಂಸಾರ ನಡೆಸದ ಮಡದಿಯರು ಇದ್ದೇ ಇರುತ್ತಾರೆ. ತಂಗಳನ್ನಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕಿಕೊಂಡು ತಿನ್ನುತ್ತಾ ಕಾಲ ನೂಕುತ್ತಿರುವ ಕನ್ನಡ ಹುಡುಗರಿಗೆ ಅಂಥ ಹೆಣ್ಣುಗಳ ಜಾತಕ ಕೂಡಿಬರದಿರಲಿ. ಇದೇ ವೇಳೆ, ನಮ್ಮ ತಾಯಿ ನನಗೆ ಹೇಳಿಕೊಟ್ಟ ಒಂದು ಗುಟ್ಟನ್ನು ನನ್ನ ಹೆಮ್ಮೆಯ ಜತೆಗಾರ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವೂ ನನ್ನಂತೆ ಮಾಡಿದರೆ, ನಿಮ್ಮ ಮನೆಯಲ್ಲಿ ಊಟ ಮಾಡುವವರ ಮೆಚ್ಚುಗೆ ಮತ್ತು ನಮ್ಮ ತಾಯಿಯ ಆಶೀರ್ವಾದ ನಿಮಗೆ ಮುಟ್ಟುತ್ತದೆ.

ವಿಷಯ ಸಿಂಪಲ್. ಇದೇನು ರೆಸಿಪಿ ಅಲ್ಲ. ಆದರೆ, ಅನೇಕ ಸಸ್ಯಾಹಾರಿ ರೆಸಿಪಿಗಳಿಗೆ ಹಾರ್ ಮೋನ್ ಇಂಜೆಕ್ಷನ್ ಕೊಡುವ ಆಹಾರ ಸಲಕರಣೆ. ತೆಂಗಿನಕಾಯಿ ಇಲ್ಲದೆ ಅಡುಗೆ ಮಾಡುವ ಸಂದರ್ಭ ಬಂದಾಗ ಚಡಪಡಿಸುವುದನ್ನು ತಪ್ಪಿಸಲು ಒಂದು ಚಿಕ್ಕ ಉಪಾಯ. ಮೊದಲು ನಾಲಕ್ಕು ಒಳ್ಳೆ ಒಣಕೊಬ್ಬರಿ ಗಿಟಕುಗಳನ್ನು ಆರಿಸಿ ತುರಿಯೋಮಣೆಯಲ್ಲಿ ತುರಿಯಬೇಕು. ಆನಂತರ ಅದನ್ನು ಸಾಧ್ಯವಾದರೆ ಸ್ವಲ್ಪಹೊತ್ತು ಬಿಸಿಲಿನಲ್ಲಿ ಇಟ್ಟು, ಸಾಧ್ಯವಾಗದಿದ್ದರೆ ಹಾಗೆನೇ ಮಿಕ್ಸಿಗೆ ಹಾಕಿ ಪುಡಿಮಾಡಿಕೊಳ್ಳಬೇಕು.

ತಿಪಟೂರು, ಚಿಕ್ಕನಾಯಕನಹಳ್ಳಿ, ಹುಳಿಯಾರು, ಕುಂದಾಪುರ, ಸಾಲಿಗ್ರಾಮದಿಂದ ಲಾರಿಯಲ್ಲಿ ಮನೆತನಕ ಬಂದ ಕೊಬ್ಬರಿಗೆ ಒಳ್ಳೆ ಸಂಸ್ಕಾರ ಆಗಬೇಕು. ಮಿಕ್ಸಿಯಲ್ಲಿ ಕೊಬ್ಬರಿ ನುಣ್ಣಗಾಗಬಾರದು, ಅವಲಕ್ಕಿ ಶೇಪಿಗೆ ಬಂದರೆ ಚೆನ್ನ. ಇದನ್ನು ದೊಡ್ಡ ಬಾಣಲೆಗೆ ಹಾಕಿ ನಿಧಾನವಾಗಿ, ಸೀಯದಂತೆ, ಹುರಿಯಬೇಕು. ಕ್ರಮೇಣ ತುರಿ ಕಂದುಬಣ್ಣಕ್ಕೆ ತಿರುಗಿದಾಗ ಸ್ಟೌವ್ ಆರಿಸಿ ಬಾಣಲೆ ಕೆಳಗಿಳಿಸಿ ಆರಲು ಬಿಡಬೇಕು. ಅಷ್ಟು ಹೊತ್ತಿಗೆ ಇಡೀ ಫ್ಲಾಟಿಗೆ ಕೊಬ್ಬರಿ ಪರಿಮಳ ಹರಡಿಕೊಳ್ಳುತ್ತಾ ಹೋದಹಾಗೆ, ಸ್ಟೇರ್ ಕೇಸ್ ಮತ್ತು ಲಿಫ್ಟ್ ನಲ್ಲಿ ಹೆಪ್ಪುಗಟ್ಟಿರುವ ಸೆಂಟ್ ವಾಸನೆ ಕಾಲಿಗೆ ಬುದ್ಧಿ ಹೇಳಿರುತ್ತದೆ.

