ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೂಲಿ ಆಯ್ಕೆಯಾಗದ್ದಕ್ಕೆ ಏಕಿಷ್ಟು ಗುಲ್ಲು?

By ಶಾಮ್
|
Google Oneindia Kannada News


Saurav Ganguly ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆ ಎಲ್ಲರಿಗೂ ಗೊತ್ತಿದೆ. ಆದರೂ, ಕೆಲವು ಮಾತುಗಳನ್ನು ಪದೆಪದೇ ನೆನಪಿಸುತ್ತಲೇ ಇರಬೇಕಾಗುತ್ತದೆ. ನೆನಪಿಸುವ ಈ ಕೆಲಸಗಳನ್ನು ಪ್ರಧಾನವಾಗಿ ಮಾಧ್ಯಮಗಳು ಮಾಡುತ್ತಿರುತ್ತವೆ.

ನಾನು, ನಾವು, ನಮ್ಮವರು, ನಮ್ಮದು (ಇವೆಲ್ಲವು ಬೇರೇ ಬೇರೇಯೇ ಆಗಿರುತ್ತವೆ ಅಥವಾ ಎಲ್ಲವೂ ಎಲ್ಲೋ ಒಂದು ಕಡೆ ಒಂದೇ ಆಗಿರಲಿಕ್ಕೂ ಸಾಕು.) ಎಂಬ ಅಭಿಮಾನ ಸಾಮಾನ್ಯ ಎಲ್ಲರಿಗೂ ಇರುತ್ತದೆ. ಇರಲೂ ಬೇಕು. ನಮ್ಮದು ಎನ್ನುವ ಪ್ರಜ್ಞೆಯೇ ಇಲ್ಲದಿದ್ದರೆ ಅದೆಂಥ ಜೀವನ ?

ಈಗಷ್ಟೆ ಕನ್ನಡ ಬರೆಯುವುದನ್ನು ನಿಲ್ಲಿಸಿ ಇಂಗ್ಲಿಷ್ ವೆಬ್‌ಸೈಟಿಗೆ ಹೋದೆ. ಪಶ್ಚಿಮಬಂಗಾಲದ ಒಂದು ಸುದ್ದಿ ಕಣ್ಣಿಗೆ ಬಿತ್ತು. ಏಕದಿವಸೀಯ ಕ್ರಿಕೆಟ್ ತಂಡದಿಂದ ಗಂಗೂಲಿಯನ್ನು ಕೈಬಿಟ್ಟದ್ದಕ್ಕಾಗಿ ಅಲ್ಲಿನ ಜನ ಪ್ರತಿಭಟನೆ ಮಾಡುತ್ತಿದ್ದಾರೆ.ಇದೇನು ಹೊಸದಲ್ಲ. ನಾನಾ ಕಾರಣ ವಿನಾಕಾರಣಗಳಿಗಾಗಿ, ಗಂಗೂಲಿಗೆ ಅನಾನುಕೂಲವಾದಾಗಲೆಲ್ಲ ವಂಗಬಂಧುಗಳು ಅವನ ಪರ ರಸ್ತೆಗಿಳಿಯುತ್ತಾರೆ. ಬೆಂಕಿ ಹಚ್ಚುತ್ತಾರೆ. ತಮ್ಮ ರಾಜ್ಯದ ಹುಲಿಯನ್ನು ಅವರು ಅಷ್ಟೊಂದು ಹಚ್ಚಿಕೊಂಡಿದ್ದಾರೆ.

