ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ಕನ್ನಡಿಗರ ಗುಡ್ ವೀಕ್ ಎಂಡ್ಸ್

By Staff
|
Google Oneindia Kannada News

Indian Australian Arts & Film Association
ಸಿ.ಅಶ್ವಥ್ ಅವರ ರಸಸಂಜೆ ಚೆನ್ನಾಗಿತ್ತು. ಅದಕ್ಕಿಂತ ಚೆನ್ನಾಗಿರುವ ಇನ್ನೊಂದು ಕಾರ್ಯಕ್ರಮ ಇದೇ 5ನೇ ತಾರಿಖು ಇದೆ. ಬರ್ತೀರಾ?

* ಶಾಮ್

ವೀಕೆಂಡ್ ಬಂತೂಂದ್ರೆ ಸಾಕು ನಮ್ಮ ಸಿಡ್ನಿ ಸ್ನೇಹಿತರಿಗೆ ಎಂದಿಲ್ಲದ ಸಡಗರ. ಏನಾದ್ರೊಂದು ಆಚೆಕಡೆ ಕೆಲಸ ಹಚ್ಚಿಕೊಳ್‍ದಿದ್ರೆ ಸೋಮವಾರ ಸೂರ್ಯನೇ ಹುಟ್ಟಲ್ಲ! ಅದು ಸ್ವಂತ ಕೆಲಸ ಆಗಿರಬಹುದು, ಮನರಂಜನೆ ಇರಬಹುದು ಅಥವಾ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಇರಬಹುದು. ಅಷ್ಟೇ ಹೆಚ್ಚೆಚ್ಚು ಉತ್ಸಾಹದಿಂದ ಭಾಗವಹಿಸುವ ಅವರ ಉಮ್ಮೇದು ಮೆಚ್ಚುಗೆಗೆ ಅರ್ಹ.

ವಾರದ ತುಂಬಾ ಹೊಟ್ಟೆಪಾಡಿನ ಕೆಲಸ, ಮಕ್ಕಳು ಮರಿಗಳ ಜವಾಬ್ದಾರಿ, ಮನೆ ಗುಡಿಸೋದ್ರಿಂದ ಹಿಡಿದು ಶಾಪಿಂಗ್ ಮಾಡೋದ್ರವರೆಗೆ ಎಲ್ಲಾ ಕೆಲಸಗಳನ್ನು ಇಷ್ಟ ಇರ್ಲಿ ಬಿಡಲಿ ಗೊಣಗಿಕೊಂಡೋ ಅಥವಾ ನಗುನಗುತ್ತಲೋ ಅವರವರೇ ಮಾಡಬೇಕಾದ ಅನಿವಾರ್ಯ. ಹೀಗಿರುವಾಗ ವೀಕೆಂಡ್ ಬಂತೂಂದ್ರೆ ಅಬ್ಬಾ ಸಾಕು ಸ್ವಲ್ಪಾನಾದ್ರೂ ಮೈಗೆ ಮನಸ್ಸಿಗೆ ಆರಾಮ ಕೊಡೋಣ "ಟು ರೆಸ್ಟ್ ಈಸ್ ಬೆಸ್ಟ್" ಅನ್ನಿಸಿದ್ರೂ ಸುಮ್ಮನೆ ಮುಸುಕುಹಾಕ್ಕೊಂಡ್ ಕೂಡೋ ಜಾಯಮಾನ ಅವರದ್ದಲ್ಲ. ದೇಹಕ್ಕೆ ಎಷ್ಟೇ ಸುಸ್ತಾಗಿದ್ರೂ ಮನಸ್ಸಿಗೆ ಸ್ನೇಹಿತರನ್ನು ಭೇಟಿ ಮಾಡುವ, ಕಷ್ಟಸುಖ ಹಂಚಿಕೊಳ್ಳುವ, ನಾಲ್ಕಾರು ಜನರ ಜೊತೆಗೂಡಿ ಏನಾದ್ರೂ ಹೊಸದನ್ನು ಮಾಡುವ, ಕ್ರಿಯೇಟಿವ್ ಎಂಟರ್ ಟೈನಿಂಗ್ ಜನ ನಮ್ಮವರು. ಎಷ್ಟೇ ಆಗಲಿ, ಕನ್ನಡಿಗರು ತಾನೆ.

