ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ

By * ಶಾಮ್
|
Google Oneindia Kannada News

Welcome to New Year 2009
Youth is when you're allowed to stay up late on New Year's Eve. Middle age is when you're forced to. - Bill Vaughn

ಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ 364 ದಿವಸಗಳಲ್ಲಿ ಆತ ಕೊಟ್ಟ ನಾನಾ ಬಗೆಯ ಹಿಂಸೆಗಳನ್ನು ಸಹಿಸಿಕೊಂಡೂ ಮುಗುಳುನಗೆ ಬೀರಿದವರಿಗೆ ದಟ್ಸ್ ಕನ್ನಡ ಬಳಗದ ಶುಭಾಶಯಗಳು.

ನಷ್ಟವನ್ನು,ದುಃಖವನ್ನು, ಬಂಧುಬಾಂಧವರನ್ನು ಕಳಕೊಂಡ ನೋವುಗಳನ್ನು ಭರಿಸುವುದು ಹೇಗೆ? ಅನುಭವಿಸಿಯೇ ತೀರಬೇಕಾ? ಯಾರೊಬ್ಬರು ಪಕ್ಕದಲ್ಲಿ ಕುಳಿತೋ, ಕೈಯಲ್ಲಿ ಕೈಯಿಟ್ಟೋ, ಕಣ್ಣಲ್ಲಿ ಕಣ್ಣಿಟ್ಟೋ ಸಮಾಧಾನಿಸಿ, ಕಣ್ಣೊರೆಸಲಾರರಾ? ಹೊಸ ಕನಸಿನ ಕಥೆಗಳನ್ನು ಹೇಳಲಾರರಾ?

ಪರಂತು, ಸಂತೋಷ ಪಡುವ ರೀತಿನೀತಿಗಳನ್ನು, ಉಲ್ಲಾಸದ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳುವ ಮನೋಸ್ಥಿತಿಯನ್ನು ವರ್ಣಿಸುವುದು ನಮಗಂತೂ ಸಾಧ್ಯವಿಲ್ಲ. ಸಂತಸದ ಹಣೆಬರಹವೇ ಹಾಗೆ, ತಿಳಿಯ ಹೇಳಲಾಗದು. ದುಃಖಕ್ಕೆ ಒಂದು ಮುಖವಾದರೆ, ಸಂತೋಷಪಡುವ ಮನಸ್ಸಿಗೆ ನೂರಾರು ಬಾಗಿಲುಗಳು.

Welcome to New Year 2009
ಮನುಕುಲಕ್ಕೆ ಈಗ ಎಷ್ಟು ವರ್ಷ ವಯಸ್ಸಾಯಿತೋ ಗೊತ್ತಿಲ್ಲ. ನಮಗಂತೂ ಗೊತ್ತಿದ್ದೂ ಗೊತ್ತಿಲ್ಲದ ಹಾಗೆ ವಯಸ್ಸಾಗುತ್ತಿದೆ. ದಂತಪಂಕ್ತಿಗಳು ತಂತಾನೆ ಸವೆಯುತ್ತಿವೆ. ಈ ನಡುವೆ 2009ರ ಹೊಸ ವರ್ಷ ಮನೆಬಾಗಿಲಿಗೆ ಬಂದಿದೆ. ಇದು ಕೂಡ ಸರಿರಾತ್ರಿಯಲ್ಲಿ ಬಂದು ಬಾಗಿಲು ತಟ್ಟುವ ಕೂಗುಮಾರಿ ಆಗುವುದಿಲ್ಲ ತಾನೆ!

ಇವತ್ತು ರಾತ್ರಿ ರಂಗೋಲಿ ಬಿಡಿಸಿ ಆನಂದಿಸುವರೆಷ್ಟೋ, ಏಳು ಬಣ್ಣದ ಬಲೂನುಗಳಿಗೆ ಗಾಳಿ ಊದಿ ನಲಿಯುವವರೆಷ್ಟೋ. ಹೌದು, ಗೋಡೆಯಂತೂ ಹೊಸ ಕ್ಯಾಲೆಂಡರ್ ಸಿದ್ಧಗೊಳ್ಳುತ್ತಿದೆ. ವಾರ ತಿಥಿ ದಿನಾಂಕಗಳನ್ನು ತಪ್ಪದೆ ಎಣಿಸಲು ಟೊಂಕ ಕಟ್ಟಿನಿಂತಿದೆ. ಕಾಲವಂತೂ ಹಿಂದೋಡುವುದಿಲ್ಲವಷ್ಟೆ. ಹಾಗಾದರೆ ಇಂದೇನು? ಮುಂದೇನು?

ಸಾಧ್ಯವಾದರೆ ಕೆಲವು ಒಲವು ನಿಲವುಗಳನ್ನು ನಮ್ಮಷ್ಟಕ್ಕೆ ನಾವೇ ಪರಿಷ್ಕರಣೆಗೆ ಒಡ್ಡಿಕೊಳ್ಳುವ ಸಂಧಿಕಾಲವಿದು ಎಂದುಕೊಳ್ಳೋಣವಾ. ವೈಯಕ್ತಿಕ ಸಾಮ್ರಾಜ್ಯದಲ್ಲಿ, ಸಾಮಾಜಿಕ ಬದುಕಿನ ಸ್ತರಗಳಲ್ಲಿ ಏನೋ ಒಂದು ಬದಲಾವಣೆಯನ್ನು ಆಶಿಸುತ್ತಲೇ ನಿತ್ಯ ಮೌನಕ್ಕೆ ಜಾರುತ್ತಿರುವ ಮನಸ್ಸುಗಳಿಗೆ ಬಯಸಿದ್ದನ್ನು ಬರಮಾಡಿಕೊಳ್ಳುವ ಕ್ಷಣ ಬೇಗ ಬರಲಿ ಎಂಬ ಆಶಾಭಾವನೆ ಇಟ್ಟುಕೊಳ್ಳೋಣ.

ಕಳೆದುಹೋದದ್ದು ಮತ್ತು ದಕ್ಕಿಸಿಕೊಳ್ಳಬೇಕಾದುದನ್ನು ವ್ಯಾಖ್ಯಾನ ಮಾಡುವುದಕ್ಕೆ ಬಿಡುವೇ ಕೊಡದಂಥ ಈ ರಾತ್ರಿ ಇಣುಕಿ ಹೋಗಲಿ. ಕಡೆಯಪಕ್ಷ ಒಬ್ಬ ವ್ಯಕ್ತಿಯ ನೋವನ್ನು ನೀಗಿಸಿ ಅವರ ಜೀವನವನ್ನು ಸಹನೀಯವಾಗಿಸುವ ನಿಟ್ಟಿನಲ್ಲಿ ನಮ್ಮ ಗೊತ್ತು ಗುರಿಗಳು 2009ರಲ್ಲಿ ಕೇಂದ್ರೀಕೃತವಾದರೆ, ಅಷ್ಟು ಸಾಕು.

ದಟ್ಸ್ ಕನ್ನಡ ಓದುಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X