ಫೆ 3ರಂದು ಭಾರತ, ಶ್ರೀಲಂಕಾ ಮತ್ತು ಆಸ್ಟ್ರೇಲಿಯ ನಡುವೆ ತ್ರಿಕೋಣ ಕ್ರಿಕೆಟ್ ಪಂದ್ಯಾವಳಿ ಆರಂಭವಾಗುತ್ತವೆ. ಅಡಿಲೇಡ್ ಟೆಸ್ಟ್ ಪಂದ್ಯ ಇನ್ನೂ ಬಾಕಿ ಇರುವಂತೆಯೇ ಏಕದಿವಸೀಯ ತಂಡಕ್ಕೆ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ಚೆನ್ನಾಗಿ ಆಡುತ್ತಿರುವ ಭರವಸೆಯ ಹುಡುಗರನ್ನು ಮೈದಾನಕ್ಕಿಳಿಸಿ ಹಿರಿಯರಾದ ಲಕ್ಷ್ಮಣ, ರಾಹುಲ ಮತ್ತು ಸೌರವರನ್ನು ಪೆವಿಲಿಯನ್‌ನಲ್ಲಿ ಇರುವಂತೆ ಹೇಳಲಾಗಿದೆ.

ಅದಕ್ಕೆ ವಂಗಬಂಧುಗಳು ಸಿಟ್ಟಾಗಿದ್ದಾರೆ. ಸಿಟ್ಟಿಗೆ ಕಾರಣ ಗಂಗೂಲಿ ಇಲ್ಲವಲ್ಲ ಎನ್ನುವುದೇ ವಿನಾ ದ್ರಾವಿಡ್ ಮತ್ತು ಲಕ್ಷಣ್ ಅವರ ಕುರಿತಾದುದಲ್ಲವೇ ಅಲ್ಲ. ಗಂಗೂಲಿ ಮತ್ತು ದ್ರಾವಿಡ್ ಇಬ್ಬರನ್ನೂ ತೂಗಿ ನೋಡಿದರೆ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಆಡಿದ ದಾಖಲೆಗಳು ಕಾಣುತ್ತವೆ. ಆದರೆ, ಗಂಗೂಲಿ ಫೋಟೋ ಇಟ್ಟುಕೊಂಡು ಬಂಗಾಳದ ಹಾದಿ ಬೀದಿಗಳಲ್ಲಿ ರಂಪ ಮಾಡುತ್ತಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ವರ್ತಿಸುತ್ತಿದ್ದಾರೆ.

ಯಾಕೆ ಹೀಗೆ ? ಒಂದೇ ನಾಡಿನಲ್ಲಿ ಅಭಿಪ್ರಾಯ ಭೇದ ಹೇಗಾಗುತ್ತದೆ? ಈ ಎರಡು ರಾಜ್ಯದ ಜನರಿಗೆ ಸ್ವಾಭಿಮಾನ ಇಲ್ಲವಾ ಅಥವಾ ಇವರೇನು ಪ್ಯಾಲಪಿಂಡಿಗಳಾ? ದ್ರಾವಿಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವ ಒಂದು ವರದಿ ಕೂಡ ಕರ್ನಾಟಕದ ಯಾವ ಭಾಗದಿಂದಲೂ ದಟ್ಸ್‌ಕನ್ನಡ ಸುದ್ದಿಮನೆಗೆ ಬಂದಿಲ್ಲ. ಅಂದರೆ ಕನ್ನಡನಾಡಿನ ಜನಕ್ಕೆ ರಾಜ್ಯಪ್ರೇಮವೇ ಇಲ್ಲ ಅಂತಾನಾ ಅಥವಾ ಬಲಿಷ್ಠವಾದ ಟೀಂ ಇಂಡಿಯಾ ಮುಖ್ಯನಾ?