ಇಂತಹುದೇ ಮನಸ್ಥಿತಿಯ, ಹತ್ತಾರು ಸಮಾನಮನಸ್ಕರ, ನಮ್ಮ ನಾಳೆಗಳನ್ನು ಇನ್ನೂ ಒಳ್ಳೆಯ ದಿನಗಳನ್ನಾಗಿ ಮಾಡುವ ಜವಾಬ್ದಾರಿ ನಮ್ಮದು ಎನ್ನುವ ಉದಾತ್ತ ಉದ್ದೇಶದ ಗೆಳೆಯರು ಕೂಡಿ ಕಟ್ಟಿದ ಸಂಸ್ಥೆ ಇಂಡಿಯನ್ ಆಸ್ಟ್ರೇಲಿಯನ್ ಆರ್ಟ್ಸ್ ಅಂಡ್ ಫಿಲಂ ಅಸೋಸಿಯೇಷನ್(IAAFA). ಎಲ್ಲರೂ ಗಮನಿಸಬೇಕಾದ, ವಿಶೇಷವಾಗಿ ಅನಿವಾಸಿ ಕನ್ನಡಿಗರು ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿ ನಾನು ಎನ್ನುವ ಪದವೇ ಇಲ್ಲ. ಪ್ರತಿಯೊಬ್ಬರೂ ನಾವು ಎನ್ನುವವರೇ. ಟೀಂವರ್ಕ್ ಎನ್ನುವುದು ಮಂತ್ರ, ಕೂಡಿಬಾಳೋಣ ಎನ್ನುವುದು ತಂತ್ರ. ಏನಾದರೊಂದು ಹೊಸದನ್ನು ಮಾಡುತ್ತಲೇ ಇರಬೇಕು, ನಮ್ಮಿಂದ ನಾಲ್ಕು ಜನಕ್ಕೆ ಒಳ್ಳೇದಾದ್ರೆ ಸಾಕು ಎನ್ನುವ ತುಡಿತವೇ ಅವರನ್ನು ಮುಂದಕ್ಕೆ ತಳ್ಳುತ್ತಿರುವ ಶಕ್ತಿ.

ಬಹುತೇಕ ಕನ್ನಡಿಗರೇ ಇರುವ, ಪರಂತು ಇತರ ಸಮಾನಮನಸ್ಕರಿಗೂ ಸದಾ ಬಾಗಿಲು ತೆರೆದಿರುವ IAAFA ಬಳಗದ ಕಾರ್ಯಕ್ರಮಗಳು ಹತ್ತುಹಲವು. ಕನ್ನಡ ಸಿನೆಮಾಗಳನ್ನು ಕಾಂಗರೂ ನೆಲದಲ್ಲಿ ಬಿಡುಗಡೆ ಮಾಡೋದ್ರಿಂದ ಹಿಡಿದು ಆಧ್ಯಾತ್ಮಿಕ ಪ್ರವಚನದವರೆಗೆ ಎಲ್ಲಾ ಪ್ರಾಪಂಚಿಕ ಪಾರಮಾರ್ಥಿಕ ಕೈಂಕರ್ಯಕ್ಕೂ ಸಿಡ್ನಿ ಕನ್ನಡ ಮಿತ್ರರು ಕೈ ಎತ್ತುತ್ತಾರೆ. ಇಂಥ ಕ್ರಿಯಾಶೀಲ ಮನಸ್ಸುಗಳ ಮುಕುಟಕ್ಕೊಂದು ಚಿನ್ನದ ಗರಿ ಇತ್ತೀಚೆಗಷ್ಟೇ ಸಿಡ್ನಿಯಲ್ಲಿ ಏರ್ಪಡಿಸಿದ್ದ ಗಾನಕೋಗಿಲೆ ಸಿ ಅಶ್ವತ್ಥ್ ಅವರ ಗಾನಸಂಜೆ. ಆಸ್ಟ್ರೇಲಿಯಾ ಕನ್ನಡಿಗರು ಹಿಂದು-ಇಂದು-ಮುಂದು ನೋಡಿರದ, ಎಂದಿಗೂ ನೆನಪಿನಲ್ಲಿಡುವ ಕಾರ್ಯಕ್ರಮ ಅದಾಗಿತ್ತು ಎನ್ನುತ್ತಾರೆ ನನ್ನ ಸಿಡ್ನಿ ಗೆಳೆಯರ ಬಳಗದವರು.

ಅಂತಹುದೇ ಮತ್ತೊಂದು ಕಾರ್ಯಕ್ರಮ ಇಂದು ಸಿಡ್ನಿ ಕನ್ನಡಿಗರ ಎದುರಿಗಿದೆ. ಈ ಸರತಿ ಅದು ಮಾಮೂಲು ಮನರಂಜನೆಗಿಂತ ಒಂದು ಕೈ ಮೇಲಾಗಿರುವ ಜವಾಬ್ದಾರಿ ಎಂದು ಜಂಭದಿಂದ ಹೇಳಿಕೊಳ್ಳಬಹುದು.