ಸಂಸ್ಕರಿಸಿದ ಈ ಒಣಕೊಬ್ಬರಿ ಪುಡಿಯನ್ನು ಪ್ಲಾಸ್ಟಿಕ್ ಅಲ್ಲ, ಸ್ಟೀಲ್ ಡಬ್ಬಿಯಲ್ಲಿ ಹಾಕಿ ಭದ್ರವಾಗಿ ಮುಚ್ಚಿಡಬೇಕು. ಕನಿಷ್ಠ ಒಂದು ತಿಂಗಳ ಕಾಲ ಕೆಡವುದಿಲ್ಲ. ಯಾವುದೇ ಅಡುಗೆಗೆ, ಉದಾಹರಣೆಗೆ ಪುಳಿಯೋಗರೆ, ಬಿಸಿಬೇಳೆ ಭಾತ್, ಪೊಂಗಲ್, ವಾಂಗಿಭಾತ್, ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ, ನಾನಾ ಬಗೆಯ ಪಲ್ಯಗಳು, ಹುಳಿ, ಗೊಜ್ಜು ಇತ್ಯಾದಿ ಪದಾರ್ಥಗಳಿಗೆ ಎರಡು ಅಥವಾ ಮೂರು ಚಮಚ ಬೆರೆಸಿದರೆ ಅಡುಗೆಗೆ ಹೊಸ ಛಾರ್ಮ್ ಆಗಮಿಸುತ್ತದೆ. ಮಾಡಿನೋಡಿ, ನಿಮ್ಮ ಪಾಕ ಪ್ರವೀಣತೆಗೆ ದಿಢೀರ್ ಪಿಎಚ್ ಡಿ ಸಿಕ್ಕುತ್ತದೆ.

ವಿಸೂ : ಕೊಬ್ಬರಿಯಲ್ಲಿ ಕೊಬ್ಬಿರುವುದಿಲ್ಲವೇ? ಆರೋಗ್ಯಕ್ಕೆ ಮಾರಕವಲ್ಲವೇ? ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಎಸೆದುಕೊಳ್ಳುವುದು ತರವಲ್ಲ. ಹಿತಮಿತವಾಗಿ ಬಳಸಿದರೆ ಯಾವುದೂ ಕೆಟ್ಟದಲ್ಲ. ತೆಂಗಿನಲ್ಲಿರುವ ಕೊಬ್ಬು ಹೃದಯಾಘಾತಕ್ಕೆ ಇಂಬುಕೊಡುತ್ತದೆ ಎಂಬ ಸಂದೇಹಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಭದ್ರವಾಗಿ ಮುಚ್ಚಿಡಿ. ಕೋಕೋನಟ್ ನಿಂದಲೇ ಹಾರ್ಟ್ ಅಟ್ಯಾಕ್ ಆಗುವಹಾಗಿದ್ದರೆ ಇಡೀ ಕೇರಳ ರಾಜ್ಯಕ್ಕೆ ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿ ರಾಜ್ಯದಲ್ಲಿ ತೆಂಗಿನಗಿಡಗಳನ್ನು ಬಿಟ್ಟರೆ ಇವತ್ತು ಬೇರಾರೂ ಬದುಕಿರುತ್ತಿರಲಿಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X