ನಮ್ಮ ಕ್ರಿಕೆಟ್ ಮೋಹದ ಹುಡುಗರು ಮತ್ತು ಹುಡುಗಿಯರಿಗೆ ದ್ರಾವಿಡ್ ಎಷ್ಟು ಮುಖ್ಯವೋ ಭಾರತ ತಂಡವೂ ಅಷ್ಟೇ ಮುಖ್ಯ ಎಂದು ನಾನು ತಾತ್ಕಾಲಿಕ ತೀರ್ಮಾನಕ್ಕೆ ಬಂದಿರುತ್ತೇನೆ. ದ್ರಾವಿಡ್ಡು ಮತ್ತು ಗಂಗೂಲಿ ಏಕದಿವಸೀಯ ಪಂದ್ಯಗಳಲ್ಲೂ ಚೆನ್ನಾಗಿ ಆಡಿರುವ ಕಲಿಗಳೆ, ಎಲ್ಲರಿಗೂ ಗೊತ್ತು. ಹಾಗಂತ, ಯಾರು ಏನಾದರೂ ಆಗಲಿ ನಮ್ಮ ರಾಜ್ಯದವರು ತಂಡದಲ್ಲಿ ಇರಲಿ ಎಂಬ ವಾದವನ್ನು ಕರ್ನಾಟಕ ರಾಜ್ಯದವರು ಹೂಡಿಲ್ಲ ಮತ್ತು ಅದಕ್ಕಾಗಿ ರಸ್ತೆ ರೈಲು ತಡೆ ಚಳವಳಿ ಮಾಡಿಲ್ಲ ಎನ್ನುವುದು ನನಗಂತೂ ಸಂತೋಷಕೊಡುವ ಸಮಾಚಾರ. ಈ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಅನಿಸಿತು.

ಯಾರು ಚೆನ್ನಾಗಿ ಆಡುತ್ತಾರೆ? ಅನುಭವಿಗಳು ಇರಬೇಕೋ ಅಥವಾ ಯುವಕರು ಮುಂದೆ ಬರಬೇಕೋ? ಎನ್ನುವ ವಾದವನ್ನು ಎಲ್ಲಿಯವರೆಗೆ ಬೇಕಾದರೂ ಎಳೆದುಕೊಂಡು ಹೋಗಬಹುದು. ಪ್ರಶ್ನೆ ಅದಲ್ಲ. ಭಾರತತಂಡದ ಕಾಂಪೋಸಿಷನ್ ಎಂತಾದರೂ ಇರಲಿ. ನಮಗೆ ಮಾತ್ರ ಗಂಗೂಲಿ ಇರಲಿ ಎಂಬ ಅಖಂಡ ವಿತಂಡವಾದವನ್ನು ಕನ್ನಡಿಗರು ಮಾತ್ರ ಕಾಪಿ ಹೊಡೆಯುವುದಿಲ್ಲ. ಯಾಕೆಂದರೆ :

ಕನ್ನಡಿಗರೂ ಯಾವತ್ತೂ ಶ್ರೇಷ್ಠವಾದದ್ದನ್ನು ಬಯಸುತ್ತಾರೆ ಮತ್ತು ಮೆಚ್ಚುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಶ್ರೇಷ್ಠತೆಯ ವ್ಯಸನಿಗಳು ಎಂದು ಭಾವಿಸಿದರೆ ಅಪಾಯವಾಗುತ್ತದೆ. ತ್ರಿಕೋಣ ಸರಣಿಯಲ್ಲಿ ಹತ್ತರಿಂದ ಹದಿಮೂರು ಪಂದ್ಯಗಳಾಡುವ ಅವಕಾಶವಿದೆ. ಈ ಹದಿಮೂರು ಪಂದ್ಯಗಳಲ್ಲಿ ಯಾವುದೋ ಒಂದು ಹಂತದಲ್ಲಿ ಮಿಡಲ್ ಆರ್ಡರ್ ಕುಸಿದು ಬೀಳುತ್ತದೆ. ಆಗ, ಯಾರಿಗೆ ಗೊತ್ತು ದ್ರಾವಿಡ್ ಮತ್ತೆ ನೀನೇ ಬಾರಪ್ಪ, ಗಂಗೂಲಿ ನೀನೂ ಬಾರಪ್ಪ ಎಂದು ಟೀಂ ಆಡಳಿತ ವರ್ಗ ಕರೆಕಳಿಸಬಹುದಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X