***
ಜನಾಂಗೀಯ ಅಸಹಿಷ್ಣುತೆ ಇಂದು ಖಂಡಿತಾ ಗ್ಲೋಬಲ್ ವಾರ್ಮಿಂಗ್ ನಷ್ಟೇ ವಿಶ್ವವ್ಯಾಪಕ. ಇಂದು ಅದು ಇಲ್ಲದ ಜಾಗವೇ ಇಲ್ಲ. ಇದು ನಿಜವಾಗಿ ಮನುಕುಲದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬ ಪ್ರಜೆಯೂ ಇವತ್ತು ತಲೆಕೆಡಿಸಿಕೊಳ್ಳಬೇಕಾಗಿರುವ ಸಂಗತಿ. ಅದರಲ್ಲೂ ಆಸ್ಟ್ರೇಲಿಯಾದಂತಹ ಬಹುಸಂಸ್ಕೃತಿಯ ದೇಶದಲ್ಲಿ ಇದು ಇನ್ನೂ ಪ್ರಸ್ತುತ. ಅಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸೆಗಳಂತೂ ಭಾರತೀಯರ ನಿದ್ದೆ ಕೆಡಿಸಿರುವುದಂತೂ ನಿಜ. ಹಾಗಂತ ಅಲ್ಲಿದೆ ನಮ್ಮನೆ ಇಲ್ಲಿಗೆ ಬಂದಿರುವೆವು ಸುಮ್ಮನೆ ಎಂದುಕೊಂಡು ನೀವು ಸುಮ್ಮನೆ ಕೂಡುವಂತಿಲ್ಲ. ಹಾಗಿದ್ರೆ ನಾವು ನಮ್ಮಗಳ ಉತ್ತಮ ಭವಿಷ್ಯಕ್ಕೆ ಈಗ ಮಾಡುತ್ತಿರುವ ಕೆಲಸ ಅಷ್ಟೇ ಸಾಕೇ?

ನಮ್ಮ ಜನಗಳ ಹಾಗೂ ದೇಶದ ಏಳಿಗೆಗೆ ಅನಿವಾಸಿ ಭಾರತೀಯರು ಹಾಗೂ ಆಸ್ಟ್ರೇಲಿಯನ್ನರು ಪರಸ್ಪರ ಒಬ್ಬರೊನ್ನಬ್ಬರು ಅರಿತು ಬೆರೆತು ಬಾಳುವುದು ನಮ್ಮ ಇಂದಿನ ಅತ್ಯಂತ ತುರ್ತು ಅಗತ್ಯ ಎಂದು ಆಳವಾಗಿ ನಂಬಿದ್ದೇನೆ. ನಾಳೆ ಅಲ್ಲಿನ ಗಗನದಲ್ಲಿ ಮಿಂಚಲಿರುವ ತಾರೆಗಳು ನಮ್ಮ ಇಂದಿನ ಮಕ್ಕಳೇ ಅಲ್ಲವೇ? ಈ ಹಿನ್ನೆಲೆಯಲ್ಲಿ IAAFA ವತಿಯಿಂದ ಇದೇ ಸೆಪ್ಟೆಂಬರ್ 5ರಿಂದ ಸಿಡ್ನಿಯ ವೆಂಟ್‍ವರ್ತ್ ಲೈಬ್ರರಿ ಹಾಲಿನಲ್ಲಿ ಒಂದು ಮಕ್ಕಳ ವರ್ಕ್‍‍ಶಾಪ್ ಏರ್ಪಡಿಸಲಾಗಿದೆ. ಭಾರತೀಯಮೂಲದ ಹಾಗೂ ಆಸ್ಟ್ರೇಲಿಯನ್ ಮಕ್ಕಳಿಗೆ ಭಾರತೀಯ ಹಾಗೂ ಆಸ್ಟ್ರೇಲಿಯನ್ ಚಿತ್ರಕಲೆ, ಸಂಗೀತ, ಯೋಗ ಇತ್ಯಾದಿಗಳ ಪರಿಚಯ ಈ ಕಾರ್ಯಕ್ರಮದ ಹಿಂದಿನ ಉದ್ದೇಶ.

ವಾರಾಂತ್ಯದಲ್ಲಿ ಈ ಬಗೆಯ ಒಂದೆರಡು ಗಂಟೆಗಳ ಒಡನಾಟ ಖಂಡಿತಾ ನಿಮ್ಮೆಲ್ಲರ ಮನಸ್ಸಿನಲ್ಲಿ ಮಧುರ ಬದಲಾವಣೆ ತರಬಲ್ಲುದು. ಅದಕ್ಕೆಂದೇ ಈ ವರದಿಗೆ Sydney kannadigara good weak ends! ಎಂಬ ಶೀರ್ಷಿಕೆ ಹಾಕಿದ್ದೇನೆ. ನಾಡಿನ ಬಗೆಗೆ ನಮ್ಮ ಮಕ್ಕಳ ನಾಳಿನ ಬಗೆಗೆ ಕಾಳಜಿ ಇರುವ ಪ್ರತಿಯೊಬ್ಬರೂ ಭಾಗವಹಿಸಬೇಕಾದಂತಹ ಕಾರ್ಯಕ್ರಮವಿದು ಎಂಬುದು ನನ್ನ ನಂಬಿಕೆ. ಎಲ್ಲಾ ಆಸಕ್ತರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ದಟ್ಸ್ ಕನ್ನಡ ಸವಿನಯ ಮನವಿ ಮಾಡುತ್ತದೆ.

ಎಲ್ಲರಿಗೂ ಉಚಿತ ಪ್ರವೇಶವಿದೆ. ಆಸನಗಳು ಕಡಿಮೆ ಇವೆ, ಹೆಚ್ಚಿನ ವಿವರಗಳಿಗೆ ಮತ್ತು ಸಂಪರ್ಕ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ http://iaafa.org.au/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X